ಮಂಡ್ಯ: ಸಕ್ಕರೆನಾಡು ಮಂಡ್ಯದ ಕೆ.ಆರ್. ಪೇಟೆ ಕ್ಷೇತ್ರದಲ್ಲಿ ದ್ವೇಷದ ರಾಜಕೀಯ ನಡೆಯುತ್ತಿದೆ. ದ್ವೇಷದ ರಾಜಕಾರಣದಿಂದ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರನ್ನು ಸಚಿವ ನಾರಾಯಣಗೌಡ ತಮ್ಮ ರಾಜಕೀಯ ಪ್ರಭಾವ ಬಳಸಿ ದಬ್ಬಾಳಿಕೆ ಮಾಡ್ತಿದ್ದಾರೆ. ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಜೆಡಿಎಸ್ ಪಕ್ಷದ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಈ ವಿಚಾರವಾಗಿ ಸಿಎಂಗೆ ಪತ್ರ ಬರೆದು ದ್ವೇಷದ ರಾಜಕಾರಣ ಬಿಡಿಸಿ ನಮ್ಮ ಕಾರ್ಯಕರ್ತರಿಗೆ ರಕ್ಷಣೆ ಕೊಡದಿದ್ರೆ ಜೂ.29ರಂದು ಸಿಎಂ ಮನೆ ಮುಂದೆ ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಜೆಡಿಎಸ್ ಭದ್ರ ಕೋಟೆಯಾಗಿದ್ದ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ ಬಳಿಕ ಬದಲಾಗಿದೆ. ಜೆಡಿಎಸ್ಗೆ ಕೈಕೊಟ್ಟು ಬಿಜೆಪಿಗೆ ಬಂದ ನಾರಾಯಣಗೌಡ ಗೆದ್ದು ಸರ್ಕಾರದ ಸಂಪುಟದಲ್ಲಿ ಸಚಿವರಾಗಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ತಮ್ಮ ಜೊತೆ ಬಾರದ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರ ಮೇಲೆ ದಬ್ಬಾಳಿಕೆ ನಡೆಸುತ್ತಾ ಕಿರುಕುಳ ನೀಡುತ್ತಿರುವುದಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಗಂಭೀರ ಆರೋಪ ಮಾಡಿದ್ದಾರೆ. ಸಚಿವ ನಾರಾಯಣಗೌಡ ಅವರು ಕೆ.ಆರ್.ಪೇಟೆ ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ಸಂಬಂಧ ದೇವೇಗೌಡ ಅವರು ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೂ ಪತ್ರ ಬರೆದಿದ್ದಾರೆ.
ಕೆ.ಆರ್.ಪೇಟೆ ಕ್ಷೇತ್ರದ ಕ್ರಷರ್ ಮಾಲೀಕ ಎಚ್.ಟಿ.ಮಂಜುಗೆ ಕ್ರಷರ್ ನಿಲ್ಲಿಸುವಂತೆ ಕಿರುಕುಳ ನೀಡುವ ಮೂಲಕ ರಾಜಕೀಯ ದ್ವೇಷ ಸಾಧಿಸುತ್ತಿದ್ದಾರೆ. ಮಂಜು ಅವರು ಕ್ರಷರ್ ನಿಲ್ಲಿಸಿದ್ದಾರೆ. ಸಕ್ರಮವಾಗಿರುವ ಅವರ ಕ್ರಷರ್ಗೆ ಅನುಮತಿ ಕೊಡಿಸಿ, ರಾಜಕೀಯ ದ್ವೇಷ ಸಾಧಿಸುತ್ತಿರುವ ನಾರಾಯಣಗೌಡ ಅವರಿಗೆ ತಿಳಿ ಹೇಳುವಂತೆ ಪತ್ರದಲ್ಲಿ ದೇವೇಗೌಡ ಅವರು ಆಗ್ರಹಿಸಿದ್ದಾರೆ. ಒಂದು ವೇಳೆ ಸಿಎಂ ಈ ಕೆಲಸ ಮಾಡದಿದ್ದರೆ ಜೂ.29ರಂದು ಸಿಎಂ ಮನೆ ಮುಂದೆ ಧರಣಿ ಕೂರವುದಾಗಿ ಎಚ್ಚರಿಸಿದ್ದಾರೆ.
![]()
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಬರೆದಿರುವ ಪತ್ರ.
ದೇವೇಗೌಡರು ಸಿಎಂ ಮನೆ ಮುಂದೆ ಧರಣಿ ಕುಳಿತುಕೊಳ್ಳುವ ಬಗ್ಗೆ ಸಿಎಂಗೆ ಪತ್ರ ಬರೆದ ಬಳಿಕ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ತುರ್ತು ಸುದ್ದಿಗೋಷ್ಠಿ ನಡೆಸಿದರು. ಕ್ರಷರ್ ಮಾಲೀಕ ಮಂಜು ಅಕ್ರಮವಾಗಿ ಕಲ್ಲು ಕ್ವಾರೆ ನಡೆಸಿದ್ದಾರೆ. ರಾಯಲ್ಟಿ ಕಟ್ಟಲ್ಲ, ಮೈಸೂರಿನಲ್ಲಿ ಅಕ್ರಮ ಹಣದಲ್ಲಿ ಮನೆ ಕಟ್ಟಿದ್ದಾರೆ. ಇವರ ಕ್ವಾರೆಯಿಂದ ಸಾಹುಕಾರ್ ಚೆನ್ನಯ್ಯ ನಾಲೆ ಹಾಳಾಗಿದೆ. ಇದ ಕ್ಕೆ ದಾಖಲೆಗಳಿದೆ. ಆ ದಾಖಲೆಗಳನ್ನು ಕಲೆ ಹಾಕಿ, ಅಧಿಕಾರಿಗಳಿಂದ ಮಾಹಿತಿ ಸಮೇತ ದೇವೇಗೌಡ ಮುಂದಿಡುತ್ತೇನೆ. ಸ್ವಲ್ಪ ಸಮಯ ಕೊಡಿ. ಇಂತಹ ವಿಷಯಕ್ಕೆ ಮಾಜಿ ಪ್ರಧಾನಿಗಳು ಧರಣಿ ಮಾಡದಂತೆ ಮನವಿ ಮಾಡಿಕೊಳ್ಳುತ್ತೇನೆ. ಕಲ್ಲು ಗಣಿ ಬಿಟ್ಟು ಮೈ ಷುಗರ್ ವಿಚಾರಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಇನ್ನು ಸಚಿವ ನಾರಾಯಣಗೌಡ ಮಾಡಿರುವ ಆರೋಪಕ್ಕೆ ಕಿಡಿಕಾರಿರುವ ಕ್ರಷರ್ ಮಾಲೀಕ ಎಚ್.ಟಿ. ಮಂಜು ನಾನು ಯಾವುದೇ ಅಕ್ರಮ ಮಾಡಿಲ್ಲ. ನಾನು ಸಕ್ರಮವಾಗಿ ವ್ಯವಹಾರ ಮಾಡಿದ್ದೇನೆ. ನನ್ನ ಕ್ವಾರೆಗೆ ಮಾಜಿ ಪ್ರಧಾನಿಗಳು ಬಂದು ಪರಿಶೀಲಿಸಿ ಹೋಗಿದ್ದಾರೆ. ದಾಖಲೆಗಳೆಲ್ಲವು ಸಕ್ರಮವಾಗಿರುವ ಕಾರಣಕ್ಕೆ ದೇವೇಗೌಡರು ಧರಣಿಗೆ ಮುಂದಾಗಿದ್ದಾರೆ. ಅವರ ಜೊತೆ ನಾನು ಧರಣಿಯಲ್ಲಿ ಪಾಲ್ಗೊಳ್ಳುತ್ತೇನೆ. ನಾನು ಮೈಸೂರಿನಲ್ಲಿ ಯಾವುದೇ ಕ್ಲಾಂಪ್ಲೆಕ್ಸ್ ನಿರ್ಮಿಸಿಲ್ಲ. ಆಗೊಂದು ವೇಳೆ ಇದ್ದರೆ ದಾಖಲೆಸಮೇತ ತೋರಿಸಿದರೆ ಆ ಕಾಂಪ್ಲೆಕ್ಸ್ ಅನ್ನು ಅವರಿಗೆ ಹೆಸರಿಗೆ ಬರೆದು ಕೊಡುತ್ತೇನೆ ಅಂತಾ ಸವಾಲು ಹಾಕಿದ್ದಾರೆ.
ಇದನ್ನು ಓದಿ: ಈ ಬಾರಿಯೂ ಹಾಸನ ಜಿಲ್ಲೆ ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆಯುವ ವಿಶ್ವಾಸವಿದೆ; ಭವಾನಿ ರೇವಣ್ಣ
ಒಟ್ಟಾರೆ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ನಾರಾಯಣಗೌಡ ಗೆದ್ದು ಸಚಿವರಾಗುತ್ತಿದ್ದಂತೆ ಜೆಡಿಎಸ್ ವರಿಷ್ಠರು ಸೇರಿ ದಳಪತಿಗಳು ಕಂಗಾಲಾಗಿದ್ದಾರೆ. ಇದೀಗ ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರು ದೌರ್ಜನ್ಯಕ್ಕೆ ಒಳಗಾಗುತ್ತಿರುವ ಬಗ್ಗೆ ಮಾಜಿ ಪ್ರಧಾನಿ ಗಂಭೀರ ಆರೋಪ ಮಾಡಿ ಸಿಎಂ ಮನೆ ಮುಂದೆ ಧರಣಿಗೆ ಮುಂದಾಗಿರುವ ದೇವೇಗೌಡರ ನಡೆಗೆ ಸಾರ್ವಜನಿಕ ವಲಯದಲ್ಲಿ ಪರ- ವಿರೋಧ ಚರ್ಚೆಗಳು ಶುರುವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ