Haveri: ಕೊರೋನಾದಿಂದ ಗುಣಮುಖರಾದ ಅಮ್ಮನನ್ನು ಮನೆಗೆ ಸೇರಿಸಿಕೊಳ್ಳದ ಮಗ; ನೊಂದ ತಾಯಿ ಆತ್ಮಹತ್ಯೆ

Haveri Coronavirus | ಕೋವಿಡ್​ನಿಂದ ಗುಣಮುಖವಾಗಿ ಮನೆಗೆ ಬಂದವಳನ್ನು ತನ್ನ ಹೆತ್ತವಳು ಎಂಬುದನ್ನು ಮರೆತು ಪುತ್ರ ತನ್ನ ಪತ್ನಿಯ ಜೊತೆ ಸೇರಿ ತಾಯಿಯನ್ನು ಮನೆಗೆ ಸೇರಿಸಿಕೊಂಡಿಲ್ಲ. ಇದರಿಂದ ಬೇಸತ್ತು ದಿಕ್ಕು ತೋಚದಾದ ವೃದ್ಧ ತಾಯಿ ಹೆಗ್ಗೇರಿ ಕೆರೆಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹಾವೇರಿ : ಹೆತ್ತ ತಾಯಿ ಅಂದರೆ ಸಾಕ್ಷಾತ್ ದೇವರ ಪ್ರತಿರೂಪ. ಆದರೆ ಇಲ್ಲೊಬ್ಬ ಪುತ್ರ ತನ್ನ ಹೆತ್ತ ತಾಯಿ ಕೊರೊನಾ ಸೋಂಕಿತಳಾಗಿ ಆಸ್ಪತ್ರೆಯಲ್ಲಿದ್ದು, ಬಳಿಕ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ಬಂದರೂ ಆಕೆ ಸೋಂಕಿತಳು ಎನ್ನುವ ಕಾರಣಕ್ಕೆ ತನ್ನ ಪತ್ನಿಯ ಜೊತೆ ಸೇರಿ ತಾಯಿಯನ್ನು ಮನೆಗೆ ಸೇರಿಸಿಕೊಂಡಿರಲಿಲ್ಲ. ಹೆತ್ತ ಮಗ‌ ಮತ್ತು ಸೊಸೆ ಮನೆಗೆ ಸೇರಿಸಿಕೊಳ್ಳದೆ ಇರುವುದರಿಂದ ಬೇಸತ್ತು ವೃದ್ಧ ತಾಯಿ ಮನೆಯಿಂದ ಹೋಗಿ ಕಾಣೆಯಾಗಿದ್ದಳು.

    ಹಾವೇರಿ ತಾಲೂಕಿನ ದೇವಿಹೊಸೂರು ಗ್ರಾಮದ ಅಡಿವೆಕ್ಕ ಕಬ್ಬೂರ (80)ಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಡಿವೆಕ್ಕ ಗುಣಮುಖವಾಗಿದ್ದಳು. ಮೇ 8,2021ರಂದು ಹಾವೇರಿಯಲ್ಲಿರುವ ಅಡಿವೆಕ್ಕಳ ಮಗಳು ದಾನೇಶ್ವರಿ ತನ್ನ ತಾಯಿಯನ್ನು ಜಿಲ್ಲಾಸ್ಪತ್ರೆಯಿಂದ ಆಟೋರಿಕ್ಷಾದಲ್ಲಿ ಹತ್ತಿಸಿ ತಾಯಿಯ ವಾಸದ ಮನೆಗೆ ಕಳಿಸಿದ್ದಳು. ಆದರೆ ಅಡಿವೆಕ್ಕಳ ವಾಸದ ಮನೆಯಲ್ಲಿದ್ದ ಆಕೆಯ ಮಗ ಮತ್ತು ಸೊಸೆ‌ ಅಡಿವೆಕ್ಕಳನ್ನು ಹೆತ್ತವಳು ಎಂಬುದನ್ನೂ ಮರೆತು ಮನೆಗೆ ಕರೆದುಕೊಳ್ಳುವುದಿಲ್ಲ. ಮಗ ಮತ್ತು ಸೊಸೆಯ ನಡೆಯಿಂದ ಬೇಸತ್ತಿದ್ದ ಅಡಿವೆಕ್ಕ ಮನೆಯಿಂದ ಹೋಗಿ ಕಾಣೆಯಾಗಿದ್ದಳು. ತಾಯಿ ಕಾಣೆಯಾಗಿರುವ ವಿಷಯ ತಿಳಿದು ಹಾವೇರಿಯಲ್ಲಿದ್ದ ಮಗಳು ಮೇ 10,2021ರಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

    ಕೆರೆಯಲ್ಲಿ ಪತ್ತೆಯಾಯಿತು ತಾಯಿಯ ಶವ:
    ಕೋವಿಡ್​ನಿಂದ ಗುಣಮುಖವಾಗಿ ಮನೆಗೆ ಬಂದವಳನ್ನು ತನ್ನ ಹೆತ್ತವಳು ಎಂಬುದನ್ನು ಮರೆತು ಪುತ್ರ ತನ್ನ ಪತ್ನಿಯ ಜೊತೆ ಸೇರಿ ತಾಯಿಯನ್ನು ಮನೆಗೆ ಸೇರಿಸಿಕೊಂಡಿರುವುದಿಲ್ಲ. ಇದರಿಂದ ಬೇಸತ್ತು ದಿಕ್ಕು ತೋಚದಾದ ವೃದ್ಧ ತಾಯಿ ಹೆಗ್ಗೇರಿ ಕೆರೆಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಸಂಜೆ ಮೀನುಗಾರರು ಕೆರೆಯಲ್ಲಿ ತೇಲುತ್ತಿದ್ದ ಶವವನ್ನು ಕಂಡು ಹಾವೇರಿ ನಗರಠಾಣೆ ಪೊಲೀಸರ ಗಮನಕ್ಕೆ ತಂದಿದ್ದಾರೆ.

    Haveri Covid-19 Infected Mother Dies by Suicide after her Son throw away from house

    ಹೆಗ್ಗೇರಿ ಕೆರೆಯಲ್ಲಿ ವೃದ್ಧೆಯ ಶವ ತೇಲುತ್ತಿದೆ ಎಂಬ ವಿಷಯ ತಿಳಿದ ಡಿವೈಎಸ್ಪಿ ಶಂಕರ ಮಾರಿಹಾಳ ಹಾಗೂ ಸಿಪಿಐ ಪ್ರಹ್ಲಾದ ಚನ್ನಗಿರಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಯಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ ದಾನೇಶ್ವರಿಯನ್ನು ಕರೆಯಿಸಿ ಶವದ ಗುರುತು ಪತ್ತೆ ಮಾಡಿದರು. ಆಗ ಕೋವಿಡ್ ಉಪಚಾರ ಹೊಂದಿ ಮನೆಗೆ ಹೋಗಿದ್ದಾಗ ಮಗ ಮತ್ತು ಸೊಸೆ ಸೇರಿಕೊಂಡು ಮನೆಗೆ ಕರೆದುಕೊಳ್ಳದ್ದರಿಂದ ಬೇಸರಗೊಂಡು ಕಾಣೆಯಾಗಿದ್ದ ಅಡಿವೆಕ್ಕಳ ಶವ ಎಂದು ಗೊತ್ತಾಗಿದೆ. ಕಾಣೆಯಾಗಿದ್ದ ವೃದ್ಧೆ ಅಡಿವೆಕ್ಕ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದಾಗಿ ತಿಳಿದು ಬಂದಿದೆ ಎಂದು ಡಿವೈಎಸ್ಪಿ ಶಂಕರ ಮಾರಿಹಾಳ ತಿಳಿಸಿದ್ದಾರೆ.

    ಹೆತ್ತ ತಾಯಿಯನ್ನು ದೇವರ ಪ್ರತಿರೂಪ ಎಂದು ತಿಳಿದು ಪೂಜಿಸುವವರು ಅದೆಷ್ಟೋ ಜನರಿದ್ದಾರೆ. ಅಂಥದರಲ್ಲಿ ಕೋವಿಡ್ ಉಪಚಾರ ಹೊಂದಿ ಮನೆಗೆ ಬಂದ ಹೆತ್ತ ತಾಯಿಯನ್ನು ಮನೆಗೆ ಸೇರಿಕೊಳ್ಳದ್ದರಿಂದ ವೃದ್ಧ ತಾಯಿ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಾಯಿಯ ಆತ್ಮಹತ್ಯೆಗೆ ಕಾರಣನಾದ ಮಗ ಮತ್ತು ಸೊಸೆಯ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    (ವರದಿ: ಮಂಜುನಾಥ ತಳವಾರ)
    Published by:Sushma Chakre
    First published: