ವಿಜಯಪುರ: ಇದು ನ್ಯೂಸ್ 18 ಕನ್ನಡ ವರದಿಯ ಮತ್ತೋಂದು ಬಿಗ್ ಇಂಫ್ಯಾಕ್ಟ್. ಕಳೆದ ಜೂನ್ ತಿಂಗಳಿಂದ ಮಧ್ಯಾಹ್ನ ಬಿಸಿಯೂಟ ಸ್ಥಗಿತಗೊಂಡಿರುವ ಕುರಿತು ನ್ಯೂಸ್ 18 ಕನ್ನಡ ನ. 6 ರಂದು ವರದಿ ಪ್ರಸಾರ ಮಾಡಿತ್ತು. ವಿಜಯಪುರ ಜಿಲ್ಲೆಯಲ್ಲಿ ಬಿಸಿಯೂಟ ಸ್ಥಗಿತದಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ನ್ಯೂಸ್ 18 ಕನ್ನಡ ಅಲಿಯಾಬಾದ ಎಲ್. ಟಿ.-2 ರಲ್ಲಿರುವ ಮಕ್ಕಳ ಸ್ಥತಿಗತಿ ಕುರಿತು ಎಳೆಎಳೆಯಾಗಿ ವರದಿಯನ್ನು ಪ್ರಸಾರ ಮಾಡುವ ಮೂಲಕ ಅಲ್ಲಿನ ಮಕ್ಕಳು ಮತ್ತು ಪೋಷಕರು ಎದುರಿಸುತ್ತಿರುವ ಸಮಸ್ಯೆಯ ಕುರಿತು ರಿಯಾಲಿಟಿ ಚೆಕ್ ಮಾಡಿ ಸರಕಾರದ ಗಮನ ಸೆಳೆದಿತ್ತು. ಇದೀಗ ಸರಕಾರ ಮತ್ತು ವಿಜಯಪುರ ಅಕ್ಷರ ದಾಸೋಹ ವಿಭಾಗ ಈ ವರದಿಗೆ ಸ್ಪಂದಿಸಿದೆ. ಅಲಿಯಾಬಾದ ಎಲ್. ಟಿ.-2 ರಲ್ಲಿರುವ ಸರಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಬಿಸಿಯೂಟ ವಿತರಣೆ ನಡೆಸಿದೆ.
ಅಲಿಯಾಬಾದ ಎಲ್. ಟಿ.-2ರ ಸರಕಾರಿ ಶಾಲೆಯಲ್ಲಿ 183 ಮಕ್ಕಳಿದ್ದು, ಅವರೆಲ್ಲರಿಗೂ ಈಗ ಬಿಸಿಯೂಟದ ಬದಲು ಆಹಾರ ಧಾನ್ಯಗಳನ್ನು ವಿತರಿಸುವ ಕಾರ್ಯ ಆರಂಭವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಲೆಯ ಮುಖ್ಯ ಶಿಕ್ಷಕ ಎಸ್. ಆರ್. ನಾಯಕ, ಮೊದಲನೇ ಹಂತದಲ್ಲಿ ಜೂನ್ ಮತ್ತು ಜುಲೈ ತಿಂಗಳ 53 ದಿನದ ಆಹಾರ ಧಾನ್ಯ ವಿತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಿನಿಮೀಯ ರೀತಿಯಲ್ಲಿ ಭದ್ರಾ ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಹಸುವಿನ ರಕ್ಷಣೆ
1 ರಿಂದ 5ನೇ ತರಗತಿಯಲ್ಲಿ ಓದುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ 4.50 ಕೆ ಜಿ ಅಕ್ಕಿ, 800 ಗ್ರಾಂ ಗೋದಿ, 3.74 ಕೆಜಿ ತೊಗರಿ ಬೇಳೆ ವಿತರಣೆ ಮಾಡಲಾಗಿದೆ. ಅಲ್ಲದೇ, 6 ರಿಂದ 8 ತರಗತಿ 6.759 ಕೆಜಿ ಅಕ್ಕಿ, 1.200ಕೆಜಿ ಗೋದಿ, 4.611 ಗ್ರಾಂ ತೊಗರಿ ಬೇಳೆ ವಿತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ಕಳೆದ ಒಂದು ತಿಂಗಳಿಂದ ಶಾಲೆಯ ಕೊಠಡಿಯಲ್ಲಿ ಕೊಳೆಯುತ್ತಿದ್ದ ಆಹಾರ ಧಾನ್ಯಗಳು ಈಗ ಲಂಬಾಣಿ ತಾಂಡಾದ ಮಕ್ಕಳಿಗೆ ಒಂದು ಹೊತ್ತಿಗಾದರೂ ಪೌಷ್ಠಿಕಾಂಶವುಳ್ಳ ಆಹಾರ ಸೇವಿಸಲು ನೆರವಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಲೆಯ ವಿದ್ಯಾರ್ಥಿ ಮಂಜುನಾಥ ರಾಠೋಡ, ನ್ಯೂಸ್ 18 ಕನ್ನಡ ನಮ್ಮ ತಾಂಡಾಕ್ಕೆ ಬಂದು ವರದಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಇಲ್ಲಿ ನಮಗೆ ಆಹಾರ ಧಾನ್ಯ ನೀಡಲಾಗಿದೆ. ನಮ್ಮ ತಂದೆ-ತಾಯಿ ಕೂಲಿಗಾಗಿ ನೆರೆಯ ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದಾರೆ. ಈಗ ಆಹಾರ ಧಾನ್ಯ ನೀಡಿರುವುದರಿಂದ ನನಗೆ ತುಂಬಾ ಖುಷಿಯಾಗಿದೆ. ನ್ಯೂಸ್ 18 ಕನ್ನಡಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ತಾಂಡಾದ ನಾಯಕ ಮೋಹನ ನಾಯಕ ಮತ್ತು ಇತರ ಪೋಷಕರು ಕೂಡ ಶಾಲೆ ಆರಂಭವಾಗದಿದ್ದರೂ ಬಿಸಿಯೂಟದ ಬದಲು ಆಹಾರ ಧಾನ್ಯ ವಿತರಣೆ ಮಾಡಿದ್ದು ಖುಷಿ ತಂದಿದೆ. ನಾವು ಈವರೆಗೆ ಶಾಲೆಗೆ ಹೋಗಿ ಕೇಳಿದಾಗ ಮೇಲಿನ ಆದೇಶ ಬಂದಿಲ್ಲ ಎಂದು ಹೇಳುತ್ತಿದ್ದರು. ಈಗ ನ್ಯೂಸ್ 18 ಕನ್ನಡ ಈ ಕುರಿತು ವರದಿ ಪ್ರಸಾರ ಮಾಡಿದ ಬಳಿಕ ತಮ್ಮ ಮಕ್ಕಳಿಗೆ ಆಹಾರ ಧಾನ್ಯ ವಿತರಿಸಲಾಗಿದೆ. ಇದಕ್ಕಾಗಿ ನ್ಯೂಸ್ 18 ಕನ್ನಡಕ್ಕೆ ಥ್ಯಾಂಕ್ಸ್ ಹೇಳುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಪಟಾಕಿ ಸಿಡಿದು ರಾಜಧಾನಿಯಲ್ಲಿ 10 ಜನರಿಗೆ ಗಾಯ; ಸಿಡಿಯದ ಪಟಾಕಿ ನೋಡಲು ಹೋಗಿ ಕಣ್ಣಿಗೆ ಪೆಟ್ಟು ಮಾಡಿಕೊಂಡ ಬಾಲಕ
ಇಲ್ಲಿ ಇನ್ನೋಂದು ಗಮನಾರ್ಹ ವಿಷಯವೆಂದರೆ, ಆಹಾರ ಧಾನ್ಯ ವಿತರಣೆಗೆ ಶಾಲೆಯ ಮುಖ್ಯ ಶಿಕ್ಷಕ ಎಸ್. ಆರ್. ನಾಯಕ ಸ್ವತಃ ಆಸಕ್ತಿ ವಹಿಸಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ನೀಡಲಾಗುವು ಆಹಾರ ಧಾನ್ಯಗಳನ್ನು ತೂಕ ಮಾಡಿ ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಿ ಹಂಚಿಕೆ ಮಾಡಿದ್ದಾರೆ. ಅಲ್ಲದೇ, ಮಕ್ಕಳಲ್ಲಿ ಸಾಮಾಜಿಕ ಆಂತರ ಕಾಪಾಡಿಕೊಳ್ಳಲು ಶಾಲೆ ಎದುರು ಸುಣ್ಣದಿಂದ ಬಾಕ್ಸ್ ಹಾಕಿ ಅದರಲ್ಲಿ ಸಾಲಾಗಿ ನಿಲ್ಲುವಂತೆ ಮತ್ತು ಮಾಸ್ಕ್ ಧರಿಸಿ ಬಂದವರಿಗೆ ಕೈಗಳಿಗೆ ಸ್ಯಾನಿಟೈಸ್ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ತಾಂಡಾದ ಎಲ್ಲ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಹಾರ ಧಾನ್ಯ ವಿತರಿಸುವ ಮೂಲಕ ಯಾವುದೇ ಸಮಸ್ಯೆಯಾಗದಂತೆ ಜಾಗೃತಿ ವಹಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ 2342 ಶಾಲೆಗಳಲ್ಲಿ ಆಹಾರ ಧಾನ್ಯ ವಿತರಣೆ ಆರಂಭವಾಗಿದ್ದು, ವಿಜಯಪುರ ಜಿಲ್ಲೆಯಲ್ಲಿ 3.24 ಲಕ್ಷ ಮಕ್ಕಳಿಗೆ ಆಹಾರ ಧಾನ್ಯ ವಿತರಣೆ ಶುರುವಾಗಿದೆ.
ವರದಿ: ಮಹೇಶ ವಿ. ಶಟಗಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ