HDK vs DKS: ಜೆಡಿಎಸ್​ ಬಗ್ಗೆ ಮಾತನಾಡಲು ಇವರಿಗೆ ನೈತಿಕತೆ ಇದೆಯೇ? ಡಿಕೆಶಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಜೆಡಿಎಸ್ ಒಕ್ಕಲಿಗ - ಲಿಂಗಾಯತ ಸಮಾಜಕ್ಕೆ ಸೀಮಿತ ಎಂಬ ಡಿಕೆಶಿ ಹೇಳಿಕೆಗೆ  ಎಚ್​ಡಿಕೆ ತಿರುಗೇಟು ಕೊಟ್ಟಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಿಗೆ ನಾನು ಕೇಳ್ತೀನಿ. ನೀವು ಎಷ್ಟು ಸಮುದಾಯದವರಿಗೆ ಗೌರವ ಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದರು.

ಹೆಚ್​.ಡಿ. ಕುಮಾರಸ್ವಾಮಿ.

ಹೆಚ್​.ಡಿ. ಕುಮಾರಸ್ವಾಮಿ.

 • Share this:
  ರಾಮನಗರ(ಅ.04): ಮಾಜಿ ಸಿಎಂ ಕುಮಾರಸ್ವಾಮಿ ಇಂದು ರಾಮನಗರ ಜಿಲ್ಲೆಯ ಬಿಡದಿಯ ತೋಟದ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.  ಪಿಎಂ ನರೇಂದ್ರ ಮೋದಿ ಹಾಗೂ ಸಿಎಂ ಬೊಮ್ಮಾಯಿ ವಿರುದ್ಧ ಚಾಟಿ ಬೀಸಿದ್ದಾರೆ. ನಿತ್ಯ ರಾಜ್ಯದಲ್ಲಿ ಅನಾಹುತಗಳು ಆಗುತ್ತಿವೆ. ಅವರಿಗೆ ಪರಿಹಾರ ನೀಡುವ ಕೆಲಸ ಆಗುತ್ತಿಲ್ಲ. ಜಾಹೀರಾತು ನೀಡುವಲ್ಲಿ ವೆಚ್ಚ ಆಗ್ತಾ ಇದೆ. ಬಸ್ ಶೆಲ್ಟರ್ ಮೇಲೆ ಜಾಹಿರಾತು ನೋಡ್ತಾ ಇದ್ದೀವಿ.  ಮೋದಿಯವರ ವೇಷಭೂಷಣವನ್ನೇ ಬೊಮ್ಮಾಯಿ ಹಾಕಿದ್ದಾರೆ. ಯಾವ ನವ ಭಾರತ, ಯಾವ ನವ ಕರ್ನಾಟಕ ಕಟ್ಟುತ್ತಾರೆ?  ಮೊನ್ನೆ ತಾಯಿ ಹಾಘೂ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡರಲ್ವಾ? ಆ ನವ ಭಾರತ ಕಟ್ಟಲು ರೆಡಿಯಾಗಿದ್ದೀರಾ? ಅಥವಾ ಅಭಿವೃದ್ಧಿ ಕಡೆ ಗಮನ ಹರಿಸುತ್ತಿದ್ದೀರೋ ಎಂದು ಎಚ್​ಡಿಕೆ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಹರಿಹಾಯ್ದಿದ್ದಾರೆ.

  ಮುಂದುವರೆದು ಮಾತನಾಡಿದ ಅವರು, ಕೊರೋನಾದಿಂದ ಅನೇಕರು ಬೀದಿಗೆ ಬಿದ್ದಿದ್ದಾರೆ, ಅನೇಕರು ಸಾವನ್ನಪ್ಪಿದ್ದಾರೆ. ಈ ಸರ್ಕಾರ ಘೋಷಣೆಗೆ ಮಾತ್ರ ಸೀಮಿತವಾಗಿದೆ. ಸರ್ಕಾರದ ಖಜಾನೆಗೆ ಬರುವ ಹಣದಲ್ಲಿ ಕೊರತೆ ಇಲ್ಲ.  ಆದರೆ ಜನರಿಗೆ ನೀಡುವ ಯೋಜನೆಗಳಲ್ಲಿ ಕೊರತೆ ಇದೆ. ಜನತೆ ಸಂಕಷ್ಟದ ಸಮಯದಲ್ಲಿ ಹಣ ಕಟ್ಟಿದ್ದಾರೆ. ಆದರೆ ಜನರಿಗೆ ಏನು ಕೊಟ್ಟಿದ್ದಾರೆ. ಜಾಹಿರಾತಿಗೆ ಮಾತ್ರ ಈ ಸರ್ಕಾರ ಸೀಮಿತವಾಗಿದೆ ಎಂದು ಕಿಡಿಕಾರಿದರು.

  ಎಷ್ಟು ಪ್ಯಾಕೇಜ್​​ಗಳು ಜನ ಸಾಮಾನ್ಯರಿಗೆ ತಲುಪಿವೆ. ಕೊರೋನಾ ಸಮಯದಲ್ಲಿ ಚಾಲಕರಿಗೆ ಹಣ ಕೊಡ್ತೀವಿ ಅಂದ್ರು.  ಸವಿತ ಸಮಾಜದವರು ಸೇರಿದಂತೆ ಅನೇಕರಿಗೆ ಹಣ ನೀಡುತ್ತೇವೆ ಅಂದ್ರು. ಯಾರಿಗೆ ಹಣ ಸೇರಿದೆ ಎಷ್ಟು ಜನಕ್ಕೆ ಕೊಟ್ಟಿದ್ದೀರಾ..? ಬಿಜಾಪುರದ ಹಿಂಡಿಯ ಏತ ನೀರಾವರಿ ಯೋಜನೆಗೆ ನಾನು ಸಿಎಂ ಆದಾಗ ಹಣ ಬಿಡುಗಡೆ ಮಾಡಿದ್ದೆ.  ಇಲ್ಲಿಯವರೆಗೂ ಆ ಯೋಜನೆಗೆ ಚಾಲನೆ ಸಿಕ್ಕಿಲ್ಲ. ಕೊರೋನಾ ವಾರಿಯರ್​ಗೆ ಹಣ ಕೊಡ್ತೀವಿ ಅಂದ್ರು. ಯಾರಿಗೆ ತಲುಪಿದೆ? ಕೊರೊನಾದಿಂದ ಸತ್ತ ಕುಟುಂಬದವರಿಗೆ ಒಂದು ಲಕ್ಷ ಹಣ ಅಂದ್ರು. ಯಾರಿಗೆ ಹಣ ತಲುಪಿದೆ? ಪೇಪರ್ ನಲ್ಲಿ ಮಾತ್ರ ಇದೆ  ಎಂದು ವಾಗ್ದಾಳಿ ನಡೆಸಿದರು.

  ಇನ್ನು ಬೆಂಗಳೂರಿನಲ್ಲಿನ ರಸ್ತೆ ಗುಂಡಿ ವಿಚಾರವಾಗಿ, ಸಿಎಂ ಅವರೇ ಮಾಹಿತಿ ನೀಡಿದ್ದಾರೆ. 20 ಸಾವಿರ ಕೋಟಿ ಹಣ ಇಟ್ಟಿದ್ದೇವೆ ಅಂತ. ಬೆಂಗಳೂರಿಗೆ ಕೊಟ್ಟಿದ್ದು ಎಲ್ಲೋಯ್ತು ಆ ಹಣ. ನಾನು ಸಿಎಂ ಆಗಿದ್ದಾಗ ನಾನು ಬೆಂಗಳೂರು ರಿವ್ಯೂವ್ ಮಾಡುವ ಹಾಗಿರಲಿಲ್ಲ.  ನಾನು ಬೆಂಗಳೂರು ವಿಚಾರವಾಗಿ ಚರ್ಚೆ ಮಾಡಬೇಕು ಅಂದರೆ ಕಾಂಗ್ರೆಸ್ ನಾಯಕರ ಪರ್ಮಿಷನ್ ಬೇಕಿತ್ತು.  ಗುಂಡಿ ಮುಚ್ಚುವುದಕ್ಕೆ ಇಟ್ಟ ಹಣ ಎಲ್ಲಿ ಹೋಯ್ತು.  ಅದರ ಬಗ್ಗೆ ತನಿಖೆ ಮಾಡಿಸ್ತೀರಾ ಎಂದು ಸರ್ಕಾರಕ್ಕೆ ಹೆಚ್ಡಿಕೆ ತರಾಟೆ ತೆಗೆದುಕೊಂಡರು.

  ಡಿಕೆಶಿ ವಿರುದ್ಧ ವಾಗ್ದಾಳಿ

  ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಎಚ್​ಡಿಕೆ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್ ಒಕ್ಕಲಿಗ - ಲಿಂಗಾಯತ ಸಮಾಜಕ್ಕೆ ಸೀಮಿತ ಎಂಬ ಡಿಕೆಶಿ ಹೇಳಿಕೆಗೆ  ಎಚ್​ಡಿಕೆ ತಿರುಗೇಟು ಕೊಟ್ಟಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಿಗೆ ನಾನು ಕೇಳ್ತೀನಿ. ನೀವು ಎಷ್ಟು ಸಮುದಾಯದವರಿಗೆ ಗೌರವ ಕೊಟ್ಟಿದ್ದೀರಾ? ಕಳೆದ ಬಾರಿ ಕಾಂಗ್ರೆಸ್​ನ ದಲಿತ ಸಮುದಾಯದ ಅಧ್ಯಕ್ಷರನ್ನು ಸೋಲಿಸಲು ಕಾರಣ ಯಾರು? ಮಲ್ಲಿಕಾರ್ಜುನ್ ಖರ್ಗೆ, ಧರ್ಮಸಿಂಗ್ ಅವರ ಸೋಲಿಗೆ ಕಾರಣ ಯಾರು? ಕೋಲಾರದಲ್ಲಿ ಮುನಿಯಪ್ಪರನ್ನು ಸೋಲಿಸಿದರು ಯಾರು? ಸಿದ್ದರಾಮಯ್ಯ, ಶಿವಕುಮಾರ್ ಅವರಿಗೆ ಕೇಳ್ತೀನಿ ಎಂದರು.

  ಕೋಲಾರದಲ್ಲಿ ಬಿಜೆಪಿಗೆ ಶಕ್ತಿನೇ ಇಲ್ಲ. ಕಾರ್ಪೊರೇಟರ್ ಆಗೋದಿಲ್ಲ ಎನ್ನುವವರನ್ನು ಎಂಪಿ ಮಾಡಿದ್ದು ಯಾರು? ಇದೇ ಕಾಂಗ್ರೆಸ್ ನಾಯಕರಲ್ಲವೇ ಅವರ ಸೋಲಿಗೆ ಕಾರಣ. ಇವರಿಗೆ ಜೆಡಿಎಸ್ ಬಗ್ಗೆ ಮಾತನಾಡಲು ನೈತಿಕತೆ ಇದೆಯೇ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

  ಎಸ್​ಸಿ, ಎಸ್​ಟಿ ವಿಭಾಗದ ಕಾರ್ಯಾಗಾರ ಆರಂಭವಾಗಿದೆ. ನಿನ್ನೆ ಮುಸ್ಲಿಂ ಬಾಂಧವರ ಜೊತೆ ಕಾರ್ಯಾಗಾರ ಮಾಡಲಾಗಿತ್ತು. ಈ ಘಟಕದ ಮೂಲಕ ಪ್ರತಿ ಹಳ್ಳಿಗಳಿಗೆ ಭೇಟಿ ನೀಡುವ ತೀರ್ಮಾನ ಮಾಡಲಾಗುತ್ತಿದೆ. ನಾಳೆ ಅಂತಿಮವಾಗಿ ಕ್ರಿಶ್ಚಿಯನ್ ಬಾಂಧವರ ಜೊತೆ ಕಾರ್ಯಾಗಾರ ಇದೆ. ಪ್ರತಿಯೊಬ್ಬರ ಮಾಹಿತಿ ಕಚೇರಿಗೆ ತೆಗದುಕೊಳ್ಳಲಾಗುತ್ತದೆ, 16ರಿಂದ ಮತ್ತೆ ಎರಡನೇ ಹಂತದಲ್ಲಿ ಜನತಾ ಸಂಗಮ ಹೆಸರಲ್ಲಿ ಕಾರ್ಯಕ್ರಮ ಆರಂಭವಾಗಲಿದೆ. ಪ್ರತಿ ತಾಲೂಕಿನಲ್ಲಿ ಎಲ್ಲರ ಜೊತೆಗೂಡಿ ಜನತೆ ಮುಂದೆ ಹೋಗುವ ಕಾರ್ಯಕ್ರಮ ಇದಾಗಿದೆ. 16ರಿಂದ ಇದಕ್ಕೆ ಚಾಲನೆ ನೀಡಲಾಗುತ್ತದೆ ವಿಜಯ ದಶಮಿಯಿಂದ ಜನತಾ ಸಂಗಮಕ್ಕೆ ಚಾಲನೆ ಸಿಗುತ್ತೆ ಎಂದರು.

  ಮಿಷನ್ - 123 ಯಿಂದ ಗುರಿ ಮುಟ್ಟುವ ಕೆಲಸ ಇದೆ. ಬೆಂಗಳೂರಿನಲ್ಲಿ ನಿನ್ನೆ ಭಾರೀ ಮಳೆಯಾಗಿದೆ. ಯಾಕೆ‌ ಮನೆಗಳಿಗೆ ನೀರು ನುಗ್ಗಿ ಕುಟುಂಬಗಳು ಬೀದಿಗೆ ಬೀಳ್ತಾ ಇವೆ. ಅಭಿವೃದ್ಧಿ ಹೆಸರಲ್ಲಿ ಸಾವಿರಾರು ಕೋಟಿ ಇನ್ವೆಸ್ಟ್ ಮಾಡ್ತೀವಿ.  ಆರ್ ಆರ್ ನಗರದಲ್ಲಿ ನಿನ್ನೆ 391 ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡಿದರು.  ಕಳೆದ 15 ವರ್ಷದಲ್ಲಿ ಸರಕಾರದ ವೆಚ್ಚ ತೆಗೆದರೆ ಗೊತ್ತಾಗುತ್ತದೆ. ಗುಣಾತ್ಮಕ ಕೆಲಸ ಆಗಿಲ್ಲ ಅನ್ನೋದಕ್ಕೆ ನಿನ್ನೆ ಮಳೆಯೊಂದೇ ಸಾಕ್ಷಿ. ಆ ಭಾಗದ ಐಡಿಯಲ್ ಸೊಸೈಟಿ ಭಾಗದ ಒಂದು ಕುಟುಂಬದಲ್ಲಿ ಮೇಕೆ, ಹಸು ಸಾಕಿದ್ದರು. ಅದರಲ್ಲಿ ಮೂರ್ನಾಲ್ಕು ಹಸು ಕೊಚ್ಚಿ ಹೋಗಿದ್ದಾವೆ. ಯಡಿಯೂರಪ್ಪನವರ ಕಾಲದ ಮಾಹಿತಿಯನ್ನೂ ತೆಗೆಯಲಿ, ಈಗಿನ ಸರ್ಕಾರದ್ದು ತೆಗೆಯಲಿ. ಜಾಹಿರಾತಿಗಷ್ಟೇ ಹಣ ಕೊಟ್ಟಿದ್ದಾರೆ ಎಂದರು.
  Published by:Latha CG
  First published: