ರಾಜ್ಯದ ಶ್ರೀಮಂತ ದೇಗುಲದಲ್ಲಿ ವ್ಯವಸ್ಥಾಪನಾ ಸಮಿತಿಗೆ ಸರಕಾರ ಕೋಕ್ : ಅಭಿವೃದ್ಧಿ ಪ್ರಾಧಿಕಾರ ರಚನೆಯ ಸಾಧ್ಯತೆ..!

ಸರಕಾರ ಅಭಿವೃದ್ಧಿ ಪ್ರಾಧಿಕಾರ ರಚಿಸುತ್ತದೆ ಎಂದಾದಲ್ಲಿ ಪ್ರಾಧಿಕಾರ ರಚನೆ ಆಗುವಲ್ಲಿವರೆಗೆ ಸರಕಾರ ಅಭಿವೃದ್ಧಿ ಸಮಿತಿ ರಚಿಸುತ್ತದೆ. ಇದರಲ್ಲಿ ಐವರು ಸದಸ್ಯರನ್ನು ಒಳಗೊಳ್ಳಲಿದ್ದು, ಪ್ರಾಧಿಕಾರ ರಚನೆ ಆಗುವಲ್ಲಿ ವರೆಗೆ ಕ್ಷೇತ್ರದ ಆಡಳಿತ, ಅಭಿವೃದ್ಧಿ ಕೆಲಸಗಳ ಬಗ್ಗೆ ಈ ಸಮಿತಿ ಜವಾಬ್ದಾರಿ ವಹಿಸಿಕೊಳ್ಳಲಿದೆ

news18-kannada
Updated:October 21, 2020, 4:54 PM IST
ರಾಜ್ಯದ ಶ್ರೀಮಂತ ದೇಗುಲದಲ್ಲಿ ವ್ಯವಸ್ಥಾಪನಾ ಸಮಿತಿಗೆ ಸರಕಾರ ಕೋಕ್ : ಅಭಿವೃದ್ಧಿ ಪ್ರಾಧಿಕಾರ ರಚನೆಯ ಸಾಧ್ಯತೆ..!
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ
  • Share this:
ಮಂಗಳೂರು(ಅಕ್ಟೋಬರ್​. 21): ರಾಜ್ಯದ ಶ್ರೀಮಂತ ದೇಗುಲವಾದ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಆಡಳಿತ ಇನ್ನು ಮುಂದೆ ಅಭಿವೃದ್ಧಿ ಸಮಿತಿ  ಅಥವಾ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ತರಬೇಕೇ ಎನ್ನುವ ವಿಚಾರ ಇದೀಗ ಸರಕಾರದ ಮುಂದಿದೆ. ಈ ಹಿನ್ನಲೆಯಲ್ಲಿ ಧಾರ್ಮಿಕ ಧತ್ತಿ ಇಲಾಖೆ ಕುಕ್ಕೆ ಸುಬ್ರಹ್ಮಣ್ಯದ ಆಡಳಿತ ಯಾವ ಸಮಿತಿಯ ನೇತೃತ್ವದಲ್ಲಿ ನಡೆಯಬೇಕು ಎನ್ನುವ ಕುರಿತ ಚರ್ಚೆ ನಡೆಸುತ್ತಿದೆ. ರಾಜ್ಯದ ಶ್ರೀಮಂತ ಕ್ಷೇತ್ರ ಎಂದು ಗುರುತಿಸಿಕೊಂಡಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅವಧಿ ಮುಗಿದು ಒಂದು ವರ್ಷ ಪೂರ್ಣಗೊಂಡಿದೆ. ದೇಗುಲದಲ್ಲಿ ನೂತನ ಆಡಳಿತ ಸಮಿತಿ ನೇಮಕಾತಿ ವಿಚಾರ ಆಗಾಗ್ಗೆ ಪ್ರಸ್ತಾಪವಾಗುತ್ತಾದರೂ ಸರಕಾರ ಮಾತ್ರ ಈ ಬಗ್ಗೆ ಸಮರ್ಪಕವಾದ ತೀರ್ಮಾನ ಈವರಗೂ ತೆಗೆದುಕೊಂಡಿಲ್ಲ. ಈ ವಿಳಂಬಕ್ಕೆ ಕಾರಣ ಕ್ಷೇತ್ರದಲ್ಲಿ ವ್ಯವಸ್ಥಾಪನಾ ಸಮಿತಿ ಬದಲಿಗೆ ಅಭಿವೃದ್ಧಿ ಸಮಿತಿ ಅಥವಾ ಪ್ರಾಧಿಕಾರ ರಚಿಸಲು ಸರಕಾರ ನಿರ್ಧರಿಸಿದೆ ಎನ್ನಲಾಗಿದೆ.

ಪ್ರಸ್ತುತ ವ್ಯವಸ್ಥಾಪನ ಸಮಿತಿಯ ಆಯ್ಕೆಯ  ಪ್ರಕ್ರಿಯೆಗಳು ಸ್ಥಗಿತಗೊಂಡಿದೆ. ಆದುದರಿಂದ ಕುಕ್ಕೆಗೆ ಮುಂದೆ ಅಭಿವೃದ್ಧಿ ಸಮಿತಿಯೋ ಅಥವಾ ಪ್ರಾಧಿಕಾರವೋ ಎನ್ನುವ ನಿರೀಕ್ಷೆಯಲ್ಲಿ ಇದೀಗ ಕ್ಷೇತ್ರದ ಭಕ್ತ ಸಮುದಾಯದಲ್ಲಿದೆ. ಈ ಕುರಿತಂತೆ   ಸರಕಾರದ ಅಂತಿಮ ತೀರ್ಮಾನವು ಕೆಲವೇ ದಿನಗಳಲ್ಲಿ ಹೊರಬೀಳುವ ಸಾಧ್ಯತೆಗಳಿವೆ.

ಸುಬ್ರಹ್ಮಣ್ಯ ಕ್ಷೇತ್ರವನ್ನು ಪ್ರಾಧಿಕಾರ ಮಾಡಬೇಕೆಂಬ ಚಿಂತನೆಯ ಬಗ್ಗೆ ಇಲಾಖೆ, ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಇದರ ಮುಂದುವರೆದ ಭಾಗವಾಗಿ ಸದ್ಯ ಪ್ರಾಧಿಕಾರ ರಚಿಸದೆ ಅಭಿವೃದ್ಧಿ ಸಮಿತಿ ರಚಿಸಲು ಸರಕಾರ ನಿರ್ಧರಿಸಿದೆ ಎನ್ನಲಾಗಿದೆ.  ದೇವಳದ ಆಡಳಿತ ನೋಡಿಕೊಳ್ಳುವ ದೃಷ್ಠಿಯಿಂದ ಇಲಾಖೆ ವತಿಯಿಂದ ಸಾರ್ವಜನಿಕವಾಗಿ ಅರ್ಜಿ ಕರೆದು, ಬಳಿಕ ಅವುಗಳ ಪರಿಶೀಲನೆ ನಡೆಸಿ, 8 ಮಂದಿ ಸದಸ್ಯರನ್ನು ಒಳಗೊಂಡ ವ್ಯವಸ್ಥಾಪನ ಸಮಿತಿಯು ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ಮುಖಾಂತರ ರಚನೆಯಾಗುತ್ತಿತ್ತು. ಆ ಬಳಿಕದಲ್ಲಿ ಕ್ಷೇತ್ರದ ಅಭಿವೃದ್ಧಿ, ಚಟುವಟಿಕೆಗಳು ವ್ಯವಸ್ಥಾಪನ ಸಮಿತಿ ಸದಸ್ಯರ, ಸಮಿತಿಯ ನಿರ್ಣಯದಂತೆ ನಡೆಯುತ್ತದೆ. ಆದರೆ, ಸರಕಾರ ಈವರೆಗೆ ವ್ಯವಸ್ಥಾಪನಾ ಸಮಿತಿ ರಚನೆಯ ಬಗ್ಗೆ ಯಾವುದೇ ಸೂಚನೆ ನೀಡದಿರುವ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಸಮಿತಿ ಅಥವಾ ಅಭಿವೃದ್ಧಿ ಪ್ರಾಧಿಕಾರದ ರಚನೆಯಾಗುವುದು ಬಹುತೇಕ ಸ್ಪಷ್ಟವಾಗಿದೆ ಎನ್ನುವ ನಿರೀಕ್ಷೆಗಳು ಹೆಚ್ಚಾಗಿವೆ.

ಸರಕಾರ ಅಭಿವೃದ್ಧಿ ಪ್ರಾಧಿಕಾರ ರಚಿಸುತ್ತದೆ ಎಂದಾದಲ್ಲಿ ಪ್ರಾಧಿಕಾರ ರಚನೆ ಆಗುವಲ್ಲಿವರೆಗೆ ಸರಕಾರ ಅಭಿವೃದ್ಧಿ ಸಮಿತಿ ರಚಿಸುತ್ತದೆ. ಇದರಲ್ಲಿ ಐವರು ಸದಸ್ಯರನ್ನು ಒಳಗೊಳ್ಳಲಿದ್ದು, ಪ್ರಾಧಿಕಾರ ರಚನೆ ಆಗುವಲ್ಲಿ ವರೆಗೆ ಕ್ಷೇತ್ರದ ಆಡಳಿತ, ಅಭಿವೃದ್ಧಿ ಕೆಲಸಗಳ ಬಗ್ಗೆ ಈ ಸಮಿತಿ ಜವಾಬ್ದಾರಿ ವಹಿಸಿಕೊಳ್ಳಲಿದೆ. ಕುಕ್ಕೆ ದೇಗುಲದ ಅಭಿವೃದ್ಧಿ ಸಮಿತಿಗೆ ನೇಮಕ ಮಾಡುವ ಬಗ್ಗೆ ಐವರು ಸದಸ್ಯರ ಪಟ್ಟಿ ಈಗಾಗಲೇ ಸಿದ್ಧಗೊಂಡಿದ್ದು, ಪೊಲೀಸ್ ಇಲಾಖೆ ವತಿಯಿಂದ ಪರಿಶೀಲನೆ ಹಂತದಲ್ಲಿದೆ  ಎನ್ನುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ : ಯೋಗ್ಯತೆ ಇದ್ದವರು ಸಮಗ್ರ ಕರ್ನಾಟಕಕ್ಕೆ ಮುಖ್ಯಮಂತ್ರಿ ಆಗಲಿ; ಯತ್ನಾಳ್​​​ಗೆ ಸಿ.ಟಿ.ರವಿ ತಿರುಗೇಟು

ಒಂದು ವೇಳೆ ಕುಕ್ಕೆ ಅಭಿವೃದ್ಧಿ ಪ್ರಾಧಿಕಾರವಾದಲ್ಲಿ ಕ್ಷೇತ್ರದ ಎಲ್ಲಾ ಆಡಳಿತವೂ ಈ ಪ್ರಾಧಿಕಾರದ ವ್ಯಾಪ್ತಿಗೆ ಬರಲಿದೆ. ಅಲ್ಲದೆ ಕ್ಷೇತ್ರದಲ್ಲಾಗಬೇಕಾದ ಎಲ್ಲಾ ಅಭಿವೃದ್ಧಿ ಕಾಮಗಾರಿಗಳೂ ಈ ಪ್ರಾಧಿಕಾರದ ಅಡಿಯಲ್ಲೇ ನಡೆಯಲಿದ್ದು, ಮುಖ್ಯಮಂತ್ರಿ ಈ ಪ್ರಾಧಿಕಾರದ ಅಧ್ಯಕ್ಷರಾಗಿರುವುದರಿಂದ ಅಭಿವೃದ್ಧಿ ಕಾಮಗಾರಿಗಳು ಯಾವುದೇ ಲೋಪಗಳಿಲ್ಲದೆ ನಡೆಯುತ್ತದೆ.
ಭಾರೀ ಚರ್ಚೆಯಲ್ಲಿರುವ ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದು,ಕುಕ್ಕೆ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಬಗ್ಗೆ ಪ್ರಸ್ತಾಪನೆ ಇದೆ. ಆದರೆ, ಅಂತಿಮ ತೀರ್ಮಾನ ಆಗಿಲ್ಲ. ಕ್ಷೇತ್ರಕ್ಕೆ ವ್ಯವಸ್ಥಾಪನಾ ಸಮಿತಿ, ಅಭಿವೃದ್ಧಿ ಸಮಿತಿ ಅಥವಾ ಪ್ರಾಧಿಕಾರ ರಚನೆಯ ಪ್ರಸ್ತಾಪ ಇಲಾಖೆಯ ಮುಂದಿದೆ. ಕ್ಷೇತ್ರದ ಅಭಿವೃದ್ಧಿ ದೃಷ್ಠಿಯಲ್ಲಿ ವಿಮರ್ಶೆ ನಡೆಸಿ ಮುಂದಿನ ಕ್ರಮಕೈಗೊಳ್ಳಲಾಗುವುದು. ಮುಂದಿನ ಒಂದು ವಾರದ ಒಳಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
Published by: G Hareeshkumar
First published: October 21, 2020, 4:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading