ಹಾಸನ: ಹಾಸನ ಜಿಲ್ಲೆಯ (Hassan District) ಮಲೆನಾಡು ಭಾಗವಾದ ಸಕಲೇಶಪುರ- ಆಲೂರು ತಾಲ್ಲೂಕಿಗಳಲ್ಲಿ ಕಾಡಾನೆಗಳ ಹಾವಳಿಗೆ ಕೊನೆ ಇಲ್ಲದಂತಾಗಿದೆ. ಕಾಡಾನೆಗಳ ದಾಳಿಗೆ (Elephant Attack) ಅನೇಕರು ಬಲಿಯಾದರೆ, ಅಪಾರ ಪ್ರಮಾಣದ ಬೆಳೆ ನಷ್ಟವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಮೂರ್ನಾಲ್ಕು ವರ್ಷದಿಂದ ಪಟ್ಟಣ ಪ್ರದೇಶದೊಳಗೆ ಕಾಡಾನೆಗಳ ಹಿಂಡು ದಾಂಗುಡಿ ಇಡುತ್ತಿವೆ. ಕಾಡಾನೆಗಳ ಸಮಸ್ಯೆ ಇಂದು ನೆನ್ನೆಯದಲ್ಲ. ಕಳೆದ ಐದು ದಶಕಗಳಿಂದಲೂ ಕಾಡಾನೆ ಉಪಟಳದಿಂದ ಈ ಭಾಗದ ಜನ ರೋಸಿ ಹೋಗಿದ್ದಾರೆ.
ಪ್ರತಿ ವರ್ಷವೂ ಕಾಡಾನೆಗಳ ಸಂತತಿ ಹೆಚ್ಚುತ್ತಲೆ ಇದೆ. ಸುಮಾರು ನೂರು ಆನೆಗಳು ಸಕಲೇಶಪುರ- ಆಲೂರು ಭಾಗದಲ್ಲಿವೆ. ಮತ್ತೊಂದೆಡೆ ಕೊಡಗು ಕಡೆಯಿಂದ ಕಾಡಾನೆಗಳು ಹಾಸನ ಜಿಲ್ಲೆಗೆ ಬರುತ್ತಿದ್ದು, ಇದರಿಂದಾಗಿ ರೈತರು ಹಾಗೂ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದುವರೆಗೂ ಕಾಡಾನೆಗಳ ದಾಳಿಯಿಂದ 95 ಕ್ಕೂ ಹೆಚ್ಚು ಅಮಾಯಕರು ಪ್ರಾಣ ಕಳೆದುಕೊಂಡರೆ ಕಾಫಿ, ಮೆಣಸು, ಬಾಳೆ, ಭತ್ತ ಸೇರಿದಂತೆ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಸೂಕ್ತ ಪರಿಹಾರವೂ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ಆನೆ ಕಾರಿಡಾರ್ ನಿರ್ಮಾಣ ಅಥವಾ ಎಲ್ಲಾ ಆನೆಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡುವಂತೆ ಸಾಕಷ್ಟು ಪ್ರತಿಭಟನೆ ಹೋರಾಟ ನಡೆಸಿದರು ಯಾವ ಸರ್ಕಾರಗಳು ಇದಕ್ಕೆ ಸ್ಪಂದಿಸಿಲ್ಲ.
ಕಾಡಾನೆ ದಾಳಿಯಿಂದ ಅಮಾಯಕರು ಮೃತಪಟ್ಟಾಗ ಮಾತ್ರ ಸ್ಥಳಕ್ಕೆ ಬರುವ ಜನಪ್ರತಿನಿಧಿಗಳು ಮೃತ ಕುಟುಂಬಕ್ಕೆ ಪರಿಹಾರ ನೀಡಿ ಸಾಂತ್ವನ ಹೇಳುವುದನ್ನು ಬಿಟ್ಟರೆ ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇತ್ತೀಚೆಗೆ ಕಾಡಾನೆಗಳು ನಾಲ್ಕೈದು ಗುಂಪುಗಳಾಗಿ ಬೇರ್ಪಟ್ಟಿದ್ದು, ಇಬ್ಬಡಿ, ಶಾಂತಪುರ, ಕೊಣ್ಣೂರು, ಸತ್ತಿಗಾಲ್, ಮಳಲಿ, ಬೇಡರಹಗ್ಲಿ, ಸುಳ್ಳಕ್ಕಿ, ಮಠಸಾಗರ ಗ್ರಾಮದ ಸುತ್ತ ಸಂಚರಿಸುತ್ತಿವೆ. ಕಾಫಿ ತೋಟದಲ್ಲಿ ಗಜಪಡೆ ಬೀಡು ಬಿಡುತ್ತಿದ್ದು, ಪ್ರಾಣ ಭಯದಿಂದ ಕಾಫಿ ತೋಟಕ್ಕೆ ಕೆಲಸಗಾರರಾಗಲಿ, ಮಾಲೀಕರಾಗಲಿ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಭತ್ತ ನಾಟಿ ಕಾರ್ಯ ಮುಗಿದಿದ್ದು, ಕಾಡಾನೆಗಳು ತುಳಿದು ನಾಶ ಮಾಡುವ ಆತಂಕದಲ್ಲಿದ್ದಾರೆ. ಇಪ್ಪತ್ತು ವರ್ಷದಿಂದ ಬೆಳಿದಿದ್ದ ಕಾಫಿ ಗಿಡಗಳನ್ನು ನಾಶ ಮಾಡುತ್ತಿವೆ. ಕೆಲ ರೈತರು ಗಜಪಡೆ ದಾಳಿಯಿಂದ ನಷ್ಟ ಅನುಭವಿಸಿ ಹೊಲ-ಗದ್ದೆಗಳನ್ನು ಹಾಳು ಬಿಟ್ಟಿದ್ದಾರೆ.
ಹತ್ತಾರು ವರ್ಷದಿಂದ ಶಾಶ್ವತ ಪರಿಹಾರ ಕಲ್ಪಿಸುವಂತೆ ಹೋರಾಟ ನಡೆಸುತ್ತಿದ್ದರು, ಸರ್ಕಾರಗಳು ಮಾತ್ರ ಕಣ್ಮುಚ್ಚಿ ಕುಳಿತಿವೆ. ಇದರಿಂದ ಬೇಸತ್ತಿರುವ ಕಾಫಿ ಬೆಳೆಗಾರರು ಮುಂದಿನ ಜಿ.ಪಂ., ತಾ.ಪಂ. ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕಾಡಾನೆಗಳ ಚಲನವಲನ ಗಮನಿಸಿ ಗ್ರಾಮಸ್ಥರಿಗೆ ಮಾಹಿತಿ ನೀಡಲು ಫಾರೆಸ್ಟ್ ಗಾರ್ಡ್ ಗಳನ್ನು ನೇಮಿಸಿದ್ದು ಸ್ಥಳೀಯರಿಗೆ ಮಾಹಿತಿ ನೀಡುತ್ತಿದ್ದಾರೆ. ಇನ್ನೊಂದೆಡೆ ಪಟ್ಟಣದೊಳಗೆ ಬರುವ, ತೋಟದಲ್ಲಿ ಬೀಡುಬಿಡುವ ಆನೆ ಹಿಂಡುಗಳನ್ನು ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹೈರಾಣಾಗಿ ಹೋಗಿದ್ದಾರೆ. ಸೂಕ್ತ ಪರಿಹಾರ ನೀಡಿದರೆ, ಆನೆ ಕಾರಿಡಾರ್ ನಿರ್ಮಾಣಕ್ಕೆ ತಮ್ಮ ಜಮೀನು ಬಿಟ್ಟುಕೊಡಲು ರೈತರು ಸಿದ್ದರಿದ್ದರು, ಸರ್ಕಾರ ಮಾತ್ರ ಇತ್ತ ಗಮನ ಹರಿಸುತ್ತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು, ಈ ಭಾಗದ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ, ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು. ಈ ಮೂಲಕ ಈ ಭಾಗದಲ್ಲಿ ಆನೆಗಳು ದಾಳಿಯಿಂದ ಆಗುತ್ತಿರುವ ಸಾವು- ನೋವು ಹಾಗೂ ಬೆಳೆ ಹಾನಿ ತಪ್ಪಿಸಬೇಕು.
ಇದನ್ನು ಓದಿ: Deforestation: ಗಣಿಗಾರಿಕೆಯಿಂದ ಕೋಲಾರದಲ್ಲಿ 10 ಸಾವಿರ ಗಿಡ-ಮರ ನಾಶ; ಲೋಕಾಯುಕ್ತ ತನಿಖೆಗೆ ಹೈಕೋರ್ಟ್ ಆದೇಶ
ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಸರ್ಕಾರ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಮೂಲಕ ಮಲೆನಾಡು ಭಾಗದ ಜನರ ಜೀವ ಹಾಗೂ ಪ್ರಾಣ ಉಳಿಸಬೇಕು ಎಂಬುದು ಈ ಭಾಗದ ರೈತರು ಹಾಗೂ ಜನರ ಒಕ್ಕೊರಲ ಒತ್ತಾಯವಾಗಿದೆ.
ವರದಿ: ಶಶಿಧರ್.ಬಿ.ಸಿ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ