ರಾಮನಗರ: ಜಿಲ್ಲೆಯಲ್ಲಿ ನಡೆದ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದೆ. ಎರಡನೇ ಸ್ಥಾನಕ್ಕೆ ಜೆಡಿಎಸ್ ತೃಪ್ತಿಪಟ್ಟಿದ್ದರೆ, ಬಿಜೆಪಿ ಮಾತ್ರ ಕಡಿಮೆ ಸ್ಥಾನ ಪಡೆದಿದ್ದರೂ ಸಹ ಇದೇ ಮೊದಲ ಬಾರಿಗೆ ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮಧ್ಯೆಯೂ ಹೋರಾಟ ನಡೆಸಿ ಕೆಲವು ಸ್ಥಾನಗಳನ್ನು ಉಳಿಸಿಕೊಂಡಿದೆ. ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಡಿ.ಕೆ. ಶಿವಕುಮಾರ್ಗೆ ಸ್ವಂತ ಜಿಲ್ಲೆಯಲ್ಲಿ ಇದು ಸ್ಥಳೀಯ ಮಟ್ಟದ ಮೊದಲ ಚುನಾವಣೆಯಾಗಿದ್ದು ಇದರಲ್ಲಿಯೇ ಡಿ.ಕೆ. ಶಿವಕುಮಾರ್ ಭರ್ಜರಿ ಜಯಸಾಧಿಸಿದ್ದಾರೆ. ಇಲ್ಲಿಯವರೆಗೆ ಜೆಡಿಎಸ್ ಜಿಲ್ಲೆಯಲ್ಲಿ ಗಟ್ಟಿಯಾಗಿತ್ತು, ಆದರೆ ಈಗ ಕಾಂಗ್ರೆಸ್ ಮುಂದೆ ಜಿಲ್ಲೆಯಲ್ಲಿ ಜೆಡಿಎಸ್ ಕೊಂಚ ಹಿನ್ನಡೆಯಾಗಿದೆ. ಇದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೂ ಸಹ ಎಚ್ಚರಿಕೆ ಗಂಟೆಯಾಗಿದೆ. ಆದರೆ ಬಿಜೆಪಿ ಪಕ್ಷದ ಮುಖಂಡರು ಮಾತ್ರ ನಾವು ಕೂಡ ಹೋರಾಟ ಮಾಡುತ್ತೇವೆ ಎಂಬುದನ್ನು ಈ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸಾಧಿಸಿತೋರಿದ್ದಾರೆ.
ಕನಕಪುರದಲ್ಲಿ ಜೆಡಿಎಸ್-ಬಿಜೆಪಿ ಧೂಳಿಪಟ:
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಹೋದರ, ಸಂಸದ ಡಿ.ಕೆ.ಸುರೇಶ್ ಜುಗಲ್ಬಂದಿ ಈ ಬಾರಿಯ ಗ್ರಾಮಪಂಚಾಯತ್ ಚುನಾವಣೆಯಲ್ಲಿಯೂ ಮುಂದುವರೆದಿದೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಜೊತೆಗೆ ಸ್ಥಳೀಯವಾಗಿ ಯಾವುದೇ ಚುನಾವಣೆ ಬಂದರೂ ಸಹ ಕನಕಪುರಲ್ಲಿ ಕಾಂಗ್ರೆಸ್ ಬಾವುಟ ಹಾರಿಸುತ್ತಾರೆ ಡಿ.ಕೆ.ಬ್ರದರ್ಸ್. ಅದೇ ರೀತಿ ಈಗ ಗ್ರಾಮಪಂಚಾಯತ್ ಚುನಾವಣೆಯಲ್ಲಿಯೂ ಸಹ ಇಬ್ಬರು ಸೇರಿ ಕಾಂಗ್ರೆಸ್ ಬಾವುಟ ಹಾರಿಸುವ ಮೂಲಕ ಮತ್ತೊಮ್ಮೆ ತಮ್ಮ ಶಕ್ತಿಪ್ರದರ್ಶನ ಮಾಡಿದ್ದಾರೆ.
36 ಗ್ರಾಮಪಂಚಾಯತ್ಗಳ ಪೈಕಿ ಕಾಂಗ್ರೆಸ್ 30 ಕಡೆಗಳಲ್ಲಿ ಗೆದ್ದು ಬೀಗಿದೆ. ಜೆಡಿಎಸ್ 3 ಪಂಚಾಯತ್ನಲ್ಲಿ ಫೈಟ್ ಮಾಡಿದ್ರೆ, ಬಿಜೆಪಿ ಕೊನೆಗೂ ಕನಕಪುರದಲ್ಲಿ 1 ಕಡೆ ಖಾತೆ ತೆರೆಯುವ ಸಾಧ್ಯತೆ ಇದೇ ಎನ್ನಲಾಗ್ತಿದೆ. ಇನ್ನೆರಡು ಪಂಚಾಯಿತಿ ಅತಂತ್ರ ಸ್ಥಿತಿಯಲ್ಲಿದೆ. ಆದರೆ ಪಂಚಾಯತ್ಗಳಲ್ಲಿ ಕಾಂಗ್ರೆಸ್ ಅಧಿಕಾರ ಪಡೆದರೂ ಸಹ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಸಹ ಕಾಂಗ್ರೆಸ್ಗೆ ಟಾಂಗ್ ಕೊಟ್ಟು ಗೆದ್ದಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ಸಹ ಉತ್ತಮವಾಗಿಯೇ ಫೈಟ್ ಮಾಡಿದ್ದಾರೆ.
ಚನ್ನಪಟ್ಟಣಕ್ಕೆ ಹೆಚ್ಡಿಕೆ ಕಿಂಗ್, ಹುಟ್ಟೂರಿನಲ್ಲಿಯೇ ಸೋತ ಸಿಪಿವೈ
ಬೊಂಬೆನಾಡು ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಭರ್ಜರಿ ಗೆಲುವು ಸಿಕ್ಕಿದೆ. 32 ಗ್ರಾಮ ಪಂಚಾಯತ್ಗಳ ಪೈಕಿ ಬರೋಬ್ಬರಿ 28 ಕಡೆಗಳಲ್ಲಿ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಪ್ರಚಂಡ ಗೆಲುವು ಸಾಧಿಸಿದ್ದಾರೆ. ಬಿಜೆಪಿ 2 ಮತ್ತು ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು 2 ಸ್ಥಾನಗಳಿಗೆ ತೃಪ್ತಿಪಡುವ ಸಾಧ್ಯತೆಗಳು ಹೆಚ್ಚಾಗಿವೆ. ಇನ್ನು ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಹುಟ್ಟೂರು ಚಕ್ಕೆರೆ ಗ್ರಾಮಪಂಚಾಯಿತಿಯೇ ಜೆಡಿಎಸ್ ಪಾಲಾಗಿರುವುದು ಸಿಪಿವೈಗೆ ತೀವ್ರ ಮುಖಭಂಗವಾಗಿದೆ.
ಒಟ್ಟು 14 ಸ್ಥಾನಗಳ ಪೈಕಿ 12 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಕೇವಲ 2 ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಮತದಾನದ ದಿನದಂದು ಯೋಗೇಶ್ವರ್ ಮಾತನಾಡಿ ಈ ಬಾರಿ ಚನ್ನಪಟ್ಟಣದಲ್ಲಿ 25 ಕ್ಕೂ ಹೆಚ್ಚು ಪಂಚಾಯತ್ಗಳು ಬಿಜೆಪಿಗೆ ಬರಲಿವೆ. ಕುಮಾರಸ್ವಾಮಿ ನಾಯಕತ್ವ ಈಗ ಗೊತ್ತಾಗಲಿದೆ ಎಂದಿದ್ದರು. ಆದರೆ ಯೋಗೇಶ್ವರ್ರವರ ಲೆಕ್ಕಾಚಾರ ಚನ್ನಪಟ್ಟಣ ಹಾಗೂ ಚಕ್ಕೆರೆಯಲ್ಲಿಯೇ ಸಂಪೂರ್ಣ ತಲೆಕೆಳಗಾಗಿದೆ.
ರಾಮನಗರದಲ್ಲಿ ಜೆಡಿಎಸ್ಗೆ ಕಾಂಗ್ರೆಸ್ ಸವಾಲು, ಬಿಜೆಪಿಯೂ ಸಕ್ಕತ್ ಫೈಟ್
ರಾಮನಗರ ಕ್ಷೇತ್ರದಲ್ಲಿ ಒಟ್ಟು 20 ಗ್ರಾಮಪಂಚಾಯತ್ಗಳ ಪೈಕಿ 10 ರಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ, 08 ಪಂಚಾಯತ್ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿ ಜೆಡಿಎಸ್ಗೆ ಪ್ರಬಲವಾಗಿಯೇ ಚಾಲೆಂಜ್ ಮಾಡಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಈ ಎರಡೂ ಪಕ್ಷಗಳ ನಡುವೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸಹ 2 ಪಂಚಾಯತ್ಗಳಲ್ಲಿ ಗೆಲುವು ಸಾಧಿಸುವ ಮೂಲಕ ರಣರಂಗದಲ್ಲಿ ತೊಡೆತಟ್ಟಿದ್ದಾರೆ.
ಹೆಚ್ಡಿಕೆ ಪತ್ನಿ, ಶಾಸಕಿ ಅನಿತಾಕುಮಾರಸ್ವಾಮಿ ಇದ್ದರೂ ಸಹ ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್ರವರ ಜನಪರ ಕೆಲಸಗಳು ರಾಮನಗರದಲ್ಲಿ ಕಾಂಗ್ರೆಸ್ಗೆ ಹೆಚ್ಚಿನ ಬಲ ತಂದಿದೆ. ಈ ಕಾರಣದಿಂದಲೇ ಜೆಡಿಎಸ್ಗೆ ಸರಿಸಮವಾಗಿ ಕಾಂಗ್ರೆಸ್ ಫುಲ್ ಅಲರ್ಟ್ ಆಗುತ್ತಿದೆ. ಇನ್ನು ಬಿಜೆಪಿ ಮುಖಂಡ ಎಂ.ರುದ್ರೇಶ್ ಬೆಂಬಲಿಗರು ಈ ಬಾರಿ ರಾಮನಗರದಲ್ಲಿ ಹೆಚ್ಚಿನ ಕಡೆಗಳಲ್ಲಿ ಬಿಜೆಪಿ ಬಾವುಟ ಹಾರಿಸಿದ್ದಾರೆ.
ಇದನ್ನೂ ಓದಿ : 3 ತಿಂಗಳು ವಿಳಂಬವಾದ CBSE ಬೋರ್ಡ್ ಪರೀಕ್ಷೆ; ಮೇ.4 ರಿಂದ ಪರೀಕ್ಷೆ ಆರಂಭ, ಜುಲೈ 15ಕ್ಕೆ ಫಲಿತಾಂಶ
ಮಾಗಡಿಯಲ್ಲಿ ಹೆಚ್.ಸಿ.ಬಾಲಕೃಷ್ಣ-ಎ.ಮಂಜು ಫೈಟ್, ಸ್ಥಾನಪಡೆದ ಬಿಜೆಪಿ
ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 30 ಗ್ರಾಮಪಂಚಾಯತ್ಗಳ ಪೈಕಿ 16 ಕಡೆಗಳಲ್ಲಿ ಕಾಂಗ್ರೆಸ್ ಬೆಂಬಲತ ಅಭ್ಯರ್ಥಿಗಳು ಜಯಶಾಲಿಗಳಾಗಿದ್ದಾರೆ. 12 ರಿಂದ 13 ಕಡೆಗಳಲ್ಲಿ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲುವುಸಾಧಿಸಿದ್ದಾರೆ. ಇನ್ನು ಇಲ್ಲಿಯೂ ಸಹ 1 ರಿಂದ 2 ಪಂಚಾಯತ್ಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸಹ ಜಯಗಳಿಸಿ ಮುನ್ನುಗ್ಗಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಎ.ಮಂಜು ಇದ್ದರೂ ಸಹ ಕಾಂಗ್ರೆಸ್ ಮುಖಂಡ ಹೆಚ್.ಸಿ.ಬಾಲಕೃಷ್ಣ ಫುಲ್ ಅಲರ್ಟ್ ಆಗಿ ಕೆಲಸ ಮಾಡಿರುವ ಪರಿಣಾಮ ಮಾಗಡಿಯಲ್ಲಿ ಕಾಂಗ್ರೆಸ್ಗೆ ಹೆಚ್ಚಿನ ಸ್ಥಾನಗಳು ಬಂದಿವೆ ಎನ್ನಲಾಗ್ತಿದೆ. ಇನ್ನು ಕಾಂಗ್ರೆಸ್-ಜೆಡಿಎಸ್ ಜೊತೆಗೆ ಬಿಜೆಪಿಗೂ ಸ್ಥಾನ ಸಿಕ್ಕಿರುವ ಹಿಂದೆ ಡಿಸಿಎಂ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವಥ್ ನಾರಾಯಣರವರ ತಂತ್ರಗಾರಿಕೆ ಇದೇ ಎನ್ನಲಾಗುತ್ತಿದೆ.
ಒಟ್ಟಾರೆ ಜಿಲ್ಲೆಯಲ್ಲಿ 118 ಗ್ರಾಮಪಂಚಾಯತ್ಗಳ ಪೈಕಿ 1879 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅದರಲ್ಲಿ 214 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ 1002 ಕ್ಕೂ ಹೆಚ್ಚು ಸ್ಥಾನಸಿಗುವ ಮೂಲಕ ಮೊದಲ ಸ್ಥಾನದಲ್ಲಿದೆ. ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ 651 ಕ್ಕೂ ಹೆಚ್ಚು ಸ್ಥಾನಸಿಗುವ ಮೂಲಕ ಎರಡನೇ ಸ್ಥಾನದಲ್ಲಿದೆ. ಇನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ 205 ಕ್ಕೂ ಹೆಚ್ಚು ಸ್ಥಾನಸಿಗುವ ಮೂಲಕ ಮೂರನೇ ಸ್ಥಾನದಲ್ಲಿದ್ದರೂ ಸಹ ಪ್ರಬಲವಾಗಿಯೇ ಫೈಟ್ ಮಾಡಿದೆ. ಇನ್ನು ಇತರೆಯರು ಸಹ 25 ಕ್ಕೂ ಹೆಚ್ಚು ಸ್ಥಾನ ಪಡೆದ್ದಿದ್ದಾರೆ.
(ವರದಿ : ಎ.ಟಿ. ವೆಂಕಟೇಶ್) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ