• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಚಾಮರಾಜನಗರದಲ್ಲಿ ಅಕ್ರಮ ಗಣಿಗಾರಿಕೆಯಿಂದ ಮೂರೇ ವರ್ಷದಲ್ಲಿ 1680 ಕೋಟಿ ರೂ ನಷ್ಟ ಬೆಳಕಿಗೆ

ಚಾಮರಾಜನಗರದಲ್ಲಿ ಅಕ್ರಮ ಗಣಿಗಾರಿಕೆಯಿಂದ ಮೂರೇ ವರ್ಷದಲ್ಲಿ 1680 ಕೋಟಿ ರೂ ನಷ್ಟ ಬೆಳಕಿಗೆ

ಗಣಿಗಾರಿಕೆ

ಗಣಿಗಾರಿಕೆ

2004ರಿಂದ 2007ರ 3 ವರ್ಷದ ಅವಧಿಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ವಿವಿಧ ಅಕ್ರಮ ಗಣಿಗಾರಿಕೆಗಳಿಂದ ಸರ್ಕಾರದ ಆದಾಯಕ್ಕೆ ಸೇರಬೇಕಿದ್ದ 1,680 ಕೋಟಿ ರೂ ಕೈತಪ್ಪಿದೆ ಎಂದು ಆರ್​ಟಿಐ ಅಡಿಯಲ್ಲಿ ಪಡೆದ ಮಾಹಿತಿಯಿಂದ ತಿಳಿದುಬಂದಿದೆ.

  • Share this:

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯಿಂದ ಕೇವಲ ಮೂರು ವರ್ಷಗಳ ಅವಧಿಯಲ್ಲಿ ಬರೋಬ್ಬರಿ 1680 ಕೋಟಿ  ರೂಪಾಯಿ  ನಷ್ಟವಾಗಿರುವುದು ಆರ್.ಟಿ.ಐ. ಅಡಿಯಲ್ಲಿ ಪಡೆದಿರುವ ದಾಖಲೆಗಳಿಂದ ಬೆಳಕಿಗೆ ಬಂದಿದೆ. ಇಂಡಿಯನ್ ಆಡಿಟ್ ಮತ್ತು ಅಕೌಂಟ್ಸ್ ಡಿಪಾರ್ಟ್ಮೆಂಟ್ 2011 ರಲ್ಲಿ ಲೆಕ್ಕಪರಿಶೋಧನಾ ವರದಿ ನೀಡಿದ್ದು, ಅಕ್ರಮ ಗಣಿಗಾರಿಕೆಯಿಂದಾಗಿ 2004 ರಿಂದ 2007 ರ ವರೆಗಿನ ಅವಧಿಯಲ್ಲಿ ಸರ್ಕಾರಕ್ಕೆ 1680 ಕೋಟಿ ರೂಪಾಯಿಗೂ ಹೆಚ್ಚು ಆದಾಯ ನಷ್ಟವಾಗಿರುವ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿಲಾಗಿದೆ. ಆದರೆ ಹತ್ತು ವರ್ಷ ಕಳೆದರೂ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ವಹಿಸಿದೇ ಇರುವುದು ಅನುಮಾನಗಳಿಗೆ ಎಡೆಮಾಡಿದೆ.


2004ರಿಂದ 2007ರ ಅವಧಿಯಲ್ಲಿ ಜಿಲ್ಲೆಯ ಜ್ಯೋತಿಗೌಡನಪುರ ಸರ್ವೆ ನಂಬರ್ 184 ರಲ್ಲಿ 226 ಎಕರೆ ಸರ್ಕಾರಿ ಗೋಮಾಳದಲ್ಲಿ ಅಕ್ರಮ ಕಪ್ಪು ಶಿಲೆ ಗಣಿಗಾರಿಕೆ ನಡೆದಿದ್ದು ಸರ್ಕಾರಕ್ಕೆ ಇಲ್ಲಿ 888.79 ಕೋಟಿ ರೂಪಾಯಿ ನಷ್ಟವಾಗಿದೆ. ಅಲ್ಲದೆ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಪೊನ್ನಾಚಿ ಹಾಗು ಚಂಗಡಿ ಗ್ರಾಮಗಳಲ್ಲಿ 102 ಎಕರೆ ಸರ್ಕಾರಿ ಭೂಮಿಯನ್ನು ಪಟ್ಟಾಭೂಮಿ ಎಂದು ಅಕ್ರಮ ಖಾತೆ ಮಾಡಿ ನಡೆದಿರುವ ಗಣಿಗಾರಿಕೆಯಲ್ಲಿ 792 ಕೋಟಿ ನಷ್ಷವಾಗಿದೆ ಎಂದು ಇಂಡಿಯನ್ ಆಡಿಟ್ ಮತ್ತು ಅಕೌಂಟ್ ಡಿಪಾರ್ಟ್ಮೆಂಟ್ ನೀಡಿರುವ  ಲೆಕ್ಕಪರಿಶೋಧನಾ ವರದಿಯಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: ಕಣ್ಮುಂದೆಯೇ ಮಹಿಳೆ ಆತ್ಮಹತ್ಯೆ ಮಾಡಿಕೊಂಡರೂ ಮನೆ ಸೀಲ್ ಮಾಡಲು ಮುಂದಾದ ಬ್ಯಾಂಕ್ ಅಧಿಕಾರಿಗಳು


ಪರಿಸರವಾದಿ ಪುಣಜನೂರು ದೊರೆಸ್ವಾಮಿ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿರುವ ಲೆಕ್ಕಪರಿಶೋಧನಾ ವರದಿಯಲ್ಲಿ ಸರ್ಕಾರಕ್ಕೆ ಯಾವ್ಯಾವ ರೀತಿ ನಷ್ಟವಾಗಿದೆ ಎಂಬುದರ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಯ ಸಚಿವರಿಗೆ ಹಾಗು ಅಧಿಕಾರಿಗಳಿಗೆ ಮನವಿ ನೀಡುತ್ತಲೇ ಬಂದಿದ್ದು ಹತ್ತು ವರ್ಷ ಕಳೆದರೂ ಈ ಬಗ್ಗೆ ಯಾವುದೇ ಕ್ರಮ ವಹಿಸಿಲ್ಲ ಎಂದು ಆರೋಪಿಸುವ ಪರಿಸರವಾದಿ ಪುಣಜನೂರು ದೊರೆಸ್ವಾಮಿ, ಈ ಅಕ್ರಮ ಗಣಿಗಾರಿಕೆಯಿಂದ ಪರಿಸರಕ್ಕೆ ಭಾರೀ ಪ್ರಮಾಣದ ಹಾನಿಯಾಗಿದೆ ಎನ್ನುತ್ತಾರೆ.


ಸರ್ಕಾರ ತನ್ನ ಸಂಪನ್ಮೂಲ ಕ್ರೋಢೀಕರಣಕ್ಕೆ ಜನರ ಮೇಲೆ ಅನವಶ್ಯಕವಾಗಿ ತೆರಿಗೆ ಹಾಕುವ ಬದಲು ಅಕ್ರಮ ಗಣಿಗಾರಿಕೆಯಿಂದ ಉಂಟಾಗಿರುವ ನಷ್ಟವನ್ನು ಸಂಬಂಧಪಟ್ಟ ಗಣಿ ಮಾಲೀಕರಿಂದ ವಸೂಲಿ ಮಾಡಬೇಕು ಎಂಬುದು ಅವರ ಒತ್ತಾಯವಾಗಿದೆ.


ಇದನ್ನೂ ಓದಿ: Kolar Crime: ಕೋಲಾರದಲ್ಲಿ ಕುಡುಕ ಗಂಡನಿಂದ ಹೆಂಡತಿಯ ಬರ್ಬರ ಹತ್ಯೆ; 10 ಸಾವಿರಕ್ಕಾಗಿ ನಡೆಯಿತು ಕೊಲೆ!


ಬಳ್ಳಾರಿ ಹೊರತುಪಡಿಸಿದರೆ ಅತಿ ಹೆಚ್ಚಿನ ಅಕ್ರಮ ಗಣಿಗಾರಿಕೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಸರ್ಕಾರಕ್ಕೆ ಇಷ್ಟೊಂದು ಪ್ರಮಾಣದ ಹಣ ನಷ್ಟವಾಗಿದ್ದರೂ ವಸೂಲಿಗೆ ಕ್ರಮವಹಿಸದೆ ಇರುವುದು ಅನುಮಾನಗಳಿಗೆ ಎಡೆಮಾಡಿದೆ. ಗಣಿಮಾಲೀಕರಿಂದ ಈ ನಷ್ಟ ವಸೂಲಿ ಮಾಡುವುದರ ಜೊತೆಗೆ ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಯ ಬಗ್ಗೆ ಉನ್ನತ ಮಟ್ದದ ತನಿಖೆ ನಡೆಸುವ ಅಗತ್ಯವಿದೆ. ಜೊತೆಗೆ ಭೂತಾಯಿಯ ಒಡಲು ಬಗೆದು ಬರಿದು ಮಾಡುತ್ತಿರುವವರ ವಿರುದ್ದ ಕಠಿಣ ಕ್ರಮ ಕೈಗೊಂಡು ಪರಿಸರದ ಮೇಲಾಗುತ್ತಿರುವ ಹಾನಿಯನ್ನು ತಡೆಗಟ್ಟಬೇಕಾಗಿದೆ ಎನ್ನುತ್ತಾರೆ ಆಕ್ರಮ ಗಣಿಗಾರಿಕೆ ವಿರುದ್ದ ಹೋರಾಟ ನಡೆಸುತ್ತಿರುವ ಬೊಕ್ಕೆಪುರದ ಹರೀಶ್.


ವರದಿ: ಎಸ್.ಎಂ.ನಂದೀಶ್

Published by:Vijayasarthy SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು