ಹಾವೇರಿ(ಆಗಸ್ಟ್.03): ಕಿಲ್ಲರ್ ಕೊರೋನಾ ಕಟ್ಟಿಹಾಕಲು ರಾಜ್ಯ ಸರಕಾರ ಮತ್ತು ಆಯಾ ಜಿಲ್ಲಾಡಳಿತಗಳು ಶತಪ್ರಯತ್ನ ಮಾಡುತ್ತಿವೆ. ಈ ಮಧ್ಯೆ ಖಾಸಗಿ ಆಸ್ಪತ್ರೆ ವೈದ್ಯರುಗಳು ಮಾನವೀಯತೆ ಮರೆತು ವರ್ತಿಸುತ್ತಿದ್ದಾರೆ ಎಂಬ ವರದಿಗಳು ಸಾಕಷ್ಟು ಘಟಿಸಿ ಹೋಗಿವೆ. ಆದರೆ, ಇದಕ್ಕೆ ಅಪವಾದ ಎನ್ನುವಂತೆ ಅಲ್ಲಿನ ಖಾಸಗಿ ಆಸ್ಪತ್ರೆ ವೈದ್ಯರು ಉಚಿತ ಸೇವೆಗೆ ಮುಂದಾಗಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ದಿನೇ ದಿನೇ ವ್ಯಾಪಕವಾಗಿ ಹರಡುತ್ತಿದೆ. ಈಗಾಗಲೇ ಒಂದು ಸಾವಿರ ಗಡಿಯನ್ನು ದಾಟಿದ್ದು, ಜಿಲ್ಲೆಯ ಜನರನ್ನು ಆತಂಕಕ್ಕೆ ನೂಕಿದೆ. ಈ ಮಧ್ಯ ಸೋಂಕಿತರಿ ಅನುಗುಣವಾಗಿ ಜಿಲ್ಲಾಸ್ಪತ್ರೆಯ ಸೇರಿದಂತೆ ಹಲವು ಕೋವಿಡ್-19 ಕೇರ್ ಸೆಂಟರ್ ಗಳಲ್ಲಿ ಸೇವೆ ಸಲ್ಲಿಲು ವೈದ್ಯರುಗಳ ಕೊರತೆಯಿದೆ. ಜೊತೆಗೆ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ 19 ಚಿಕಿತ್ಸೆಗೆ ಬೆಡ್ ಗಳನ್ನು ಸಿದ್ಧಪಡಿಸಬೇಕು ಎಂದು ಸರಕಾರ ಆದೇಶ ಹೊರಡಿಸಿತ್ತು.
ಹಾವೇರಿಯ ಸಣ್ಣ ಪುಟ್ಟ ಖಾಸಗಿ ಆಸ್ಪತ್ರೆಯಲ್ಲಿ ಅರ್ಧ ಬೆಡ್ ಗಳನ್ನು ಕೋವಿಡ್ ಗಾಗಿ ಮೀಸಲ್ಲಿಟ್ಟರೆ ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವುದು ಸಮಸ್ಯೆಯಾಗುತ್ತದೆ. ಆದ್ದರಿಂದ ಜಿಲ್ಲಾಡಳಿತ ನಮಗೆ ಕೋವಿಡ್ ಆಸ್ಪತ್ರೆಯಲ್ಲಿ ಮತ್ತು ಕೋವಿಡ್ ಕೇರ್ ಸೆಂಟರ್ ನಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ವೈದ್ಯರುಗಳು ಮನವಿ ಮಾಡಿದ್ದರು. ಹೀಗಾಗಿ ಸರಕಾರಿ ವೈದ್ಯರುಗಳ ಕೊರತೆ ಇರುವುದರಿಂದ ಇದಕ್ಕೆ ಜಿಲ್ಲಾಡಳಿತ ಒಪ್ಪಿಗೆ ಸೂಚಿಸಿದ್ದು, ಖಾಸಗಿ ವೈದ್ಯರ ಸೇವೆಗೆ ಅವಕಾಶ ಕಲ್ಪಿಸಿದೆ.
ಇನ್ನೂ ಗಮನಿಸಬೇಕಾದ ಅಂಶವೆಂದರೆ ಈ ವೈದ್ಯರುಗಳು ತಮ್ಮದೇ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಿದ್ದರೆ ಸರಕಾರದಿಂದ ಹಣ ಪಡೆಯಬಹುದಾಗಿತ್ತು. ಆದರೆ, ಇದಕ್ಕೆ ಮನಸ್ಸು ಮಾಡದ ಈ ವೈದ್ಯರು, ಕೋವಿಡ್ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಕೇಂದ್ರಗಳಲ್ಲಿ ರೋಗಿಗಳ ಉಚಿತ ಸೇವೆಗೆ ಮುಂದಾಗಿದ್ದಾರೆ. ಯಾವುದೇ ಸಂಭಾವನೆ ಅಥವಾ ಸೌಕರ್ಯಗಳ ನಿರೀಕ್ಷೆಯಿಲ್ಲದೆ ಚಿಕಿತ್ಸೆ ನೀಡುತ್ತಿದ್ದಾರೆ.
ಈಗಾಗಲೇ ಹಾವೇರಿ ಐಎಂಎ ಶಾಖೆಯ 50 ವೈದ್ಯರಲ್ಲಿ ಹಿರಿಯ ವೈದ್ಯರನ್ನು ಬಿಟ್ಟು 30 ವೈದ್ಯರುಗಳು ಸೇವೆ ಸಲ್ಲಿಸಲು ಸಿದ್ಧವಾಗಿದ್ದು, ಸರತಿಯಂತೆ ಕಳೆದ ಒಂದು ವಾರದಿಂದ ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನುಳಿದಂತೆ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಯ ತಜ್ಞ ವೈದ್ಯರು ಹಾಗೂ ಆಯುಷ್ ಸೇರಿದಂತೆ 570 ಕ್ಕೂ ಹೆಚ್ಚು ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರು ಖಾಸಗಿ ವೈದ್ಯಕೀಯ ಸ್ಥಾಪನೆ ಕಾಯ್ದೆ (ಕೆಪಿಎಂಇ) ಅಡಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಇದನ್ನೂ ಓದಿ : ನ್ಯೂಸ್ 18 ಕನ್ನಡ ಬಿಗ್ ಇಂಪ್ಯಾಕ್ಟ್ : ಕೋವಿಡ್ ಕೇರ್ ಸೆಂಟರ್ ಗೆ ಹಿರಿಯ ಅಧಿಕಾರಿಗಳ ಭೇಟಿ
ಈ ಆರೋಗ್ಯ ಬಿಕ್ಕಟ್ಟನ್ನು ನಿವಾರಿಸಲು ಸರ್ಕಾರಕ್ಕೆ ಸಹಾಯ ಮಾಡುವ ಉದ್ದೇಶದಿಂದ ಅವರೂ ಕೂಡ ಮುಂದಾಗಲ್ಲಿದ್ದಾರೆ. ಈ ಕಾರ್ಯ ನಮಗೆ ಸಂತಸ ನೀಡಿದೆ ಎಂದು ಐಎಂಎ ಸಂಘದ ಜಿಲ್ಲಾಧ್ಯಕ್ಷ ಡಾ. ಮೃತ್ಯುಂಜಯ ತುರಕಾಣಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ