ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಯಿಂದ ಯಡವಟ್ಟು; ಪೋಸ್ಟ್ ಡಿಲೀಟ್ ಮಾಡಿದರೂ ವೈರಲ್ ಆಯ್ತು ಚಿತ್ರ

ಚುನಾವಣೆಯಲ್ಲಿ ಗೆಲ್ಲಲು ಸಹಕಾರ ನೀಡಿದರೆಂದು ಪಿಎಸ್ಐ ಮತ್ತು ಕಾನ್ಸ್ಟೆಬಲ್ಗೆ ಸನ್ಮಾನ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಭ್ಯರ್ಥಿ ಪೋಸ್ಟ್ ಹಾಕಿದ್ದಾರೆ. ಅವರಿಗೆ ತಪ್ಪಿನ ಅರಿವಾಗಿ ಪೋಸ್ಟ್ ಡಿಲೀಟ್ ಮಾಡುವ ಮುನ್ನ ಚಿತ್ರಗಳು ವೈರಲ್ ಆಗಿವೆ.

ಗ್ರಾ.ಪಂ. ಸದಸ್ಯ ಬಸನಗೌಡ ಸಾಸನೂರ ಮತ್ತು ತಾಳಿಕೋಟೆ ಪಿಎಸ್​ಐ

ಗ್ರಾ.ಪಂ. ಸದಸ್ಯ ಬಸನಗೌಡ ಸಾಸನೂರ ಮತ್ತು ತಾಳಿಕೋಟೆ ಪಿಎಸ್​ಐ

  • Share this:
ವಿಜಯಪುರ: ಈ ಪ್ರಕರಣ ಯುವ ರಾಜಕಾರಣಿಗಳು ಮತ್ತು ಪೊಲೀಸರಿಗೆ ಒಂದು ಪಾಠ. ಯಾರು ಏನೆಲ್ಲ ಮಾಡಬಾರದು ಎಂಬುದಕ್ಕೆ ಹೇಳಿ ಮಾಡಿಸಿದಂತಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ತನ್ನ ಬೆಂಬಲಿಗರೊಂದಿಗೆ ಅತೀ ಹುರುಪಿನಿಂದ ಮಾಡಿದ ಯಡವಟ್ಟು ಈಗ ಪೊಲೀಸ್ ಠಾಣೆಯ ಮಹಿಳಾ ಪಿಎಸ್​ಐ ಮತ್ತು ಪೊಲೀಸ್ ಕಾನ್ಸ್​ಟೆಬಲ್ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಇದಕ್ಕೂ ಮಿಗಿಲಾಗಿ ತಮ್ಮ ಕೃತ್ಯವನ್ನು ಫೇಸ್ ಬುಕ್ ಮೂಲಕ ಜಗಜ್ಜಾಹಿರು ಮಾಡಿ ನಂತರ ಪೋಸ್ಟ್ ನ್ನು ಡಿಲೀಟ್ ಮಾಡಿದರೂ ಆ ಒಂದು ಪೋಸ್ಟ್ ಈಗ ಸಖತ್ ವೈರಲ್ ಆಗಿದೆ.

ಅಷ್ಟಕ್ಕೂ ಆಗಿದ್ದೇನೆಂದರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವಿಗೆ ಸಹಕರಿಸಿದ ಪಿಎಸ್​ಐ ಮತ್ತು ಪೊಲೀಸ್ ಪೇದೆಯನ್ನು ಅಭ್ಯರ್ಥಿ ಮತ್ತು ಬೆಂಬಲಿಗರು ಪೊಲೀಸ್ ಠಾಣೆಗೆ ತೆರಲಿ ಸನ್ಮಾನಿಸಿ ಗೌರವಿಸಿದ ಘಟನೆ ಇದಾಗಿದೆ. ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಳವಾಟ ಗ್ರಾಮದ ಬಸನಗೌಡ ಸಾಸನೂರ ಆಯ್ಕೆಯಾಗಿದ್ದಾರೆ. ಈ ಖುಷಿಯ ಹಿನ್ನೆಲೆಯಲ್ಲಿ ಬಸನಗೌಡ ಸಾಸನೂರ ತಮ್ಮ ಬೆಂಬಲಿಗರೊಂದಿಗೆ ತಾಳಿಕೋಟೆ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಅಲ್ಲದೇ, ಅಲ್ಲಿನ ಮಹಿಳಾ ಪಿಎಸ್​ಐ ಗಂಗೂಬಾಯಿ ಜಿ. ಬಿರಾದಾರ ಅವರಿಗೆ ಹಾರ ಹಾಕಿ ಸನ್ಮಾನಿಸಿದ್ದಾರೆ. ತಾವು ಗೆದ್ದಿದ್ದಕ್ಕಾಗಿ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.  ಆಗ ಪ್ರತಿಯಾಗಿ ಪಿಎಸ್​ಐ ಅವರು ವಿಜಯೀ ಅಭ್ಯರ್ಥಿಗೆ ಸಿಹಿ ತಿನ್ನಿಸಿದ್ದಾರೆ.

ನಂತರ ಇದೇ ಪೊಲೀಸ್ ಠಾಣೆ ಹೊರಗಡೆ ಪೊಲೀಸ್ ಕಾನ್ಸ್​ಟೆಬಲ್ ಶಿವನಗೌಡ ಬಿರಾದಾರ ಅವರಿಗೂ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿದ್ದಾರೆ. ಅಲ್ಲದೇ, ಫೋಟೋ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ. ಇದು ಇಷ್ಟೇ ಆಗಿದ್ದರೆ ಬಹಿರಂಗವಾಗುತ್ತಿರಲಿಲ್ಲ. ಇಲ್ಲಿಯೂ ಗೆದ್ದ ಖುಷಿಯಲ್ಲಿ ಮುಂದಿನ ಪರಿಣಾಮ ಯೋಚಿಸದೇ ಯಡವಟ್ಟು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಹುಡುಕಾಡಿ ಕೇಳಿದಷ್ಟು ಹಣ ತೆತ್ತು ನೆಚ್ಚಿನ ನಾಯಕನ ಹಚ್ಚೆ ಹಾಕಿಸಿದ ವಿಜಯಪುರದ ಯುವಕ

ಈ ಸಂದರ್ಭದಲ್ಲಿ ಗೆದ್ದ ಅಭ್ಯರ್ಥಿಯ ಜೊತೆಗಿದ್ದ ಜೆಡಿಎಸ್ ಮುಖಂಡ ಬಸವರಾಜ ಭಜಂತ್ರಿ ಎಂಬುವರು ಸನ್ಮಾನದ ಎಲ್ಲ ಕ್ಷಣಗಳ ಫೋಟೋಗಳನ್ನು ತಮ್ಮ ಫೇಸ್​ಬುಕ್ ಅಕೌಂಟ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ, ಇಂದು ಬಳವಾಟ ಗ್ರಾಮ ಪಂಚಾಯತ ಸದಸ್ಯರಾಗಿ ನೇಮಕಗೊಂಡ ಬಸನಗೌಡ ಸಾಸನೂರ ರವರು ತಾಳಿಕೋಟಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸಪೆಕ್ಟರ್(PSI)  G G ಬಿರಾದಾರ ಮೇಡಂ ಹಾಗೂ ನಮ್ಮೂರಿನ ಹಿತೈಷಿ, ಪೊಲೀಸ್ ಆರಕ್ಷಕ ಶಿವನಗೌಡ ಬಿರಾದಾರ ಅವರನ್ನು ಭೇಟಿಯಾಗಿ ಗೆಲುವಿಗೆ ಸಹಕರಿಸಿದ್ದಕ್ಕೆ ಗೌರವ ಸನ್ಮಾನ ಮಾಡಿ ಧನ್ಯವಾದವನ್ನು ತಿಳಿಸಲಾಯಿತು  ಈ ಸಂದರ್ಭದಲ್ಲಿ ಊರಿನ ಯುವ ಮಿತ್ರರು ಉಪಸ್ಥಿತರಿದ್ದರು ಎಂದು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಪೋಸ್ಟ್ ನ್ನು ಬಸು ಸಾಸನೂರ ಮತ್ತು ಇತರ 3 ಜನರಿಗೆ ಟ್ಯಾಗ್ ಮಾಡಿದ್ದಾರೆ.

Screen Shot of fb post by Basavaraj Bhajantri
ಬಸವರಾಜ ಭಜಂತ್ರಿ ಹಾಕಿದ್ದ ಪೋಸ್ಟ್​ನ ಸ್ಕ್ರೀನ್ ಶಾಟ್


ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಬಸವರಾಜ ಭಜಂತ್ರಿ ತಮ್ಮ ಫೇಸ್ ಬುಕ್ ಖಾತೆಯಲ್ಲಿದ್ದ ಈ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಆದರೆ, ಅಷ್ಟರಲ್ಲಿ ಈ ಪೋಸ್ಟ್ ನ ಸ್ಕ್ರೀನ್ ಶಾಟ್ ತೆಗೆದ ಜನರು ವೈರಲ್ ಮಾಡಿದ್ದಾರೆ.

ಇದನ್ನೂ ಓದಿ: ಭೀಮಾ ತೀರದಲ್ಲಿ ಮತ್ತೆ ತಲ್ವಾರ್ ಝಳಪಳ: ಶತ್ರು ಸಂಹಾರ ಪೂಜೆ ನೆರವೇರಿಸಿದ ಭಾಗಪ್ಪ..!

ನಿಜವಾಗಿಯೂ ಪಿಎಸ್​ಐ ಮತ್ತು ಪೇದೆ ಈ ಅಭ್ಯರ್ಥಿಯ ಗೆಲುವಿಗೆ ಸಹಕರಿಸಿದ್ದಾರಾ ಎಂಬುದು ಗೊತ್ತಿಲ್ಲ.  ಆದರೆ, ಓರ್ವ ರಾಜಕಾರಣಿಯಾಗಿ ಏನು ಮಾಡಬಾರದು, ಓರ್ವ ಪಿಎಸ್​ಐ ಮತ್ತು ಪೇದೆಯಾಗಿ ಹೇಗೆ ಶಿಸ್ತುಬದ್ಧವಾಗಿರಬೇಕು ಎಂಬುದಕ್ಕೆ ಈ ಘಟನೆ ಪಾಠವಾಗಬೇಕಿದೆ.

GP Election Winning Candidate Felicitates Policemen and Shares Pics on Social Media
ಬಸನಗೌಡ ಸಾಸನೂರ ಅವರು ಪೊಲೀಸ್ ಕಾನ್ಸ್​​ಟೆಬಲ್​ಗೆ ಸನ್ಮಾನ ಮಾಡಿದ ಚಿತ್ರ


ಈ ಕುರಿತು ನ್ಯೂಸ್ 18 ಕನ್ನಡದ ಜೊತೆ ದೂರವಾಣಿಯಲ್ಲಿ ಮಾತನಾಡಿದ ವಿಜಯಪುರ ಎಸ್​ಪಿ ಅನುಪಮ ಅಗರವಾಲ, ನಿನ್ನೆ ರಾತ್ರಿ ಈ ಘಟನೆಯ ಕುರಿತು ಮಾಹಿತಿ ಬಂದಿದೆ. ಈ ಕುರಿತು ಶೀಘ್ರದಲ್ಲಿ ಕೂಲಂಕಷವಾಗಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ವರದಿ: ಮಹೇಶ ವಿ. ಶಟಗಾರ
Published by:Vijayasarthy SN
First published: