ಲಾಕ್‌ಡೌನ್ ಪರಿಹಾರ ಹಣಕ್ಕಾಗಿ ಇನ್ನೂ ಕಾದು ಕೂತಿರುವ ಹಾವೇರಿಯ 3,945 ಹೂವಿನ ಬೆಳೆಗಾರರು

ಲಾಕ್‌ಡೌನ್‌ ಅವಧಿಯಲ್ಲಿ ಜಿಲ್ಲೆಯ 585 ಹೆಕ್ಟೇರ್‌ನ ಹೂ ಕೃಷಿಯಲ್ಲಿ ಸುಮಾರು ₹5.25 ಕೋಟಿ ಮಾರುಕಟ್ಟೆ ಮೌಲ್ಯದಷ್ಟು ನಷ್ಟ ಉಂಟಾಗಿದೆ ಎಂದು ತೋಟಗಾರಿಕೆ ಇಲಾಖೆ ರಾಜ್ಯ ಸರ್ಕಾರಕ್ಕೆ ಅಂದಾಜು ಪಟ್ಟಿ ಸಲ್ಲಿಸಿತ್ತು.

news18-kannada
Updated:September 15, 2020, 7:12 AM IST
ಲಾಕ್‌ಡೌನ್ ಪರಿಹಾರ ಹಣಕ್ಕಾಗಿ ಇನ್ನೂ ಕಾದು ಕೂತಿರುವ ಹಾವೇರಿಯ 3,945 ಹೂವಿನ ಬೆಳೆಗಾರರು
ಪ್ರಾತಿನಿಧಿಕ ಚಿತ್ರ.
  • Share this:
ಹಾವೇರಿ: ಕೊರೋನಾ ಲಾಕ್‌ಡೌನ್‌ನಿಂದ ಅಪಾರ ನಷ್ಟ ಅನುಭವಿಸಿದ್ದ ಹಾವೇರಿ ಜಿಲ್ಲೆಯ 3,945 ಹೂವಿನ ಬೆಳೆಗಾರರಿಗೆ ಸರ್ಕಾರ ಘೋಷಣೆ ಮಾಡಿದ ಪರಿಹಾರ ಧನ ಇನ್ನೂ ಸಿಕ್ಕಿಲ್ಲ. ಲಾಕ್‌ಡೌನ್‌ ಅವಧಿಯಲ್ಲಿ ಬೆಳೆ ನಷ್ಟ ಅನುಭವಿಸಿದ ಹೂ ಬೆಳೆಗಾರರಿಗೆ ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್‌ಗೆ ₹25 ಸಾವಿರ ಪರಿಹಾರಧನ ಘೋಷಣೆ ಮಾಡಿತ್ತು. ಆದರೆ, ಎಲ್ಲಾ ಬೆಳೆಗಾರರಿಗೆ ಸಮರ್ಪಕವಾಗಿ ಪರಿಹಾರಧನ ಸಿಕ್ಕಿಲ್ಲ ಎಂಬ ಕೂಗು ರೈತ ವಲಯದಿಂದ ಕೇಳಿ ಬರುತ್ತಿದೆ.  ಹೀಗಾಗಿ ಗಣಜೂರು ಸುತ್ತಮುತ್ತಲ ಗ್ರಾಮಗಳ ಬೆಳೆಗಾರರು ಮಾರುಕಟ್ಟೆ ಸೌಲಭ್ಯವಿಲ್ಲ ಮತ್ತು ಹೂವಿಗೆ ಉತ್ತಮ ದರ ಸಿಗುತ್ತಿಲ್ಲ ಎಂದು ಬೇಸತ್ತು ಬಿಡಿಸಿದ ಹೂಗಳನ್ನು ಹೊಲದ ಬದುವಿನಲ್ಲೇ ಸುರಿದು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಜಿಲ್ಲೆಯ 585 ಹೆಕ್ಟೇರ್‌ನ ಹೂ ಕೃಷಿಯಲ್ಲಿ ಸುಮಾರು ₹5.25 ಕೋಟಿ ಮಾರುಕಟ್ಟೆ ಮೌಲ್ಯದಷ್ಟು ನಷ್ಟ ಉಂಟಾಗಿದೆ ಎಂದು ತೋಟಗಾರಿಕೆ ಇಲಾಖೆ ರಾಜ್ಯ ಸರ್ಕಾರಕ್ಕೆ ಅಂದಾಜು ಪಟ್ಟಿ ಸಲ್ಲಿಸಿತ್ತು. 2020–21ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ, ‘ಬೆಳೆ ಸಮೀಕ್ಷೆ’ ಪ್ರಕಾರ 746 ಫಲಾನುಭವಿಗಳಲ್ಲಿ 616 ಬೆಳೆಗಾರರ ಖಾತೆಗಳಿಗೆ ಒಟ್ಟು ₹45.58 ಲಕ್ಷ ಪರಿಹಾರಧನವನ್ನು ಈಗಾಗಲೇ ಜಮಾ ಮಾಡಲಾಗಿದೆ.

ಆದರೆ, ಇನ್ನೂ 130 ಫಲಾನುಭವಿಗಳಿಗೆ ಪರಿಹಾರ ಸಿಕ್ಕಿಲ್ಲ. ‘ಹೊಂದಾಣಿಕೆ ಯಾಗದ ಆಧಾರ್‌ ಸಂಖ್ಯೆ, ಜಂಟಿ ಖಾತೆ, ಫಲಾನುಭವಿ ಮರಣ ಮುಂತಾದ ಕಾರಣಗಳಿಂದಾಗಿ ಕೆಲವು ರೈತರ ಖಾತೆಗಳಿಗೆ ಪರಿಹಾರ ಜಮಾ ಆಗಿಲ್ಲ’ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಇದನ್ನೂ ಓದಿ : ಭದ್ರಾ ಜಲಾಶಯ ಭರ್ತಿ; ರೈತರಲ್ಲಿ ಮೂಡಿದ ಸಂತಸ

ಬೆಳೆ ಸಮೀಕ್ಷೆಯಲ್ಲಿ ಹೆಸರು ಸೇರ್ಪಡೆಯಾಗದ ಹೂವಿನ ಬೆಳೆಗಾರರು ಪರಿಹಾರ ಸಿಕ್ಕಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತ ತೋಟಗಾರಿಕೆ ಇಲಾಖೆ ಅರ್ಹ ಬೆಳೆಗಾರರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು. ಅದರಂತೆ ಜಿಲ್ಲೆಯಲ್ಲಿ ಬ್ಯಾಡಗಿ–95, ಹಾನಗಲ್‌–215, ಹಾವೇರಿ–810, ಹಿರೇಕೆರೂರು–275, ರಾಣೆಬೆನ್ನೂರು–847, ಶಿಗ್ಗಾವಿ–323 ಹಾಗೂ ಸವಣೂರು ತಾಲ್ಲೂಕಿನಿಂದ 1250 ಅರ್ಜಿಗಳು ಸೇರಿದಂತೆ ಒಟ್ಟು 3815 ಅರ್ಜಿಗಳು ಸಲ್ಲಿಕೆಯಾಗಿದ್ದವು.

ಈ 3815 ಅರ್ಜಿಗಳನ್ನು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಅನುಮೋದಿಸಿ, ₹2.77 ಕೋಟಿ ಹೆಚ್ಚುವರಿ ಸಹಾಯ ಧನ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಹಾವೇರಿ ಜಿಲ್ಲೆಯಲ್ಲಿ ಒಟ್ಟು 3945 ಹೂವಿನ ಬೆಳೆಗಾರರು ಪರಿಹಾರಧನಕ್ಕಾಗಿ ಇನ್ನೂ ಕಾದು ಕುಳಿತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಶೀಘ್ರದಲ್ಲಿ ಈ ಪರಿಹಾರದ ಹಣವನ್ನು ರೈತರ ಖಾತೆಗೆ ಜಮಾ ಮಾಡುತ್ತದೆಯಾ? ಎಂಬುದನ್ನು ಕಾದುನೋಡಬೇಕಿದೆ.
Published by: MAshok Kumar
First published: September 15, 2020, 7:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading