ಹಾಸನ; ಹಾಸನದ ಹಾಸನಾಂಬ ದೇವಿ ದೇವಾಲಯದ ಬಾಗಿಲು ತೆರೆದು ಇಂದಿಗೆ 11 ದಿನವಾಗಿದ್ದು, ಇಂದು ಮಧ್ಯಾಹ್ನ ದೇವಾಲಯದ ಬಾಗಿಲು ಮುಚ್ಚಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ಜಿಲ್ಲಾಧಿಕಾರಿ ಮತ್ತು ದೇವಾಲಯದ ಪ್ರಮುಖರ ಮುಂದಾಳತ್ವದಲ್ಲಿ ಇಂದು ಮಧ್ಯಾಹ್ನ 1 ಗಂಟೆ 30 ನಿಮಿಷಕ್ಕೆ ಸರಿಯಾಗಿ ಶಾಸ್ತ್ರೋಕ್ತವಾಗಿ ದೇವಾಲಯದ ಬಾಗಿಲು ಮುಚ್ಚಿ, ಬೀಗ ಮುದ್ರೆ ಹಾಕಲಾಯಿತು. ಕೊರೋನಾ ಹಾವಳಿಯಿಂದಾಗಿ ಈ ಬಾರಿ ದೇವಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ನಿನ್ನೆ ಮತ್ತು ಇಂದು ದೀಪಾವಳಿ ಹಬ್ಬವಾಗಿದ್ದರಿಂದ ಎರಡು ದಿನಗಳ ಕಾಲ ಮಾತ್ರ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ನವೆಂಬರ್ 5 ರಂದು ಮಧ್ಯಾಹ್ನ 12 ಗಂಟೆ 45 ನಿಮಿಷಕ್ಕೆ ಸರಿಯಾಗಿ ದೇವಾಲಯದ ಬಾಗಿಲು ತೆರೆಯಲಾಯಿತು. 11 ದಿನ ಪೂಜೆಯ ಬಳಿಕ ಇಂದು ಮಧ್ಯಾಹ್ನ 1 ಗಂಟೆ 30 ನಿಮಿಷಕ್ಕೆ ದೇವಾಲಯದ ಗರ್ಭಗುಡಿಗೆ ಬೀಗ ಹಾಕಿ ಮುದ್ರೆ ಹಾಕಲಾಯಿತು. ಇದಕ್ಕೂ ಮುನ್ನ ಅರ್ಚಕರು ದೇವಿಗೆ ನೈವೇದ್ಯ ಮತ್ತು ವಿವಿಧ ಪೂಜಾ ಕೈಂಕಯಗಳನ್ನು ನೆರವೇರಿಸಿದರು. ವಿಶ್ವರೂಪ ದರ್ಶನ ನೀಡಿದ ಬಳಿಕ ಮಾತೆ ಹಾಸನಾಂಬ ದೇವಾಲಯವನ್ನು ಇಂದು ಮುಚ್ಚಲಾಗಿದೆ. ಇಂದೂ ಕೂಡ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯಲು ಕಾತರರಾಗಿದ್ದರು. ಉಸ್ತುವಾರಿ ಸಚಿವರ ಸೂಚನೆಯಂತೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.
ಇಂದು 1 ಗಂಟೆ 30 ನಿಮಿಷಕ್ಕೆ ಸರಿಯಾಗಿ ದೇವಾಲಯದ ಗರ್ಭಗುಡಿಯ ಬಾಗಿಲು ಮುಚ್ಚಲಾಗಿದೆ. ಇದಕ್ಕೂ ಮುನ್ನ ಅರ್ಚಕರು ದೇವಿಯನ್ನು ನೆನೆದು ಪ್ರಾರ್ಥನೆ ಮಾಡಿ ದೇವಾಲಯದಲ್ಲಿ ದೀಪ ಹಚ್ಚಿ, ದೇವಿಗೆ ಅನ್ನವನ್ನು ಎಡೆ ಇಟ್ಟರು ಮತ್ತು ಹೂವನ್ನು ಹಾಕಿದರು. ಈ ದೇವಾಲಯದ ವಿಶೇಷ ಅಂದರೆ ಈ ವರ್ಷ ಎಡೆ ಇಟ್ಟ ಅನ್ನ ಹಾಗೂ ಅಚ್ಚಿದ ದೀಪ ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ದೀಪ ಉರಿಯುತ್ತಿರುತ್ತದೆ ಮತ್ತು ಅನ್ನ ಹಳಸಿರುವುದಿಲ್ಲ. ದೇವಿಯ ಈ ವಿಶೇಷದಿಂದಲೇ ಈ ದೇವಾಲಯ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಹಾಗಾಗಿಯೇ ಪ್ರತಿವರ್ಷ ಹಾಸನಾಂಬ ದೇವಿ ದರ್ಶನ ಪಡೆಯಲು ಲಕ್ಷಾಂತರ ಮಂದಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಇದನ್ನು ಓದಿ: ಅಂಬರೀಶ್ ಇರುವವರೆಗೂ ಯಾರಿಗೂ ಮಾತನಾಡುವ ಧೈರ್ಯ ಇರಲಿಲ್ಲ; ಪ್ರತಾಪ್ ಸಿಂಹ ಹೇಳಿಕೆಗೆ ಸುಮಲತಾ ತಿರುಗೇಟು
ದೇವಾಲಯದ ಬಾಗಿಲು ಹಾಕಿದ ನಂತರ ದೇವಿಯ ಒಡವೆಯನ್ನು ಅರ್ಚಕರು ತಮ್ಮ ತಲೆಯ ಮೇಲೆ ಹೊತ್ತುಕೊಂಡು ದೇವಾಲಯದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿದರು. ಈ ವೇಳೆ ಹಾಸನಾಂಬೆಗೆ ಜೈಕಾರ ಹಾಕಿದರು. ದೇವಾಲಯದಲ್ಲಿ ಭಕ್ತರು ಜೈಕಾರ ಮೊಳಗಿಸಿದರು. ಇಂದು ಒಂದೇ ದಿನ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸುಮಾರು 5 ಸಾವಿರ ಮಂದಿ ದೇವಿಯ ದರ್ಶನ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ವರದಿ; ಡಿಎಂಜಿ ಹಳ್ಳಿಅಶೋಕ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ