ತುಮಕೂರು ಸೋಲು ದೇವೇಗೌಡರ ಆರೋಗ್ಯ ಕೆಡಿಸಿತು, ಈಗಲಾದರೂ ಗೆಲ್ಲಿಸಿ: HD Kumaraswamy ಮನವಿ

ತುಮಕೂರು ಜಿಲ್ಲೆ ನೀರಾವರಿಗೆ ದೇವೇಗೌಡ ಕುಟುಂಬ ಯಾವತ್ತೂ ಅನ್ಯಾಯ ಮಾಡಿಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಿದ್ರಿ. ದೇವೇಗೌಡರ ಸೋಲನ್ನು ಕನಸಲ್ಲೂ ಊಹಿಸಿರಲಿಲ್ಲ. ಸೋಲಿಗೆ ಕಾರಣರಾದವರಿಗೆ ನೀವುಗಳು ಈ ಚುನಾವಣೆಯಲ್ಲಿ ಉತ್ತರ ಕೊಡಬೇಕು.

ಹೆಚ್.ಡಿ. ಕುಮಾರಸ್ವಾಮಿ

ಹೆಚ್.ಡಿ. ಕುಮಾರಸ್ವಾಮಿ

  • Share this:
ತುಮಕೂರು: ಎಂಎಲ್​ಸಿ ಚುನಾವಣೆ (MLC Election) ಹಿನ್ನೆಲೆಯಲ್ಲಿ ತುಮಕೂರು ಜೆಡಿಎಸ್​ ಅಭ್ಯರ್ಥಿ (JDS Candidate) ಪರ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ (HD Kumaraswamy) ಪ್ರಚಾರ ನಡೆಸಿದರು. ಜನತಾ ಸಂಗಮ ಕಾರ್ಯಕ್ರಮ ನಡೆಸಿ ಎಚ್​ಡಿಕೆ ಅಬ್ಬರದ ಭಾಷಣ ಮಾಡಿದರು. ಕಾಂಗ್ರೆಸ್​ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷದ ವಿರುದ್ದವೇ ನಮ್ಮ ಪಕ್ಷದ ಹೋರಾಟ. ಆದರೆ ಕಳೆದ ಬಾರಿ ಕಾಂಗ್ರೆಸ್​​ ಜೊತೆ ದೇವೇಗೌಡರ ನೇತೃತ್ವದಲ್ಲಿ ಕೈ ಜೋಡಿಸಬೇಕಾಯಿತು. 2004ರಲ್ಲೇ ನಮ್ಮ ಪಕ್ಷ ಮುಗಿಸಲು ಮುಂದಾಗಿದ್ದರು. ಸಿದ್ದರಾಮಯ್ಯರನ್ನು ಸಿಎಂ ಮಾಡಲು ಹೊರಟಿದ್ವಿ, ಆದರೆ ದೇವೇಗೌಡರ ವಿರುದ್ದ ಅಪಪ್ರಚಾರ ಮಾಡಿದ್ರು ಎಂದು ಆರೋಪಿಸಿದರು. 2008ರಿಂದ ಇಲ್ಲಿವರೆಗೆ ಹೋರಾಟ ಮಾಡಿ ಪಕ್ಷ ಉಳಿಸಿಕೊಳ್ಳಲು ಕಾರ್ಯಕರ್ತರು ಕಾರಣ ಎಂದರು.

ದೇವೇಗೌಡರಿಗೆ ಅಘಾತ ನೀಡಿದೆ

ಲೋಕಸಭೆ ಚುನಾವಣೆ ಸೋಲು ದೇವೇಗೌಡ ಅವರ ಆರೋಗ್ಯದ ಮೇಲೆ ಪರಿಣಾಮ ಬಿದ್ದಿದೆ, ಅವರ ಮನಸಿನ ಮೇಲೆ ಆಘಾತವಾಗಿದೆ. ಅದರಿಂದ ಅವರು ಹೊರಬರಬೇಕಾದರೆ ಪರಿಷತ್ ಅಭ್ಯರ್ಥಿಯನ್ನು ಗೆಲ್ಲಿಸಿ. 2023 ರಲ್ಲಿ ಬಿಜೆಪಿ ಕಾಂಗ್ರೆಸ್ ಗಿಂತ ನಾವು ಹೆಚ್ವಿನ ಸ್ಥಾನ ಪಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇವೇಗೌಡರ ಸೋಲನ್ನು ಕನಸಲ್ಲೂ ಊಹಿಸಿರಲಿಲ್ಲ

ತುಮಕೂರು ಜಿಲ್ಲೆಯ ಜನತೆಯ ನೀರಾವರಿಗೆ ದೇವೇಗೌಡ ಕುಟುಂಬ ಯಾವತ್ತೂ ಅನ್ಯಾಯ ಮಾಡಿಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಿದ್ರಿ. ಕಷ್ಟ ಕಾಲದಲ್ಲಿ ದೇವೇಗೌಡರ ಕೈ ಹಿಡಿದಿದ್ದು ತುಮಕೂರು, ಆದರೂ ತುಮಕೂರಿನಲ್ಲಿ ಸೋತರು. ದೇವೇಗೌಡರ ಸೋಲನ್ನು ಕನಸಲ್ಲೂ ಊಹಿಸಿರಲಿಲ್ಲ. ಸೋಲಿಗೆ ಕಾರಣರಾದವರಿಗೆ ನೀವುಗಳು ಈ ಚುನಾವಣೆಯಲ್ಲಿ ಉತ್ತರ ಕೊಡಬೇಕು. ಯಾವ ವ್ಯಕ್ತಿ 2004 ರಲ್ಲಿ ಬೆಳ್ಳಾವಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಯಾರಾಗಿದ್ದರೋ ಅವರೇ ಇಂದು ದೇವೇಗೌಡ ರ ಸೋಲಿಗೆ ಕಾರಣರಾದರು. ಕುತಂತ್ರದ ರಾಜಕಾರಣಿದಿಂದ ದೇವೇಗೌಡರು ಸೋತರು ಎನ್ನುವ ಮೂಲಕ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣಗೆ ತಿರುಗೇಟು ಕೊಟ್ಟರು.

ಖರ್ಗೆರನ್ನು ಸಿಎಂ ಮಾಡುವಂತೆ ಹೇಳಿದ್ದೆವು

ಬಿಜೆಪಿಯ ಬಿ ಟೀಮ್ ಎಂದು ಕಳೆದ ಬಾರಿ ಕಾಂಗ್ರೆಸ್ ಅಪಪ್ರಚಾರ ಮಾಡಿದರೂ ನಮ್ಮ ಪಕ್ಷ 39 ಸ್ಥಾನ ಗೆದಿತು. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಾಗ ಖರ್ಗೆ ಅವರನ್ನು ಸಿಎಂ ಮಾಡುವಂತೆ ನಾವು ಹೇಳಿದ್ದಿವಿ. ಕಾಂಗ್ರೆಸ್ ಜೊತೆಗಿನ ಮೈತ್ರಿ ಸರ್ಕಾರ, ಮುಳ್ಳಿನ ಹಾಸಿಗೆ ಅದಾಗಿತ್ತು. ಕಾಂಗ್ರೆಸ್ ಜೊತೆ ಸರ್ಕಾರ ಮಾಡಬಾರದಿತ್ತು ಎಂಬ ಭಾವನೆ ಬಂತು. ರೈತರ ಸಾಲ ಮನ್ನಾ ಮಾಡಲು ನಾನು ಕಾಂಗ್ರೆಸ್ ಜೊತೆ ಕೈ ಜೋಡಿಸಿದೆ. ಕಾಂಗ್ರೆಸ್ ನವರ ಸಹಕಾರ ಇಲ್ಲದೆ 24 ಸಾವಿರ ಕೋಟಿ ರೂ. ಒಟ್ಟು ಮಾಡಿ ಸಾಲ ಮನ್ನಾ ಮಾಡಿದೆ. ಈಗಿನ ಬಿಜೆಪಿ ಸರ್ಕಾರದಲ್ಲಿ 40 ಪರ್ಸೆಂಟ್ ಕಮಿಷನ್ ನಡೀತಿದೆ. ಎಲ್ಲ ಕೆಲಸಕ್ಕೂ 40 ಪರ್ಸೆಂಟ್ ಕೊಡಬೇಕು. ರೈತರ ಸಾಲ ಮನ್ನಾ ಮಾಡಿ ನನಗೆ ಕಮಿಷನ್ ಬಂದಿಲ್ಲ, ಆದರೆ ಆತ್ಮ ತೃಪ್ತಿ ಇದೆ ಎಂದರು.

ಬಿಜೆಪಿಯದ್ದು ಪಾಪದ ಹಣ

ಲೋಕಸಭೆಯಲ್ಲಿ ಕಾಂಗ್ರೆಸ್ ಜೊತೆ ನಾವು ಹೊಂದಾಣಿಕೆ ಮಾಡಿಕೊಳ್ಳದಿದ್ರೆ ಕನಿಷ್ಠ 5 ಸ್ಥಾನವನ್ನಾದರೂ ಗೆಲ್ಲುತ್ತಿದ್ದೆವು. ಜಾತಿ ರಾಜಕಾರಣ ನಾವು ಮಾಡಲ್ಲ, ಎಲ್ಲ ಸಮಾಜದ ಜನರಿಗೂ ಮೀಸಲಾತಿ ಕೊಟ್ಟಿದ್ದು ದೇವೇಗೌಡರು. ಸ್ಥಳೀಯ ಸಂಸ್ಥೆಯಲ್ಲಿ ಮೀಸಲಾತಿ ತಂದವರು ದೇವೇಗೌಡರು. ಬಿಜೆಪಿ ಪಾಪದ ಹಣವನ್ನು ಚುನಾವಣೆಯಲ್ಲಿ ಹೇಗೆ ವೆಚ್ಚ ಮಾಡುತಿದ್ದಾರೆ ಎಂದು ನಿಮಗೆ ಗೊತ್ತಿದೆ. ಕಳೆದ ಮೂರು ದಿನದಿಂದ ಸರ್ಕಾರಕ್ಕೆ ಹೇಳುತ್ತಿದ್ದೇನೆ. ಶಂಖ ಊದಿ ರೈತರ ಬದುಕು ಕಟ್ಟಲು ಆಗಲ್ಲ, ತಕ್ಷಣ ರೈತರಿಗೆ ಪರಿಹಾರ ಕೊಡಿ ಎಂದು. ರೈತರ ಕಷ್ಟಕಿಂತ ಚುನಾವಣೆ ಇವರಿಗೆ ಹೆಚ್ಚಾಗಿದೆ ಎಂದು ಕಿಡಿಕಾಡಿದರು.

ಇದನ್ನೂ ಓದಿ: ನಾನು ಯಾವತ್ತೂ ಹಲ್ಕಟ್ ರಾಜಕಾರಣ ಮಾಡುವುದಿಲ್ಲ: ಸಚಿವ ST Somashekhar

ಬೆಳೆ ಹಾನಿಯಾದ 5 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರಕ್ಕೆ ತಾಯಿ ಹೃದಯ ಇದ್ದರೆ, ರೈತರಿಗೆ ಧೈರ್ಯ ತುಂಬ ಬೇಕಿತ್ತು. ಬೆಳೆಹಾನಿ ಪರಿಹಾರ ಕೊಡುತ್ತೇವೆ ಎಂದು ರೈತರಿಗೆ ಧೈರ್ಯ ತುಂಬಬೇಕಿತ್ತು. ಡಿಸಿಸಿ ಬ್ಯಾಂಕ್ ನಿಂದ ಸಾಲ ಕೊಡುತ್ತೇವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ. ಇವರು ಸಾಲ ಕೊಟ್ಟರೆ ತೀರಿಸಲು ನಾವೇ ಬರಬೇಕು. ಯಾರಪ್ಪನ ಮನೆ ದುಡ್ಡು, ಅವರ ಮನೆಯಿಂದ ದುಡ್ಡು ತಂದುಕೊಡುತ್ತಾರಾ ಎಂದು ಬಿಜೆಪಿಗರ ವಿರುದ್ಧ ವಾಗ್ದಾಳಿ ನಡೆಸಿದರು.
Published by:Kavya V
First published: