ಮೈಸೂರು(ಜೂ.09): ಕೇವಲ ಸಕ್ಕರೆ ಕಾರ್ಖಾನೆ ಅಷ್ಟೇ ಅಲ್ಲ ರಾಜ್ಯದ ಎಲ್ಲ ಕಾರ್ಖಾನೆ ಖಾಸಗೀಕರಣ ಮಾಡಲಿ. ನಾನೊಬ್ಬ ಉದ್ಯಮಿಯಾಗಿ ಖಾಸಗೀಕರಣ ಆಗಬೇಕು ಅಂತ ಒತ್ತಾಯಿಸುತ್ತೇನೆ. ಸರ್ಕಾರ ಇರುವುದು ಕಾರ್ಖಾನೆ ನಡೆಸುವುದಕ್ಕಲ್ಲ ಎಂದು ಬಿಜೆಪಿ ಶಾಸಕ ಮುರುಗೇಶ ನಿರಾಣಿ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಖಾಸಗಿಯವರಿಗೆ ಕಾರ್ಖಾನೆಗಳನ್ನು ಕೊಡಿ ಅವರು ಸೂಕ್ತ ನಿರ್ವಹಣೆ ಮಾಡುತ್ತಾರೆ. ಕಾರ್ಖಾನೆ ಮಾರಾಟಕ್ಕೆ ನನ್ನ ವಿರೋಧ ಇದೆ. ಆದರೆ, ಗುತ್ತಿಗೆ ನೀಡಿ ಟೆಂಡರ್ ಮೂಲಕ ಕಾರ್ಖಾನೆ ನಡೆಸಲಿ. ಬೇಕಾದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಟೆಂಡರ್ನಲ್ಲಿ ಭಾಗಿಯಾಗಲಿ. ವಿರೋಧಕ್ಕಾಗಿ ವಿರೋಧ ಮಾಡೋದು ಬೇಡ. ಖಾಸಗೀಕರಣದ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದಾರೆ ಎಂದರು.
ನಿರಾಣಿ ಶುಗರ್ಸ್ನಲ್ಲಿ ಕೇವಲ 32 ಕೋಟಿ ರೂಪಾಯಿ ಕಬ್ಬಿನ ಬಿಲ್ ಮಾತ್ರ ಬಾಕಿ ಇದೆ. ಆದರೆ, ನಾವು 2000 ಕೋಟಿ ವ್ಯವಹಾರ ಮಾಡಿಸಿದ್ದೇವೆ. ಅದರಲ್ಲಿ 32 ಕೋಟಿ ಮಾತ್ರ ಬಾಕಿ ಇದೆ. ಅದನ್ನು ಇನ್ನು 10 ದಿನದಲ್ಲಿ ಕ್ಲಿಯರ್ ಮಾಡುತ್ತೇನೆ ಎಂದರು ತಿಳಿಸಿದರು.
ಪಾಂಡವಪುರ ಕಾರ್ಖಾನೆ ಖಾಸಗೀಕರಣಕ್ಕೆ ಮಂಡ್ಯ ಜನಪ್ರತಿನಿಧಿಗಳ ವಿರೋಧ ವಿಚಾರ. ಯಾರು ಸಹ ವಿರೋಧ ಮಾಡಿಲ್ಲ. ಅಲ್ಲಿನ ಎಲ್ಲ ಜನಪ್ರತಿನಿಧಿಗಳು ನಮಗೆ ಸಹಕಾರ ನೀಡಿದ್ದಾರೆ. ಪಾಂಡುವಪುರ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ರಾಜವಂಶಸ್ಥರನ್ನ ಆಹ್ವಾನಿಸಲು ಬಂದಿದ್ದೆ ಎಂದರು.
ಮೈ ಶುಗರ್ಸ್ ಕಾರ್ಖಾನೆ ಬಗ್ಗೆ ನಾನು ಏನೂ ತೀರ್ಮಾನ ಕೈಗೊಂಡಿಲ್ಲ. ಪಾಂಡವಪುರ ಕಾರ್ಖಾನೆಗೆ 26 ಕೋಟಿ ಹಣ ಕಟ್ಟಬೇಕಿದೆ. ಅದನ್ನ ನಾವು ಕಟ್ಟುತ್ತೇವೆ, ಆದರೆ ಅಲ್ಲಿನ ಬಾಕಿ ನಮಗೆ ಸಂಬಂಧ ಪಡುವುದಿಲ್ಲ. ಈ ವರ್ಷದಿಂದ ನಾವು ಅಲ್ಲಿನ ಎಲ್ಲ ವ್ಯವಸ್ಥೆ ಬಳಸಿಕೊಂಡು ಕಬ್ಬು ಅರೆಯುತ್ತೇವೆ. ಅದರಲ್ಲಿನ ಬಯೋ ಉತ್ಪನ್ನಗಳನ್ನ ತಯಾರಿಸಿ ರೈತರಿಗೆ ಹಿಂದಿಗಿಂತ ಹೆಚ್ಚಿನ ಆದಾಯ ಬರುವಂತೆ ಮಾಡುತ್ತೇವೆ. ಆ ಭಾಗದಲ್ಲಿ ಇದರಿಂದ ನಿರುದ್ಯೋಗ ನಿವಾರಣೆ ಆಗುತ್ತದೆ. ಆದರೆ, ಮೈ ಶುಗರ್ಸ್ ಬಗ್ಗೆ ನಾನೇನು ತೀರ್ಮಾನ ಮಾಡಿಲ್ಲ. ವಿರೋಧ ಮಾಡುವವರು ಯಾವ ಕಾರಣಕ್ಕೆ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.
ಈರಣ್ಣ ಕಡಾಡಿ, ಅಶೋಕ್ ಗಸ್ತಿ ಬಿಜೆಪಿಯ ಕಟ್ಟಾಳುಗಳು:
ರಾಜ್ಯಸಭೆಗೆ ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿ ಆಯ್ಕೆ ವಿಚಾರ. ಅವರು ಅಚ್ಚರಿಯ ಅಭ್ಯರ್ಥಿಗಳಲ್ಲ. ಅವರ ಹೆಸರು ರಾಜ್ಯ ಬಿಜೆಪಿ ಕಳುಹಿಸಿದ ಪಟ್ಟಿಯಲ್ಲಿತ್ತು. ಈರಣ್ಣ ಕಡಾಡಿ, ಅಶೋಕ್ ಗಸ್ತಿ ಬಿಜೆಪಿಯ ಕಟ್ಟಾಳುಗಳು. ಎಲೆ ಮರೆ ಕಾಯಿಯಂತಿದ್ದು ಪಕ್ಷ ಕಟ್ಟಿದ್ದಾರೆ. ಮಾಧ್ಯಮಗಳ ಕೆಲವರ ಹೆಸರು ಮಾತ್ರ ಬರುತ್ತಿತ್ತು. ಆದರೆ, ಹೈಕಮಾಂಡ್ಗೆ ಕಳುಹಿಸಿ ಲಿಸ್ಟ್ನಲ್ಲಿ ಈ ಇಬ್ಬರ ಹೆಸರು ಇತ್ತು.ಇದರಲ್ಲಿ ಅಚ್ಚರಿ ಏನೂ ಇಲ್ಲ ಎಂದರು.
ಇದನ್ನೂ ಓದಿ : ರಾಜ್ಯಸಭಾ ಚುನಾವಣೆ: ಬಿಜೆಪಿಯಿಂದ ಈರಣ್ಣ ಕಡಾಡಿ, ಅಶೋಕ ಗಸ್ತಿ ನಾಮಪತ್ರ ಸಲ್ಲಿಕೆ
ಇದರಿಂದ ಯಾರಿಗೂ ಅಸಮಧಾನವು ಇಲ್ಲ. ನಾನು ಮಂತ್ರಿ ಆಕಾಂಕ್ಷಿಯಾಗಿದ್ದೆ ಸಿಗಲಿಲ್ಲ ಅಂತ ಅಸಮಾಧಾನ ತೋರಲಿಲ್ಲ. ನಮ್ಮ ಪಕ್ಷದಲ್ಲಿ ದುಡಿದವರಿಗೆ ಸ್ಥಾನಮಾನ ಸಿಕ್ಕೆ ಸಿಗುತ್ತೆ. ಪರಿಷತ್ ಚುನಾವಣೆಯಲ್ಲಿ ಪಕ್ಷಕ್ಕೆ ದುಡಿದವರಿಗೆ ಸ್ಥಾನಮಾನ ಸಿಗಲಿದೆ. ಪರಿಷತ್ ಚುನಾವಣೆ ಆಯ್ಕೆ ಸಮಿತಿಯಲ್ಲಿ ಮುರುಗೇಶ್ ನಿರಾಣಿ ಇಲ್ಲ. ಹಾಗಾಗಿ ಪರಿಷತ್ ಚುನಾವಣೆ ವಿಚಾರವನ್ನ ಸೂಕ್ತ ವ್ಯಕ್ತಿಗಳ ಬಳಿ ಕೇಳಿ ಎಂದು ಶಾಸಕ ಮುರುಗೇಶ ನಿರಾಣಿ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ