ಮೈಸೂರು(ಜುಲೈ.23): ಸಿದ್ದರಾಮಯ್ಯನವರೇ ನೀವು ವಿಧಾನಸಭೆಯಲ್ಲಿ ನಿಂತು ಲೆಕ್ಕ ಕೇಳಿ. ಅದಕ್ಕೆ ಲೆಕ್ಕಪತ್ರ ಸಮಿತಿ ಇದೆ. ಯಾವ ಗ್ರಾಮ ಪಂಚಾಯತ್ ಸದಸ್ಯನು ಈ ತರ ಬೀದಿಯಲ್ಲಿ ನಿಂತು ಲೆಕ್ಕ ಕೇಳುವುದಿಲ್ಲ. ಅವರು ಬರಿ ರಾಜಕಾರಣ ಮಾಡುತ್ತಾರೆ ಅಷ್ಟೇ. ಸಿಎಂ ಆಗಿದ್ದವರು ಆಯವ್ಯಯ ಬಗ್ಗೆ ಗೊತ್ತಿರುವವರು ಈ ರೀತಿ ಮಾತನಾಡಬಹುದಾ? ಲೆಕ್ಕ ಎಲ್ಲೂ ಹೋಗುವುದಿಲ್ಲ ನಿಧಾನವಾಗಿ ಕೇಳಿ ಎಂದು ಸಿದ್ದರಾಮಯ್ಯಗೆ ಎಂಎಲ್ಸಿ ಹೆಚ್ ವಿಶ್ವನಾಥ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ಗೆ ನನ್ನನ್ನ ಸಾಹಿತ್ಯ ವಲಯದಿಂದ ಆಯ್ಕೆ ಮಾಡಿದ್ದು, ನನ್ನ ರಾಜಕೀಯ ಸಾಹಿತ್ಯವನ್ನ ಗೌರವಿಸಿದ್ದಾರೆ. ಇದು ನನಗೆ ಸಂತೋಷ ತಂದಿದೆ. ವಿಧಾನಪರಿಷತ್ ಆಯ್ಕೆ ಆಗಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಇದು ಅಧಿಕಾರ ಅಲ್ಲ ಜವಾಬ್ದಾರಿ ನಿರ್ವಹಿಸಲು ಸಿಕ್ಕ ಅವಕಾಶ. ಕನ್ನಡ ಭಾಷೆ, ಸಂಸ್ಕೃತಿ, ಹಾಗೂ ಅಪಾರ ಸಾಹಿತ್ಯದ ಕಡೆಗೆ ನನ್ನ ಆದ್ಯತೆ. ನನ್ನ ಆಯ್ಕೆಗೆ ಯಾವುದೇ ತಾಂತ್ರಿಕ ಅಡೆತಡೆ ಇಲ್ಲ. ನಾವು ಚುನಾವಣೆಗೆ ಸ್ಪರ್ಧಿಸಿ ಸೋತಾಗಲೇ ನಾವು ಅರ್ಹರಾಗಿದ್ದೇವೆ. ಈಗ ಕಾನೂನಿನ ತೋಡಕು ಇಲ್ಲ ಎಂದರು.
ನನ್ನ ಜೊತೆ ಇದ್ದವರಿಂದಲೇ ಮೈತ್ರಿ ಸರ್ಕಾರ ಬಿದ್ದಿದೆ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರಕ್ಕೆ ಪ್ರತ್ರಿಕ್ರಿಯೆ ನೀಡಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅರ್ಧ ಸತ್ಯ ಮಾತ್ರ ಹೇಳಿದ್ದಾರೆ. ಇನ್ನು ಅರ್ಧ ಸತ್ಯವನ್ನ ಅವರೇ ಹೇಳಬೇಕು. ಆಗ ಎಲ್ಲರಿಗು ಗೊತ್ತಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಕೋವಿಡ್ ಬಿಕ್ಕಟ್ಟಿನಲ್ಲಿ ಭ್ರಷ್ಟಾಚಾರ: ಸರ್ಕಾರದಿಂದ 2,000 ಕೋಟಿ ಅವ್ಯವಹಾರ: ಸಿದ್ದರಾಮಯ್ಯ ಆರೋಪ
ಹೆಚ್.ವಿಶ್ವನಾಥ್ ರಾಜಕೀಯ ಅಂತ್ಯ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜಕಾರಣಕ್ಕೆ ಅಂತ್ಯವೇ ಇಲ್ಲ. ಇದು ನಮ್ಮಲ್ಲಿ ಮಾತ್ರವಲ್ಲ ಜಗತ್ತಿನಲ್ಲೆ ಎಲ್ಲೂ ರಾಜಕೀಯಕ್ಕೆ ಅಂತ್ಯ ಇಲ್ಲ. ಉಸಿರು ಇರುವ ತನಕ ರಾಜಕಾರಣ ಮಾಡಬಹುದು. ಇದು ವಯಸ್ಸಿನ ಲೆಕ್ಕ ಅಲ್ಲ. ನನ್ನ ಅನುಭವಕ್ಕೆ ನನ್ನ ಸಾಹಿತ್ಯಕ್ಕೆ ಗೌರವ ಸಿಕ್ಕ ಗೌರವ. ಹಾಗಾಗಿ ಇದನ್ನ ಸಂತೋಷದಿಂದ ಸ್ವೀಕರಿಸುತ್ತೇನೆ. ಯಾರು ಸಹ ಯಾರ ರಾಜಕಾರಣವನ್ನ ಮುಗಿಸುವುದಿಲ್ಲ. ಅದನ್ನ ನಿರ್ಧಾರ ಮಾಡುವುದು ಜನಶಕ್ತಿ ಮಾತ್ರ ಎಂದರು.
ವಿಶ್ವನಾಥ್ ಛಲಬಿಡದ ತ್ರಿವಿಕ್ರಮ: ಶ್ರೀನಿವಾಸ್ ಪ್ರಸಾದ್
ವಿಶ್ವನಾಥ ಛಲಬಿಡದ ತ್ರಿವಿಕ್ರಮ. ಈಗ ಅಟ್ಟಕ್ಕೆ ಏರಿದ್ದಾರೆ. ಸ್ವರ್ಗಕ್ಕೆ ಏರಿಬೇಕಿದೆ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಮಾಧ್ಯಮದವರ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಎಂಎಲ್ ಸಿ ಆಗುತ್ತಿದ್ದಂತೆ ಹೆಚ್.ವಿಶ್ವನಾಥ್ ಇಂದು ಸಂಸದ ಶ್ರೀನಿವಾಸ್ ಪ್ರಸಾದ್ ರನ್ನ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಹೆಚ್.ವಿಶ್ವನಾಥ್ ಗೆ ಸಂಸದ ಶ್ರೀನಿವಾಸ್ ಪ್ರಸಾದ್ ಶುಭಹಾರೈಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ