ರಾಯಚೂರು: ಸಚಿವರು ಬಂದಾಗ ತಮ್ಮ ಬೇಡಿಕೆ ಸಮಸ್ಯೆಗಳಿಗೆ ಸಚಿವರು, ಹಿರಿಯ ಅಧಿಕಾರಿಗಳ ಗಮನಕ್ಕೆ ಮನವಿ ಸಲ್ಲಿಸುವುದು, ಪ್ರತಿಭಟನೆ ಮಾಡುವುದು ಸ್ವಾಭಾವಿಕ. ಆದರೆ, ಸಚಿವ ಮುರುಗೇಶ ನಿರಾಣಿಯವರಿಗೆ ಮನವಿ ನೀಡಲು ಕಾರ್ಮಿಕರು ಆಕ್ರೋಶ ಭರಿತರಾಗಿದ್ದಾರೆ, ಗಲಾಟೆ ಮಾಡಲು ಮುಂದಾಗಿದ್ದೀರಿ ಎಂದು ಆರೋಪಿಸಿ ಕಾರ್ಮಿಕರಿಗೆ ಅಮಾನತು ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ರಾಜ್ಯದಲ್ಲಿ ಈಗಲೂ ಚಿನ್ನ ಉತ್ಪಾದಿಸುವ ಕಂಪನಿಯಾಗಿರುವ ಹಟ್ಟಿ ಚಿನ್ನದ ಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಅನೇಕ ಸಮಸ್ಯೆಗಳನ್ನು ಏದುರಿಸುತ್ತಿದ್ದಾರೆ. ಶತಮಾನಗಳಿಂದ ಚಿನ್ನ ಉತ್ಪಾದಿಸುವ ಹಟ್ಟಿ ಚಿನ್ನದ ಗಣಿ ಸರಕಾರಿ ಸ್ವಾಮ್ಯದ ಬೃಹತ್ ಕಂಪನಿಯಾಗಿದೆ. ಈ ಕಂಪನಿಯಲ್ಲಿ ಒಟ್ಟು 4200 ಕಾರ್ಮಿಕರು ದುಡಿಯುತ್ತಿದ್ದಾರೆ. ಮಲ್ಲಪ್ಪ ಶಾಪ್ಟ್, ಸೆಂಟ್ರಲ್ ಶಾಫ್ಟ್ ಹಾಗು ವೀಲೇಜ್ ಶಾಫ್ಟ್ ಗಳಲ್ಲಿ ದುಡಿಯುವ ಕಾರ್ಮಿಕರು 8 ತಾಸುಗಳ ಅವಧಿಯಂತೆ ಮೂರು ಪಾಳೆಯಲ್ಲಿ ದುಡಿಯುತ್ತಿದ್ದಾರೆ.
ಈಗ ಸುಮಾರು 2800 ಅಡಿ ಆಳಕ್ಕೆ ಇಳಿದು ಗಣಿಯಲ್ಲಿ ಅದಿರು, ಅದಿರಿನೊಂದಿಗೆ ಚಿನ್ನವನ್ನು ಹೊರ ತೆಗೆಯುತ್ತಾರೆ. ಈ ಸಂದರ್ಭದಲ್ಲಿ ಹಲವಾರು ಕಾರ್ಮಿಕರಿಗೆ ಅನಾರೋಗ್ಯ ಉಂಟಾಗಿದ್ದು, ಇದೇ ಕಾರಣಕ್ಕೆ ಕೆಲವರು ಸಾವನ್ನಪ್ಪಿದ್ದಾರೆ. ಅನಾರೋಗ್ಯಕ್ಕೊಳಗಾದವರಿಗೆ ಅನ್ ಫಿಟ್ ಎಂಬ ಪ್ರಮಾಣ ಪತ್ರ ನೀಡಿ ಅವರ ಕುಟುಂಬದವರಿಗೆ ಉದ್ಯೋಗ ನೀಡಬೇಕು. ಇನ್ನೂ ನಿವೃತ್ತಿಯ ಮೊದಲೇ ಸಾವನ್ನಪ್ಪಿದರೆ ಅವರ ಕುಟುಂಬದವರಿಗೆ ಉದ್ಯೋಗ ಕೊಡಬೇಕು. ಆದರೆ, ಕಳೆದ ಮೂರು ವರ್ಷಗಳಿಂದ ಅನ್ಫಿಟ್ ಹಾಗೂ ಮೃತರಾದ ಕುಟುಂಬದವರಿಗೆ ಉದ್ಯೋಗ ನೀಡಿಲ್ಲ.
ಇನ್ನೂ ಹಟ್ಟಿ ಚಿನ್ನದ ಗಣಿ ಕಂಪನಿಯಿಂದ ಆಸ್ಪತ್ರೆ ಇದೆ. ಈ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಸರಿಯಾದ ಔಷಧಿಯನ್ನು ನೀಡುತ್ತಿಲ್ಲ. ಇದರಿಂದ ಕಾರ್ಮಿಕರು ಅನೇಕ ಸಮಸ್ಯೆಗಳನ್ನು ಏದುರಿಸುತ್ತಿದ್ದಾರೆ. ಕಾರ್ಮಿಕರ ಕುಟುಂಬಗಳು ಸಂಕಷ್ಟ ಅನುಭವಿಸುವಂತಾಗಿದೆ. ಈ ಕಾರಣಕ್ಕಾಗಿ ಕಾರ್ಮಿಕರು ಸಚಿವ ಮುರುಗೇಶ ನಿರಾಣಿಯವರ ಬಳಿಯಲ್ಲಿ ತಮ್ಮ ಅಹವಾಲು ಸಲ್ಲಿಸಲು ಬಂದಿದ್ದರು. ಫೆಬ್ರುವರಿ 26 ರಂದು ಸಚಿವ ಮುರುಗೇಶ ನಿರಾಣಿ ಹಟ್ಟಿ ಚಿನ್ನದ ಗಣಿಯಲ್ಲಿ ಅಧಿಕಾರಿಗಳ ಸಭೆ ನಡೆಸಲು ಬಂದಿದ್ದರು. ಇದೇ ಸಂದರ್ಭದಲ್ಲಿ ಸಚಿವರು ಗಣಿಯಲ್ಲಿಯ ಪ್ರಕ್ರಿಯೆಗಳನ್ನು ಪರಿಶೀಲಿಸಿದರು.
ಇದನ್ನೂ ಓದಿ: ಲಸಿಕೆ ಪಡೆದ ಪ್ರಧಾನಿ; ಇಂದಿನಿಂದ 27 ಕೋಟಿ ಮಂದಿಗೆ ವ್ಯಾಕ್ಸಿನ್ ನೀಡುವ ಮಹಾ ಅಭಿಯಾನ
ಈ ಸಂದರ್ಭದಲ್ಲಿ ಮಲ್ಲಪ್ಪ ಶಾಫ್ಟ್ ಬಳಿ ನೂರಾರು ಕಾರ್ಮಿಕರು ಆಗಮಿಸಿ ತಮ್ಮ ಸಮಸ್ಯೆ ತಿಳಿಸಲು ಮುಂದಾದರು. ಈ ಸಂದರ್ಭದಲ್ಲಿ ಸಚಿವರು ಅವರು ಅಹವಾಲುಗಳನ್ನು ಕೇಳದೆ ಇರುವ ಹಿನ್ನಲೆಯಲ್ಲಿ ಆಕ್ರೋಶ ಭರಿತರಾಗಿ ಒಂದಿಷ್ಟು ಏರು ಧ್ವನಿಯಲ್ಲಿ ಮಾತನಾಡಿದ್ದರು. ಏರು ಧ್ವನಿಯಲ್ಲಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ಮಲ್ಲಪ್ಪ ಹಾಗೂ ನಾಗಪ್ಪ ಎಂಬಿಬ್ಬರು ಕಾರ್ಮಿಕರಿಗೆ ನೀವು ಗಲಾಟೆ ಮಾಡಲು ಮುಂದಾಗಿದ್ದೀರಿ, ಗಣಿ ಕಂಪನಿಯ ನಿಯಮ ಉಲ್ಲಂಘಿಸಿದ್ದೀರಿ. ಈ ಕಾರಣಕ್ಕಾಗಿ 3 ದಿನಗಳೊಳಗಾಗಿ ನೋಟಿಸ್ ಗೆ ಉತ್ತರ ನೀಡಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ತಕ್ಷಣವೇ ನಿಮ್ಮನ್ನು ಅಮಾನತ್ತು ಮಾಡಲಾಗುವುದು ಎಂದು ನೋಟಿಸ್ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ