ಕನ್ನಡ ಚಿತ್ರರಂಗದ ಖ್ಯಾತ ನಟ ದಿವಂಗತ ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳಿಗಿಂದು ಸಂಭ್ರಮದ ದಿನ. ನೆಚ್ಚಿನ ನಟ ವಿಷ್ಣುವರ್ಧನ್ ಅವರ 70ನೇ ಜನ್ಮದಿನ. ಅಭಿಮಾನಿಗಳ ಪಾಲಿನ ವಿಷ್ಣುದಾದ ಅವರನ್ನು ನಾನಾ ರೀತಿ ಸ್ಮರಿಸುವ ಅವರ ಚಿತ್ರಪ್ರೇಮಿಗಳು, ಪ್ರತಿ ಜನ್ಮದಿನದಂದೂ ಒಂದಿಲ್ಲೊಂದು ಕಾರ್ಯಕ್ರಮ ನಡೆಸುತ್ತಾರೆ. ಜೊತೆಗೆ ಅನ್ನದಾನ, ಸಸಿ ನೆಡುವ ಕಾರ್ಯ ಹಾಗೂ ರಕ್ತದಾನ ಹೀಗೆ ನಾನಾ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ಆದರೆ, ಮೈಸೂರಿನ ಯುವಕಲಾವಿದನೊಬ್ಬ ತನ್ನ ಅಪರೂಪದ ಕಲೆಯಂದ ವಿಷ್ಣುವರ್ಧನ್ ಅವರಿಗೆ ಗೌರವ ಸಲ್ಲಿಸಿದ್ದಾರೆ. ಹಳೆಯ ಚಿತ್ರಗಳ ರಿಯಲ್ ರೀಲ್ಗಳನ್ನ ಬಳಸಿ ವಿಷ್ಣುವರ್ಧನ್ ಅವರ ಕಲಾಕೃತಿ ರಚಿಸಿದ್ದಾರೆ. ವಿಷ್ಣು ಹುಟ್ಟುಹಬ್ಬದ ದಿನದಂದೇ ಈ ವಿಡಿಯೋ ಹೊರಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೈಸೂರಿನ ಯುವ ಕಲಾವಿದ ಯೋಗಾನಂದ್ ತನ್ನ ವಿಭಿನ್ನ ಕಲೆಯಿಂದಲೇ ಕನ್ನಡ ಚಿತ್ರರಂಗದ ದಿಗ್ಗಜ ನಟ ದಿವಂಗತ ಡಾ.ವಿಷ್ಣುವರ್ಧನ್ ಅವರಿಗೆ ಗೌರವ ಸಲ್ಲಿಸಿದ್ದಾರೆ.
ಅಭಿಮಾನಿಗಳ ಸಾಹಸಸಿಂಹ ಆಗಿರುವ ವಿಷ್ಣುವರ್ಧನ್ಗೆ ಇಂದು 70ನೇ ಜನ್ಮದಿನದ ಸಂಭ್ರಮ. ಇದೆ ವೇಳೆಯಲ್ಲಿ ಮೈಸೂರಿನಲ್ಲಿ ಅವರ ಸ್ಮಾರಕ ನಿರ್ಮಾಣ ಕಾರ್ಯದ ಕಾಮಾಗಾರಿಯೂ ಆರಂಭವಾಗಿದೆ. ಇದಕ್ಕಾಗಿ ವಿಶೇಷವಾಗಿ ಏನನ್ನಾದರೂ ಮಾಡಬೇಕೆಂದು ನಿರ್ಧರಿಸಿದ ಕಲಾವಿದ ಯೋಗಾನಂದ್, ಸಿನಿಮಾ ಪ್ರದರ್ಶಿಸಲು ಬಳಸುತ್ತಿದ್ದ ರೀಲ್ಗಳನ್ನ ಬಳಸಿ ವಿಷ್ಣುವರ್ಧನ್ ಅವರ ಚಿತ್ರ ಬಿಡಿಸಿದ್ದಾರೆ. ವಿಷ್ಣು ಅಭಿನಯದ ಎವರ್ಗ್ರೀನ್ ಚಿತ್ರವಾದ ಬಂಧನ ಚಿತ್ರದಲ್ಲಿನ ವಿಷ್ಣು ಅವರ ಲುಕ್ ಈ ರೀಲುಗಳಿಂದ ಮೂಡಿಬಂದಿದ್ದು, ಅಪರೂಪದ ಕಲೆಯಿಂದ ನೆಚ್ಚಿನ ನಟನಿಗೆ ಗೌರವ ಸಲ್ಲಿಸಲಾಗಿದೆ.
ಮೈಸೂರಿನ ಕಲಾವಿದ ಯೋಗಾನಂದ್ ಈ ಹಿಂದೆಯೂ ಇಂತಹದ್ದೆ ಪ್ರಯತ್ನ ಮಾಡಿದ್ದರು. ಕ್ಯಾಸೆಟ್ ರೀಲ್ನಿಂದ ವರನಟ ಡಾ.ರಾಜ್ಕುಮಾರ್ ಚಿತ್ರಬಿಡಿಸಿದ್ದರು. ನಂತರ ಅಂಬರೀಷ್ ಅವರ ಹುಟ್ಟುಹಬ್ಬದ ಸಮಯದಲ್ಲಿ ಅಂಬಿ ಅಮರ ಎಂದು ಸಿನಿಮಾ ರೀಲ್ಗಳಿಂದ ಅಂಬರೀಷ್ ಅವರ ಚಿತ್ರ ನಿರ್ಮಿಸಿದ್ದರು. ಇದೀಗ ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಒಂದು ಸಿನಿಮಾದ ರೀಲ್ ಬಳಸಿಕೊಂಡು ಸರಿಸುಮಾರು 25 ಮೀಟರ್ ರೀಲ್ಗಳನ್ನ ಆಕಾರಕ್ಕೆ ತಕ್ಕಂತೆ ಕತ್ತಿರಿಸಿ, ಗಮ್ನಿಂದಲೇ ಮೊದಲು ವಿಷ್ಣು ಭಾವಚಿತ್ರದ ಸ್ಕೆಚ್ ಮಾಡಿಕೊಂಡು , ನಂತರ ರೀಲ್ಗಳನ್ನ ಗಮ್ಮೇಲೆ ಅಂಟಿಕೊಂಡು ಅದ್ಬುತ ಚಿತ್ರ ಬಿಡಿಸಿದ್ದಾರೆ.
ಈ ಅಪರೂಪದ ಚಿತ್ರ ಬಿಡಿಸೋಕೆ ಬರೋಬ್ಬರಿ ಎರಡು ದಿನಗಳ ಕಾಲ ಕಲಾವಿದ ಯೋಗಾನಂದ್ ಶ್ರಮ ವಹಿಸಿದ್ದಾರೆ. ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾದ ನಂತರ ಅಲ್ಲಿಯೇ ಈ ಕಲಾಕೃತಿ ಇರಿಸುವ ಉದ್ದೇಶವನ್ನು ಹೊಂದಿದ್ದಾರೆ. ಅದೇನೆ ಇದ್ದರೂ ಅಪ್ರತಿಮ ಕಲಾವಿದನೋಬ್ಬನಿಗೆ ಅಪರೂಪದ ಕಲೆಯಿಂದಲೇ ಕಲಾವಿದನ ಈ ಗೌರವ ಶ್ಲಾಘನೆಯ ವಿಚಾರವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ