ಮೈಸೂರು; ಮೈಸೂರಿನ ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಪೊಲೀಸ್ ಅಧಿಕಾರಿಗೆ ಕೊರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ, ತಹಸೀಲ್ದಾರ್ ಸೇರಿ 28 ಮಂದಿ ಕ್ವಾರಂಟೈನ್ ಆಗಿದ್ದಾರೆ. ಅಷ್ಟೇ ಅಲ್ಲದೆ ತಾಲ್ಲೂಕು ಮಟ್ಟದ ಬಹುತೇಕ ಅಧಿಕಾರಿಗಳು, ಪೊಲೀಸರು, ಪತ್ರಕರ್ತರು ಸೇರಿ ಇಡೀ ಆಡಳಿತ ವ್ಯಯವಸ್ಥೆಯೇ ಇದೀಗ ಕೊರೊನಾ ಆತಂಕದಲ್ಲಿ ಮುಳುಗಿದೆ.
ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ತಹಸೀಲ್ದಾರ್ ಆರ್.ಮಂಜುನಾಥ್, 20 ಮಂದಿ ಪೊಲೀಸ್ ಸಿಬ್ಬಂದಿ, 6 ಮಂದಿ ಪತ್ರಕರ್ತರು, 10 ಮಂದಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿ 106 ಮಂದಿ ಹೋಂ ಕ್ವಾರಂಟೈನ್ ಆಗಿದ್ದಾರೆ. ಅವರೆಲ್ಲರ ಗಂಟಲು ದ್ರವದ ಸ್ಯಾಂಪಲ್ ಪಡೆಯಲಾಗಿದ್ದು, ಪರೀಕ್ಷೆಗೆ ಕಳುಹಿಸಲಾಗಿದೆ. ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸೋಂಕಿತ ಪೊಲೀಸ್ ಅಧಿಕಾರಿಯಿಂದ ಇಷ್ಟೆಲ್ಲ ಅನಾವುತ ಆಗಿದ್ದು, ಇದೀಗ ಇಡೀ ತಾಲ್ಲೂಕು ಆಡಳಿತಕ್ಕೆ ಸೋಂಕಿನ ಭೀತಿ ಎದುರಾಗಿದೆ. ಸೋಂಕು ನಿಯಂತ್ರಣ ಮಾಡುತ್ತಿದ್ದವರೆಲ್ಲ ಈಗ ಕ್ವಾರಂಟೈನ್ಗೆ ಒಳಗಾಗಿದ್ದು, ಇಡೀ ತಾಲ್ಲೂಕಿಗೆ ಕೊರೋನಾ ಗ್ರಹಣ ಹಿಡಿದಂತಾಗಿದೆ.
ಈ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ನ್ಯೂಸ್ 18ಗೆ ಮಾಹಿತಿ ನೀಡಿದ್ದು, ಎಚ್.ಡಿ.ಕೋಟೆ ತಹಸೀಲ್ದಾರ್ ಆರ್.ಮಂಜುನಾಥ್ ಕ್ವಾರಂಟೈನ್ ಆಗಿದ್ದಾರೆ. ಆದರೆ ತಾಲೂಕಿನ ಆಡಳಿತ ವ್ಯವಸ್ಥೆಗೆ ಧಕ್ಕೆ ಆಗಿಲ್ಲ ಎಂದು ತಿಳಿಸಿದ್ದಾರೆ. ಹೆಚ್.ಡಿ.ಕೋಟೆಯ ಓರ್ವ ಇನ್ಸ್ಪೆಕ್ಟರ್ಗೆ ಮೊದಲು ಕೊರೋನಾ ಪಾಸಿಟಿವ್ ಬಂದಿತ್ತು. ಅವರ ಸಂಪರ್ಕಕಿತ ನಾಲ್ಕು ಪೊಲೀಸ್ ಸಿಬ್ಬಂದಿಗೆ ಕೊರೋನಾ ತಗುಲಿದ್ದು ಇದೀಗ ಇಡೀ ಹೆಚ್.ಡಿ.ಕೋಟೆ ಪೊಲೀಸ್ ಠಾಣೆ ಸೀಲ್ಡೌನ್ ಆಗಿದೆ. ಕೊರೋನಾ ತಗುಲುವ ಮುನ್ನ ಕೆಂಪೇಗೌಡ ಜಯಂತಿಯಲ್ಲಿ ಭಾಗಿಯಾಗಿದ್ದ ಠಾಣೆಯ ಇನ್ಸ್ಪೆಕ್ಟರ್ ಇಡೀ ತಾಲ್ಲೂಕಿನ ಎಲ್ಲ ಅಧಿಕಾರಿ ವರ್ಗ ಹಾಗೂ ಪತ್ರಕರ್ತರನ್ನು ಭೇಟಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 100ಕ್ಕೂ ಹೆಚ್ಚು ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದ್ದು, ಎಲ್ಲರ ಸ್ವಾಬ್ ತೆಗೆದು ಲ್ಯಾಬ್ಗೆ ಕಳುಹಿಸಲಾಗಿದೆ.
ಇತ್ತ ಮೈಸೂರಿನಲ್ಲಿ ಮತ್ತೊಬ್ಬ ಪೊಲೀಸರಿಗೆ ಕೊರೋನಾ ಸೋಂಕು ದೃಢವಾಗಿದ್ದು, ಟಿ.ನರಸೀಪುರ ಪೋಲಿಸ್ ಠಾಣೆಯ ಮತ್ತೊಬ್ಬ ಪೇದೆಗೆ ಕೊರೋನಾ ಸೋಂಕು ತಗುಲುವ ಮೂಲಕ ಠಾಣೆಯ ಇಬ್ಬರು ವ್ಯಕ್ತಿಗಳಲ್ಲಿ ಸೋಂಕು ದೃಢವಾದಂತಾಗಿದೆ. ಈ ಹಿನ್ನೆಲೆಯಲ್ಲಿ ಕ್ವಾರಂಟೈನ್ ನಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ನಡುಕ ಶುರುವಾಗಿದೆ.
ಇದನ್ನು ಓದಿ: ಒಂದೇ ತಿಂಗಳಲ್ಲಿ ವಿಜಯಪುರದ ಜಲನಗರ ಪೊಲೀಸ್ ಠಾಣೆ 2ನೇ ಬಾರಿ ಸೀಲ್ಡೌನ್; ಇಬ್ಬರೂ ಪಿಎಸ್ಐ ಕ್ವಾರಂಟೈನ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ