ಅಜ್ಜಯ್ಯ ಮಾತು ಕೇಳಿ ಆ ಹುಡುಗಿಯನ್ನ ಅಭ್ಯರ್ಥಿ ಮಾಡಿದಾರೆ: ಕಾಂಗ್ರೆಸ್​ಗೆ ರೇವಣ್ಣ ಚಾಟಿ

ನೊಣವಿನಕೆರೆ ಅಜ್ಜಯ್ಯ ಹೇಳಿದರು ಅಂತ ಪಾಪ ಆ ಹುಡುಗಿಯನ್ನ ಕಾಂಗ್ರೆಸ್​ಗೆ ಸೇರಿಸಿಕೊಂಡು ಅದೇ ದಿನ ಅಭ್ಯರ್ಥಿ ಮಾಡಿದ್ದಾರೆ. ಕಾಂಗ್ರೆಸ್ಗೆ ಎಂಥ ಪರಿಸ್ಥಿತಿ ಬಂದಿದೆ ನೋಡಿ ಎಂದು ಹೆಚ್.ಡಿ. ರೇವಣ್ಣ ಮರುಗಿದ್ದಾರೆ.

ಹೆಚ್.ಡಿ. ರೇವಣ್ಣ

ಹೆಚ್.ಡಿ. ರೇವಣ್ಣ

  • Share this:
ಹಾಸನ(ಅ. 05): ಐಎಎಸ್ ಅಧಿಕಾರಿ ದಿವಂಗತ ಡಿಕೆ ರವಿ ಅವರ ಹೆಂಡತಿ ಕುಸುಮಾ ರವಿ ಕಾಂಗ್ರೆಸ್ ಪಕ್ಷ ಸೇರಿದ್ದು ಅವರು ಆರ್.ಆರ್. ನಗರ ಕ್ಷೇತ್ರದಲ್ಲಿ ಆ ಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್ ಮುಖಂಡ ಹೆಚ್.ಡಿ. ರೇವಣ್ಣ, ಕಾಂಗ್ರೆಸ್​ಗೆ ಯಾವ ಪರಿಸ್ಥಿತಿ ಬಂದಿದೆ ನೋಡಿ ಎಂದು ಮರುಗಿದರು. ಯಾರೋ ನೊಣವಿನಕೆರೆ ಅಜ್ಜಯ್ಯ ಹೇಳಿದರು ಅಂತ ಆ ಹುಡುಗಿಯನ್ನ ಆರ್.ಆರ್. ನಗರಕ್ಕೆ ಅಭ್ಯರ್ಥಿ ಮಾಡಿದ್ದಾರೆ. ಒಂದೇ ದಿನದಲ್ಲಿ ಪಕ್ಷಕ್ಕೆ ಸೇರಿಸಿಕೊಂಡು ಅಭ್ಯರ್ಥಿ ಮಾಡಿದ್ದಾರೆ. ಆ ಹುಡಗಿಯನ್ನು ಏನು ಮಾಡ್ತಾರೋ ಏನೋ ಎಂದು ಆತಂಕ ಪಟ್ಟರು.

ದೈವಭಕ್ತನಾಗಿರುವ ಡಿಕೆ ಶಿವಕುಮಾರ್ ಅವರಿಗೆ ನೊಣವಿನಕೆರೆ ಅಜ್ಜಯ್ಯರ ಬಗ್ಗೆ ಬಹಳ ನಂಬಿಕೆ. ಬೆಂಗಳೂರಿನ ನಾಗರಭಾವಿಯ ಮಾರೇನಹಳ್ಳಿಯಲ್ಲಿರುವ ಅಜ್ಜಯ್ಯನವರನ್ನ ಭೇಟಿ ಮಾಡಿ ಆರ್.ಆರ್. ನಗರದ ಅಭ್ಯರ್ಥಿ ಸಮಸ್ಯೆಗೆ ಪರಿಹಾರ ಕೇಳಿದರಂತೆ. ಆಗ ಅಜ್ಜಯ್ಯನವರು ಮುನಿರತ್ನಗೆ ಸ್ತ್ರೀಕಂಟಕ ಇದ್ದು ಅವರ ಎದುರು ಮಹಿಳಾ ಅಭ್ಯರ್ಥಿಯೊಬ್ಬರನ್ನು ನಿಲ್ಲಿಸುವಂತೆ ಸೂಚಿಸಿದರಂತೆ. ಅದೇ ವೇಳೆ ಡಿಕೆ ರವಿ ಹೆಂಡತಿ ಕುಸುಮಾ ಅವರು ಆರ್.ಆರ್. ನಗರದಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಲು ನಿರ್ಧರಿಸಲಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ. ಈ ವಿಚಾರವಾಗಿ ಹೆಚ್.ಡಿ. ರೇವಣ್ಣ ಅವರು ಮಾತನಾಡಿ ಕಾಂಗ್ರೆಸ್ ಬಗ್ಗೆ ಮರುಕ ವ್ಯಕ್ತಪಡಿಸಿದ್ದು.

ಇದನ್ನೂ ಓದಿ: ಸಿದ್ದರಾಮಯ್ಯ ಮೊದಲು ಚಿಲ್ಲರೆ ರಾಜಕಾರಣ ಮಾಡೋದನ್ನು ಬಿಡಲಿ; ಕಿಡಿಕಾರಿದ ಮಾಜಿ ಸಿಎಂ ಕುಮಾರಸ್ವಾಮಿ

ಇನ್ನು ಡಿಕೆ ಶಿವಕುಮಾರ್ ಮನೆ ಮೇಲೆ ಇಂದು ಸಿಬಿಐ ದಾಳಿ ನಡೆದಿರುವ ವಿಚಾರದ ಬಗ್ಗೆ ಮಾತನಾಡಿದ ರೇವಣ್ಣ, ಕಳೆದ ಬಾರಿ ಮಂಡ್ಯ, ಹಾಸನ ಮತ್ತು ತುಮಕೂರಿನ ಲೋಕಸಭಾ ಚುನಾವಣೆ ಸಮಯದಲ್ಲಿ ನಮ್ಮ ಬೆಂಬಲಿಗರ ಮನೆಗಳ ಮೇಲೂ ದಾಳಿ ಮಾಡಿದ್ದರು. ಒಂದು ಪಕ್ಷವನ್ನ ಗುರಿಯಾಗಿಟ್ಟುಕೊಂಡು ಈಗ ರೇಡ್ ಮಾಡುತ್ತಿದ್ಧಾರೆ. ಅವರ ಕರ್ತವ್ಯ ಅವರು ಮಾಡಿಕೊಳ್ಳುತ್ತಾರೆ. ನಾವ್ಯಾಕೆ ರಿಯಾಕ್ಟ್ ಮಾಡಬೇಕು? ನಾನು ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ತಿಳಿಸಿದರು.

ಜೆಡಿಎಸ್ ಪಕ್ಷದ ವಿರುದ್ಧ ಸಿದ್ದರಾಮಯ್ಯ ಮೊದಲಾದವರು ಮಾಡಿರುವ ಟೀಕೆ ಬಗ್ಗೆ ಮಾಜಿ ಸಚಿವರು ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್ ಎಂದರೆ ಎರಡು ರಾಜಕೀಯ ಪಕ್ಷಗಳಿಗೆ ಅದೇನೋ ಭಾವನೆ. ಜೆಡಿಎಸ್ ಪಕ್ಷವನ್ನ ಮುಗಿಸಬೇಕು ಎಂದು ಈ ಪಕ್ಷಗಳು ಹೊರಟಿವೆ. ಜೆಡಿಎಸ್ ಬಗ್ಗೆ ಮತ್ತು ದೇವೇಗೌಡರ ಬಗ್ಗೆ ಈ ಪಕ್ಷಗಳವರು ಪ್ರತಿನಿತ್ಯ ಮಾತನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮನ್ನು ತಬ್ಬಿಕೊಳ್ಳಿ ಅಂತ ನಾವು ಇವರಿಗೆ ಕೇಳಿದ್ದೆವಾ? ಅವರೇ ಬಂದು ನಮ್ಮನ್ನ ತಬ್ಬಿಕೊಂಡರು ಎಂದು ರೇವಣ್ಣ ಹೇಳಿದರು. ಜೆಡಿಎಸ್ ಇನ್ನೊಂದು ಪಕ್ಷದ ಹೆಗಲ ಮೇಲೆ ಕೂತು ಅಧಿಕಾರ ಅನುಭವಿಸುತ್ತದೆ ಎಂದು ಸಿದ್ದರಾಮಯ್ಯ ಮಾಡಿದ ಟೀಕೆಗೆ ರೇವಣ್ಣ ಈ ರೀತಿಯಾಗಿ ಉತ್ತರ ನೀಡಿದರು.

ಇದನ್ನೂ ಓದಿ: ಟಾರ್ಗೆಟ್ ಮಾಡಲು ಸಿದ್ದರಾಮಯ್ಯಗಿಂತ ಡಿಕೆ ಶಿವಕುಮಾರ್ ದೊಡ್ಡ ನಾಯಕರಲ್ಲ; ಸಚಿವ ಡಾ. ಸುಧಾಕರ್

ರಾಜ್ಯ ಸರ್ಕಾರ ಸುಲಿಗೆ ಸರ್ಕಾರ ಆಗಿದೆ. ಸರ್ಕಾರಿ ಅಧಿಕಾರಿಗಳಿಂದ ಎರಡು ಮೂರು ಲಕ್ಷ ಹಣ ತೆಗೆದುಕೊಳ್ಳುತ್ತಿದ್ದಾರೆ. ಅಧಿಕಾರಿಗಳದು ಇರಲಿ, ಪೊಲೀಸರಿಂದಲೂ ವಸೂಲಿ ಮಾಡುತ್ತಿದ್ದಾರೆ. ಈಗ ಹಾಸನದ ಉಪವಿಭಾಗಾಧಿಕಾರಿಯನ್ನ ವರ್ಗಾವಣೆ ಮಾಡಿದ್ದಾರೆ. ಇನ್ನು ಮುಂದಕ್ಕೆ ದುಡ್ಡು ಮಾಡುವ ಅಧಿಕಾರಿಗಳನ್ನ ತಂದು ಹಾಕುತ್ತಾರೆ. ಡ್ಯಾಮೇಜ್ ಆಗಿರುವ ಸರ್ಕಾರಕ್ಕೆ ದುಡ್ಡು ಕಲೆಕ್ಷನ್ ಮಾಡಲು ಎಕ್ಸ್​ಪರ್ಟ್ ಆಗಿರುವ ಅಧಿಕಾರಿಗಳನ್ನ ಹಾಸನಕ್ಕೆ ತಂದು ಹಾಕುತ್ತಾರೆ ಎಂದು ವ್ಯಂಗ್ಯ ಮಾಡಿದರು.

ಜೆಡಿಎಸ್ ವಿರುದ್ಧ ದ್ವೇಷದ ರಾಜಕಾರಣ ಹೆಚ್ಚು ದಿನ ನಿಲ್ಲಲ್ಲ. ಯಾವ ಅಧಿಕಾರಿಗಳು ಬಂದರೂ ಕೆಲಸ ಮಾಡಿಸಿಕೊಳ್ಳುವುದು ನನಗೆ ಗೊತ್ತಿದೆ. ನಮ್ಮ ಕೆಲಸ ಮಾಡಿದರೆ ಮಾಡಲಿ, ಇಲ್ಲದಿದ್ದರೆ ಬಿಡಿ. ಎರಡು ವರ್ಷ ನಮ್ಮ ಫೈಲ್ ಹಾಗೇ ಬಿದ್ದಿರಲಿ ಬಿಡಿ. ಹಾಸನದ ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿಯನ್ನ ಬಿಜೆಪಿ ಸರ್ಕಾರ ವಜಾ ಮಾಡಿದೆ. ಹೂಡಾದಲ್ಲಿ ಏನೇನು ನಡೆಯುತ್ತಿದೆ ಎಲ್ಲಾ ಗೊತ್ತು. ಆ ಕಮಿಷನರ್ ಅನ್ನ ಬಲಿ ಹಾಕುತ್ತೇನೆ ಎಂದು ಹೆಚ್.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ವರದಿ: ಡಿಎಂಜಿ ಹಳ್ಳಿ ಅಶೋಕ್
Published by:Vijayasarthy SN
First published: