news18-kannada Updated:December 30, 2020, 2:03 PM IST
ಅಭ್ಯರ್ಥಿಗಳಿಂದ ವಶಪಡಿಸಿಕೊಂಡಿರುವ ನಿಂಬೆಹಣ್ಣು, ತಾಯಿತ, ಬೀಡಿ, ಬೆಂಕಿಪೊಟ್ಟಣ.
ಕಲಬುರ್ಗಿ; ಕಲಬುರ್ಗಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಮತ ಎಣಿಕೆ ಪ್ರಕ್ರಿಯೆ ಬಿರುಸಿನಿಂದ ನಡೆದಿದೆ. ಮತ ಎಣಿಕೆ ಕೇಂದ್ರದ ಬಳಿ ನಿಂಬೆ ಹಣ್ಣುಗಳ ಸದ್ದು ಜೋರಾಗಿದೆ. ಕೆಲವರು ಜೇಬಿನಲ್ಲಿ ನಿಂಬೆ ಹಣ್ಣು ಇಟ್ಟುಕೊಂಡು ಬಂದರೆ, ಮತ್ತೆ ಕೆಲವರು ನಿಂಬೆ ಹಣ್ಣಿನ ಜೊತೆ ತಾಯಿತಗಳನ್ನೂ ಇಟ್ಟುಕೊಂಡು ಗೆಲ್ಲುವ ಹುಮ್ಮಸ್ಸಿನಲ್ಲಿ ಬಂದು ಪೊಲೀಸರ ಕೈಗಿ ಸಿಕ್ಕಿ ಬಿದ್ದಿದ್ದಾರೆ.
ಕಲಬುರ್ಗಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಭರದಿಂದ ನಡೆದಿದೆ. ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಕಲಬುರ್ಗಿ, ಆಳಂದ, ಅಫಜಲಪುರ, ಕಮಲಾಪುರ, ಕಾಳಗಿ, ಶಹಾಬಾದ್, ಚಿಂಚೋಳಿ, ಚಿತ್ತಾಪುರ, ಸೇಡಂ, ಜೇವರ್ಗಿ ಹಾಗೂ ಯಡ್ರಾಮಿಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಜಿಲ್ಲೆಯ 242 ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆದಿದೆ. ಈಗಾಗಲೇ 383 ಸದಸ್ಯರ ಅವಿರೋಧ ಆಯ್ಕೆಯಾಗಿದೆ. ಉಳಿದ 3805 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. 10,190 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಕಲಬುರ್ಗಿಯ ಪಾಲಿಟೆಕ್ನಿಕ್ ಕಾಲೇಜು ಸೇರಿ ಜಿಲ್ಲೆಯ 11 ಕಡೆ ಮತ ಎಣಿಕೆ ನಡೆಯುತ್ತಿದೆ.
ನಿಂಬೆಹಣ್ಣು, ತಾಯಿತಗಳ ಪಜೀತಿ
ಗ್ರಾಮ ಪಂಚಾಯಿತಿ ಮತ ಎಣಿಕೆಗೆ ಕೆಲ ಅಭ್ಯರ್ಥಿಗಳು ನಿಂಬೆ ಹಣ್ಣು, ತಾಯಿತ ಇಟ್ಟುಕೊಂಡು ಬಂದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ಕಲಬುರ್ಗಿಯ ಪಾಲಿಟೆಕ್ನಿಕ್ ಮತ ಎಣಿಕೆ ಕೇಂದ್ರದ ಬಳಿ ಹಲವು ಅಭ್ಯರ್ಥಿಗಳಿಂದ ನಿಂಬೆ ಹಣ್ಣು ಇಟ್ಟುಕೊಂಡು ಬಂದಿದ್ದರು. ಪೊಲೀಸರ ತಪಾಸಣೆ ವೇಳೆ ನಿಂಬೆ ಹಣ್ಣು ಮತ್ತು ತಾಯಿತಗಳು ಪತ್ತೆಯಾಗಿವೆ. ಇದೊಂದನ್ನು ಬಿಡಿ ಸರ್ ಎಂದು ಅಭ್ಯರ್ಥಿಯೋರ್ವ ಪರಿ ಪರಿಯಾಗಿ ಕೇಳಿಕೊಂಡ ಘಟನೆಯೂ ನಡೆದಿದೆ. ಪೊಲೀಸರು ನಿಂಬೆ ಹಣ್ಣು ಮತ್ತು ತಾಯಿತ ವಶಪಡಿಸಿಕೊಂಡಿದ್ದಾರೆ. ಆದರೂ ಕೆಲ ಅಭ್ಯರ್ಥಿಗಳು ಪೊಲೀಸರ ಕಣ್ತಪ್ಪಿಸಿ ನಿಂಬೆ ಹಣ್ಣನ್ನು ತೆಗೆದುಕೊಂಡು ಹೋಗಿದ್ದಾರೆ. ಪಂಚಾಯ್ತಿ ಚುನಾವಣೆಯಲ್ಲಿ ನಿಂಬೆ ಹಣ್ಣು ತಾಯಿತಗಳದ್ದೇ ಕಾರುಬಾರು ಜೋರಾಗಿತ್ತು. ನಿಂಬೆ ಹಣ್ಣು, ತಾಯಿತ ಇದ್ದಲ್ಲಿ ಗೆಲುವು ನಿಶ್ಚಿತ ಎಂಬ ಜ್ಯೋತಿಷಿಗಳ ಮಾತನ್ನು ನಂಬಿ ಅಭ್ಯರ್ಥಿಗಳು ನಿಂಬೆ ಹಣ್ಣಿನೊಂದಿಗೆ ಬಂದಿದ್ದಾರೆ. ಪೊಲೀಸರ ಕೈಗೆ ಸಿಕ್ಕು ಪಜೀತಿಗೆ ಗುರಿಯಾಗಿದ್ದಾರೆ.
ಇದನ್ನು ಓದಿ: Karnataka Grama Panchayath Election Results Live: ಗ್ರಾ.ಪಂ. ಚುನಾವಣೆ ಫಲಿತಾಂಶ - ಬಿಜೆಪಿ 4752, ಕಾಂಗ್ರೆಸ್ 2574, ಜೆಡಿಎಸ್ 1343
ನಿಂಬೆ ಹಣ್ಣಿದ್ದಲ್ಲಿ ಒಳಗೆ ಬಿಡೋಲ್ಲ ಎಂದಾಗ ಅನಿವಾರ್ಯವಾಗಿ ಪೊಲೀಸರ ಕೈಯಲ್ಲಿಟ್ಟು ಹೋಗಿದ್ದಾರೆ. ಕೊನೆಗೆ ಪೊಲೀಸರು ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ಫೋನ್ ಜೊತೆಗೆ ನಿಂಬೆ ಹಣ್ಣನ್ನೂ ನಿಷೇಧಿಸಿರುವುದಾಗಿ ಮೈಕ್ ನಲ್ಲಿ ಅನೌನ್ಸ್ ಮಾಡುವಂತಾಯಿತು. ನಿಂಬೆ ಹಣ್ಣು, ತಾಯಿತಗಳ ಜೊತೆಗೆ ಗುಟ್ಕಾ, ತಂಬಾಕು, ಬೀಡಿ, ಸಿಗರೇಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗೆದ್ದ ಅಭ್ಯರ್ಥಿಗಳ ವಿಜಯೋತ್ಸವ
ಒಂದೊಂದೇ ಗ್ರಾಮ ಪಂಚಾಯಿತಿ ಫಲಿತಾಂಶ ಪ್ರಕರಗೊಳ್ಳುತ್ತಿದ್ದು, ಗೆದ್ದ ಅಭ್ಯರ್ಥಿಗಳು ನಗುಮುಖದೊಂದಿಗೆ ಹೊರ ಬರುತ್ತಿದ್ದಾರೆ. ಗೆದ್ದ ಅಭ್ಯರ್ಥಿಗಳಿಗೆ ಹಾರ ಹಾಕಿ, ಸಿಹಿ ತಿನ್ನಿಸಿ ಬೆಂಬಲಿಗರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಮತ ಎಣಿಕೆ ಕೇಂದ್ರಗಳ ಬಳಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಮತ ಎಣಿಕೆ ನಡೆಯುವ ಸ್ಥಳಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
Published by:
HR Ramesh
First published:
December 30, 2020, 1:59 PM IST