ಮೈಸೂರು ಜೆಡಿಎಸ್ ದಳಪತಿಗಳಲ್ಲಿ ಹೊಂದಾಣಿಕೆ ಇಲ್ಲ ಅನ್ನೋದು ಪದೆ ಪದೆ ಸಾಬೀತಾಗುತ್ತಿದೆ. ಅದರಲ್ಲು ಜಿಲ್ಲೆಯ ಇಬ್ಬರು ಪ್ರಮುಖ ನಾಯಕರಾದ ಶಾಸಕ ಜಿ.ಟಿ.ದೇವೇಗೌಡ ಹಾಗೂ ಶಾಸಕ ಸಾ.ರಾ.ಮಹೇಶ್ ನಡುವಿನ ಮುಸುಕಿನ ಗುದ್ದಾಟಕ್ಕೆ ಇಂದು ಮತ್ತೊಂದು ವೇದಿಕೆ ಸಿಕ್ಕಿದ್ದು. ಪುತ್ರ ಜಿ.ಡಿ.ಹರೀಶ್‌ಗೌಡಗೆ ಅಭಿನಂದನಾ ನೇಪದಲ್ಲಿ ಶಾಸಕ ಜಿಟಿಡಿ, ಸಾ.ರಾ.ಮಹೇಶ್ ಸ್ವಕ್ಷೇತ್ರವಾದ ಕೆ.ಆರ್.ನಗರದಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಕೆ.ಆರ್.ನಗರದಲ್ಲಿ ಜಿ.ಡಿ.ಹರೀಶ್‌ಗೌಡರ ಅಭಿನಂದನೆ ಹಾಗೂ ಹುಟ್ಟುಹಬ್ಬದ ಅದ್ದೂರಿ ಆಚರಣೆ ಮಾಡಿದ್ದು, ಅಲ್ಲಿರುವ ಎಲ್ಲ ಜೆಡಿಎಸ್ ನಾಯಕರನ್ನ ಸಾ.ರಾ.ಮಗ್ಗುಲಿನಿಂದ ತನ್ನತ್ತ ಸೆಳೆದಿದ್ದಾರೆ. ಇದಕ್ಕೆ ಪುಷ್ಠಿಯಂಬಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಸಹ ಹರೀಶ್‌ಗೌಡ ಬೆನ್ನಿಗೆ ನಿಂತಿದ್ದು, ಕೆ.ಆರ್.ನಗರದಲ್ಲಿ ಶತ್ರುವಿನ ಶತ್ರು ಮಿತ್ರನಾಗಿದ್ದಾರೆ.
ಹೌದು ರಾಜಕೀಯದಲ್ಲಿ ಶತ್ರುವಿನ ಶತ್ರು ಮಿತ್ರನಾಗೋದು ಸಹಜದ ವಿಚಾರ. ಈಗ ಅಂತದ್ದೆ ಇಂದು ಸನ್ನಿವೇಶ ಮೈಸೂರಿನ ಕೆ.ಆರ್.ನಗರದಲ್ಲಿ ಸೃಷ್ಠಿಯಾಗಿದ್ದು ರಾಜಕೀಯ ಶತ್ರುಗಳು ಮತ್ತೊಬ್ಬನ ಮಿತ್ರನಾಗಿದ್ದಾರೆ. ಕೆ.ಆರ್.ನಗರ ಕ್ಷೇತ್ರದ ಶಾಸಕ ಸಾ.ರಾ.ಮಹೇಶ್ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ನಡುವಿನ ಮುಸುಕಿನ ಗುದ್ದಾಟದಲ್ಲಿ ಸಾ.ರಾ. ಮಹೇಶ್ ಶತ್ರುಗಳೆಲ್ಲ ಜಿಟಿಡಿ ಮಿತ್ರರಾಗುತ್ತಿದ್ದಾರೆ.
ಇಂದು ಜಿಟಿಡಿ ಪುತ್ರ ಜಿ.ಡಿ.ಹರೀಶ್‌ಗೌಡ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಿರುವ ಜಿಟಿಡಿ ಆಪ್ತರು. ಕಾಂಗ್ರೆಸ್ ಮುಖಂಡ ರವಿಶಂಕರ್‌ಗೌಡ ಹಾಗೂ ಬಿಜೆಪಿ ಮುಖಂಡ ವಿಶ್ವನಾಥ್ ಪುತ್ರ ಅಮೀತ್ ದೇವರಹಟ್ಟಿ ಹಾಜರಾಗಿ ಅಚ್ಚರಿ ಮೂಡಿಸುವುದರ ಜೊತೆ ಸಾ.ರಾ. ಮಹೇಶ್‌ಗೆ ಟಾಂಗ್ ನೀಡಿದ್ದಾರೆ. ಕಳೆದ 10 ವರ್ಷಗಳಿಂದ ಕೆ.ಆರ್.ನಗರ ಕ್ಷೇತ್ರದಲ್ಲಿ ಅನಭಿಶಕ್ತ ದೋರೆಯಂತೆ ಶಾಸಕ ಸ್ಥಾನದಲ್ಲಿ ಕುಳಿತಿರುವ ಸಾ.ರಾ.ಮಹೇಶ್‌ಗೆ ಜಿ.ಟಿ.ದೇವೇಗೌಡ ತನ್ನ ಶಕ್ತಿ ಪ್ರದರ್ಶನದ ಮೂಲಕ ತನ್ನ ಮಗ ಬೇಕೆಂದರೆ ಮುಂದಿನ ಬಾರಿ ಕೆ.ಆರ್.ನಗರದಲ್ಲೂ ಸ್ಪರ್ಧೆಗೆ ಸಿದ್ದ ಎಂದು ಪರೋಕ್ಷ ಸಂದೇಶ ರವಾನೆ ಮಾಡಿದ್ದಾರೆ.
ಸಾ.ರಾ.ಮಹೇಶ್ ಸ್ವಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದ ಜಿಟಿಡಿ ಪುತ್ರನಿಗೆ, ಕೆ.ಆರ್.ನಗರದಲ್ಲಿ ಅದ್ದೂರಿ ಸ್ವಾಗತ ಸಿಕ್ಕಿತ್ತು. ಅಪೇಕ್ಸ್ ಬ್ಯಾಂಕ್ ಉಪಾಧ್ಯಕ್ಷ ಹಾಗೂ ಹುಟ್ಟುಹಬ್ಬದ ಆಚರಿಸಲು ಕೆ.ಆರ್.ನಗರದ ರೇಡಿಯೋ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೆ.ಆರ್.ನಗರ ಮಖ್ಯರಸ್ತೆಯಲ್ಲಿ ಅದ್ದೂರಿ ಮೆರವಣಿಗೆ ಆಯೋಜಿಸಿ. ಜೆಸಿಬಿ ಹಾಗೂ ಕ್ರೇನ್‌ನಲ್ಲಿ ಬೃಹತ್ ಸೇಬಿನ ಹಾರ ಹಾಗೂ ಹೂವಿನ ಮಳೆಗೈದು ಹರೀಶ್‌ಗೌಡರನ್ನ ಸನ್ಮಾನಿಸಲಾಯಿತು.
ಮೆರವಣಿಗೆ ಮೂಲಕ ರೇಡಿಯೋ ಮೈದಾನಕ್ಕೆ ಬಂದ ಹರೀಶ್‌ಗೌಡರಿಗೆ ವೇದಿಕೆ ಕಾರ್ಯಕ್ರಮದಲ್ಲಿ ಹಲವು ಮುಖಂಡರು ಹರೀಶ್‌ಗೌಡರನ್ನ ಹಾಡಿ ಹೊಗಳಿದರು. ಆ ಮೂಲಕ ಸಾ.ರಾ.ಮಹೇಶ್‌ಗೆ ಪರೋಕ್ಷವಾಗಿ ಶಕ್ತಿ ಪ್ರದರ್ಶನ ಮಾಡಿ ಜಿಟಿಡಿ ಹಾಗೂ ಪುತ್ರ ಹರೀಶ್‌ಗೌಡ ಚುನಾವಣೆಗೆ ಮುನ್ನವೇ ಸಮರ ಸಾರಿದರು.
ಇಂದು ಕೆ.ಆರ್.ನಗರದಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಗೈರಾಗಿದ್ದರು. ಮಗನ ಹುಟ್ಟುಹಬ್ಬ ಹಾಗೂ ಅಭಿನಂದನಾ ಸಮಾರಂಭದಲ್ಲಿ ತಾನಿಲ್ಲದೇಯೇ ಅದ್ದೂರಿ ಸಮಾರಂಭ ಆಯೋಜಿಸುವ ಮೂಲಕ ತನ್ನ ಮಗನ ವೈಯಕ್ತಿಕ ಶಕ್ತಿಯನ್ನು ಸಾಬೀತು ಮಾಡಿಸುವ ಪ್ರಯತ್ನಕ್ಕೆ ಜಿಟಿಡಿ ಯಶಸ್ವಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ