ಹಾಸನ ; ಹಾಸನ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನೆಲ್ಲೇ ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಶೇ.50 ರಷ್ಟು ಹಾಸಿಗೆ ಮೀಸಲಿರಿಸಲು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಒಟ್ಟಾಗಿ ನಗರದ ರಾಜೀವ್ ಆಯುರ್ವೇದ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿರ್ವತಿಸಲು ನಿರ್ಧರಿಸಿವೆ.
ಈ ಬಗ್ಗೆ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಚರ್ಚಿಸಿದ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಒಂದೇ ಆಸ್ಪತ್ರೆಯಲ್ಲಿ ಕೋವಿಡ್ ಹಾಗೂ ಕೋವಿಡ್ ಇತರ ರೋಗಿಗಳ ಚಿಕಿತ್ಸೆಯಿಂದ ಸೋಂಕು ಹರಡುವ ಆಪಾಯ ಇರುವುದರಿಂದ ಹಲವು ಖಾಸಗಿ ಆಸ್ಪತ್ರೆಗಳು ಸೇರಿ ರಾಜೀವ್ ಆಯುರ್ವೇದ ಆಸ್ಪತ್ರೆಯನ್ನು ಖಾಸಗಿ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಚಿಕಿತ್ಸೆ ನೀಡುವುದಾಗಿ ತಿಳಿಸಿದರು.
ಖಾಸಗಿ ಕೊವೀಡ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯ ವ್ಯವಸ್ಥೆ ಮಾಡಿಕೊಂಡು ಬೇಗ ಚಿಕಿತ್ಸೆ ಪ್ರಾರಂಭಿಸಬೇಕು. ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರನ್ನು ತಂಡವಾಗಿ ನೇಮಿಸಿ ಕರ್ತವ್ಯ ನಿರ್ವಹಣೆ ಮಾಡಬೇಕು. ಒಂದು ವಾರ ಚಿಕಿತ್ಸಾ ಕಾರ್ಯ ಮಾಡಿದ ವೈದ್ಯರ ತಂಡ ಒಂದು ವಾರಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ಗೆ ಒಳಪಡಬೇಕೆಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚನೆ ನೀಡಿದರು. ಹಾಗೆಯೇ ಕೊರೋನಾ ಸೋಂಕಿತರ ಚಿಕಿತ್ಸೆ ಮಾಡಲು ನಿರಾಕರಿಸಿದ ಆಸ್ಪತ್ರೆಗಳ ಪರವಾನಗಿಯನ್ನು ರದ್ದುಗೋಳಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ಎಚ್ಚರಿಕೆ ನೀಡಿದ್ದಾರೆ.
ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಅಬ್ದುಲ್ ಬಶೀರ್ ಅವರು ಮಾತನಾಡಿ, ಖಾಸಗಿ ಆಸ್ಪತ್ರೆಗಳಲ್ಲಿ ಕೊವೀಡ್ ಸೋಂಕಿತರು ಮತ್ತು ಇತರೆ ರೋಗಿಗಳಿಗೆ ಸುರಕ್ಷತೆಯ ದೃಷ್ಟಿಯಿಂದ ಒಂದೇ ಕಡೆ ಚಿಕಿತ್ಸೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕೆಲವು ಖಾಸಗಿ ಆಸ್ಪತ್ರೆಯವರು ಒಟ್ಟಾಗಿ ಸೇರಿ ಸಮನ್ವಯತೆಯಿಂದ ರಾಜೀವ್ ಆಯುರ್ವೇದ ಆಸ್ಪತ್ರೆಯನ್ನು ಜಿಲ್ಲೆಯ ಖಾಸಗಿ ಕೋವಿಡ್ ಆಸ್ಪತ್ರೆಯನ್ನಾಗಿಸಿ ಚಿಕಿತ್ಸೆ ಮಾಡಲು ತಿರ್ಮಾನಿಸಿದ್ದೇವೆ ಎಂದು ಹೇಳಿದರು.
ಇದನ್ನು ಓದಿ: ಅಧಿಕಾರಿಗಳ ಭೇಟಿ ವೇಳೆ ಖಾಸಗಿ ಆಸ್ಪತ್ರೆಗಳ ಕರ್ಮಕಾಂಡ ಬಯಲು; ಸರ್ಕಾರದ ಗಮನಕ್ಕೆ ತಾರದೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ
ನೂತನ ಕೋವಿಡ್ ಆಸ್ಪತ್ರೆಯಲ್ಲಿ ಸುಮಾರು 150 ರೋಗಿಗಳಿಗೆ ಚಿಕಿತ್ಸೆ ನೀಡಲು ಆವಕಾಶವಿದ್ದು, ದಿನದ 24 ಗಂಟೆಯು ಸೇವೆ ಒದಗಿಸಲು ಸಿದ್ದವಿದ್ದೇವ. ಶೀಘ್ರದಲ್ಲಿ ಇದನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ