ಹಾಸನದ 44 ಜಿ.ಪಂ., 120 ತಾ.ಪಂ. ಚುನಾವಣೆಗೆ ಜಿಲ್ಲಾಡಳಿತ ಸಿದ್ಧ; 1686 ಮತಗಟ್ಟೆ ಸ್ಥಾಪನೆ

ಹಾಸನದಲ್ಲಿ 44 ಜಿ.ಪಂ. (ZP) ಹಾಗೂ 120 ತಾ.ಪಂ. (TP) ಕ್ಷೇತ್ರಗಳಿವೆ. ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಕೋರ್ಟ್​ನಿಂದ ಗ್ರೀನ್ ಸಿಗ್ನಲ್ ಬಂದ ಕೂಡಲೇ ಚುನಾವಣೆ ನಡೆಸಲು ಜಿಲ್ಲಾಡಳಿತ ಅಣಿಗೊಂಡಿದೆ.

ಹಾಸನ ನಗರ

ಹಾಸನ ನಗರ

  • Share this:
ಹಾಸನ: ಕೋವಿಡ್ ನಡುವೆಯೂ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ನಡೆಸಲು ನಿರ್ಧರಿಸಲಾಗಿದ್ದು ಚುನಾವಣೆ ದಿನಾಂಕ ಪ್ರಕಟ ಮಾಡುವುದು ಮಾತ್ರ ಬಾಕಿ ಇದೆ. ಈಗಾಗಲೇ ಜೆಡಿಎಸ್ ಪಕ್ಷದ ಪ್ರಮುಖ ನಾಯಕರು ಸಭೆ ಸಮಾವೇಶ ನಡೆಸುತ್ತಿದ್ದಾರೆ. ಹಾಸನ ಜಿಲ್ಲೆ ಜೆಡಿಎಸ್ ಭದ್ರಕೋಟೆಯಾಗಿದ್ದು ಅಧಿಕಾರ ಹಿಡಿಯಲು ರಣತಂತ್ರ ಹೆಣೆಯಲು ಆರಂಭಿಸಿದ್ದಾರೆ.‌ ಹಾಸನ, ಆಲೂರಿನಲ್ಲಿ ಈಗಾಗಲೇ ಸಮಾವೇಶಗಳನ್ನ ನಡೆಸಿದ್ದಾರೆ. ಟಿಕೆಟ್ ಆಕಾಂಕ್ಷೆಗಳ ಸಭೆಯನ್ನೂ ನಡೆಸಿದ್ದಾರೆ.

ಕಾಂಗ್ರೆಸ್, ಬಿಜೆಪಿ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷೆಗಳಿದ್ದರೂ ಅವರ ಪಕ್ಷದ ನಾಯಕರು ಇದುವರೆಗೂ ಯಾವುದೇ ಸಮಾವೇಶ, ಸಭೆಗಳನ್ನು ನಡೆಸಿಲ್ಲ. ಆದರೆ ಹಾಸನ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ಮಾತ್ರ ತಮ್ಮ ಹಿಡಿತ ಸಾಧಿಸಲು ಜಿ. ಪಂ., ತಾ. ಪಂ. ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ್ದಾರೆ. ಈಗಾಗಲೇ ಒಂದೊಂದು ಕ್ಷೇತ್ರಕ್ಕೆ ಒಬ್ಬರು, ಇಬ್ಬರನ್ನು ಹೆಸರನ್ನು ಸೂಚಿಸಿ ಸಿದ್ದರಾಗುವಂತೆ ಪ್ರೀತಂ ಕರೆ ಕೊಟ್ಟಿದ್ದಾರೆ.

ಇತ್ತ ಆಕಾಂಕ್ಷಿಗಳು ಟೆಕೆಟ್ ಗಾಗಿ ಸೂಟ್ ಕೇಸ್ ಹಿಡಿದು ತಮ್ಮ ಪಕ್ಷದ ನಾಯಕರ ಮನೆಗೆ ಎಡತಾಕುತ್ತಿದ್ದಾರೆ.‌ ಆದರೆ ಈ ಹಿಂದೆ  ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗದಿಯಲ್ಲಿ ಲೋಪವಾಗಿದೆ ಎಂದು ಹೈಕೋರ್ಟ್‌ನಲ್ಲಿ ಜಿಲ್ಲೆಯ ಹಲವರು ಸಾಕಷ್ಟು ತಕರಾರು ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಹೊಸದಾಗಿ ಕ್ಷೇತ್ರ ಪುನರ್ ವಿಂಗಡಣೆ ಆಯೋಗ ರಚನೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ. ಹೈಕೋರ್ಟ್‌ಗೂ ಮಾಹಿತಿ ನೀಡಲು ಮುಂದಾಗಿದೆ. ಇದಕ್ಕೆ ಉಚ್ಚ ನ್ಯಾಯಾಲಯ ಅಸ್ತು ಎಂದರೆ ಚುನಾವಣೆ ವಿಳಂಬ ಆಗುವ ಸಾಧ್ಯತೆ ಇದೆ. ಇಲ್ಲವಾದರೆ ಲೋಕಲ್ ವಾರ್‌ಗೆ ಶೀಘ್ರ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದೆ. ಹಾಗಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಅಂತಿಮ ಮತದಾರರ ಪಟ್ಟಿ ಸಿದ್ಧಪಡಿಸಿ, ಮತಗಟ್ಟೆಗಳ ಸಂಖ್ಯೆಯನ್ನೂ ನಿಗದಿಪಡಿಸಿದೆ.

ಇದನ್ನೂ ಓದಿ: Slim Secrets- ಸಂಜೆ 6:30ಕ್ಕೆ ಮನೆಯೂಟ, ಸೂರ್ಯನಮಸ್ಕಾರ… ಸ್ಲಿಮ್ ಆಗಲು ಶ್ರುತಿ ಸೀಕ್ರೆಟ್

ಹಾಸನ, ಹೊಳೆನರಸೀಪುರ, ಅರಸೀಕೆರೆ, ಸಕಲೇಶಪುರ, ಬೇಲೂರು, ಚನ್ನರಾಯಪಟ್ಟಣ, ಅರಕಲಗೂಡು, ಆಲೂರು ಸೇರಿ ಎಂಟು ತಾಲೂಕುಗಳಲ್ಲಿ ಒಟ್ಟು 44 ಜಿಲ್ಲಾ ಪಂಚಾಯ್ತಿ ಹಾಗೂ 120 ತಾಲೂಕು ಪಂಚಾಯ್ತಿ ಕ್ಷೇತ್ರಗಳಿವೆ. ಇಷ್ಟೂ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 11,64,506 ಲಕ್ಷ ಮತದಾರರಿದ್ದು, ಇವರಲ್ಲಿ 5,87,637 ಪುರುಷರು, 5,76,846 ಮಹಿಳಾ ಹಾಗೂ 23 ಮಂದಿ ಇತರೆ ಮತದಾರರಿದ್ದಾರೆ. ಅರಸೀಕೆರೆ ತಾಲೂಕಿನಲ್ಲಿ ಅತಿ ಹೆಚ್ಚು 2,17,790 ಮತದಾರರಿದ್ದರೆ, ಆಲೂರು ತಾಲೂಕಿನಲ್ಲಿ ಅತಿ ಕಡಿಮೆ 64,093 ಮತದಾರರಿದ್ದಾರೆ. ಅರಸೀಕೆರೆ ಮತ್ತು ಸಕಲೇಶಪುರ ತಾಲೂಕುಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಿದ್ದಾರೆ.

ಮತದಾನಕ್ಕಾಗಿ ಹಾಸನ ಜಿಲ್ಲೆಯಲ್ಲಿ 1686 ಮತಗಟ್ಟೆ ಗುರುತಿಸಲಾಗಿದ್ದು, ಹಾಸನ 261, ಚನ್ನರಾಯಪಟ್ಟಣ 301, ಸಕಲೇಶಪುರ 129, ಅರಸೀಕೆರೆ 300, ಹೊಳೆನರಸೀಪುರ 212, ಆಲೂರು 94, ಬೇಲೂರು 195 ಮತ್ತು ಅರಕಲಗೂಡು ತಾಲೂಕಿನಲ್ಲಿ 194 ಮತಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಒಟ್ಟಿನಲ್ಲಿ ಈ ಬಾರಿಯ ತಾ.ಪಂ., ಜಿ.ಪಂ. ಚುನಾವಣಾ ಕಣ ರಂಗೇರಲಿದೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ಕರ್ನಾಟಕ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.)

ವರದಿ: ಶಶಿಧರ್ ಬಿ.ಸಿ.
Published by:Vijayasarthy SN
First published: