Karnataka Politics - ಸವದಿ ಆಪ್ತ ಹಾಲಪ್ಪ ಆಚಾರ್​ಗೆ ಈ ಬಾರಿಯಾದರೂ ದಕ್ಕೀತೇ ಮಂತ್ರಿಪಟ್ಟ?

ಬಿಎಸ್ ಯಡಿಯೂರಪ್ಪನವರ ಮೊದಲ ಸಂಪುಟ ರಚನೆಯ ವೇಳೆಯೇ ಕೊಪ್ಪಳದ ಯಲಬುರ್ಗ ಶಾಸಕ ಹಾಲಪ್ಪ ಆಚಾರ್​ಗೆ ಸಚಿವ ಸ್ಥಾನ ಸಿಗಬೇಕಿತ್ತು. ಈಗಲಾದರೂ ಅವರಿಗೆ ಮಂತ್ರಿಪಟ್ಟ ದಕ್ಕಬಹುದು ಎಂಬ ನಿರೀಕ್ಷೆಗಳು ಹುಟ್ಟಿವೆ.

ಹಾಲಪ್ಪ ಆಚಾರ್

ಹಾಲಪ್ಪ ಆಚಾರ್

  • Share this:
ಕೊಪ್ಪಳ: ಜಿಲ್ಲೆಯ ಲಕ್ಕಿ ಕ್ಷೇತ್ರ ಎನಿಸಿಕೊಂಡಿರುವ ಕನಕಗಿರಿಗೆ ಈ ಸಲವೂ ಲಕ್ ಹೊಡೆದು ಕೊನೆಗೆ ಕೈ ಬಿಟ್ಟಿದೆ. ಕೆಲವು ಗಂಟೆಗಳ ಮಟ್ಟಿಗಾದರೂ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸೂಗೂರು ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷರಾಗಿ ಕಾಗದದಲ್ಲಿ ಉಳಿದುಕೊಂಡಿದ್ದರು. ಹಾಗೆಯೇ ಗಂಗಾವತಿ ಪರಣ್ಣ ಮುನವಳ್ಳಿಯವರು ಸಹ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಆ ವೇಳೆ ಹಿರಿಯ, ಸಜ್ಜನ ಹಾಗೂ ಮುತ್ಸದ್ಧಿ ರಾಜಕಾರಣಿ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಅವರು ಸಚಿವರಾಗುವ ಹಾದಿ ಸುಗಮವಾಯಿತು ಎಂಬೆಲ್ಲ ಲೆಕ್ಕಾಚಾರಗಳು ನಡೆದಿದ್ದವು. ಕೆಲವೇ ಗಂಟೆಗಳಲ್ಲಿ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿಯಲ್ಲಿದ್ದ ಶಾಸಕರಾದ ಬಸವರಾಜ ದಢೆಸೂಗೂರು ಹಾಗೂ ಪರಣ್ಣ ಮುನವಳ್ಳಿ ಸೇರಿ ನಾಲ್ವರನ್ನು ಕೈಬಿಡಲಾಯಿತು. ಇದು ವಾಸ್ತವವಾಗಿ ರಾಜತಾಂತ್ರಿಕ ಕಾರಣವಾದರೂ ಬರೀ ತಾಂತ್ರಿಕ ಕಾರಣ ಎನ್ನಲಾಯಿತು. 

ಜಿಲ್ಲೆಗಿಲ್ಲ ಪ್ರಾತಿನಿಧ್ಯ:

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಪ್ರತಿ ಬಾರಿಯೂ ಸಚಿವ ಸ್ಥಾನದ ವಿಷಯದಲ್ಲಿ ಜಿಲ್ಲೆಗೆ ಸರಿಯಾದ ಪ್ರಾತಿನಿಧ್ಯ ಸಿಕ್ಕಿಲ್ಲ. 2008ರಿಂದ 2013ರವರೆಗೆ ಬಿಜೆಪಿ ಸರಕಾರಕ್ಕೆ ಬಹುಮತವಿತ್ತು. ಶಿವರಾಜ ತಂಗಡಗಿ ಪಕ್ಷೇತರರಾಗಿ ಗೆದ್ದು ಬಿಜೆಪಿ ಜೊತೆ ಕೈ ಜೋಡಿಸಿದ್ದಕ್ಕೆ ಸಚಿವರಾಗಿದ್ದರು. ಆನಂತರ ತಂಗಡಗಿಯವರು ಕಮಲದೊಂದಿಗೆ ಕಲಹ ನಡೆಸಿ ಅನರ್ಹರಾಗಿದ್ದು, ಕೊನೆಗೆ ಅರ್ಹತೆ ಗಳಿಸಿದರು. ಆಗ ಜಿಲ್ಲೆಯ ಉಸ್ತುವಾರಿ ಸಿಕ್ಕಿದ್ದು ಪರ ಜಿಲ್ಲೆಗಳ ಜನಪ್ರತಿನಿಧಿಗಳಿಗೆ. ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಸೇರಿದಂತೆ ಹಲವರು ಕೊಪ್ಪಳ ಜಿಲ್ಲೆಯ ಉಸ್ತುವಾರಿ ವಹಿಸಿದ್ದರು.

ಇದನ್ನೂ ಓದಿ: ಮಕ್ಕಳಿಗೆ ಆನ್​ಲೈನ್ ಶಿಕ್ಷಣ ನೀಡಲು ತಾಳಿ ಮಾರಿದ ಮಹಿಳೆಗೆ 50 ಸಾವಿರ ರೂಪಾಯಿ ನೀಡಿದ ಶಾಸಕ ಜಮೀರ್ ಅಹ್ಮದ್

2018ರಲ್ಲಿ ಸಮ್ಮಿಶ್ರ ಸರಕಾರ ರಚನೆಯಾಗಿದ್ದರಿಂದ ಅಮರೇಗೌಡ ಬಯ್ಯಾಪುರ ಹೆಸರು ಚಾಲ್ತಿಯಲ್ಲಿತ್ತು. ಆದರೆ ಮೈತ್ರಿ ಸರಕಾರವನ್ನ ಕೆಡವಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಈಗ ಜಿಲ್ಲೆಯಲ್ಲಿ ಮೂವರು ಬಿಜೆಪಿ ಪ್ರತಿನಿಧಿಸಿ ಶಾಸಕ ಸ್ಥಾನ ಗಳಿಸಿದವರಿದ್ದಾರೆ. ಸರಕಾರ ಅಸ್ತಿತ್ವಕ್ಕೆ ಬಂದ ವೇಳೆಯೇ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಹೆಸರು ಮಂತ್ರಿಪಟ್ಟಿಯಲ್ಲಿತ್ತು. ಆದರೆ ಸಚಿವ ಸ್ಥಾನ ಹಾಲಪ್ಪ ಆಚಾರ್ ಅವರಿಗೆ ದಕ್ಕಲಿಲ್ಲ. ಸದ್ಯದ ರಾಜ್ಯದ ರಾಜಕೀಯ ಬೆಳವಣಿಗೆಗಳನ್ನ ಗಮನಿಸಿದರೆ ಹಾಲಪ್ಪ ಆಚಾರ್ ಅವರು ಮಂತ್ರಿಯಾದರೂ ಅಚ್ಚರಿ ಇಲ್ಲ.

ಆಚಾರ್ ಪರ ಸವದಿ ಬ್ಯಾಟಿಂಗ್!:

ಯಲಬುರ್ಗಾ ಕ್ಷೇತ್ರದ ಶಾಸಕ ಹಾಲಪ್ಪ ಆಚಾರ್ ಅವರಿಗೆ ಮಂತ್ರಿ ಪಟ್ಟ ಕೊಡಿಸಲು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ಲಕ್ಷ್ಮಣ ಸವದಿ ಮುಂಬರುವ ಚುನಾವಣೆಯಲ್ಲಿ ತಮ್ಮ ಕುಟುಂಬದವರೊಬ್ಬರಿಗೆ ಯಲಬುರ್ಗಾ ಟಿಕೆಟ್ ಗಿಟ್ಟಿಸುವ ಯೊಚನೆಯಲ್ಲಿದ್ದು, ಹಾಲಪ್ಪ ಆಚಾರ್ ಅವರನ್ನು ಈ ಬಾರಿ ಮಂತ್ರಿಯನ್ನಾಗಿ ಮಾಡಿದರೆ ಮುಂದಿನ ಚುನಾವಣೆಗೆ ಕುಟುಂಬದ ಹಾದಿ ಸರಳ ಎನ್ನುವುದು ಸವದಿ ಸಾಹೇಬರ ಲೆಕ್ಕಾಚಾರ ಎನ್ನಲಾಗಿದೆ. ಆದರೆ ಸವದಿಯವರು ಸರಕಾರಕ್ಕೆ ವರ್ಷ ತುಂಬಿದ ಸಂಭ್ರಮದಲ್ಲಿ ಭಾಗಿಯಾಗುವುದನ್ನು ಬಿಟ್ಟು ದೆಹಲಿಯಲ್ಲಿ ಪರೇಡ್ ಮಾಡಿದ್ದರಿಂದ ಸಿಎಂ ಯಡಿಯೂರಪ್ಪ ಕೋಪಗೊಂಡಿದ್ದಾರೆ. ಹಾಗಾಗಿ ಸವದಿ ಇಕ್ಕಟ್ಟಿನಲ್ಲಿ ಸಿಲುಕಿದ್ದು, ಹಾಲಪ್ಪ ಆಚಾರ್ ಅವರ ಸಚಿವ ಸ್ಥಾನಕ್ಕೂ ಬಿಕ್ಕಟ್ಟು ತಂದಿಟ್ಟಿದ್ದಾರೆ ಎಂಬ ಮಾತಿದೆ.

ಇದನ್ನೂ ಓದಿ: Karnataka Dam Water Level: ಆಗಸ್ಟ್​ ಬಂದರೂ ಸುರಿಯುತ್ತಿಲ್ಲ ಮಳೆ; ಇಂದಿನ ಜಲಾಶಯಗಳ ನೀರಿನ ಮಟ್ಟ ಹೀಗಿದೆ

ತಮ್ಮ ಮತ್ತು ಸವದಿ ನಡುವಿನ ಸ್ನೇಹದ ಬಗ್ಗೆ ಶಾಸಕ ಹಾಲಪ್ಪ ಆಚಾರ್ ಹೀಗೆ ಹೇಳುತ್ತಾರೆ: “ಬಿಜೆಪಿಯಿಂದ ಆಯ್ಕೆಯಾದ ಪ್ರತಿ ಶಾಸಕನೂ ಸಚಿವ ಸ್ಥಾನದ ಆಕಾಂಕ್ಷಿಯೇ. ಅವರಲ್ಲಿ ನಾನೂ ಒಬ್ಬ. ನಮ್ಮದು ಶಿಸ್ತಿನ ಪಕ್ಷ. ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಲಕ್ಷ್ಮಣ ಸವದಿಯೊಂದಿಗೆ ಸುಮಾರು 15 ವರ್ಷಗಳ ಗೆಳೆತನ ಬಾಂಧವ್ಯ ಇದೆ. ನಮ್ಮ ಸಾಮರಸ್ಯ ಕದಡಲು ಹುಳಿ ಹಿಂಡುವ ಮನಸ್ಥಿತಿಯವರು ಏನನ್ನಾದರೂ ಹೇಳುತ್ತಾರೆ. ಊಹಾಪೋಹಗಳಿಗೆ ಯಾರೂ ಕಿವಿಗೊಡಬೇಕಿಲ್ಲ.”

ಕಳೆದ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಹಾಲಪ್ಪ ಆಚಾರ್ ಅವರು ಸಹ ಸಿಎಂ ಕಿವಿಗೆ ಏನನ್ನೂ ಹಾಕದೇ ದೆಹಲಿಗೆ ಹೋಗಿ ಬಂದಿದ್ದರಿಂದ ಯಡಿಯೂರಪ್ಪ ಬಿಸಿಯಾಗಿದ್ದರು. ಕೆಲ ದಿನಗಳವರೆಗೆ ಮುನಿಸಿಕೊಂಡಿದ್ದ ಯಡಿಯೂರಪ್ಪ ಆನಂತರ ಹಾಲಪ್ಪ ಆಚಾರ್ ಅವರ ಕುಟುಂಬದ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಯಾಕೆಂದರೆ ಯಡಿಯೂರಪ್ಪ ಶೀಘ್ರ ಕೋಪಿ, ದೀರ್ಘ ದ್ವೇಷಿಯಲ್ಲ ಎಂಬ ಮಾತುಗಳಿವೆ!

ವರದಿ: ಬಸವರಾಜ ಕರುಗಲ್
Published by:Vijayasarthy SN
First published: