ಹಾವೇರಿ (ಆಗಸ್ಟ್. 19) : ಕೋವಿಡ್ ವೈರಾಣು ಹರಡುತ್ತಿರುವ ಹಿನ್ನೆಲೆಯಲ್ಲಿ ಗಣೇಶೋತ್ಸವ ಹಾಗೂ ಮೊಹರಂ ಹಬ್ಬ ಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ಎಲ್ಲ ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಶಾಂತಿಯುತವಾಗಿ ಹಾಗೂ ಅತ್ಯಂತ ಸರಳವಾಗಿ ಶ್ರದ್ಧಾ ಭಕ್ತಿಯಿಂದ ಆಚರಿಸಿ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣನವರ ಸಲಹೆ ನೀಡಿದರು.
ಜಿಲ್ಲಾ ಗುರುಭವನದಲ್ಲಿ ಗಣೇಶೋತ್ಸವ ಹಾಗೂ ಮೊಹರಂ ಹಬ್ಬದ ನಿಮಿತ್ತ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಲಾಗಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಗಸ್ಟ್ 22 ರಂದು ಗಣೇಶೋತ್ಸವ ಹಾಗೂ ಆಗಸ್ಟ್ 30 ರಂದು ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಗಳ ವತಿಯಿಂದ ಅನುಮತಿ ಪಡೆದ ಕಮೀಟಿಗಳು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಪ್ರತಿದಿನ ಸ್ಯಾನಿಟೈಸ್ ಮಾಡಬೇಕು, ಹೆಚ್ಚು ಜನರು ಸೇರದಂತೆ ನೋಡಿಕೊಳ್ಳಬೇಕು. ಸ್ಯಾನಿಟೈಜರ್, ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಮಾಡಬೇಕು ಮತ್ತು ಎಲ್ಲರು ಮಾಸ್ಕ್ ಧರಿಸುವಂತೆ ನೋಡಿಕೊಳ್ಳಬೇಕು. ಹೆಚ್ಚು ಜನರು ಗುಂಪುಗೂಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪರಿಸರ ಸ್ನೇಹಿ ಮೂರ್ತಿಗಳ ಪೂಜೆಗೆ ಆದ್ಯತೆ ನೀಡಲು ಅವರು ಸಲಹೆ ನೀಡಿದರು.
ಕೋವಿಡ್ ವೈರಾಣು ಬಗ್ಗೆ ಜಿಲ್ಲೆಯಲ್ಲಿ ಜನರಿಗೆ ಇನ್ನೂ ಎಚ್ಚರಿಕೆ ಕಾಣುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಈ ತಿಂಗಳ ಅವಧಿಯಲ್ಲಿ ಇನ್ನೂ ಹೆಚ್ಚು ಪ್ರಕರಣಗಳು ಜಿಲ್ಲೆಯಲ್ಲಿ ಕಾಣಸಿಕೊಂಡು ಸಾಕಷ್ಟು ನೋವುಪಡುವಂತಹ ಪರಿಸ್ಥಿತಿ ಎದುರಾಗಬಹುದು. ಹಾಗಾಗಿ ಪ್ರತಿಯೊಬ್ಬರ ಆರೋಗ್ಯದ ದೃಷ್ಟಿಯಿಂದಾಗಿ ಕೋವಿಡ್ ನಿಯಂತ್ರಣ ತರಲು ಸರ್ಕಾರದ ನಿಯಮಾವಳಿ ಪಾಲಸಿಕೊಂಡು ಹಬ್ಬಗಳ ಆಚರಣೆಗೆ ಮುಂದಾಗಬೇಕು ಎಂದು ತಿಳಿಸಿದರು.
ಇದನ್ನೂ ಓದಿ : ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ ದೇವರಾಜು ಅವರು ಮಾತನಾಡಿ, ಕೋವಿಡ್ ನಿಯಂತ್ರಣದ ಸಲುವಾಗಿ ಹಬ್ಬಗಳನ್ನು ಸರಳವಾಗಿ ಆಚರಣೆ ಮಾಡಬೇಕು. ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳಬೇಕು ಹಾಗೂ ಕುಟುಂಬ, ಸಮಾಜ ಮತ್ತು ದೇಶದ ಸ್ವಾಸ್ಥ್ಯ ಕಾಪಾಡುವ ಮನೋಭಾವ ಬರಬೇಕು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ