ಚಾಮರಾಜನಗರ(ಆಗಸ್ಟ್ 29): ಟಿಪ್ಪು ಸುಲ್ತಾನ್ ಕುರಿತು ಮಾಜಿ ಸಚಿವ ವಿಶ್ವನಾಥ್ ಅವರದ್ದು ವೈಯಕ್ತಿಕ ಅಭಿಪ್ರಾಯವೇ ಹೊರತು ಬಿಜೆಪಿಯ ಅಭಿಪ್ರಾಯವಲ್ಲ. ಅವರಿಗೆ ಮಾತನಾಡುವ ಸ್ವಾತಂತ್ರ್ಯವಿದೆ. ಆದರೆ ಬಿಜೆಪಿಯ ನಾಯಕರಾಗಿ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಮಾತನಾಡುವ ಮುನ್ನ ಪಕ್ಷದ ನಿಲುವೇನು ಎಂಬುದನ್ನ ಯೋಚಿಸಬೇಕಿತ್ತು ಎಂದು ಎಂಎಲ್ಸಿ ಹೆಚ್. ವಿಶ್ವನಾಥ್ ಅವರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬುದ್ಧಿಮಾತು ಹೇಳಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಅವರು, ಒಂದು ಬಾರಿ ಪಕ್ಷಕ್ಕೆ ಸೇರಿದ ಮೇಲೆ ಇಲ್ಲಿನ ತತ್ವ ಸಿದ್ಧಾಂತಗಳನ್ನ ಒಪ್ಪಿಕೊಂಡು ಕಾರ್ಯನಿರ್ವಹಿಸಬೇಕು. ಹೆಚ್. ವಿಶ್ವನಾಥ್ ಪ್ರಬುದ್ದರಿದ್ದಾರೆ. ಈ ರೀತಿ ಮಾತನಾಡುವಾಗ ಯಾವ ಪಕ್ಷದಲ್ಲಿದ್ದೇನೆ ಅನ್ನುವುದನ್ನ ಯೋಚನೆ ಮಾಡಿ ಮಾತನಾಡಿದರೆ ಒಳಿತು ಎಂದು ಪರೋಕ್ಷವಾಗಿ ಹಿರಿಯ ನಾಯಕರಿಗೆ ಎಚ್ಚರಿಕೆ ಕೊಟ್ಟರು.
ವಿಶ್ವನಾಥ್ ಅವರ ಸ್ವಭಾವವೇ ಹಾಗೇ. ಯಾವುದಾದರೂ ವಿಚಾರ ಬಂದರೆ ಮುನ್ನುಗ್ಗಿ ಮಾತನಾಡುತ್ತಾರೆ. ಅವರ ಯಾವುದೋ ಒಂದು ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗುವುದಿಲ್ಲ ಎಂದು ಸುರೇಶ್ ಕುಮಾರ್ ತಿಳಿಸಿದರು.
ಇದನ್ನೂ ಓದಿ: ಆಲಮಟ್ಟಿ ಜಲಾಷಯ ಈ ವರ್ಷ ಮೊದಲ ಬಾರಿ ಭರ್ತಿ; ಹೊರಗೆ ಬಿಟ್ಟ ನೀರಿನ ಲೆಕ್ಕ ಕೇಳಿದರೆ ಆಗುತ್ತೆ ಅಚ್ಚರಿ
ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿಶ್ಚನಾಥ್ ಅವರಿಗೆ ಅನುಭವವಿದೆ. ಆದರೆ ಅವರು ಸಚಿವರಾಗುವುದು ಕಾನೂನಿಗೆ ಬಿಟ್ಟ ವಿಚಾರ. ಕಾನೂನು ಪಂಡಿತರು ಅದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವ ಮೂಲಕ ಸಚಿವ ವಿಶ್ವನಾಥ್ಗೆ ಮಂತ್ರಿಗಿರಿ ಸಿಗುವುದಕ್ಕೆ ಕಾನೂನು ತೊಡಕಿದೆ ಎಂಬುದನ್ನು ಪರೋಕ್ಷವಾಗಿ ಹೇಳಿದರು.
ಕನ್ನಡದ ಆಸ್ಮಿತೆಗೆ ಧಕ್ಕೆ ಮಾಡಿದರೆ ಸಹಿಸುವುದಿಲ್ಲ: ಎಂಇಎಸ್ಗೆ ಎಚ್ಚರಿಕೆ
ಬೆಳಗಾವಿಯ ವಿಚಾರದಲ್ಲಿ ಕನ್ನಡದ ವಿರುದ್ಧ, ಹಾಗು ಕನ್ನಡ ಅಸ್ಮಿತೆಯ ವಿರುದ್ಧ ಮಾತನಾಡಿದರೆ ಯಾರು ಸಹಿಸುವುದಿಲ್ಲ ಎಂದು ಎಂಇಎಸ್ಗೆ ಶಿಕ್ಷಣಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. ನಮ್ಮ ಜನರ ಭಾವನೆಯನ್ನ ಅರಿತು ಈ ಮಾತನ್ನ ಹೇಳುತ್ತಿದ್ದೇನೆ. ಬೆಳಗಾವಿಯ ನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಿದ್ದು ನಾನೇ ಎಂಬುದು ಅವರಿಗೆ ನೆನಪಿರಲಿ ಎಂದರು.
ಇದನ್ನೂ ಓದಿ: ‘ಕೊಟ್ಟವ ಕೋಡಂಗಿ, ಇಸ್ಕೊಂಡವ ಈರಭದ್ರ’ – ಜಿಎಸ್ಟಿ ವಿಚಾರದಲ್ಲಿ ಕೇಂದ್ರದ ವಿರುದ್ಧ ಹೆಚ್ಡಿಕೆ ಆಕ್ರೋಶ
ನೆಲ, ಜಲ ಭಾಷೆಯ ಬಗ್ಗೆ ಮಾತನಾಡಿದರೆ ಎಂಇಎಸ್ ಪಕ್ಷಕ್ಕೆ ಒಳ್ಳೆಯದಲ್ಲ. ಎಂಇಎಸ್ ಪಕ್ಷ ತನ್ನ ಹಳೆಯ ಕಾಲದ ಚಿಂತನೆಯಲ್ಲಿದೆ. ತನ್ನ ಹಳೆಯ ಚಾಳಿಯನ್ನು ಅದು ಬಿಡಬೇಕು. ಅವರ ಉದ್ದಟತನವನ್ನ ಬೆಳಗಾವಿಯ ಯುವ ಜನತೆ ಸಹಿಸುವುದಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.
ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಕೇಸ್ ದಾಖಲಾಗಿದೆ. ಸರ್ಕಾರ ಇದನ್ನು ಪರಾಮರ್ಶೆ ಮಾಡಲಿದೆ ಎಂದು ಹೇಳುವ ಮೂಲಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕನ್ನಡಿಗರ ಮೇಲೆ ಹಾಕಿರುವ ಕೇಸ್ ವಾಪಸ್ ತೆಗೆದುಕೊಳ್ಳುವ ಸುಳಿವು ನೀಡಿದರು.
ಇದನ್ನೂ ಓದಿ: ಕಲಬುರ್ಗಿಯಲ್ಲಿ ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು; ಕುಖ್ಯಾತ ರೌಡಿ ಮಿರ್ಜಾ ಫಯೀಮ್ ಬೇಗ್ ಕಾಲಿಗೆ ಗುಂಡೇಟು
ಕನ್ನಡದವರು ಎಂಬ ಕಾರಣಕ್ಕೆ ಕೇಸ್ ದಾಖಲಾಗಿದ್ರೆ ನಾವು ಅದರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವುದು ಪೊಲೀಸರ ಕಾರ್ಯವಾಗಿದೆ. ರಾಜ್ಯದಲ್ಲಿ ಯಾರೇ ಆಗಲಿ ಕನ್ನಡದ ನೆಲ, ಜಲ ಅಭಿಮಾನದ ಬಗ್ಗೆ ಅವಮಾನ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಶಿಕ್ಷಣ ಸಚಿವರೂ ಆದ ಸುರೇಶ್ ಕುಮಾರ್ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ