news18-kannada Updated:May 30, 2020, 8:00 PM IST
ಸಂಸದ ಪ್ರಜ್ವಲ್ ರೇವಣ್ಣ
ಹಾಸನ(ಮೇ 30): ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಾರಂಭಿಸಿರುವ ಕಾಮಗಾರಿಗಳನ್ನು ವಾರ್ಷಿಕ ಗುರಿಗೆ ಅನುಗುಣವಾಗಿ ಜೂನ್ ಮಾಹೆ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಂಸದ ಪ್ರಜ್ವಲ್ ರೇವಣ್ಣ ಸೂಚಿಸಿದ್ದಾರೆ.
ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿಂದು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಮಳೆಗಾಲ ಪ್ರಾರಂಭವಾಗಿದ್ದು ಕೆರೆ ಕಾಮಗಾರಿಗಳನ್ನು ಹೊರತುಪಡಿಸಿ ಉದ್ಯೋಗ ಖಾತ್ರಿ ಯೋಜನೆಯಡಿ ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿಗಳ ಕೆಲಸ ಕೈಗೊಳ್ಳಿ ಎಂದರು.
ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ವಂಚಿತರಾದ ಗ್ರಾಮಸ್ಥರಿಗೆ ಕೆಲಸ ನೀಡಬೇಕು. ಸರ್ಕಾರದ ಮಾರ್ಗಸೂಚಿ ಅನುಸರಿಸಬೇಕು. ಜೊತೆಗೆ ಸ್ಥಳೀಯವಾಗಿ ತಲೆದೋರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಹೊಂದಾಣಿಕೆ ಮಾಡಿಕೊಂಡು ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ಎಂದು ಪ್ರಜ್ವಲ್ ರೇವಣ್ಣ ಪಿ.ಡಿ.ಓ. ಗಳಿಗೆ ಸೂಚಿಸಿದರು.
ಕಾಮಗಾರಿಗಳಿಗೆ ಸಂಬಂಧಿಸಿದ ಎನ್.ಎಂ.ಆರ್. ಸಮಸ್ಯೆಗಳಿದ್ದರೆ ಗ್ರಾಮ ಪಂಚಾಯ್ತಿಯ ಅಧ್ಯಕ್ಷರೊಂದಿಗೆ ಚರ್ಚಿಸಿ ಪರಿಹರಿಸಿಕೊಳ್ಳಿ ಎಂದರು. ಕ್ರಿಯಾ ಯೋಜನೆಯ ಮೂಲಕ ಮಣ್ಣು ರಸ್ತೆಗಳಿರುವ ಕಡೆ ಕಾಂಕ್ರಿಟ್ ರಸ್ತೆ ಮಾಡುವ ಬದಲು ಗ್ರಾವೆಲ್ ರಸ್ತೆ ಮಾಡಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
Petrol Price; ಜೂನ್ ತಿಂಗಳಿನಿಂದ ಗ್ರಾಹಕರಿಗೆ ಹೊರೆಯಾಗಲಿದೆ ಪೆಟ್ರೋಲ್-ಡೀಸಲ್; ಲೀಟರ್ಗೆ 5 ರೂ. ಹೆಚ್ಚಳವಾಗುವ ಸಾಧ್ಯತೆ?
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಅವರು ಮಾತನಾಡಿ, ಗ್ರಾಮ ಪಂಚಾಯ್ತಿಗೆ ಒಳಪಡುವ ಕಾಮಗಾರಿಗಳಿಗೆ ತಕ್ಕಂತೆ ಕ್ರಿಯಾ ಯೋಜನೆ ಮಾಡಲಾಗಿದೆ. ಯಾವುದಾದರೂ ಕೆರೆಗಳ ನೀರು ಖಾಲಿ ಇದ್ದರೆ ಹೂಳೆತ್ತುವ ಕಾರ್ಯ ಕೈಗೊಳ್ಳಿ ಎಂದು ಸಂಬಂಧಿಸಿದ ಗ್ರಾಮ ಪಂಚಾಯ್ತಿ ಅಧಿಕಾರಿಗೆ ತಿಳಿಸಿದರು.
ಗ್ರಾಮ ಪಂಚಾಯಿತಿಗೆ ಒಳಪಡುವ ಕೆರೆಗಳು ತುಂಬಿದ್ದರೆ ಅದನ್ನು ಹೊರತು ಪಡಿಸಿ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದ ಕೊಟ್ಟಿಗೆ ನಿರ್ಮಾಣ, ಬದು ನಿರ್ಮಾಣ, ಕೃಷಿಹೊಂಡ, ನೀರು ಕಾಲುವೆ ನಿರ್ಮಾಣದ ಕೆಲಸ ಕೈಗೊಳ್ಳುವಂತೆ ಪಿ.ಡಿ.ಓ. ಗಳಿಗೆ ನಿರ್ದೇಶಿಸಿದರು.ಕೆರೆ ಕಾಮಗಾರಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಾಮಗಾರಿಗಳನ್ನು ಪ್ರಾರಂಭಿಸಿ. ಯಾವುದಾದರೂ ಅಡಚಣೆಗಳಿದ್ದರೆ ಮೇಲಿನ ಅಧಿಕಾರಿಗಳಿಗೆ ತಿಳಿಸುವಂತೆ ಬಿ.ಎ. ಪರಮೇಶ್ ಅವರು ಪಿ.ಡಿ.ಓ. ಗಳಿಗೆ ಹೇಳಿದರು. ಎಲ್ಲಾ ಗ್ರಾಮ ಪಂಚಾಯ್ತಿ ಪಿ.ಡಿ.ಓ. ಗಳು ಉದ್ಯೋಗ ಖಾತರಿ ಯೋಜನೆಯಯಡಿ ಹೆಚ್ಚಿನ ಕೆಲಸ ಮಾಡುವ ಮೂಲಕ ವಾರ್ಷಿಕ ನಿಗದಿತ ಗುರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಅವರು ತಿಳಿಸಿದರು.
ಕೃಷಿ ಇಲಾಖೆ, ತೋಟಗಾರಿಕೆಇಲಾಖೆ, ರೇಷ್ಮೆ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆಗಳು ಕ್ರಿಯಾ ಯೋಜನೆಯ ಮೂಲಕ ಪ್ರಾಂಭಿಸಿರುವ ಕೆಲಸಗಳನ್ನು ಜೂನ್ ಮಾಹೆ ಅಂತ್ಯದೊಳಗೆ ನಿಗದಿತ ಗುರಿ ತಲುಪುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
First published:
May 30, 2020, 7:59 PM IST