ಹಾವೇರಿ: ಜಿಲ್ಲೆಯ ರಾಣೇಬೆನ್ನೂರು, ರಟ್ಟಿಹಳ್ಳಿ, ಹಾವೇರಿ ತಾಲೂಕು ಸೇರಿದಂತೆ ಕೆಲವು ಗ್ರಾಮಗಳಲ್ಲಿ ಈಗ ಚಿರತೆಯ ಭಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದ್ರಲ್ಲೂ ಚನ್ನೂರು, ಟಾಟಾ ಮಣ್ಣೂರು, ಕೆಸರಳ್ಳಿ, ಶಾಖಾಹಾರ, ಬಮ್ಮನಕಟ್ಟಿ, ನೆಗಳೂರು ಗ್ರಾಮಗಳ ಜನರು ಚಿರತೆ ಭಯದಲ್ಲೇ ಬದುಕುವಂತಾಗಿದೆ. ಕಳೆದ ಕೆಲವು ದಿನಗಳಿಂದ ಚಿರತೆ ಆಗಾಗ ಕೆಲವು ಗ್ರಾಮಗಳ ರೈತರಿಗೆ ದರ್ಶನ ಕೊಟ್ಟಿದೆಯಂತೆ. ಇತ್ತೀಚೆಗೆ ರಾಣೇಬೆನ್ನೂರು,ಹಿರೇಕೆರೂರು, ರಟ್ಟಿಹಳ್ಳಿ ತಾಲೂಕಿನ ಭಾಗದಲ್ಲಿ ಚಿರತೆಗಳು ಬೋನಿಗೆ ಬಿದ್ದಿವೆ. ಇದು ಜನರಲ್ಲಿ ಎಲ್ಲಿಲ್ಲದ ಆತಂಕ ಸೃಷ್ಟಿಸಿದೆ. ರಾತ್ರಿ ಆಗ್ತಿದ್ದಂತೆ ಜನರು ಮನೆಯಿಂದ ಜಮೀನು, ಅಲ್ಲಿ ಇಲ್ಲಿ ಅಂತಾ ಓಡಾಡೋಕೆ ಭಯಪಡುತ್ತಿದ್ದಾರೆ.
ಈಗಾಗಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಚನ್ನೂರು, ಬಮ್ಮನಕಟ್ಟಿ ಗ್ರಾಮದ ರೈತರ ಜಮೀನಿನಲ್ಲಿ ಚಿರತೆ ಸೆರೆಗೆ ಬೋನು ಇಟ್ಟಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಬೋನು ಇಟ್ಟ ಮೇಲಂತೂ ಜನರಲ್ಲಿ ಮತ್ತಷ್ಟು ಭಯದ ವಾತಾವರಣ ಆವರಿಸಿದೆ. ಯಾವಾಗ ಚಿರತೆ ಏನು ಮಾಡುತ್ತೋ ಅನ್ನೋ ಆತಂಕ ಶುರುವಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿನ ರೈತರ ಜಮೀನುಗಳಲ್ಲಿನ ಪಂಪಸೆಟ್ ಗಳಿಗೆ ಈಗ ರಾತ್ರಿ ವೇಳೆಯಲ್ಲಿ ವಿದ್ಯುತ್ ಪೂರೈಕೆ ಆಗ್ತಿದೆ. ರಾತ್ರಿ ವಿದ್ಯುತ್ ಪೂರೈಕೆ ಆಗ್ತಿರೋದ್ರಿಂದ ರೈತರು ಜಮೀನಿಗೆ ಹೋಗಲು ಭಯಪಡ್ತಿದ್ದಾರೆ. ರಾತ್ರಿ ವಿದ್ಯುತ್ ಪೂರೈಕೆ ಆಗ್ತಿದ್ರೂ ರೈತರು ಜಮೀನಿಗೆ ಹೋಗಿ ಬೆಳೆಗಳಿಗೆ ನೀರು ಹಾಯಿಸಲು ಹಿಂದೇಟು ಹಾಕ್ತಿದ್ದಾರೆ. ಅದ್ರಲ್ಲೂ ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಗೆ ನೀರು ಹಾಯಿಸೋದು ಅನಿವಾರ್ಯ ಆಗಿದೆ.
ಆದರೂ ಜಮೀನಿನಲ್ಲಿರೋ ಪಂಪಸೆಟ್ ಗಳಿಗೆ ರಾತ್ರಿ ವಿದ್ಯುತ್ ಪೂರೈಕೆ ಆಗ್ತಿರೋದ್ರಿಂದ ಚಿರತೆ ಭಯ ಶುರುವಾದಾಗಿಂದ ಜಮೀನಿಗೆ ಹೋಗಿ ನೀರು ಹಾಯಿಸೋದನ್ನೆ ನಿಲ್ಲಿಸಿದ್ದಾರೆ. ಹೀಗಾಗಿ ಕಬ್ಬು ಸೇರಿದಂತೆ ವಿವಿಧ ಬೆಳೆಗಳು ಒಣಗುವ ಭೀತಿ ರೈತರನ್ನ ಕಾಡ್ತಿದೆ. ರಾತ್ರಿ ವೇಳೆ ಬದಲು ಜಮೀನಿನಲ್ಲಿರೋ ರೈತರ ಪಂಪಸೆಟ್ ಗಳಿಗೆ ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಕೆ ಮಾಡಬೇಕು. ಇಲ್ದಿದ್ರೆ ರೈತರ ಜಮೀನಿನಲ್ಲಿರೋ ಬೆಳೆಗಳಿಗೆ ತೊಂದ್ರೆ ಆಗಲಿದೆ. ಚಿರತೆ ಸೆರೆಗೆ ಅರಣ್ಯ ಇಲಾಖೆ ಈಗಾಗಲೆ ಬೋನು ಇರಿಸಿದೆ. ಆದಷ್ಟು ಬೇಗ ಚಿರತೆ ಸೆರೆ ಹಿಡಿದು ರೈತರಲ್ಲಿ ಮನೆ ಮಾಡಿರುವ ಆತಂಕವನ್ನ ಅರಣ್ಯ ಇಲಾಖೆ ಅಧಿಕಾರಿಗಳು ದೂರ ಮಾಡಬೇಕಿದೆ.
ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ, ಹಿರೇಕೆರೂರು ಮತ್ತು ರಾಣೆಬೆನ್ನೂರು ತಾಲೂಕಿನ ಹಲವೆಡೆ ಚಿರತೆ ಕಾಣಿಸಿಕೊಳ್ತಿದ್ದದ್ದು ಕಳೆದ ಕೆಲವು ವರ್ಷಗಳಿಂದ ಕೇಳಿ ಬರೋ ಮಾತಾಗಿತ್ತು. ಕಳೆದ ಕೆಲವು ವರ್ಷಗಳಲ್ಲಿ ಮೂರ್ನಾಲ್ಕು ಚಿರತೆಗಳು ಬೋನಿಗೆ ಬಿದ್ದಿದ್ದವು. ಅಲ್ಲದೇ ಇತ್ತೀಚೆಗೆ ಜಮೀನಿನಲ್ಲಿ ನೀರು ಹಾಯಿಸಲು ಹೋಗಿದ್ದ ರೈತರ ಮೇಲೆ ಚಿರತೆ ದಾಳಿ ಮಾಡಿದೆ. ದಾಳಿಗೋಳಗಾದ ರೈತರು ಚಿಕಿತ್ಸೆ ಪಡೆಯುತ್ತಿದ್ದಾರೆ.
(ವರದಿ: ಮಂಜುನಾಥ್ ತಳವಾರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ