ಚನ್ನಪಟ್ಟಣ: ಸುಮಾರು ವರ್ಷಗಳಿಂದ ಚನ್ನಪಟ್ಟಣದ ಎಲೇಕೇರಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ನೆನೆಗುದಿಗೆ ಬಿದಿತ್ತು. ಆದರೆ ಈಗ ಮಾಜಿ ಸಿಎಂ ಹಾಗೂ ಕ್ಷೇತ್ರದ ಶಾಸಕ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದಿಂದ ಈ ಯೋಜನೆಗೆ ಅಗತ್ಯವಿದ್ದ ಹಣವನ್ನ ಬಿಡುಗಡೆ ಮಾಡಿಸಿ ಈ ಭಾಗದ ಜನರಿಗೆ ಕೊಟ್ಟಿದ್ದ ಮಾತನ್ನ ಉಳಿಸಿಕೊಂಡಿದ್ದಾರೆ. ಚನ್ನಪಟ್ಟಣದ ಎಲೇಕೇರಿ ಗ್ರಾಮದ ಮಾರ್ಗವಾಗಿ ಸರಿಸುಮಾರು 30 ಕ್ಕೂ ಹೆಚ್ಚು ಗ್ರಾಮಗಳಿಗೆ ಇದೇ ರಸ್ತೆ ಸಂಪರ್ಕವನ್ನ ಕಲ್ಪಿಸುತ್ತದೆ. ಆದರೆ ಅಲ್ಲಿಯೇ ರೈಲ್ವೆ ಸ್ಟೇಷನ್ ಇರುವ ಕಾರಣ ದಿನದಲ್ಲಿ ಗಂಟೆಗೊಮ್ಮೆ ಗೇಟ್ ಹಾಕಲಾಗುತ್ತಿತ್ತು. ಇದರಿಂದಾಗಿ ಈ ಭಾಗದ ಜನರು ಸಂಚಾರ ಮಾಡಲು ಸಾಕಷ್ಟು ಸಮಸ್ಯೆಯನ್ನ ಅನುಭವಿಸುತ್ತಿದ್ದರು. ಈ ಸಮಸ್ಯೆಯ ಬಗ್ಗೆ ಮೊದಲಿಗೆ ಸಂಸದ ಡಿ.ಕೆ. ಸುರೇಶ್ ಗಮನಕ್ಕೆ ತಂದಿದ್ದ ಸ್ಥಳೀಯರು ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಿಕೊಡುವಂತೆ ಒತ್ತಾಯ ಮಾಡಿದ್ದರು.
ನಂತರ ಈ ಯೋಜನೆಗೆ 15 ಕೋಟಿ ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಲಾಗಿತ್ತು. ಆದರೆ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಪೂರಕ ರಸ್ತೆ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭೂಮಾಲೀಕರಿಗೆ ಕೊಡಬೇಕಾಗಿದ್ದ ಪರಿಹಾರದ ಮೊತ್ತದ ವಿಚಾರದಲ್ಲಿ ಗೊಂದಲವಾಗಿ ಈ ಯೋಜನೆ ಅರ್ಧಕ್ಕೆ ನಿಂತಿತ್ತು. ನಗರಸಭೆ ವ್ಯಾಪ್ತಿಗೆ ಬರುವ ಭೂಮಾಲೀಕರ ಜಾಗಕ್ಕೆ ಚದರಡಿಗೆ 650-700 ರೂಪಾಯಿ ಹಣವನ್ನ ನಿಗದಿ ಮಾಡಲಾಗಿತ್ತು. ಆದರೆ ಸರ್ಕಾರದ ಮೊತ್ತವನ್ನ ಪ್ರಶ್ನಿಸಿ ಕೆಲವರು ಭೂಮಿಯನ್ನ ಬಿಟ್ಟುಕೊಡಲು ನಕಾರ ಮಾಡಿದ್ದರು. ಆದರೆ ನಂತರ ಸಮಸ್ಯೆಯ ಬಗ್ಗೆ ಚಿಂತನೆ ನಡೆಸಿದ ಕುಮಾರಸ್ವಾಮಿ ಅವರು ಸರ್ಕಾರದ ಜೊತೆಗೆ ಮಾತುಕತೆ ಮಾಡಿ ಪ್ರತಿ ಚದರ ಅಡಿಗೆ 1200-1400 ರೂಪಾಯಿ ಪರಿಹಾರ ಕೊಡಲು ನಿರ್ಧಾರ ಮಾಡಿದ್ದು, ಯೋಜನೆಗೆ ಇದ್ದ ಸಮಸ್ಯೆ ಈಗ ಬಗೆಹರಿದಿದೆ.
ಇದನ್ನೂ ಓದಿ: Sira By Election: ರಂಗೇರುತ್ತಿದೆ ಶಿರಾ ಉಪಚುನಾವಣೆ: ಬಿಜೆಪಿಯಿಂದ ಸುರೇಶ್ಗೌಡ ಕಣಕ್ಕೆ?
ಇನ್ನು, ಕೇಂದ್ರದಿಂದ 50% ಹಾಗೂ ರಾಜ್ಯದಿಂದ 50% ಹಣವನ್ನ ಖರ್ಚು ಮಾಡಿ ಯೋಜನೆ ರೂಪಿಸಲು ಪ್ಲ್ಯಾನ್ ಮಾಡಲಾಗಿತ್ತು. ಹಾಗಾಗಿ ಈ ಭಾಗದ ಜನರ ಮನವಿಗೆ ಸ್ಪಂದಿಸಿದ ಡಿ.ಕೆ. ಸುರೇಶ್ ಕಳೆದ 5 ವರ್ಷಗಳ ಹಿಂದೆಯೇ ಕೇಂದ್ರ ಸರ್ಕಾರದಿಂದ 4.75 ಕೋಟಿ ಹಣ ತಂದು ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿಕೊಟ್ಟರು. ನಂತರ ರಾಜ್ಯ ಸರ್ಕಾರದಿಂದ ಕೆ.ಐ.ಎ.ಡಿ.ಬಿ ಮೂಲಕ ಉಳಿದ 11,84,18,848 ರೂಪಾಯಿ ಹಣದ ಅವಶ್ಯಕತೆಯಿತ್ತು. ನಂತರ 2016 ರಲ್ಲಿ 3 ಕೋಟಿಯಷ್ಟು ಹಣ ಬಿಡುಗಡೆಯಾಗಿದ್ದರು ಸಹ ಯೋಜನೆ ಪ್ರಾರಂಭಿಸಲು ಸಾಧ್ಯವಾಗಿರಲಿಲ್ಲ. ಜೊತೆಗೆ ಹಿಂದೆ ಇದ್ದ ಜನಪ್ರತಿನಿಧಿಗಳು ಈ ಯೋಜನೆಯ ಬಗ್ಗೆ ಆಸಕ್ತಿ ತೋರಿರಲಿಲ್ಲ. ಆದರೆ ಈಗ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಉಳಿದ 8,84,18,848 ರೂಪಾಯಿ ಹಣವನ್ನ ಬಿಡುಗಡೆ ಮಾಡಿಸುವ ಮೂಲಕ ಈ ಭಾಗದ ಜನರ ಬಹುವರ್ಷಗಳ ಕನಸನ್ನ ನನಸು ಮಾಡಿದ್ದಾರೆ.
ಇದನ್ನೂ ಓದಿ: Charmadi Ghat: ಚಿಕ್ಕಮಗಳೂರಿನ ಕೊಟ್ಟಿಗೆಹಾರದ ಯುವಕರಿಂದ ಚಾರ್ಮಾಡಿ ಉಳಿಸಿ ಅಭಿಯಾನ
ಇನ್ನು ಹೆಚ್.ಡಿ. ಕುಮಾರಸ್ವಾಮಿಯವರ ಈ ಕಾರ್ಯಕ್ಕೆ ಚನ್ನಪಟ್ಟಣದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಆದಷ್ಟು ಬೇಗ ಈ ಯೋಜನೆಗೆ ಮರುಚಾಲನೆ ನೀಡಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣ ಮಾಡಲಾಗುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಚನ್ನಪಟ್ಟಣ ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಾಜಣ್ಣ ರಾಂಪುರ ನ್ಯೂಸ್ 18 ಕನ್ನಡಗೆ ತಿಳಿಸಿದ್ದಾರೆ.
ವರದಿ: ಎ.ಟಿ. ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ