ಮೈಸೂರು: ಪ್ರತಿಷ್ಠೆಯ ಕಣವಾಗಿದ್ದ ಮೈಸೂರು ಮೈಮುಲ್ ಚುನಾವಣೆ ಮುಕ್ತಾಯವಾಗಿದ್ದು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಖುದ್ದಾಗಿ ಪ್ರಚಾರ ನಡೆಸಿದರೂ ಜೆಡಿಎಸ್- ಕಾಂಗ್ರೆಸ್ ಮೈತ್ರಿಕೂಟಕ್ಕೆ ಭಾರಿ ಹಿನ್ನಡೆಯಾಗಿದೆ. ಸಹಕಾರಿ ಕ್ಷೇತ್ರದಲ್ಲಿ ನಾನೇ ಕಿಂಗ್ ಮೇಕರ್ ಎಂಬ ಸಂದೇಶ ರವಾನೆ ಮಾಡಿರುವ ಜಿಟಿಡಿ, ಯಾರು ಇಲ್ಲಿ ಬಂದು ರಾಜಕೀಯ ಮಾಡಬೇಡಿ ಎಂದು ಎದುರಾಳಿಗೆ ಟಾಂಗ್ ನೀಡಿದ್ದಾರೆ.
ಮೈಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಿದೆ. ಜಿದ್ದಾಜಿದ್ದಿನ ಕಣವಾಗಿದ್ದ ಮೈಮುಲ್ ಚುನಾವಣೆ, ಸಣ್ಣಪುಟ್ಟ ಮಾತಿನ ಚಕಮಕಿ ಹೊರತುಪಡಿಸಿ ಶಾಂತಿಯುತವಾಗಿ ಮುಗಿಯಿತು. 15 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 12 ಸ್ಥಾನಗಳು ಜಿಟಿಡಿ ಬಣದ ಪಾಲಾದರೆ, 3 ಸ್ಥಾನಗಳು ಮಾತ್ರ ಹೆಚ್ಡಿಕೆ ಬಣದ ಪಾಲದವು. ಅದರಲ್ಲು ಜೆಡಿಎಸ್ ಬೆಂಬಲಿತ ಸದಸ್ಯರು ಗೆದ್ದಿದ್ದು ಮಾತ್ರ ಒಬ್ಬರೆ. ಮೈಮುಲ್ನಲ್ಲಿ ನಡೆದ ಚುನಾವಣೆ ಹೆಚ್ಡಿಕೆಗೆ ಭಾರಿ ಮುಖಭಂಗ ತಂದಿದೆ. ಈ ಬಗ್ಗೆ ಚುನಾವಣೆ ಮುಗಿದ ಬಳಿಕ ಮಾತನಾಡಿದ ಜಿಟಿಡಿ ಇದು ಸಹಕಾರಿ ಕ್ಷೇತ್ರ. ಇಲ್ಲಿ ರಾಜಕೀಯ ಮಾಡಬಾರದು. ನಾನು ಸಹ ಎಲ್ಲಿಯೂ ಪ್ರಚಾರಕ್ಕೆ ಹೋಗಲಿಲ್ಲ, ಆದ್ರೆ ಕುಮಾರಸ್ವಾಮಿಯವರು ಪ್ರಚಾರಕ್ಕೆ ಬಂದಿದ್ದು ಮಾತ್ರ ನನಗೆ ಬೇಸರ ಆಯ್ತು ಎಂದು ಹೇಳಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಪರವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಚಾರ ನಡೆಸಿದರು. ಸಹಕಾರ ಕ್ಷೇತ್ರದ ಬಗ್ಗೆ ಜೀವಮಾನದಲ್ಲಿ ಆಸಕ್ತಿ ತೋರದ ಎಚ್ಡಿಕೆ, ಇದೇ ಮೊದಲ ಬಾರಿಗೆ ತಮ್ಮ ಅಭ್ಯರ್ಥಿಗಳ ಪರವಾಗಿ ಮತಯಾಚನೆಗಾಗಿ ಪಿರಿಯಾಪಟ್ಟಣ, ಹುಣಸೂರು ಹಾಗೂ ಎಚ್.ಡಿ.ಕೋಟೆ ತಾಲೂಕುಗಳಲ್ಲಿ ಪ್ರಚಾರ ಮಾಡಿದ್ದರು. ಆದರೆ ಎಚ್ಡಿಕೆ ಅನಿರೀಕ್ಷಿತ ಎಂಟ್ರಿ ಮೈಮುಲ್ ಚುನಾವಣೆಯಲ್ಲಿ ವರ್ಕೌಟ್ ಆಗಲಿಲ್ಲ. ಹೆಚ್.ಡಿ.ಕೆ ಬಣದಲ್ಲಿದ್ದ ಹೆಚ್.ಡಿ.ರೇವಣ್ಣ ಭಾಮೈದ ಎಸ್.ಕೆ.ಮಧುಚಂದ್ರ ಸಹ ಸೋಲನಪ್ಪಿದರು. ಇದು ನನ್ನ ಸೋಲು, ಇದರಿಂದ ಯಾರಿಗೂ ಅಪಮಾನ ಆಗಿಲ್ಲ, ರೇವಣ್ಣ, ಕುಮಾರಸ್ವಾಮಿ ಅವರು ನಮ್ಮ ನಾಯಕರು, ತಯಾರಿ ಇಲ್ಲದೆ ಚುನಾವಣೆಗೆ ಬಂದಿದ್ದೆ ನಮ್ಮ ಸೋಲಿಗೆ ಕಾರಣ ಅಂತ ಹೇಳಿದರು.
ಮೈಸೂರು ವಿಭಾಗದ 7 ಹಾಗೂ ಹುಣಸೂರು ವಿಭಾಗದ 8 ಸೇರಿ ಒಟ್ಟು 15 ನಿರ್ದೇಶಕ ಸ್ಥಾನಗಳಿಗೆ ಮತದಾನ ನಡೆಯಿತು. ಈ ಪೈಕಿ ಬಹುತೇಕ ಜಿ.ಟಿ.ದೇವೇಗೌಡ ನೇತೃತ್ವದ ಬಣದ 12 ಮಂದಿ ಗೆದ್ದಿದ್ದು, ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. 3 ಸ್ಥಾನಗಳನ್ನು ಕಳೆದುಕೊಂಡ ಜಿಟಿಡಿ ಬಣದಲ್ಲಿ ಜಿಟಿಡಿ ಆಪ್ತ ಹಾಲಿ ಕೆಎಂಎಫ್ ಅಧ್ಯಕ್ಷ ಸಿದ್ದೇಗೌಡ ಸಹ ಸೋತಿದ್ದಾರೆ. ಆದರೂ ಜಿ.ಟಿ.ಡಿ. ಪುತ್ರ ಹರೀಶ್ಗೌಡ ಸಹಕಾರಿಗಳ ಬೆಂಬಲ ಇರುವವರೆಗೆ ಇಲ್ಲಿ ಯಾವ ರಾಜಕೀಯವು ನಡೆಯೋಲ್ಲ ಎಂಬ ಸಂದೇಶ ಇಲ್ಲಿಂದ ರವಾನೆ ಆಗಿದೆ. ಇದು ಕೇವಲ ಸಹಕಾರಿಗಳ ಗೆಲುವು. ನಾನು ಕುಮಾರಸ್ವಾಮಿಯವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ ಎಂದು ತಿಳಿಸಿದರು.
ಇದನ್ನು ಓದಿ: ರಾಜ್ಯದ ಮರಾಠಿ ಮಾತನಾಡುವ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶ ಮಾಡುವ ಪ್ರಸ್ತಾಪ ಇಲ್ಲ: ಕೇಂದ್ರ ಸ್ಪಷ್ಟನೆ
ಇವೆಲ್ಲದರ ನಡುವೆ ಜೆಡಿಎಸ್ ಮೈತ್ರಿಕೂಟದಲ್ಲಿ ಗೆದ್ದ ಚೆಲುವರಾಜ್ ಗೆಲುವನ್ನು ಸಿದ್ದರಾಮಯ್ಯಗೆ ಅರ್ಪಿಸಿದ್ದಾರೆ. ಕುಮಾರಸ್ವಾಮಿಗೂ ಧನ್ಯವಾದ ಹೇಳಿದ್ದು ವಿಶೇಷವಾಗಿತ್ತು.
ಅಂತಿಮವಾಗಿ ಮೈಸೂರು ಮೈಮುಲ್ನಲ್ಲಿ ಜಿಟಿಡಿಯೇ ಕಿಂಗ್ ಮೇಕರ್ ಆಗಿದ್ದಾರೆ. ಅನುಭವದ ಕೊರತೆ ಇದ್ದರೂ ಅಖಾಡಕ್ಕೆ ಇಳಿದಿದ್ದ ಕುಮಾರಸ್ವಾಮಿಗೆ ಭಾರೀ ಮುಖಭಂಗವಾಗಿದೆ. ಶಾಸಕ ಸಾ.ರಾ.ಮಹೇಶ್ ಬೆಂಬಲಿಗರಿಗೂ ಹಿನ್ನಡೆಯಾಗಿದ್ದು, ಸಹಕಾರಿ ಕ್ಷೇತ್ರದಲ್ಲಿ ಜಿಟಿಡಿಯೇ ಧುರಿಣ ನಾಯಕ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ