ಬಾಗಲಕೋಟೆಯಲ್ಲಿ ಚರಂಡಿ ನೀರಿನಲ್ಲಿ ತರಕಾರಿ ಬೆಳೆ, ಜನರ ಹೊಟ್ಟೆಗೆ ವಿಷ !?

ಆರೋಗ್ಯಕ್ಕೆ ಹಸಿರು ತರಕಾರಿ ಹೆಚ್ಚು ಬಳಸಿ ಎನ್ನುವುದು ವೈದ್ಯರ ಸಲಹೆ. ಆದರೆ ಬಾಗಲಕೋಟೆಯಲ್ಲಿ ವಿಷಕಾರಿ ತರಕಾರಿಯಿಂದಲೇ ಅನಾರೋಗ್ಯ ತಂದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ತಾಜಾ  ತರಕಾರಿ ತಿನ್ನುವ ಬಾಗಲಕೋಟೆ ನಗರದ ಜನರ ದೇಹಕ್ಕೆ ಸದ್ದಿಲ್ಲದೇ ವಿಷ ಸೇರುತ್ತಿದೆ. ತಾಜಾ ತರಹೇವಾರಿ ತರಕಾರಿ ಬಳುಸುವ ಮುನ್ನ ಜನತೆ ಎಚ್ಚರವಹಿಸುವ ಅಗತ್ಯವಿದೆ. ನಗರಕ್ಕೆ ಹೊಂದಿಕೊಂಡಿರುವ ಘಟಪ್ರಭಾ ನದಿ ಆಲಮಟ್ಟಿ ಹಿನ್ನೀರು ಪ್ರದೇಶದಲ್ಲಿ ಕೆಲವರು ಚರಂಡಿ ನೀರು ಬಳಸಿ ರಾಜಗಿರಿ, ಮೆಂತೆ, ಮೂಲಂಗಿ, ಸಬ್ಬಸಗಿ, ಹಸಿರುಸೊಪ್ಪು ಸೇರಿದಂತೆ ವಿವಿಧ ಸೊಪ್ಪುಗಳನ್ನು ಬೆಳೆದಿದ್ದು ಇಲ್ಲಿ ಬೆಳೆದ ಸೊಪ್ಪು ತರಕಾರಿ ಬಾಗಲಕೋಟೆಯ ತರಕಾರಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಚರಂಡಿ ನೀರಿನಲ್ಲಿ ಬೆಳೆಯುತ್ತಿರುವ ತರಕಾರಿ

ಚರಂಡಿ ನೀರಿನಲ್ಲಿ ಬೆಳೆಯುತ್ತಿರುವ ತರಕಾರಿ

  • Share this:
ಬಾಗಲಕೋಟೆ (ಏ,11):  ಬಾಗಲಕೋಟೆ ನಗರದ ಹೊಂದಿಕೊಂಡಿರುವ ಆಲಮಟ್ಟಿ ಹಿನ್ನೀರು ಪ್ರದೇಶ ವ್ಯಾಪ್ತಿಯಲ್ಲಿ ಕೆಲವರು ಕೊಳಚೆ ನೀರಿನಲ್ಲೇ ತರಕಾರಿ ಬೆಳೆದು ಮಾರಾಟ ಮಾಡುತ್ತಿದ್ದು, ವಿಷಕಾರಿ ಅಂಶ ಆರೋಗ್ಯವಂತ ಮನುಷ್ಯರ ದೇಹ ಸೇರುತ್ತಿದೆ. ಬಾಗಲಕೋಟೆಯಲ್ಲಿ ವಿಷ ತರಕಾರಿ ಮಾಫಿಯಾ ನಡೆಯುತ್ತಿದ್ದು,ಇದನ್ನು ತಡೆಗಟ್ಟಬೇಕೆಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.

ಏನಿದು ವಿಷ ತರಕಾರಿ ಮಾಫಿಯಾ!?

ಆರೋಗ್ಯಕ್ಕೆ ಹಸಿರು ತರಕಾರಿ ಹೆಚ್ಚು ಬಳಸಿ ಎನ್ನುವುದು ವೈದ್ಯರ ಸಲಹೆ. ಆದರೆ ಬಾಗಲಕೋಟೆಯಲ್ಲಿ ವಿಷಕಾರಿ ತರಕಾರಿಯಿಂದಲೇ ಅನಾರೋಗ್ಯ ತಂದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ತಾಜಾ  ತರಕಾರಿ ತಿನ್ನುವ ಬಾಗಲಕೋಟೆ ನಗರದ ಜನರ ದೇಹಕ್ಕೆ ಸದ್ದಿಲ್ಲದೇ ವಿಷ ಸೇರುತ್ತಿದೆ. ತಾಜಾ ತರಹೇವಾರಿ ತರಕಾರಿ ಬಳುಸುವ ಮುನ್ನ ಜನತೆ ಎಚ್ಚರವಹಿಸುವ ಅಗತ್ಯವಿದೆ. ನಗರಕ್ಕೆ ಹೊಂದಿಕೊಂಡಿರುವ ಘಟಪ್ರಭಾ ನದಿ ಆಲಮಟ್ಟಿ ಹಿನ್ನೀರು ಪ್ರದೇಶದಲ್ಲಿ ಕೆಲವರು ಚರಂಡಿ ನೀರು ಬಳಸಿ ರಾಜಗಿರಿ, ಮೆಂತೆ, ಮೂಲಂಗಿ, ಸಬ್ಬಸಗಿ, ಹಸಿರುಸೊಪ್ಪು ಸೇರಿದಂತೆ ವಿವಿಧ ಸೊಪ್ಪುಗಳನ್ನು ಬೆಳೆದಿದ್ದು ಇಲ್ಲಿ ಬೆಳೆದ ಸೊಪ್ಪು ತರಕಾರಿ ಬಾಗಲಕೋಟೆಯ ತರಕಾರಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ.

ನೋಡುವುದಕ್ಕೆ ಈ ಸೊಪ್ಪು ಪರಿಶುದ್ದ ರೀತಿ ಕಾಣುತ್ತದೆ. ಆದರೆ, ಅಪಾಯಕಾರಿಯಾದ ರಾಸಾಯನಿಕ ಒಳಗೊಂಡ ಕಲ್ಮಶ ನೀರಲ್ಲಿ ಇದೆ ಎನ್ನುವುದು ಆತಂಕಕಾರಿ ಸಂಗತಿ. ಇಂತಹ ಅಪಾಯಕಾರಿ ತರಕಾರಿ ಜನರ ದೇಹ ಸೇರುತ್ತಿರುವುದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಸಂಬಂಧಿಸಿದವರು ಕಟ್ಟುನಿಟ್ಟಿ‌ನ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು  ಆಗ್ರಹಿಸಿದ್ದಾರೆ. ಇನ್ನು ಮಳೆಗಾಲ ಮತ್ತು ಚಳಿಗಾಲದಲ್ಲಿ ಘಟಪ್ರಭಾ ನದಿ ಹಿನ್ನೀರು ಪ್ರದೇಶದಲ್ಲಿ ನೀರು ಇರುತ್ತದೆ. ಬೇಸಿಗೆ ಸಮಯದಲ್ಲಿ ಹಿನ್ನೀರು ಸರಿದಂತೆ ಖಾಲಿಯಾಗುವ ಪ್ರದೇಶದಲ್ಲಿ ಒಂದು ಬೆಳೆಯನ್ನು ರೈತರು ತೆಗೆಯುತ್ತಾರೆ.

ಆದರೆ, ಬಾಗಲಕೋಟೆ ನಗರಕ್ಕೆ ಹೊಂದಿಕೊಂಡಿರುವ  ಹಿನ್ನೀರು ಪ್ರದೇಶದಲ್ಲಿ ಬಂದು ಸೇರುವ ಚರಂಡಿ ನೀರನ್ನೇ ಬಳಸಿಕೊಂಡು ಹೀಗೆ ವಿವಿಧ ಸೊಪ್ಪು, ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಇಲ್ಲಿ ತರಕಾರಿ ಬೆಳೆಯುತ್ತಿರುವವರಲ್ಲಿ ಕೆಲವೇ ಕೆಲವರು ರೈತರಾದರೆ ಬಹುತೇಕರು ಬೇರೆ ಬೇರೆ ಕೆಲಸ‌ ಮಾಡುವಂತವರು.  ಬೇಸಿಗೆಯಲ್ಲಿ ಚರಂಡಿ‌ ನೀರನ್ನು ಬಳಸಿ ತರಕಾರಿ ಬೆಳೆಯುತ್ತಾರೆ. ಇನ್ನು ಇದೆಲ್ಲ ನಗರದ ಮಧ್ಯಭಾಗ, ನಗರದ ಪಕ್ಕದಲ್ಲೇ ದಶಕಗಳಿಂದ ನಡೆಯುತ್ತಿದ್ದರೂ ಯಾವುದೇ ಅಧಿಕಾರಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ.

ಈ ರೀತಿ ಚರಂಡಿ ನೀರಿನಲ್ಲಿ ಬೆಳೆಯುವ ತರಕಾರಿಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಹಾಗಾಗಿ ಇಂತಹ ತರಕಾರಿ ಖರೀದಿಸದಂತೆ ನಾಗರಿಕರೇ ಎಚ್ಚರಿಕೆ ವಹಿಸಬೇಕು. ನದಿಯಲ್ಲಿ ನೀರು ಕಡಿಮೆಯಾದ ಬಳಿಕ ಈ ರೀತಿ ಚರಂಡಿ ನೀರಿನಿಂದ ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಈ ಬಗ್ಗೆ ತಮ್ಮ ಗಮನಕ್ಕೂ ಬಂದಿದ್ದು ನಗರಸಭೆ ಅಧಿಕಾರಿಗಳ ಜೊತೆಗೆ ಸ್ಥಳಕ್ಕೆ ಹೋಗಿ ಎಲ್ಲರಿಗೂ ನೋಟಿಸ್ ನೀಡಲಾಗುವುದು.  ಚರಂಡಿ ನೀರಲ್ಲಿ‌ ತರಕಾರಿ ಬೆಳೆಯುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಆಹಾರ ಗುಣಮಟ್ಟ, ಸುರಕ್ಷತೆಯ ಜಿಲ್ಲಾ  ಅಂಕಿತ ಅಧಿಕಾರಿ ಡಿ.ಬಿ. ಪಟ್ಟಣಶೆಟ್ಟಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಹಸಿರು ತರಕಾರಿ ಸೇವಿಸಿ ಉತ್ತಮ ಆರೋಗ್ಯ ಎನ್ನುವ  ಬಾಗಲಕೋಟೆ ಜನರ ಹೊಟ್ಟೆಗೆ ಸದ್ದಿಲ್ಲದೇ ವಿಷಪೂರಿತ ತರಕಾರಿ ದೇಹ ಸೇರುತ್ತಿದೆ. ಅಧಿಕಾರಿಗಳು ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಜನರ ಆರೋಗ್ಯ ಕಾಪಾಡಬೇಕಿದೆ.
Published by:Soumya KN
First published: