ಹಾಸನ; ಒಬ್ಬ ಕೇಂದ್ರ ಸಚಿವರು ಬಂದು ಯಡೇಗೌಡನಹಳ್ಳಿಯಿಂದ ಬೇಲೂರಿಗೆ ರಾಷ್ಟ್ರೀಯ ಹೆದ್ದಾರಿಗೆ ಅಡಿಗಲ್ಲು ಹಾಕಿದ್ದಾರೆ. ಆದರೆ ಅಡಿಗಲ್ಲು ಹಾಕಿದ್ದ ರಾಷ್ಟ್ರೀಯ ಹೆದ್ದಾರಿಯನ್ನ ರದ್ದು ಮಾಡಿ ಬೇರೆಡೆಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಬಿಜೆಪಿ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.
ಹಾಸನದ ಜಿಲ್ಲಾ ಪಂಚಾಯತಿಯಲ್ಲಿ ನಡೆದ ದಿಶಾ (ಎರಡನೇ ತ್ರೈಮಾಸಿಕ ಜಿಲ್ಲಾಮಟ್ಟದ ಜಿಲ್ಲಾಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ) ಸಭೆಯಲ್ಲಿ ಬಿಜೆಪಿ ವಿರುದ್ದ ಹೆಚ್,ಡಿ,ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು. ಯಡೇಗೌಡನಹಳ್ಳಿಯಿಂದ ಬೇಲೂರಿಗೆ ರಾಷ್ಟ್ರೀಯ ಹೆದ್ದಾರಿ ಮಂಜೂರಾಗಿತ್ತು. ಈಗ ಈ ಯೋಜನೆ ರದ್ದು ಮಾಡಿ ಗೋವಿಂದ ಕಾರಜೋಳ ಅವರ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಡಿಪಿಆರ್ ಆಗಿ ಲ್ಯಾಂಡ್ ಮಾರ್ಕ್ ಆದ ಬಳಿಕ ಈಗ ಆ ಹೆದ್ದಾರಿಯನ್ನು ರದ್ದು ಮಾಡಿದ್ದಾರೆ. ಈ ಹಿಂದೆ ನಿತಿನ್ ಗಡ್ಕರಿಯವರು ಹೆದ್ದಾರಿ ಸಚಿವರಾಗಿದ್ದಾಗ ಬಂದು ಹೆದ್ದಾರಿಗೆ ಅಡಿಗಲ್ಲು ಹಾಕಿದ್ದರು. ಒಬ್ಬ ಮಾಜಿ ಪ್ರಧಾನಿ ಪ್ರತಿನಿಧಿಸುವ ಕ್ಷೇತ್ರದ ಹೆದ್ದಾರಿ ಯೋಜನೆಯನ್ನೇ ರದ್ದು ಮಾಡಿದ್ದಾರೆ. ಯೋಜನೆ ಅನುಷ್ಠಾನವಾಗಿದ್ದನ್ನು ಯಾಕೆ ಈಗ ರದ್ದು ಮಾಡಿದ್ದಾರೆ? ಎಂಬ ಸಂಪೂರ್ಣ ಮಾಹಿತಿ ಕೊಡಿ ಎಂದು ರಾಷ್ಟ್ರೀಯ ಹೆದ್ದಾರಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಅರ್ಚನಾರನ್ನು ತರಾಟೆ ತೆಗೆದುಕೊಂಡರು.
ಸಭೆಗೆ ಸರಿಯಾಗಿ ಮಾಹಿತಿ ನೀಡದ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಹೆಚ್.ಡಿ. ರೇವಣ್ಣ ತರಾಟೆಗೆ ತೆಗೆದುಕೊಂಡರು. ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಲು ಸರ್ಕಾರಕ್ಕೆ ಪತ್ರ ಬರೆಯುವಂತೆ ಶಾಸಕ ಹೆಚ್.ಡಿ. ರೇವಣ್ಣನವರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಕೃಷಿ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು. ಹಾಸನ ಜಿಲ್ಲೆಯಲ್ಲಿ 100 ಜನಕ್ಕೆ 13 ಸಿಬ್ಬಂದಿಗಳು ಮಾತ್ರ ಕೆಲಸ ಮಾಡುತ್ತಿದ್ದು, ಹಾಸನ ಜಿಲ್ಲೆಯಲ್ಲಿ ಹೆಚ್ಚಿನ ಜನರು ಕೃಷಿ ಕೆಲಸ ಮಾಡುತ್ತಿರುವುದರಿಂದ ಮತ್ತು ಕೇಂದ್ರ ಸರ್ಕಾರದ ರಾಜ್ಯ ಸರ್ಕಾರದ ಹಣ ಸದುಪಯೋಗ ಪಡಿಸಿಕೊಳ್ಳಲು ಕೂಡಲೇ ಖಾಲಿ ಇರುವ ಸಿಬ್ಬಂದಿ ನೇಮಕ ಮಾಡುವಂತೆ ಸಭೆಯಲ್ಲಿ ಒತ್ತಾಯಿಸಿದರು.
ಕೃಷಿ ಇಲಾಖೆಗೆ ಕೆಂದ್ರ ಮತ್ತು ರಾಜ್ಯ ಸರ್ಕಾರದಿಂದ 30 ಕೋಟಿ ಅನುದಾನ ಬರುತ್ತದೆ ರೈತರಿಗೆ ಸರಿಯಾಗಿ ಹಣ ತಲುಪಲು ಸಾಧ್ಯವಾಗುತಿಲ್ಲ. ತೋಟಗಾರಿಕೆ ಇಲಾಖೆಗೆ 30 ಕೋಟಿ ವಾರ್ಷಿಕ ಅನುದಾನ ಬರುತ್ತಿದ್ದು, ಅದನ್ನು ಖರ್ಚು ಮಾಡಲು ಕೆವಲ 12 ಜನ ಸಿಬ್ಬಂದಿಗಳಿದ್ದಾರೆ. ಹಣವು ಸರಿಯಾಗಿ ರೈತರಿಗೆ ತಲುಪುತ್ತಿಲ್ಲ ಎಂದು ದೂರಿದರು.
ಬೇಲೂರು ಕ್ಷೇತ್ರದ ಶಾಸಕರಾದ ಲಿಂಗೇಶ್ ಮಾತನಾಡಿ, ಬೇಲೂರು ತಾಲ್ಲೂಕಿನಲ್ಲಿ ಕೆಲಸ ಮಾಡುವ ಕೃಷಿ ಇಲಾಖೆ ಹಿರಿಯ ಅಧಿಕಾರಿಗಳ ಮೇಲೆ ಕಿರಿಯ ಅಧಿಕಾರಿಗಳು ಅಟ್ರಾಸಿಟಿ ಪ್ರಕರಣ ದಾಖಲು ಮಾಡಿ ಕಿರುಕುಳ ಕೊಡುತ್ತಿದ್ದು, ಕೂಡಲೇ ಸಭೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕರೆಸುವಂತೆ ಒತ್ತಾಯಿಸಿದರು. ಹೊಳೆನರಸೀಪುರ ತಾಲೂಕಿನಲ್ಲಿ ಖಾಸಗಿ ವ್ಯಕ್ತಿಗೆ ಡಯಾಲಿಸಿಸ್ ಮಾಡಲು ಸರ್ಕಾರ ಗುತ್ತಿಗೆ ನೀಡಿದ್ದು ರೈತರ ಬಳಿ ಪಡೆದು ಡಯಾಲಿಸಿಸ್ ಮಾಡಲಾಗುತ್ತಿದೆ. ಗುತ್ತಿಗೆದಾರರು ಸರ್ಕಾರದ ಹಣ ನುಂಗುತ್ತಿದ್ದಾರೆ ಎಂದು ದೂರಿದ ಅವರು, ಆರೋಗ್ಯ ಇಲಾಖೆಯ ಆಯುಕ್ತರಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾಧಿಕಾರಿಯವರು ತಿಳಿಸಿದರು.
ಆ್ಯಂಬುಲೆನ್ಸ್ ಗಳ ಕೊರತೆ ಇದ್ದು ಹೋಬಳಿವಾರು ಆ್ಯಂಬುಲೆನ್ಸ್ ವಿತರಣೆ ಮಾಡುವಂತೆ ಸಂಸದರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು. ಆ್ಯಂಬುಲೆನ್ಸ್ಗಳನ್ನು ಪೊಲೀಸ್ ಠಾಣೆಗಳ ನಿಯಂತ್ರಣಕ್ಕೆ ನೀಡುವಂತೆ ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣನವರು ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಅಪಘಾತ ವಲಯದಲ್ಲಿ ಸೂಚನೆ ಫಲಕವನ್ನು ಅಳವಡಿಸುವಂತೆ, ಜಿಲ್ಲೆಯಲ್ಲಿ ನಡೆದ ಅಪಘಾತಗಳ ಬಗ್ಗೆ ಮಾಹಿತಿ ತರಬೇಕು ಎಂದು ಹಾಸನ ಡಿ.ವೈ.ಎಸ್.ಪಿ.ಗೆ. ಸೂಚಿಸಿದರು. ಹಾಸನ ಜಿಲ್ಲೆಯಲ್ಲಿ 200 ಕೋಟಿ ಹಣ ನರೇಗಾ ಹಣ ಖರ್ಚಾಗುತ್ತದೆ. ಅದರಲ್ಲಿ ಸ್ವಲ್ಪ ಹಣವನ್ನು ಅರಣ್ಯ ಇಲಾಖೆಗೆ ನೀಡುವಂತೆ ಮತ್ತು ಸುಮಾರು 50 ಲಕ್ಷ ಮರಗಳನ್ನು ಬೆಳೆಸುವಂತೆ ಸಾಮಾಜಿಕ ಅರಣ್ಯ ಅಧಿಕಾರಿಯವರಿಗೆ ಸೂಚಿಸಿದರು.
ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಸ್ಥಳೀಯ ಆಸ್ಪತ್ರೆ ಕಟ್ಟಡ ಉದ್ಘಾಟನೆ ಕಾರ್ಯಕ್ರಮಕ್ಕೆ ಶಾಸಕ, ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಸಮಾರಂಭಗಳಿಗೆ ಕರೆಯುವುದಿಲ್ಲ. ಜಾವಗಲ್ ಆಯುಷ್ ಕಟ್ಟಡ ನಿರ್ಮಾಣ ಮಾಡಲು ಹಣ ನೀಡಿದ್ದೇವೆ. ಆದರೆ ಉದ್ಘಾಟನೆಗೆ ನಮ್ಮನ್ನು ಕರೆಯುವುದಿಲ್ಲ. ಜಿಲ್ಲಾ ಆಯುಷ್ ಅಧಿಕಾರಿ ಸಭೆಗೆ ಹಾಜರಾಗದಿದ್ದ ಬಗ್ಗೆ ನೋಟೀಸ್ ನೀಡಿ ವಿವರಣೆ ಪಡೆಯುವಂತೆ ಸೂಚನೆ ನೀಡಿದರು.
ಸಕಲೇಶಪುರ- ಮಂಗಳೂರು ರಸ್ತೆಯಲ್ಲಿ ಸಂಚಾರ ಮಾಡಿದರೆ ಉಳುಕಿರುವ ಸೊಂಟ ಸರಿಯಾಗುತ್ತದೆ. ಅಷ್ಟು ರಸ್ತೆ ಹಾಳಾಗಿದೆ. ಎಷ್ಟು ಜನರು ಈ ರಸ್ತೆಯಲ್ಲಿ ಅಪಘಾತದಿಂದ ಸಾಯುತ್ತಿದ್ದಾರೆ ಎಂದು ಮಾಜಿ ಸಚಿವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು. ಕೆಂದ್ರ ಸರಕಾರದ ಸಚಿವರು ಬಂದು ಉದ್ಘಾಟನೆ ಮಾಡಿದ್ದ ಬೇಲೂರು ಹಾಸನ ರಸ್ತೆ ಕಾಮಗಾರಿ ರದ್ದು ಮಾಡಿದ್ದಾರೆ. ಹಾಸನ ಬೇಲೂರು ರಸ್ತೆ ಕಾಮಗಾರಿ ನಿಲ್ಲಲು ಕಾರಣವೇನು? ವಿವಿಧ ಕಡೆಯಿಂದ ಬೇಲೂರು ಹಳೇಬೀಡಿಗೆ ಪ್ರವಾಸಿಗರು ಆಗಮಿಸುತ್ತಾರೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದನ್ನು ಓದಿ: ರಾಜ್ಯ ಸಚಿವ ಸಂಪುಟದ ವಿಸ್ತರಣೆ ಅಥವಾ ಪುನಾರಚನೆ ಕಸರತ್ತು ಮತ್ತೆ ನನೆಗುದಿಗೆ!
ಇಂಜಿನಿಯರ್ ಅರ್ಚನಾ ಮಾತನಾಡಿ, ಡಿಪಿಆರ್ ಸಲ್ಲಿಕೆ ಮಾಡಿದ್ದೇವೆ. ರಾಜ್ಯ ಸರ್ಕಾರದಿಂದ ಮಾಹಿತಿ ಸರಿಯಾಗಿ ಹೋಗಿಲ್ಲ. ನಾಲ್ಕು ಪಥದ ರಸ್ತೆ ರದ್ದು ಮಾಡಿ ಎರಡು ಪಥದ ರಸ್ತೆ ನಿರ್ಮಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಕಲೇಶಪುರ ಬಾಳುಪೆಟೆ ನಡುವೆ ಪ್ಯಾಚ್ ಕೆಲಸ ನಡೆಸುತ್ತಿದ್ದೇವೆ ಎಂದುತಿಳಿಸಿದರು.
ವರದಿ; ಡಿಎಂಜಿ ಹಳ್ಳಿಅಶೋಕ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ