ಗದಗ: ತಾವು ಸಿಎಂ ಆಗಿದ್ದಾಗ ಅನುದಾನ ನೀಡಿದ್ದ ಕಾಮಗಾರಿಯ ಭೂಮಿಪೂಜೆ ನೆರವೇರಿಸಲು ಆಹ್ವಾನ ಸಿಕ್ಕಿತೆಂದು ಕಾರ್ಯಕ್ರಮಕ್ಕೆ ಹೋದ ಕುಮಾರಸ್ವಾಮಿ (Ex CM H D Kumaraswamy) ಬರಿಗೈಲಿ ಮರಳಿದ ಘಟನೆ ನಡೆದಿದೆ. ಗದಗ್ ಜಿಲ್ಲೆಯ ಶಿರಹಟ್ಟಿ ಮತಕ್ಷೇತ್ರದ ಸುಗನಳ್ಳಿ ಗ್ರಾಮದಲ್ಲಿ ಕೆರೆ ತುಂಬಿಸುವ ಕಾಮಗಾರಿ ಭೂಮಿ ಪೂಜೆಗೆ ಆಗಮಿಸಿದ್ದ ಕುಮಾರಸ್ವಾಮಿಗೆ ಸರಕಾರದ ಸಚಿವರು ಶಾಸಕರಿಂದ ಅಪಮಾನವಾಯಿತು. ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸುಮಾರು 24 ಕೋಟಿ ರೂ. ಬಿಡುಗಡೆ ಮಾಡಿ ಆಲದಮ್ಮನ ಕೆರೆ ಮತ್ತು ಬನ್ನಿಕೊಪ್ಪ ಕೆರೆಗಳ ಅಭಿವೃದ್ಧಿಗೆ ಕುಮಾರಸ್ವಾಮಿ ಅನುದಾನ ಬಿಡುಗಡೆಗೊಳಿಸಿದ್ದರು. ಹೀಗಾಗಿ ಭೂಮಿ ಪೂಜೆ ಕಾರ್ಯಕ್ಕೆ ಆಗಮಿಸಿದ್ದರು. ಆದರೆ ಕುಮಾರಸ್ವಾಮಿಯವರು ಭೂಮಿ ಪೂಜೆಕಾರ್ಯ ನೆರವೇರಿಸಲು ಆಗಲಿಲ್ಲ. ಯಾಕೆಂದರೆ ಕೆರೆ ಕಾಮಗಾರಿಯ ಭೂಮಿ ಪೂಜೆಗೆ ಆಹ್ವಾನ ಮಾಡಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಇಬ್ಬರೂ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಬರಲಿಲ್ಲ. ಶಿಷ್ಟಾಚಾರದ ಪ್ರಕಾರ ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳು ಇರದೇ ಕುಮಾರಸ್ವಾಮಿಗೆ ಭೂಮಿ ಪೂಜೆ ನೆರವೇರಿಸುವಂತಿರಲಿಲ್ಲ. ಹೀಗಾಗಿ, ಕುಮಾರಸ್ವಾಮಿ ಭೂಮಿಪೂಜೆ ಮಾಡಲಿಲ್ಲ. ಆದರೆ, ಸಚಿವ ಮತ್ತು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಜನರ ಅನುಕಂಪ ಗಿಟ್ಟಿಸುವ ಪ್ರಯತ್ನವಂತೂ ಮಾಡಿದರು.
ಸ್ವತಃ ಶಾಸಕ ರಾಮಣ್ಣ ಲಮಾಣಿ ಅವರೇ ಫೋನ್ ಮಾಡಿದ್ರು, ನೀವೇ ಬರಬೇಕು, ಜನ ನಿಮ್ಮನ್ನ ಬಯಸ್ತಾರೆ ಅಂತ ಹೇಳಿದ್ರು, ಹಠಾತ್ತಾಗಿ ಈ ಕಾರ್ಯಕ್ರಮದಿಂದ ಇಬ್ಬರೂ ದೂರ ಉಳಿದಿದ್ದಾರೆ. ಸ್ವತಃ ಇಲ್ಲಿನ ಬಿಜೆಪಿ ಶಾಸಕರೇ ನನ್ನ ಅನುದಾನ ಕೇಳಿದ್ದರು. ಬಿಜೆಪಿ ಶಾಸಕ ಕೇಳಿದಂತೆ 50 ಕೋಟಿ ರೂ ಬಿಡುಗಡೆ ಮಾಡಿದ್ದೆ. ನನ್ನ ಅವಧಿಯಲ್ಲಿ ಬಿಜೆಪಿ ಶಾಸಕರು ಎಂದು ನಾನು ಸಣ್ಣತನ ತೋರಿಸಿಲ್ಲ. ಆದರೆ ಈಗ ನನ್ನ ಸರ್ಕಾರದಲ್ಲಿ ಆಗಿದೆ ಎಂದು ಅಭಿವೃದ್ಧಿಗೆ ತಡ ಮಾಡಬೇಡಿ. ಕುಮಾರಸ್ವಾಮಿ ಕ್ರೆಡಿಟ್ ತೆಗೆದುಕೊಳ್ತಾನೆ ಎಂದು ಕಾಮಗಾರಿ ಸ್ಥಗಿತ ಮಾಡಬೇಡಿ ಎಂದು ಕಿಡಿಕಾರಿದರು.
ಇದನ್ನೂ ಓದಿ: ಟ್ರಾಫಿಕ್ ಆಗುತ್ತೆ, ವರ್ಕ್ ಫ್ರಂ ಹೋಂ ಮಾಡಿಸಿ: ರಿಂಗ್ ರೋಡ್ನ ಐಟಿ ಕಂಪನಿಗಳಿಗೆ ಸರ್ಕಾರ ಮನವಿ
ಶ್ರೀಗಳ ಆಶೀರ್ವಾದ: ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಬಾಳೆಹೊಸೂರಿನ ದಿಂಗಾಲೇಶ್ವರ ಶ್ರೀಗಳನ್ನ ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಮೂಲಕ ಬಹುದಿನಗಳ ಆಸೆಯನ್ನ ಈಡೇರಿಸಿಕೊಂಡರು. ಇನ್ನು ಕುಮಾರಸ್ವಾಮಿಯವರಿಗೆ ಆಗಿರುವ ಅವಮಾನದ ಬಗ್ಗೆ ಸ್ವಾಮೀಜಿಗಳು ಸಹ ವಿಷಾದಿಸಿದರು. ಇದರಲ್ಲಿ ಯಾರೂ ಕೂಡ ರಾಜಕೀಯ ಮಾಡಬಾರದಿತ್ತು. ಪಕ್ಷಭೇದ ಮರೆತು ಅಭಿವೃದ್ಧಿ ಕಾರ್ಯಕ್ಕೆ ಒತ್ತುಕೊಡಬೇಕಿತ್ತು ದಿಂಗಾಲೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು. ಒಂದು ಕಡೆ ಭೂಮಿಪೂಜೆ ಘಟನೆಯು ಬೇಸರ ತಂದರೂ ಇನ್ನೊಂದೆಡೆ ಇದನ್ನೇ ದಾಳವಾಗಿಸಿಕೊಂಡ ಕುಮಾರಸ್ವಾಮಿ ಜನರಿಂದ ಅನುಕಂಪ ಗಿಟ್ಟಿಸಿಕೊಂಡು ರಾಜಕೀಯ ಲಾಭ ಪಡೆದುಕೊಂಡರು.
ಜನಸಾಗರ: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಗದಗ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡ ವೇಳೆ ಈ ಘಟನೆ ನಡೆದಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಸಿಎಂ ಗದ್ದುಗೆ ಏರಬೇಕು ಅನ್ನೋ ಹಂಬಲದಲ್ಲಿರುವ ಕುಮಾರಸ್ವಾಮಿ ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ತಾವು ಮಾಡಿರೋ ಅಭಿವೃದ್ಧಿ ಕಲಸಗಳನ್ನ ಜನರ ಮುಂದೆ ಇಟ್ಟು ಮತದಾರರ ಮನ ಗೆಲ್ಲುವ ಯತ್ನದ ಫಲವಾಗಿ ನಿನ್ನೆ ಗದಗನಲ್ಲಿ ಹಲವು ಹಳ್ಳಿಗಳಿಗೆ ಭೇಟಿ ಮಾಡಿದರು. ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕಿನ ಹಲವು ಹಳ್ಳಿಗಳಿಗೆ ಭೇಟಿ ನೀಡಿದರು. ಈ ವೇಳೆ ಕುಮಾರಸ್ವಾಮಿಯವರ ಸ್ವಾಗತಕ್ಕೆ ಹಳ್ಳಿ ಹಳ್ಳಿಗಳಲ್ಲಿ ಹಾರ ಹಿಡಿದು ಸ್ವಾಗತ ಮಾಡಲು ಜನಸಾಗರವೇ ಹರಿದುಬಂದಿತ್ತು. ಎತ್ತಿನ ಬಂಡೆಯಲ್ಲಿ ಕುಮಾರಸ್ವಾಮಿ ಅವರನ್ನ ಅದ್ಧೂರಿಯಾಗಿ ಸ್ವಾಗತ ಮಾಡಿದರು. ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಮತ್ತೊಂದು ಬಾರಿ ನನಗೆ ಅಧಿಕಾರ ಕೊಡಿ ಅಂತ ಮನವಿ ಮಾಡಿಕೊಂಡರು. ಬಸ್ ನಿಲ್ದಾಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಜಾತಿ ನೋಡ್ಬೇಡಿ.. ದುಡ್ಡು ನೋಡ್ಬೇಡಿ.. ನನಗೋಸ್ಕರ ಐದು ವರ್ಷ ಪೂರ್ಣ ಅಧಿಕಾರ ಕೊಡಿ ಅಂತ ಜನರಲ್ಲಿ ಮನವಿ ಮಾಡಿದರು.
ಇಪ್ಪತ್ತಲ್ಲ, ಐದು ವರ್ಷ ಅಧಿಕಾರ ಕೊಡಿ ಸಾಕು: ಕಳೆದ 75 ವರ್ಷದಿಂದ ಬಿಜೆಪಿ ಕಾಂಗ್ರೆಸ್ ಎಲ್ಲ ಪಕ್ಷ ನೋಡಿದ್ದೀರಿ. 20 ವರ್ಷ ಕೊಡಿ ಅಂತಾ ಕೇಳಲ್ಲ, ಕೇವಲ ಐದೇ ವರ್ಷ ಕೊಡಿ. ರೈತರ ಸಾಲ ಮನ್ನಾ ವಿಚಾರದಲ್ಲಿ ನಾನು ಯಾವು ರೀತಿ ನಡೆದುಕೊಂಡಿದ್ದೇನೆ ಅನ್ನೋದು ನಿಮಗೆ ಗೊತ್ತು. ಒಂದು ಚುನಾವಣೆ ಪರೀಕ್ಷೆ ಮಾಡಿ ನಿಮ್ಮ ಬದುಕನ್ನ ಒಳ್ಳೆಯ ರೀತಿ ಮಾಡುವೆ. ಇನ್ನೊಬ್ಬರ ಜೊತೆ ಸರ್ಕಾರ ಮಾಡೋದಕ್ಕೆ ಆಗಲ್ಲ. ಸ್ವತಂತ್ರ ಸರ್ಕಾರ ಕೊಡಿ. ಯಾವ ಸರ್ಕಾರಕ್ಕೂ ಅರ್ಜಿ ಕೊಡದ ರೀತಿಯಲ್ಲಿ ಯೋಜನೆಗಳನ್ನ ಸಿದ್ಧ ಮಾಡಿದ್ದೇನೆ ಎಂದು ಕುಮಾರಸ್ವಾಮಿ ತಮ್ಮ ಚುನಾವಣಾ ಯೋಜನೆಯ ಯೋಚನೆಯನ್ನ ಜನರ ಮುಂದೆ ಇಟ್ಟರು.
ವರದಿ: ಸಂತೋಷ ಕೊಣ್ಣೂರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ