Hanagal By Election: ಹಾನಗಲ್ ಕ್ಷೇತ್ರಕ್ಕೆ ರೇವತಿ ಉದಾಸಿ, ಸಿಂದಗಿಗೆ ರಮೇಶ್ ಭೂಸನೂರ್ ಹೆಸರು ಫೈನಲ್?

ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಕುರಿತ ಆಂತರಿಕ ಮತ್ತು ಬಾಹ್ಯ ವರದಿ ಪ್ರಕಾರ, ಬಿಜೆಪಿ ಹೆಚ್ಚಿನ ಮತ ಪಡೆದು ಗೆಲ್ಲುವ ವಾತಾವರಣ ಇದೆ ಎಂದು ಸಿ.ಟಿ.ರವಿ ಹೇಳಿದರು.

ಬಿಜೆಪಿ ನಾಯಕರ ಸಭೆ

ಬಿಜೆಪಿ ನಾಯಕರ ಸಭೆ

  • Share this:
ಬೆಂಗಳೂರು(ಅ.04): ಅಕ್ಟೋಬರ್ 30ರಂದು ನಡೆಯಲಿರುವ ಉಪ‌ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ಆರಂಭಿಸಿದ್ದು, ಅಭ್ಯರ್ಥಿಗಳ ಆಯ್ಕೆಗೆ ಮುಂದಾಗಿದೆ. ಭಾನುವಾರ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿರುವ ಬಿಜೆಪಿ ನಾಯಕರು, ಒಂದಷ್ಟು ಜನ ಆಕಾಂಕ್ಷಿಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ಹಾನಗಲ್ ಹಾಗೂ ಸಿಂದಗಿಗೆ ಮೂರು ಮೂರು ಹೆಸರು  ಅಂತಿಮ ಮಾಡಿ, ಅದನ್ನು ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಲು ನಿರ್ಧರಿಸಿದೆ. ಹಾನಗಲ್  ವಿಧಾನಸಭಾ ಕ್ಷೇತ್ರಕ್ಕೆ ರೇವತಿ ಉದಾಸಿ, ಕಲ್ಯಾಣ ಕುಮಾರ್ ಶೆಟ್ಟರ್, ಶಿವರಾಜ ಸಜ್ಜನ್ ಹೆಸರು ಹಾಗೂ ಸಿಂದಗಿ ಕ್ಷೇತ್ರಕ್ಕೆ ರಮೇಶ್ ಭೂಸನೂರು, ಸಂಗನಗೌಡ ಪಾಟೀಲ್,​ ಸಿದ್ದು ಬಿರಾದಾರ ಹೆಸರು ಶಿಫಾರಸು ಮಾಡಿದೆ. ಈ ಮೂರು ಮೂರು ಹೆಸರಲ್ಲಿ ಬಹುತೇಕವಾಗಿ ಹಾನಗಲ್ ಗೆ ರೇವತಿ ಉದಾಸಿ ಹಾಗೂ ಸಿಂದಗಿಗೆ ರಮೇಶ್ ಭೂಸನೂರ್ ಹೆಸರು ಫೈನಲ್ ಆಗುವ ಸಾಧ್ಯತೆ ಇದ್ದು,  ಬಿಜೆಪಿಯಿಂದ ಅಧಿಕೃತ ಘೋಷಣೆಯಾಗುವುದೊಂದೇ ಬಾಕಿ ಇದೆ.

ಇನ್ನು, ಕೋರ್ ಕಮಿಟಿ ಸಭೆ ನಂತರ ಮಾತಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಕುರಿತ ಆಂತರಿಕ ಮತ್ತು ಬಾಹ್ಯ ವರದಿ ಪ್ರಕಾರ, ಬಿಜೆಪಿ ಹೆಚ್ಚಿನ ಮತ ಪಡೆದು ಗೆಲ್ಲುವ ವಾತಾವರಣ ಇದೆ ಎಂಬ ವಿಚಾರ ಇಂದಿನ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಿದೆ. ಹಲವು ಹೆಸರುಗಳ ಚರ್ಚೆ ಆಗಿದ್ದು, ಮೂರ್ನಾಲ್ಕು ಹೆಸರನ್ನು ಅಂತಿಮಗೊಳಿಸಿ ಕೇಂದ್ರಕ್ಕೆ ಕಳುಹಿಸಿಕೊಡುವ ಅಧಿಕಾರವನ್ನು ರಾಜ್ಯಾಧ್ಯಕ್ಷರಿಗೆ ನೀಡಲಾಗಿದೆ ಎಂದು ಹೇಳಿದರು.

ಎರಡೂ ಚುನಾವಣೆಗಳಲ್ಲಿ ಗೆಲುವು ಸಾಧಿಸುವುದು ಪಕ್ಷದ ಮೊದಲ ಆದ್ಯತೆಯಾಗಿದೆ. ಅದಕ್ಕಾಗಿ ಸಂಘಟಿತವಾಗಿ ಪ್ರಯತ್ನ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು. ಜೆಡಿಎಸ್ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟ ವಿಚಾರದಲ್ಲಿ ಬಿಜೆಪಿ ಒಳ ಒಪ್ಪಂದ ಆಗಿದೆಯೇ ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಪಕ್ಷದವರು ಯಾರಿಗೆ ಟಿಕೆಟ್ ಕೊಡಬೇಕೆಂದು ನಾನು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್‍ನವರು ಎಷ್ಟು ಜನ ಆರೆಸ್ಸೆಸ್‍ನವರಿಗೆ ಟಿಕೆಟ್ ಕೊಟ್ಟಿದ್ದಾರೆ? ಹಾಗಿದ್ದರೆ ಅವರಿಗೆ ರಾಷ್ಟ್ರೀಯ ಹಿತ ಇಲ್ಲವೇ ಎಂದು ನಾನು ಕೇಳಲು ಸಾಧ್ಯವೇ ಎಂದೂ ಕೇಳಿದರು.

ಇದನ್ನೂ ಓದಿ:HDK vs DKS: ಜೆಡಿಎಸ್​ ಬಗ್ಗೆ ಮಾತನಾಡಲು ಇವರಿಗೆ ನೈತಿಕತೆ ಇದೆಯೇ? ಡಿಕೆಶಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ತಮ್ಮ ಪಕ್ಷದ ಟಿಕೆಟ್ ಕುರಿತು ನಿರ್ಧರಿಸುತ್ತವೆ ಎಂದರು. ಕಾಂಗ್ರೆಸ್- ಜೆಡಿಎಸ್ ಒಳ ಒಪ್ಪಂದ ಆಗಿದ್ದರೂ ಅವರು ಸೋಲುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಿದ್ದವು.  ಫಲಿತಾಂಶ ಏನಾಗಿದೆ ಎಂದು ಗೊತ್ತೇ ಇದೆ. ಮೈಸೂರಿನಲ್ಲಿ ಸಿದ್ದರಾಮಯ್ಯ ಅವರ ಅಭ್ಯರ್ಥಿ, ತುಮಕೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಲಿಲ್ಲ. ಬಾದಾಮಿ ಕ್ಷೇತ್ರ ಒಳಗೊಂಡ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಸೋತಿತ್ತು ಎಂದು ತಿಳಿಸಿದರು.

ನಮ್ಮದು ಪಾಸಿಟಿವ್ ಪಾಲಿಟಿಕ್ಸ್. ನಮ್ಮ ಸರಕಾರದ ಅಭಿವೃದ್ಧಿ ಕಾರ್ಯ, ಸಾಧನೆ, ತತ್ವ ಸಿದ್ಧಾಂತಗಳನ್ನು ಆಧರಿಸಿ ನಾವು ಚುನಾವಣೆ ಎದುರಿಸಲಿದ್ದೇವೆ. ಕಾಂಗ್ರೆಸ್‍ನವರು ಏನು ಮಾಡ್ತಾರೆ, ಜೆಡಿಎಸ್‍ನವರು ಏನು ಮಾಡ್ತಾರೆ, ಅವರು ಏನು ಮಸಾಲೆ ಅರೀತಾರೆ ಎಂಬುದರ ಆಧಾರದಲ್ಲಿ ನಮ್ಮ ಅಡುಗೆ ತಯಾರಾಗೋಲ್ಲ ಎಂದು ತಿಳಿಸಿದರು.

ನಮ್ಮಲ್ಲಿರುವ ಮಸಾಲೆ ಆಧರಿಸಿ ನಮ್ಮ ಅಡುಗೆ ತಯಾರಾಗುತ್ತದೆ. ಅದನ್ನು ಜನರಿಗೆ ಬಡಿಸುತ್ತೇವೆ ಎಂದರು. ಸಿದ್ದರಾಮಯ್ಯರಿಗೆ ಜನತಾದಳದ ಅಡುಗೆ ಮನೆಗೆ ಇಣುಕಿ ನೋಡುವ, ಇನ್ನೊಬ್ಬರ ಅಡುಗೆ ಮನೆ, ಬೆಡ್‍ರೂಂ ಇಣುಕಿ ನೋಡುವ ಕೆಟ್ಟ ಕಾಯಿಲೆ  ಯಾಕೆ ಬಂತು. ಇದು ಒಳ್ಳೆಯ ಲಕ್ಷಣ ಅಲ್ಲ ಎಂದು ತಿಳಿಸಿದರು.

ಕಾಂಗ್ರೆಸ್, ಜೆಡಿಎಸ್ ನಾಯಕರ ಫೋಟೊ ಹಾಕಿ ನಾವು ಮತ ಕೇಳುವುದಿಲ್ಲ. ನಾವೇನಿದ್ದರೂ ನಮ್ಮ ಅಟಲ್‍ಜಿ, ಅಡ್ವಾಣಿ, ನಮ್ಮ ನರೇಂದ್ರ ಮೋದಿಯವರು, ನಮ್ಮ ಅಮಿತ್ ಶಾ, ಜೆ.ಪಿ.ನಡ್ಡಾ, ಯಡಿಯೂರಪ್ಪ, ನಮ್ಮ ನಳಿನ್‍ಕುಮಾರ್ ಕಟೀಲ್, ನಮ್ಮ ಬಸವರಾಜ ಬೊಮ್ಮಾಯಿ ಅವರ ಫೋಟೊ ಹಾಕಿಕೊಂಡು ಮತ ಕೇಳುತ್ತೇವೆ.  ಸಿದ್ದರಾಮಯ್ಯರಿಗೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ಇಲ್ಲ ಎಂಬುದು ಇದರಿಂದ ವ್ಯಕ್ತವಾಗುತ್ತದೆ ಎಂದರು.

ವಿಜಯೇಂದ್ರ ಅವರಿಗೆ ಹಾನಗಲ್‍ನಲ್ಲಿ ಟಿಕೆಟ್ ಕುರಿತಂತೆ ಕೋರ್ ಕಮಿಟಿ ಚರ್ಚಿಸಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಆ ವಿಷಯಗಳನ್ನು ಹಂಚಿಕೊಳ್ಳಲು ಬಯಸುವುದಿಲ್ಲ. ಮಾಧ್ಯಮಗಳಲ್ಲಿ ಚರ್ಚೆ ಆದ ಎಲ್ಲ ವಿಷಯಗಳನ್ನು ಕೋರ್ ಕಮಿಟಿ ಚರ್ಚೆ ಮಾಡುವುದಿಲ್ಲ ಎಂದು ತಿಳಿಸಿದರು.

ಮುಂಬರುವ ವಿಧಾನಪರಿಷತ್ ಚುನಾವಣೆ, ಸಂಘಟನೆ ಬಲಪಡಿಸಲು ಚಿಂತನಾ ಶಿಬಿರ ನಡೆಸುವ ಕುರಿತು ಚರ್ಚೆ ಮಾಡಲಾಗಿದೆ. ದೀಪಾವಳಿ ನಂತರ ಚಿಂತನ ಶಿಬಿರ ನಡೆಸಲು ನಿರ್ಧರಿಸಲಾಗಿದೆ ಎಂದರು. ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆ ಪೂರ್ವದಲ್ಲಿ, ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ಅಭ್ಯರ್ಥಿ ಆಯ್ಕೆಗೆ ಚುನಾವಣೆ ಸಂದರ್ಭದಲ್ಲಿ ನಿಗದಿತ ರೀತಿಯಲ್ಲಿ ನಾಯಕರ ಪ್ರವಾಸ ನಡೆಯಲಿದೆ ಎಂದು ತಿಳಿಸಿದರು.
Published by:Latha CG
First published: