news18-kannada Updated:June 24, 2020, 7:19 AM IST
ಸಾಂದರ್ಭಿಕ ಚಿತ್ರ
ಹಾಸನ; ಇಡೀ ದೇಶಾದ್ಯಂತ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈವರೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೋನಾಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ಕೋವಿಡ್-19ಗೆ ಚಿಕಿತ್ಸೆ ನೀಡುವಂತೆ ಸರ್ಕಾರ ಸೂಚನೆ ನೀಡಿದ್ದು, ಅದಕ್ಕಾಗಿ ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿದೆ. ಹಾಸನ ಜಿಲ್ಲೆಯಲ್ಲಿ 7 ಖಾಸಗಿ ನರ್ಸಿಂಗ್ ಹೋಂಗಳನ್ನು ಗುರುತಿಸಲಾಗಿದೆ. ಆದರೆ, ಈ ನರ್ಸಿಂಗ್ ಹೋಂಗಳಲ್ಲಿ ಕೋವಿಡ್ 19 ಚಿಕಿತ್ಸೆಗೆ ಯಾವುದೇ ರೀತಿಯ ಸಿದ್ದತೆಗಳನ್ನು ಮಾಡಿಕೊಂಡಿಲ್ಲ.
ಹಾಸನ ಜಿಲ್ಲೆಯಲ್ಲಿ ಕೊರೋನಾಗೆ ಚಿಕಿತ್ಸೆ ನೀಡಲು 7 ಖಾಸಗಿ ಆಸ್ಪತ್ರೆಗಳನ್ನು ಗುರುತಿಸಲಾಗಿದ್ದು ಈವರೆಗೂ ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ಅದಕ್ಕಾಗಿ ಯಾವುದೇ ಬೆಡ್ಗಳನ್ನು ಇರಿಸಿಲ್ಲ, ಐಸೋಲೇಷನ್ ಕೇಂದ್ರ ತೆರೆದಿಲ್ಲ. ಕೊರೋನಾ ಟೆಸ್ಟ್ ಮಾಡಲು ಯಾವುದೇ ಕೇಂದ್ರ ತೆರೆದಿಲ್ಲ. ಜಿಲ್ಲಾಡಳಿತದಿಂದಲೂ ಸೂಚನೆ ನೀಡಲಾಗಿದ್ದರೂ ಖಾಸಗಿ ಆಸ್ಪತ್ರೆಗಳಲ್ಲಿ ಆ ಸೂಚನೆಗೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ.
ಕೊರೋನಾ ಪಾಸಿಟಿವ್ ಇರುವವರಿಗೆ ಮತ್ತು ಸಿಬ್ಬಂದಿ ಓಡಾಡಲು ಪ್ರತ್ಯೇಕ ಬಾಗಿಲಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಓಪಿಡಿ ಹೊರತುಪಡಿಸಿ ಬೇರೆ ದಿಕ್ಕಿನಲ್ಲಿ ಪ್ರತ್ಯೇಕ ದ್ವಾರ ನಿರ್ಮಿಸಬೇಕು. ಆದರೆ, ಇಂತಹ ಯಾವುದೇ ವ್ಯವಸ್ಥೆಯನ್ನು ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಮಾಡಿಕೊಂಡಿಲ್ಲ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಐಎಂಎ ಜಿಲ್ಲಾಧ್ಯಕ್ಷ ಬಷೀರ್ ಅವರು ಆಸ್ಪತ್ರೆಗಳ ಮಾಲೀಕರ ಸಭೆ ನಡೆಸಿ ಬಳಿಕ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳುತ್ತಿದ್ದಾರೆ.
ಸರ್ಕಾರದಿಂದ ಈಗಾಗಲೇ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾಗೆ ಚಿಕಿತ್ಸೆ ನೀಡಲು ದರ ನಿಗದಿ ಮಾಡಲಾಗಿದೆ. ಆದರೂ ಖಾಸಗಿ ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 300 ಬೆಡ್ಗಳಿದ್ದು, ಈಗ 50 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 299 ಕೇಸ್ ಗಳು ಪಾಸಿಟಿವ್ ಇದ್ದು, ಚನ್ನರಾಯಪಟ್ಟಣ ತಾಲ್ಲೂಕು ಒಂದರಲ್ಲೇ 200 ಮಂದಿಗೆ ಪಾಸಿಟಿವ್ ಇದೆ. ಹಾಸನ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.
ಇದನ್ನು ಓದಿ: IAS Vijay Shankar Suicide: ಐಎಂಎಯಿಂದ ಹಣ ಪಡೆದ ಆರೋಪ ಎದುರಿಸುತ್ತಿದ್ದ ಐಎಎಸ್ ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆಗೆ ಶರಣು
ಹಾಸನ ಜಿಲ್ಲೆಯಲ್ಲಿ ಕೊರೋನಾ ರಣಕೇಕೆ ಮುಂದುವರೆದಿದ್ದರೂ ಖಾಸಗಿ ಆಸ್ಪತ್ರೆಯವರು ಈವರೆಗೆ ಯಾವುದೇ ಸಿದ್ದತೆಗಳನ್ನು ಮಾಡಿಕೊಂಡಿಲ್ಲ. ಇದೇ ರೀತಿ ಕೊರೋನ ಅಟ್ಟಹಾಸ ಮುಂದುವರೆದರೆ ಮುಂದಿನ ದಿನಗಳಲ್ಲಿ ಚಿಕಿತ್ಸೆ ನೀಡಲು ಆಸ್ಪತ್ರೆಗಳೇ ಸಿಗದೇ ಪರದಾಡಬೇಕಿದೆ. ಒಟ್ಟಾರೆ ಖಾಸಗಿ ಆಸ್ಪತ್ರೆಗಳು ಸರ್ಕಾರದ ಆದೇಶಕ್ಕೆ ಯಾವುದೇ ಬೆಲೆ ಕೊಡುತ್ತಿಲ್ಲ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ಸರ್ಕಾರವೇ ಖಾಸಗಿ ಆಸ್ಪತ್ರೆಗಳನ್ನು ಮುಟ್ಟುಗೋಲು ಹಾಕಿಕೊಂಡು ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
First published:
June 24, 2020, 7:19 AM IST