HOME » NEWS » District » GREAT LOVE STORY OF SWAPNA AND MANU OF CHIKKAMAGALURU VCTV SNVS

ಕಾಫಿತೋಟದಲ್ಲಿ ಅರಳಿದ ನಿಷ್ಕಲ್ಮಷ ಪ್ರೇಮಕಥನ; ಸ್ನಪ್ನ-ಮನು ಲವ್ ಸ್ಟೋರಿ ಎಲ್ಲರಿಗೂ ಮಾದರಿ

ಆರು ವರ್ಷ ತಾನು ಪ್ರೀತಿಸುತ್ತಿದ್ದ ಹುಡುಗಿ ಎರಡು ವರ್ಷದ ಹಿಂದೆ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡು, ತನ್ನನ್ನು ಮರೆತುಬಿಡು ಎಂದು ಆಕೆಯೇ ಹೇಳಿದಾಗ ಪ್ರೀತಿ ಮರೆಯದ ಮನು ಇದೀಗ ಆಕೆಯನ್ನೇ ಮದುವೆಯಾಗಿ ಶಹಬ್ಬಾಸ್ ಎನಿಸಿದ್ದಾನೆ.

news18-kannada
Updated:April 1, 2021, 9:04 AM IST
ಕಾಫಿತೋಟದಲ್ಲಿ ಅರಳಿದ ನಿಷ್ಕಲ್ಮಷ ಪ್ರೇಮಕಥನ; ಸ್ನಪ್ನ-ಮನು ಲವ್ ಸ್ಟೋರಿ ಎಲ್ಲರಿಗೂ ಮಾದರಿ
ಸ್ವಪ್ನ ಮತ್ತು ಮನು ಮದುವೆ
  • Share this:
ಚಿಕ್ಕಮಗಳೂರು: ಇತ್ತೀಚಿಗೆ ಪ್ರೀತಿ ಹೆಸರಲ್ಲಿ ಮೋಸ ಮಾಡುವ ಪ್ರಕರಣಗಳು ಹೆಚ್ಚೆಚ್ಚು ವರದಿಯಾಗಿವೆ. ಆದರೆ, ಕಾಫಿನಾಡಲ್ಲಿ ಪ್ರೀತಿಗೆ ಪರಿಪೂರ್ಣ ಅರ್ಥ ದೊರೆಯುವ ಪ್ರೇಮಕಥೆಯೊಂದು ಬೆಳಕಿಗೆ ಬಂದಿದೆ. ಆರು ವರ್ಷ ಪರಸ್ಪರ ಪ್ರೀತಿ ಮಾಡಿದ್ದ ಜೋಡಿ ಮದುವೆಯಾಗುವುದು ಹೊಸತೇನಲ್ಲ. ಆದರೆ, ಪ್ರಿಯತಮೆಯ ಎರಡೂ ಕಾಲುಗಳು ಸ್ವಾದೀನ ಕಳೆದುಕೊಂಡು ಎರಡು ವರ್ಷಗಳೇ ಕಳೆದರೂ ಪ್ರಿಯಕರನ ಪ್ರೀತಿ ಮಾತ್ರ ಕುಂದಿಲ್ಲ. ಅವಳೇ ನನ್ನ ಬಿಡು ಅಂದರೂ ಪ್ರೇಮಿ ಬಿಡಲಿಲ್ಲ. ವೀಲ್ ಚೇರ್ ಮೇಲೆ ಕೂರಿಸೇ ತಾಳಿ ಕಟ್ಟಿ ಅಂದು-ಇಂದು-ಎಂದೆಂದೂ ನೀ ನನ್ನವಳೇ ಎಂದಿದ್ದಾನೆ ಪ್ರೇಮಿ. ಇದು ಕಾಫಿನಾಡ ಕಾಫಿತೋಟದಲ್ಲಿ ಅರಳಿದ ನಿಷ್ಕಲ್ಮಷ ಪ್ರೇಮ ಕಥನ. ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿ ನಿವಾಸಿ ಸ್ವಪ್ನ ಹಾಗೂ ಮನು ಅವರ ಪ್ರೇಮ ಕಥೆ ಎಲ್ಲರಿಗೂ ಮಾದರಿ.

ಪ್ರೇಮಿಯೇ ಪ್ರೇಮಿಗೆ ನಾನು ವೀಲ್‍ಚೇರ್‍ನಲ್ಲಿ ಸೆಟ್ಲ್ ಆಗಿದ್ದೀನಿ. ನಿಲ್ಲೋಕ್ಕಾಗಲ್ಲ. ಓಡಾಡೋಕ್ಕಾಗಲ್ಲ. ಮುಂದೇನೋ ಗೊತ್ತಿಲ್ಲ. ನನ್ನ ಮದ್ವೆಯಾಗಿ ಏನ್ ಸುಖ ಪಡ್ತೀಯಾ ನನ್ನ ಮರೆತು ಬೇರೆ ಮದುವೆ ಆಗು ಅಂದಿದ್ದಾಳೆ. ಯಾಕಂದ್ರೆ, ಹುಟ್ಟಿದಾಗಿನಿಂದಲೂ ಚೆನ್ನಾಗಿದ್ದ ಸ್ವಪ್ನ ದ್ವಿತೀಯ ಪಿಯುಸಿ ಓದಿ ಟೈಪಿಂಗ್ ಕ್ಲಾಸ್ ಹೋದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು, ಎರಡು ವರ್ಷದಿಂದ ಎರಡು ಕಾಲುಗಳ ಸ್ವಾದೀನ ಕಳೆದುಕೊಂಡು ಗಾಲಿಕುರ್ಚೆಯೇ ಆಧಾರವಾಗಿದೆ. ಕರ್ನಾಟಕ-ಕೇರಳ ಆಸ್ಪತ್ರೆಗಳಲ್ಲಿ ವೈದ್ಯರು ನಾರ್ಮಲ್ ಎಂದಿದ್ದಾರೆ. ನಾಟಿ ಔಷಧಿಯೂ ಕೆಲಸ ಮಾಡಿಲ್ಲ. ಕಾಲು ಸರಿಯಾಗಿಲ್ಲ. ಜೀವನವೇ ಬೇಸತ್ತು ನೊಂದಿದ್ದಳು. ಆದರೆ, ಆರು ವರ್ಷದಿಂದ ಪ್ರೀತಿಸಿದ್ದ ಮನು, ನೀನು ಹೇಗೆ ಇರು, ಏನಾದರಾಗಲೀ ಕೊನೆವರೆಗೂ ನಿನ್ನ ಜೊತೆ ಇರ್ತೀನಿ ಎಂದು ಆಕೆಗೆ ಧೈರ್ಯ ತುಂಬಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಕೆಯನ್ನೇ ಮದುವೆಯಾಗಿದ್ದಾನೆ. ವೀಲ್ ಚೇರ್ ಮೇಲೇ ಕೂರಿಸಿ ತಾಳಿ ಕಟ್ಟಿ ಅದೇ ವೀಲ್ ಚೇರ್​ನಲ್ಲಿ ಮನೆಗೆ ಕರೆದುಕೊಂಡು ಹೋಗಿದ್ದಾನೆ. ನಾನು ಪ್ರೀತಿಸಿದಾಗ ಚೆನ್ನಾಗಿದ್ದಳು. ಇವತ್ತು ಕಾಲು ಸರಿ ಇಲ್ಲ ಅಂತ ಬಿಟ್ರೆ ನನ್ನ ಪ್ರೀತಿಗೆ ಬೆಲೆ ಇಲ್ಲ. ನಾನು ಪ್ರೀತಿಯಿಂದ ಪ್ರೀತಿ ಮಾಡಿದ್ದು ಎಂದು ಅವಳನ್ನೇ ಮದುವೆಯಾಗಿದ್ದಾನೆ. ಕೈ-ಕಾಲು ಏನೋ ಒಂದು ಏನೋ ಆಯ್ತು ಅಂತ ಕೈಬಿಟ್ರೆ ಅದು ನಿಜವಾದ ಪ್ರೀತಿ ಅಲ್ಲ ಅನ್ನೋದು ನನ್ನ ಭಾವನೆ ಅನ್ನೋದು ಪ್ರೇಮಿಯ ಮಾತು.

ಇದನ್ನೂ ಓದಿ: Mysore Zoo - ಮೈಸೂರು ಮೃಗಾಲಯ ಕೂಲ್ ಕೂಲ್; ಸ್ಪ್ರಿಂಕ್ಲರ್​ಗಳಿಂದ ಖುಷಿಯಾಗಿವೆ ಝೂ ಪ್ರಾಣಿಗಳು

ಇಬ್ಬರದ್ದೂ ಬಡಕುಟುಂಬ. ಇಬ್ಬರೂ ಪಿಯುಸಿ ಓದಿದ್ದಾರೆ. ಹಾರ್ಡ್‍ವೇರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮನು, ನನ್ನವಳಿಗೆ ಹೀಗಾಯ್ತಲ್ಲ ಎಂದು ಕೆಲಸ ಬಿಟ್ಟು ಮದುವೆಗೆ ಮುನ್ನವೇ ಹಳ್ಳಿಯಲ್ಲಿ ಕೆಲಸ ಮಾಡಿಕೊಂಡು ಆಕೆಯನ್ನ ಕರೆದುಕೊಂಡು ಊರೂರು ಸುತ್ತಿದ್ದಾನೆ. ಆದರೆ, ಎಲ್ಲೂ ಸರಿಯಾಗಿಲ್ಲ. ಸ್ವಪ್ನ ಕೂಡ ನನ್ನಂಥವಳ ಕಟ್ಟಿಕೊಂಡು ಏನ್ ಮಾಡ್ತೀಯಾ ಬಿಡು ಎಂದರೂ ಮನು ಕೇಳಿಲ್ಲ. ನಾನು ಪ್ರೀತಿಗಾಗಿ ಪ್ರೀತಿಸಿದ್ದೇ ಹೊರತು ಮೋಹಕ್ಕಲ್ಲ ಎಂದು ಆಕೆಯನ್ನೇ ಮದುವೆಯಾಗಿದ್ದಾನೆ. ಇಬ್ಬರದ್ದು ಅಂತರ್ಜತಿಯಾದರೂ ಇಲ್ಲಿ ಜಾತಿ ಅಡ್ಡ ಬಂದಿಲ್ಲ. ಆಸ್ತಿ-ಅಂತಸ್ತಿಗೆ ಇಲ್ಲಿ ಬೆಲೆ ಸಿಕ್ಕಿಲ್ಲ. ಪ್ರಾಮಾಣಿಕ ಹಾಗೂ ನಿಷ್ಕಲ್ಮಷ ಪ್ರೀತಿ ಇಲ್ಲಿ ಜಾತಿ-ಅಂತಸ್ತಿನ ಸಮಾಧಿ ಮೇಲೆ ಹಸೆಮಣೆ ಏರಿದೆ. ಮನು ತಾಯಿ ಕೂಡ ನನ್ನ ಮಗ ಇಷ್ಟ ಪಟ್ಟಿದ್ದಾನೆ. ಅಷ್ಟೇ ಮುಗೀತು. ಅವಳೇ ನನಗೆ ಮಗಳು-ಸೊಸೆ ಎಲ್ಲಾ ಎಂದು ಮನೆ ತುಂಬಿಸಿಕೊಂಡು, ನನ್ನ ಮಗಳಂತೆ ನೋಡಿಕೊಳ್ತೇನೆ ಅಂತಿದ್ದಾರೆ. ಊರಿನ ಜನ ಕೂಡ ಪ್ರೇಮಿಗಳ ಬೆನ್ನಿಗೆ ನಿಂತಿದ್ದಾರೆ. ಸ್ವಪ್ನಳನ್ನ ಹುಷಾರು ಮಾಡುವ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ.

ಒಟ್ಟಾರೆ, ಈ ಕಥೆಗೆ ರಿಯಲ್ ಲವರ್ ಮನುವೇ ಹೀರೋ. ನೊಂದ ಯುವತಿ ಸ್ವಪ್ನಾಳೇ ಹೀರೋಯಿನ್. ಬಡತನದಲ್ಲೂ ಮಕ್ಕಳ ಬದುಕನ್ನ ಹಸನಾಗಿಸಲು ಪಣತೊಟ್ಟ ಅಮ್ಮನೇ ನಿರ್ದೇಶಕಿ. ಪ್ರೇಮಿಗಳ ಬೆನ್ನಿಗೆ ನಿಂತ ಹಳ್ಳಿಗರೇ ನಟರು. ಆದ್ರೆ, ವಿಲನ್ ಮಾತ್ರ ಆ ದೇವರು. ಅದೇನೆ ಇದ್ದರೂ, ಹುಚ್ಚು ಮನಸ್ಸಿನ ಪ್ರೀತಿಗೆ ಹತ್ತಲ್ಲ ನೂರು ಮುಖ. ಒಂದೊಂದು ಮುಖದ್ದು ಒಂದೊಂದು ಕಥೆ. ಆದ್ರೆ, ಕಾಫಿಯ ಘಮದಲ್ಲಿ ಅರಳಿದ ಹಳ್ಳಿ ಪ್ರೀತಿಯನ್ನ ಸಾಯಿಸದೇ ಆಕೆಗೊಂದು ಬಾಳು ಕೊಟ್ಟು ಪ್ರೀತಿಗೊಂದು ಅರ್ಥ ಕಲ್ಪಿಸಿದ ಆ ಹೀರೋಗೆ ನಮ್ಮದ್ದೊಂದು ಸಲಾಮ್. ಸ್ವಪ್ನ ಮತ್ತು ಮನು ದಾಂಪತ್ಯ ಚೆನ್ನಾಗಿರಲಿ ಅನ್ನೋದು ನಮ್ಮ ಆಶಯ.

ವರದಿ: ವೀರೇಶ್ ಹೆಚ್ ಜಿ
Published by: Vijayasarthy SN
First published: April 1, 2021, 9:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories