ಗದಗ: ಪೇಜಾವರ ಶ್ರೀಗಳ (Pejawara Sri Vishweshwara Teertha) ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಾದ ಬ್ರಹ್ಮ ಹಂಸಲೇಖ (Kannada music director writer Hamsalekha) ಅವರ ವಿರುದ್ಧ ಶ್ರೀರಾಮ ಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ (Sri Rama Sene President Pramod Muthalik) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಸಂಲೇಖ ಅವರು ವಿಕೃತಿಯಿಂದ ಮಾತನಾಡಿದ್ದನ್ನ ನೋಡಿದ್ರೆ ಅವರ ಒಳಗೆ ಏನೇನೋ ತುಂಬಿಕೊಂಡಿದೆ. ಸ್ವರ್ಗಸ್ತರಾದ ಪೇಜಾವರ ಶ್ರೀಗಳ ಬಗ್ಗೆ ಮಾತ್ನಾಡಿರೋದು ಎಷ್ಟು ಸರಿ ಎಂದು ಮುತಾಲಿಕ ಪ್ರಶ್ನಿಸಿದರು.
ಅಸ್ಪೃಶ್ಯತೆ (Untouchablility) ಎನ್ನುವುದು ನಮ್ಮ ದೇಶಕ್ಕೆ ದೊಡ್ಡ ಕಳಂಕವಾಗಿದೆ. ಅಂಬೇಡ್ಕರ್ ಇದರ ವಿರುದ್ಧ ಹೋರಾಡಲು ಜೀವನ ಸಮರ್ಪಣೆ ಮಾಡಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಅಸ್ಪೃಶ್ಯತೆ ಹೊಡೆದೋಡಿಸಲು ಬ್ರಾಹ್ಮಣ ಸ್ವಾಮೀಜಿಗಳಾದ ಪೇಜಾವರ ಶ್ರೀಗಳು ಮುಂದಾಗಿದ್ದರು. ಆದರೂ ಸ್ವಾಮಿಗಳು ಮಾಂಸ ತಗೋಬೇಕು ಅಂತಾ ಹಂಸಲೇಖ ಹೇಳಿದ್ದು ಅಂತ್ಯಂತ ಹೀನವಾದದ್ದು ಎಂದು ಶ್ರೀರಾಮಸೇನೆ ಸಂಘಟನೆ ಮುಖ್ಯಸ್ಥರು ಟೀಕಿಸಿದರು.
ಹಂಸಲೇಖಾವರ ಕ್ಷೇತ್ರ ಏನು..? ಅವರು ಮಾತನಾಡಿದ ವಿಷಯ ಏನು? ಅಷ್ಟೇ ಅಲ್ಲದೆ ನಿಮ್ಮ ಹೇಳಿಕೆ ನಂತರ ನಿಮ್ಮ ಹೆಂಡತಿ ಬೈದರು ಅಂತಾ ಹೇಳಿದ್ರಿ. ನಿಮ್ಮ ಹೆಂಡತಿ ನಿಮ್ಮನ್ನ ಒದ್ದು ಹೊರಗೆ ಹಾಕಬೇಕಿತ್ತು ಎಂದು ಮುತಾಲಿಕ ವಾಗ್ದಾಳಿ ನಡೆಸಿದರು.
ಇಷ್ಟು ವಯಸ್ಸಾಗಿದೆ ಏನು ಮಾತನಾಡಬೇಕು ಅನ್ನೋ ಬಗ್ಗೆ ಬುದ್ಧಿ ಇಲ್ವಾ. ಚಪ್ಪಲಿಯಲ್ಲಿ ಹೊಡೆದು ಕ್ಷಮೆ ಕೇಳೋದು ಸರಿಯಲ್ಲ. ನಿಮ್ಮ ಮನಸ್ಸಲ್ಲಿ ಕಸ, ಕಲ್ಮಶ ತುಂಬಿಕೊಂಡಿದೆ. ಮೊದಲು ಕಸ ತೆಗೆದುಹಾಕಿ ಸ್ವಾಮೀಜಿಗಳ ಕೆಲಸವನ್ನ ಸ್ವಾಗತ ಮಾಡಬೇಕು. ಇನ್ನಷ್ಟು ಗೊಂದಲ ಸೃಷ್ಟಿಸುವುದು ಶೋಭಿಸುವಂಥದ್ದಲ್ಲ. ಇನ್ನೊಮ್ಮೆ ಈ ರೀತಿ ಹೇಳಿಕೆ ನೀಡಿದರೆ ತಕ್ಕ ಉತ್ತರ ಕೊಡಬೇಕಾಗುತ್ತೆ ಎಂದು ಖ್ಯಾತ ಚಿತ್ರಸಾಹಿತಿ ಮತ್ತು ಸಂಗೀತ ನಿರ್ದೇಶಕರೂ ಆದ ಹಂಸಲೇಖ ಅವರಿಗೆ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.
ಹಂಸಲೇಖ ಹೇಳಿದ್ದೇನು?
ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮವೊಂದಕ್ಕೆ ಮುಖ್ಯ ಅತಿಥಿಯಾಗಿ ಹೋಗಿದ್ದಾಗ ವಿವಾದಾತ್ಮಕ ಹೇಳಿಕೆ ನೀಡಿದ್ದರು. “ಪೇಜಾವರ ಸ್ವಾಮಿಗಳು ದಲಿತರ ಮನೆಗೆ ವಾಸ್ತವ್ಯಕ್ಕೆ ಹೋಗಿದ್ದಾರೆ ಅಂತ ಸ್ಟೇಟ್‌ಮೆಂಟ್ ಬಂದಿದೆ. ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋಗಿ ಅಲ್ಲಿ ಕುಳಿತುಕೊಳ್ಳಬಹುದಷ್ಟೇ, ಅವರು ಕೋಳಿ ಕೊಟ್ಟರೆ ತಿನ್ನೋಕೆ ಆಗುತ್ತದೆಯೇ..? ಕೋಳಿ ಬೇಡ, ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ತಿಂತಾರಾ..? ಲಿವರ್ ಫ್ರೈ ತಿಂತಾರಾ, ಆಗತ್ತಾ..? ಅಂದರೆ, ದಲಿತರ ಮನೆಗೆ ಹೋಗೋದು ಏನ್ ದೊಡ್ಡ ವಿಷ್ಯಾ ಅಂತ ನಂಗ್ ಅನ್ನಿಸ್ತು” ಅಂತ ಹೇಳಿಕೆ ನೀಡಿದ್ದರು.
ಇಷ್ಟೇ ಅಲ್ಲದೆ “ದಲಿತರನ್ನು ಬಲಿತರು (ಮೇಲ್ಜಾತಿಯವರು) ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಬೇಕು. ಅವರ ಮನೆಯಲ್ಲಿ ಊಟ ಹಾಕಬೇಕು, ದಲಿತರು ಮುಟ್ಟಿದ ಲೋಟಗಳನ್ನು ನಾವು ತೊಳೆಯುತ್ತೀವಿ ಎಂದು ಬಲಿತರು ಹೇಳಬೇಕು' ಎಂದು ಹಂಸಲೇಖ ಹೇಳಿದ್ದರು.
ಬಿಳಿಗಿರಿರಂಗ ರಾತ್ರಿಯ ಹೊತ್ತು ದಲಿತರ ಮನೆಯ ಮಗಳನ್ನ ರಮಿಸಿ ಬೆಳಗ್ಗೆ ಮಾಯವಾಗುತ್ತಿದ್ದನಂತೆ. ಬೆಳಗಿನ ಹೊತ್ತು ದಲಿತ ಹುಡುಗಿಯನ್ನ ದೇವಸ್ಥಾನಕ್ಕೆ ಯಾಕೆ ಸೇರಿಸಿಕೊಳ್ಳಲಿಲ್ಲ ಎಂದೂ ಬಿಳಿಗಿರಿ ರಂಗ ಸ್ವಾಮಿಯ ಬಗ್ಗೆ ಹಂಸಲೇಖ ವ್ಯಂಗ್ಯವಾಡಿದ್ದರು.
ಕ್ಷಮೆ ಯಾಚಿಸಿದ ಹಂಸಲೇಖ:
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹಂಸಲೇಖ ಕ್ಷಮೆ ಕೇಳಿದ್ದಾರೆ. ಕ್ಷಮೆ ಕೇಳಿರುವ ವಿಡಿಯೋವನ್ನು ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. 'ಮೊದಲಿಗೆ ಕ್ಷಮೆ ಇರಲಿ, ಎರಡನೇದಾಗಿಯೂ ಕ್ಷಮೆ ಇರಲಿ.. ಎಲ್ಲ ಮಾತುಗಳು ವೇದಿಕೆಗೆ ಅಲ್ಲ ಅನ್ನೋದು ನನಗೆ ಗೊತ್ತಿದೆ, ತಪ್ಪು. ಅದು ಒಂದು ಪ್ರಶಸ್ತಿ ಪುರಸ್ಕಾರ ಸಭೆ ಅದು. ಆ ವೇದಿಕೆ ಮೇಲೆ ನುಡಿದರೆ ಮುತ್ತಿನ ಹಾರದಂತೆ ಇರಬೇಕು ಎನ್ನುವಂತೆ ಇರಬೇಕಿತ್ತು. ನಾನು ಹಾಗೇ ಅಲಂಕರಿಸಬೇಕಿತ್ತು, ತಪ್ಪು. ಅಸ್ಪೃಶ್ಯತೆ ನಮ್ಮ ದೇಶಕ್ಕೆ ಅಂಟಿದ ಶಾಪ. ಅಸ್ಪೃಶ್ಯತೆಯ ಅನಿಷ್ಟವನ್ನು ತೊಡೆದು ಹಾಕೋದಕ್ಕೆ ಪೇಜಾವರ ಶ್ರೀಗಳು ಸೇರಿದಂತೆ ಎಲ್ಲ ಗುರು-ಹಿರಿಯರು ಪ್ರಯತ್ನ, ಸಂಧಾನಗಳನ್ನು ಮಾಡುತ್ತಲೇ ಇದ್ದಾರೆ. ಆ ಪ್ರಯತ್ನ, ಸಂಧಾನಗಳ ಬಗ್ಗೆ ನನಗೆ ಅಪಾರವಾದ ಗೌರವ ಇದೆ.
“ನಾನು ಅಲ್ಲಿ ಆಡಿದ ಕೆಲ ಮಾತುಗಳು ನನ್ನ ಹೆಂಡತಿಗೂ ಇಷ್ಟವಾಗಲಿಲ್ಲ. ಆಕೆಯ ಕ್ಷಮೆಯನ್ನೂ ನಾನು ಕೇಳಿದ್ದೇನೆ. ನಾನು ಸಂಗೀತಗಾರ. ನನಗ್ಯಾಕೆ ಈ ಟ್ರೋಲ್. ಕಂಟ್ರೋಲ್ ಆಗಿರುವುದಷ್ಟೇ ನಮ್ಮ ಕೆಲಸ. ಯಾರ ಮನಸ್ಸನ್ನು ನೋಯಿಸುವ ಇಷ್ಟವಿಲ್ಲ. ನನ್ನ ಸಂಗೀತ ಹೇಗೆ ಎಲ್ಲರಿಗೂ ಸುಖ ಕೊಡುತ್ತದೆಯೋ, ನನ್ನ ಮಾತು, ಬದುಕು ಕೂಡ ಎಲ್ಲರಿಗೂ ಸುಖ ಕೊಡಬೇಕು. ನನ್ನ ಮಾತುಗಳಿಂದ ನಿಮ್ಮ ಮಸನ್ಸುಗಳಿಗೆ ತಪ್ಪಾಗಿದ್ದಾರೆ ಕ್ಷಮಿಸಿ” ಎಂದು ಹಂಸಲೇಖ ಹೇಳಿದ್ದಾರೆ.
ಇದನ್ನೂ ಓದಿ: Hamsalekha : ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ: ಕೊನೆಗೂ ಕ್ಷಮೆಯಾಚಿಸಿದ `ನಾದ ಬ್ರಹ್ಮ’!
ಕೋಲಾರದಲ್ಲಿ ಗೋದ್ರಾದಂಥ ದುರಂತ ಸ್ವಲ್ಪದರಲ್ಲಿ ತಪ್ಪಿತು:
ಇನ್ನು ಗುಜರಾತ್ನ ಗೋದ್ರಾ ಮಾದರಿಯಲ್ಲಿ ಕೋಲಾರದಲ್ಲಿ ದತ್ತ ಮಾಲಾ ಧಾರಿಗಳ ಮೇಲಾಗಲಿದ್ದ ದಾಳಿಯನ್ನ ಪೊಲೀಸರು ತಡೆದ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಮೋದ್ ಮುತಾಲಿಕ್, ದತ್ತಮಾಲಾ ಧಾರಿಗಳ ಮೇಲಿನ ದಾಳಿ ಘಟನೆಯನ್ನು ಬಲವಾಗಿ ಖಂಡಿಸಿದರು.
27 ಜನರಿದ್ದ ಮಿನಿ ಬಸ್ ಸುಡಲು ದುಷ್ಕರ್ಮಿಗಳು ಯತ್ನಿಸಿದ್ರು. ಈ ರೀತಿಯ ಕಿಡಿಗೇಡಿಗಳ ಕೆಲಸ ಸಹಿಸಿಕೊಂಡು ಹಿಂದೂ ಸಮಾಜ ಸುಮ್ಮನೆ ಕೂರಲ್ಲ. ತ್ರಿಪುರಾದಲ್ಲಾದ ಗಲಾಟೆಗೆ ಕೆಲವರು ಹಾವೇರಿ ಜಿಲ್ಲೆಯ ಸವಣೂರುನಲ್ಲಿ ಪ್ರತಿಭಟಿಸಿದರು. ಆಯ್ತು ಪ್ರತಿಭಟನೆ ಮಾಡಿ. ಆದ್ರೆ, ಆರ್ ಎಸ್ ಎಸ್ ನಾಯಿಗಳಿಗೆ ಗುಂಡು ಹೊಡೀತಿವಿ ಅಂತಾ ಹೇಳಿದ್ದಾರೆ. ಆರ್ ಎಸ್ ಎಸ್ ನಿಮಗೇನು ಮಾಡಿದೆ? ಹಿಂಸೆಯಲ್ಲಿ ಅವರು ತೊಡಗಿಲ್ಲ. ಈ ರೀತಿ ಮಾಡೋದು ನೋಡಿದ್ರೆ, ಕರ್ನಾಟದಲ್ಲಿ ಗಲಭೆ ಸೃಷ್ಟಿಸುವ ಪ್ರಯತ್ನ ನಡೆದಿದೆ ಅನಿಸುತ್ತೆ. ಇಂತಹ ಕಿಡಿಗೇಡಿಗಳನ್ನ ಹದ್ದುಬಸ್ತಿನಲ್ಲಿ ಇಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮುತಾಲಿಕ್ ಆಗ್ರಹಿಸಿದರು.
ಇದನ್ನೂ ಓದಿ: Darshan Fans- ದರ್ಶನ್ ಅಭಿಮಾನಿಗಳಿಂದ ನನ್ನ ಕಿವಿ ಹಾಳಾಯ್ತು: ಸಾಹಿತಿ ಗೊ.ರು.ಚ. ಬೇಸರ
ರಾಜ್ಯ ಸರ್ಕಾರ ಕ್ರಮ ಕೈಗೊಳದಿದ್ರೆ ನಾವು ಕಿಡಗೇಡಿಗಳಿಗೆ ಉತ್ತರ ಕೊಡಬೇಕಾಗುತ್ತದೆ. ನಾವು ತಿರುಗಿ ಉತ್ತರ ಕೊಟ್ಟರೆ ನೀವು ಪಾಕಿಸ್ತಾನದವರೆಗೆ ಓಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ ಅವರು, ಬಾಯಿ ಮುಚ್ಕೊಂಡು ಹಿಂದೂ ಸಮಾಜವನ್ನ ಗೌರವಿಸಿ ಸಂವಿಧಾನಾತ್ಮಕವಾಗಿರಬೇಕು ಎಂದು ಒತ್ತಾಯಿಸಿದರು.
ದತ್ತಮಾಲಾ ಧಾರಿಗಳ ಮೇಲಿನ ಹಲ್ಲೆ ಖಂಡಿಸಿ ನಾಳೆ ಕೋಲಾರ್ ಬಂದ್ ಕರೆ ನೀಡಲಾಗಿದೆ. ನಾಳೆಯ ಕೋಲಾರ ಬಂದ್ ನಲ್ಲಿ ನಾನೂ ಭಾಗಿಯಾಗಲಿದ್ದೇನೆ. ಈ ಬಂದ್ಗೆ ಕೋಲಾರ ಜನರು ಸಹಕಾರ ಕೊಡಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥರು ಮನವಿ ಮಾಡಿಕೊಂಡರು.
ವರದಿ: ಸಂತೋಷ ಕೊಣ್ಣೂರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ