HOME » NEWS » District » GOVERNMENT TO DEVELOP AMBUTIRTHA THE BIRTH PLACE OF SHARAVATI RIVER IN SHIVAMOGGA SNVS

ತಲಕಾವೇರಿ ಮಾದರಿಯಲ್ಲಿ ಶರಾವತಿ ಉಗಮಸ್ಥಳ ಅಂಬುತೀರ್ಥ ಅಭಿವೃದ್ಧಿಗೆ ಚಾಲನೆ

ರಾಜ್ಯಕ್ಕೆ ಬೆಳಕು ನೀಡುವ ಜೀವನದಿ ಶರಾವತಿಯ ಉಗಮಸ್ಥಾನ ಅಂಬುತೀರ್ಥದ ಅಭಿವೃದ್ಧಿಗೆ ಇದೇ ಮೊದಲ ಬಾರಿಗೆ ಸರ್ಕಾರ ನಿರ್ಧರಿಸಿದೆ. ಈ ಯೋಜನೆಗೆ ಹಣವನ್ನೂ ಬಿಡುಗಡೆ ಮಾಡಿರುವುದು ಜನರಿಗೆ ಸಂತಸ ತಂದಿದೆ.

news18-kannada
Updated:July 3, 2020, 4:56 PM IST
ತಲಕಾವೇರಿ ಮಾದರಿಯಲ್ಲಿ ಶರಾವತಿ ಉಗಮಸ್ಥಳ ಅಂಬುತೀರ್ಥ ಅಭಿವೃದ್ಧಿಗೆ ಚಾಲನೆ
ಶಿವಮೊಗ್ಗದ ಅಂಬುತೀರ್ಥ
  • Share this:
ಶಿವಮೊಗ್ಗ: ‘ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ; ಸಾಯೋದ್ರೋಳಗೆ ಒಮ್ಮೆ ನೋಡು ಜೋಗದ ಗುಂಡಿ’ ಎಂಬ ಹಾಡು ವಿಶ್ವವಿಖ್ಯಾತ ಜೋಗ ಜಲಪಾತದ ವೈಭವವನ್ನ ತಿಳಿಸುತ್ತೆ.  ಜೋಗ ಜಲಪಾತದ ರುದ್ರ ರಮಣೀಯ ದೃಶ್ಯ ಸೌಂದರ್ಯ ಎಂತಹವರನ್ನೂ ಬೆರಗುಗೊಳಿಸುತ್ತದೆ. ಜೋಗ ಜಲಪಾತದಲ್ಲಿ ದುಮ್ಮಿಕ್ಕುವ ಶರಾವತಿ ಈ ನಾಡಿಗೆ ಬೆಳಕು ನೀಡಿರುವ ಜೀವನದಿ. ಇಷ್ಟು ದಿನಗಳ ಕಾಲ ಶರಾವತಿ ನದಿಯ ಉಗಮಸ್ಥಾನ ಅಭಿವೃದ್ಧಿ ಕಂಡಿರಲಿಲ್ಲ. ಅದರೆ ಈಗ ಸರ್ಕಾರ ಶರಾವತಿ ನದಿಯ ಉಗಮ‌ ಸ್ಥಾನವನ್ನ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿಸಲು ಯೋಜನೆ ರೂಪಿಸಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದಲ್ಲಿ ಶರಾವತಿ ನದಿ ಉಗಮವಾಗಿದ್ದು, ಈ ಸ್ಥಳದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಕೊಡಗಿನ ತಲಕಾವೇರಿ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಿಸುವ ಯೋಜನೆ ಹಾಕಿಕೊಂಡಿದೆ. ಈಗಾಗಲೇ ಸಿಎಂ ನೇತೃತ್ವದಲ್ಲಿ ಸಭೆ ನಡೆಸಿ ಅಂಬುತೀರ್ಥದ ಅಭಿವೃದ್ಧಿ ಹಣ ಸಹ ನೀಡಲಾಗಿದೆ. ಪ್ರವಾಸೋದ್ಯಮ, ಮುಜರಾಯಿ, ನೀರಾವರಿ ಇಲಾಖೆಗಳ ಮುಖಾಂತರ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಒದಗಿಸಲಾಗುತ್ತಿದೆ. 1.70 ಕೋಟಿಯಲ್ಲಿ ರಾಮೇಶ್ವರ ದೇವಸ್ಥಾನದ ಪುನರ್ ನಿರ್ಮಾಣ  ಸೇರಿದಂತೆ ಸುಮಾರು 15 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳು ಅಂಬುತೀರ್ಥದಲ್ಲಿ ನಡೆಯಲಿವೆ.

ಪ್ರಥಮ ಹಂತದಲ್ಲಿ ಪುಷ್ಕರಣಿ ನಿರ್ಮಾಣ, ಅಂಬುತೀರ್ಥ ಕೆರೆ ಸುತ್ತಲೂ ಬದು ಗೋಡೆ, ವಾಕಿಂಗ್ ಪಾಥ್, ನದಿಯ ಉಗಮದ ಹಿಂಭಾಗದಲ್ಲಿ ತಡೆಗೋಡೆ ನಿರ್ಮಾಣ, ಸಮುದಾಯ ಭವನ ನಿರ್ಮಾಣ, ನೊಣಬೂರು ವೃತ್ತದಿಂದ ಅಂಬುತೀರ್ಥ- ಆರಗಾ ರಸ್ತೆ ನಿರ್ಮಾಣ ಆಗಲಿದೆ. ದೇವಾಲಯ ಬಹಳ ಪ್ರಾಚೀನವಾಗಿರುವ ಹಿನ್ನೆಲೆಯಲ್ಲಿ ಆಗಮ ಶಾಸ್ತ್ರದ ಪ್ರಕಾರ ಶಿಲಾ ದೇಗುಲ ಪುನರ್ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಕೊರೋನಾ ಸೋಂಕು ಹೆಚ್ಚಳ; 2 ಸಾವಿರಕ್ಕೂ ಹೆಚ್ಚು ಬೆಡ್​ಗಳ ವ್ಯವಸ್ಥೆ ಮಾಡುತ್ತಿರುವ ಜಿಲ್ಲಾಡಳಿತ

ತೀರ್ಥಹಳ್ಳಿಯಿಂದ ಹೊಸನಗರಕ್ಕೆ ತೆರಳುವ ಮಾರ್ಗ ಮಧ್ಯೆ ಶರಾವತಿ ನದಿಯ ಉಗಮಸ್ಥಾನ ಅಂಬುತೀರ್ಥವಿದೆ. ಅಂಬುತೀರ್ಥದಲ್ಲಿ ಹುಟ್ಟುವ ಶರಾವತಿ ನದಿ ಸಮುದ್ರ ಸೇರುವ ವೇಳೆಗೆ ಉಪನದಿಗಳು ಸೇರಿಕೊಂಡು ದೊಡ್ಡ ನದಿಯಾಗಿ ರೂಪ ಪಡೆದಿದೆ.  ಶರಾವತಿ ನದಿ ಉಗಮ ಸ್ಥಾನ ಅಂಬುತೀರ್ಥಕ್ಕೆ ಐತಿಹಾಸಿಕ ಮಹತ್ವವಿದ್ದು, ತ್ರೇತಾಯುಗದಲ್ಲಿ‌ ಅರಣ್ಯವಾಸದಲ್ಲಿದ್ದ ಶ್ರೀರಾಮ ಈ ಪ್ರದೇಶಕ್ಕೆ ಒಮ್ಮೆ ಬಂದು ನೆಲೆಸಿದ್ದ. ಸ್ನಾನ ಸಂಧ್ಯಾದಿ ಕಾರ್ಯಕ್ಕೆ ನೀರು ಬೇಕಾಗಿ ನೆಲಕ್ಕೆ ಬಾಣವನ್ನು ಬಿಟ್ಟಾಗ ತೀರ್ಥೋದ್ಭವ ಆಯಿತಂತೆ. ಅಂಬು ಎಂದರೆ ಬಾಣ. ಬಾಣ ಬಿಟ್ಟಾಗ ಹುಟ್ಟಿದ ತೀರ್ಥದ ಸ್ಥಳವೇ ಅಂಬುತೀರ್ಥ ಆಗಿದೆ ಎಂದು ಪ್ರತೀತಿ ಇದೆ. ಶ್ರೀರಾಮನ ಶರದಿಂದ ಹುಟ್ಟಿದ ನದಿ ಶರಾವತಿ ಎಂಬ ಹೆಸರು ಪಡೆದಿದೆ ಎಂಬ ಉಲ್ಲೇಖ ಪುರಾಣ ಪುಣ್ಯ ಕಥೆಗಳಲ್ಲಿದೆ.

Youtube Video


ಇಷ್ಟು ದಿನಗಳ ಕಾಲ ಇತಿಹಾಸ ಪ್ರಸಿದ್ದ ಶ್ರೀ ರಾಮೇಶ್ವರ ದೇವಸ್ಥಾನವನ್ನ ಅಭಿವೃದ್ಧಿಪಡಿಸಲು ಸರ್ಕಾರ ಗಮನಹರಿಸಿರಲಿಲ್ಲ. ಪ್ರಸ್ತುತ ದಿನಗಳಲ್ಲಿ ಈ ಕೈಂಕರ್ಯಕ್ಕೆ‌ ಮುಂದಾಗಿರುವುದಕ್ಕೆ ಭಕ್ತರಲ್ಲಿ ಸಂತಸ ಮೂಡಿಸಿದೆ. ಅಂಬುತೀರ್ಥದ ಸುತ್ತಮುತ್ತಲು ಇರುವಂತಹ ಸಹ್ಯಾದ್ರಿ ಪರ್ವತ ಶ್ರೇಣಿಗಳು ಮನಸೊರೆಗೊಳ್ಳುತ್ತವೆ. ಸರ್ಕಾರ ಹಾಗೂ ಸಂಬಂಧಪಟ್ಟವರು ಅದಷ್ಟು ಬೇಗ ಅಂಬುತೀರ್ಥದ ಪುಣ್ಯ ಕ್ಷೇತ್ರವನ್ನು ತಲಕಾವೇರಿ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಿದರೆ ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೂ ಹೆಚ್ಚಿನ ಆದ್ಯತೆ ಸಿಗಲಿದೆ. ರಾಜ್ಯದ ಜನತೆಗೆ ಶರಾವತಿ ನದಿಯ ಮಹತ್ವ ತಿಳಿಸಲು ಅನುಕೂಲವಾಗಲಿದೆ.ವರದಿ: ಹೆಚ್ ಆರ್ ನಾಗರಾಜ
First published: July 3, 2020, 4:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories