ಏನೇ ಕೇಳಿದ್ರು ಪಟಪಟ ಉತ್ತರಿಸ್ತಾಳೆ.. ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ ಹಾವೇರಿಯ ಪುಟಾಣಿ

ಬಾಲಕಿ ನಮ್ರತಾ ಗುಡದಳ್ಳಿಯ ಹೆಸರು ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಯಾಗಿದೆ. ಹಾನಗಲ್ ತಾಲೂಕಿನ ಅಕ್ಕಿಆಲೂರು ಗ್ರಾಮದ ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದಾಳೆ. 

ಬಾಲಕಿ ನಮ್ರತಾ ಗುಡದಳ್ಳಿ

ಬಾಲಕಿ ನಮ್ರತಾ ಗುಡದಳ್ಳಿ

  • Share this:
    ಹಾವೇರಿ: ಕೇವಲ 8 ವರ್ಷದ ಬಾಲಕಿಯೊಬ್ಬಳು  ವಿಶಿಷ್ಟ ಸಾಧನೆ ಮಾಡುವ ಮೂಲಕ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ದಾಖಲಿದ್ದಾಳೆ. ರಾಜ್ಯ, ದೇಶ, ರಾಜಧಾನಿ, ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳು, ವಿಜ್ಞಾನ, ಗಣಿತ ಹೀಗೆ ಹಲವಾರು ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ನಿರರ್ಗಳವಾಗಿ ಉತ್ತರಗಳನ್ನು ಕೊಡುತ್ತಾಳೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ವಿಶೇಷವಾದ ಜ್ಞಾನ ಸಂಪಾದನೆ ಮಾಡುವ ಮೂಲಕ ಕಿರಿಯ ಸಾಧಕಿ ಎನಿಸಿಕೊಂಡಿದ್ದಾಳೆ. 

    ಚಿಕ್ಕ ವಯಸ್ಸಿನಲ್ಲೇ ಇಂತಹ ಸಾಧನೆ ಮಾಡಿದ ಬಾಲಕಿ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಗುಂಡಗಟ್ಟಿ ಗ್ರಾಮದವಳು. ಹೆಸರು ನಮ್ರತಾ ಗುಡದಳ್ಳಿ. ಈಕೆಗೆ ಈಗಷ್ಟೆ ಎಂಟು ವರ್ಷ ದಾಟಿದೆ. ಸಾಮಾನ್ಯಜ್ಞಾನ, ವಿಜ್ಞಾನ, ಗಣಿತ ಹೀಗೆ ಸಣ್ಣ ವಯಸ್ಸಿನಲ್ಲೇ ಸಾಕಷ್ಟು ವಿಷಯಗಳಲ್ಲಿ ಜ್ಞಾನ ಸಂಪಾದನೆ ಮಾಡಿದ್ದಾಳೆ. ಗುಂಡಗಟ್ಟಿ ಗ್ರಾಮದ ಕುಮಾರ ಮತ್ತು ಪೂರ್ಣಿಮಾ ಗುಡದಳ್ಳಿ ದಂಪತಿಯ ಮಗಳು ನಮ್ರತಾಳಿಗೆ ಈಗ 8 ವರ್ಷ 3 ತಿಂಗಳು ಆಗಿವೆ. ಈಗ ಈ ಬಾಲಕಿ ನಮ್ರತಾ ಗುಡದಳ್ಳಿಯ ಹೆಸರು ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಯಾಗಿದೆ. ಈಕೆ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ಗ್ರಾಮದ ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದಾಳೆ.

    ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ತನ್ನ ಹೆಸರನ್ನು ದಾಖಲಿಸಲು ಹಲವಾರು ವಿಷಯಗಳಲ್ಲಿ ಪ್ರಾವಿಣ್ಯತೆ ಪಡೆದಿರುತ್ತಾಳೆ. 28 ರಾಜ್ಯಗಳು ಮತ್ತು ಅವುಗಳ ರಾಜಧಾನಿಗಳು, 9 ಕೇಂದ್ರಾಡಳಿತ ಪ್ರದೇಶಗಳು ಮತ್ತು ಅವುಗಳ ರಾಜಧಾನಿಗಳು, ಭಾರತದ ರಾಷ್ಟ್ರಪತಿಗಳು, ಭಾರತದ ಪ್ರಧಾನ ಮಂತ್ರಿಗಳು, ಕರ್ನಾಟಕದ ಮುಖ್ಯಮಂತ್ರಿಗಳು, ಕರ್ನಾಟಕದ ಜಿಲ್ಲೆಗಳು ಮತ್ತು ಮಹಾನಗರ ಪಾಲಿಕೆಗಳು, ಖಂಡಗಳು, ಮಹಾಸಾಗರಗಳು, ಸೌರವ್ಯೂಹದ ಗ್ರಹಗಳು ಹೀಗೆ ಎಲ್ಲವನ್ನೂ ನಮ್ರತಾ ಪಟಾಪಟ್ ಎಂದು ಹೇಳುತ್ತಾಳೆ.

    ಇದನ್ನೂ ಓದಿ: ಅತ್ತೆ ಮೇಲೆ ಕುದಿಯುವ ಎಣ್ಣೆ ಸುರಿದ ಸೊಸೆ: ಇಬ್ಬರ ಜಗಳಕ್ಕೆ ಕಾರಣವಾಗಿದ್ದು ಸರ್ಕಾರದ ಅದೊಂದು ನಿರ್ಧಾರ!

    ಅಲ್ಲದೆ ಜ್ಞಾನಪೀಠ ಪ್ರಶಸ್ತಿ ವಿಜೇತರು, ಗಾದೆಮಾತುಗಳು, ಕರ್ನಾಟಕದ ರಾಜಮನೆತನಗಳು, ನದಿಗಳ ಹೆಸರುಗಳು, 100 ಸಾಮಾನ್ಯ ಜ್ಞಾನದ ಪ್ರಶೋತ್ತರಗಳು, 1 ರಿಂದ 20ರವರೆಗಿನ ಮಗ್ಗಿಗಳು, 1 ರಿಂದ 100ರವರೆಗಿನ ಸಮ ಮತ್ತು ಬೆಸ ಸಂಖ್ಯೆಗಳು, 100 ರಿಂದ 1ರ ವರೆಗಿನ ಬ್ಯಾಕ್‌ವರ್ಡ್ ನಂಬರ್, 50 ಅಪೋಸಿಟ್ ವರ್ಡ್ಸ್, ಗಣಿತದ ಚಿಹ್ನೆಗಳು, ಆಕಾರಗಳು ಇವೆಲ್ಲವುಗಳನ್ನು ತಪ್ಪದೆ ಹೇಳುವುದನ್ನು ಪರಿಶೀಲಿಸಿ ಬಾಲಕಿ ನಮ್ರತಾಳ ಹೆಸರನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೆ ದಾಖಲಿಸಿದೆ.

    ಬಾಲಕಿಯ ಸಾಧನೆ ಬಗ್ಗೆ ಮಾತನಾಡಿದ ಸಂಬಂಧಿ  ಈರಪ್ಪ ಬಣಕಾರ, ಬಾಲಕಿ ನಮ್ರತಾ ಬಾಲ್ಯದಿಂದಲೂ ಸಾಕಷ್ಟು ಬುದ್ದಿವಂತಳು. ಓದುವುದು ಮತ್ತು ಬರೆಯುವುದು ಸೇರಿದಂತೆ ಎಲ್ಲದರಲ್ಲೂ ಮುಂದಿದ್ದಾಳೆ. ಅವಳ‌ ತಂದೆ ಮತ್ತು ತಾಯಿಯ ಮಾರ್ಗದರ್ಶನದಲ್ಲಿ ಸಾಮಾನ್ಯ ಜ್ಞಾನ, ಗಣಿತ, ವಿಜ್ಞಾನ, ಸಾಹಿತ್ಯ ಹೀಗೆ ಅನೇಕ ವಿಷಯಗಳನ್ನು ಪಟಾಪಟ್ ಎಂದು ಹೇಳುತ್ತಾಳೆ. ಆಕೆಯ ಪ್ರತಿಭೆಯನ್ನು ಗುರುತಿಸಿ ಆಕೆಯ ಹೆಸರನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲಿಸಿದೆ. ಇದು ನಮ್ಮ ಕುಟುಂಬಕ್ಕೆ, ಗ್ರಾಮ, ತಾಲೂಕು ಹಾಗೂ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ವರದಿ: ಮಂಜುನಾಥ  ತಳವಾರ
    Published by:Kavya V
    First published: