ಕಾರವಾರ: ಗೋವಾ ವಾಸ್ಕೋದ ಕನ್ನಡ ಮಾಧ್ಯಮ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಳಗಾ ಪರೀಕ್ಷಾ ಕೇಂದ್ರದ ಬದಲು ಗೋವಾದಲ್ಲೇ ಪರೀಕ್ಷೆ ನಡೆಸುವ ಜನರ ಒತ್ತಾಯದ ಜತೆಗೆ ನ್ಯೂಸ್ 18 ಕನ್ನಡ ವರದಿಗೆ ಗೋವಾ ಮತ್ತು ಕರ್ನಾಟಕ ಸರಕಾರಗಳು ಸ್ಪಂದಿಸಿದ್ದು, ಕಾರವಾರದ ಉಳಗಾ ಬದಲು ಗೋವಾದಲ್ಲೆ ಪರೀಕ್ಷೆ ನಡೆಸಲು ತೀರ್ಮಾನಿಸಿವೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಂಗಳವಾರ ಅಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಈ ವಿಷಯ ಸ್ಪಷ್ಟಪಡಿಸಿದ್ದಾಗಿ ತಿಳಿದುಬಂದಿದೆ. ರಾಜ್ಯ ಸರ್ಕಾರ ಗೋವಾ ಸರ್ಕಾರದೊಂದಿಗೆ ಮಾತನಾಡಲಿದ್ದು, ವಾಸ್ಕೋದ ಸುರಕ್ಷಿತ ಸ್ಥಳದಲ್ಲೇ ಪರೀಕ್ಷೆ ನಡೆಸುವ ಸಾಧ್ಯತೆ ಇದೆ. ಗೋವಾ ಮತ್ತು ಕಾರವಾರದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಈ ಮಹತ್ವದ ತೀರ್ಮಾನ ಕೈಗೊಳ್ಳಲು ಮುಂದಾಗಿದೆ.
ಜೂ. 25 ರಿಂದ ಜು.4ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಗೋವಾದ 54 ವಿದ್ಯಾರ್ಥಿಗಳಿಗೆ ಅಲ್ಲಿಯೇ ಸುಗಮ ರೀತಿಯಲ್ಲಿ ನಡೆಸಲು ತಯಾರಿ ನಡೆಸಿಕೊಳ್ಳಲು ಇಲಾಖೆ ಮುಂದಾಗುತ್ತಿದೆ. ಗೋವಾ ವಿದ್ಯಾರ್ಥಿಗಳಿಗೆ ಉಳಗಾದ ಬದಲು ಗೋವಾದಲ್ಲೇ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಡಿಡಿಪಿಐ ಹರೀಶ್ ಗಾಂವಕರ್ ಕೂಡ ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿ: ಕೊರೋನಾ ವಾರಿಯರ್ಸ್ ಪ್ರೇರಣೆಗೆ ವಿಶ್ವದ 20 ಖ್ಯಾತ ಸಂಗೀತಗಾರರಿಂದ ಲೈಫ್ ಎಗೈನ್ ಸಂಗೀತ ಝೇಂಕಾರ!
ವಾಸ್ಕೋ ಮತ್ತು ಝರಿಯ ಯಲ್ಲಾಲಿಂಗೇಶ್ವರ ಪ್ರೌಢಶಾಲೆಯ 47 ಮತ್ತು ಪುನರಾವರ್ತಿತ 7 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ತಾಲೂಕಿನ ಉಳಗಾ ಪರೀಕ್ಷಾ ಕೇಂದ್ರಕ್ಕೆ ಬರಬೇಕಿತ್ತು. ಆದರೆ ವಾಸ್ಕೋ ಸುತ್ತಮುತ್ತ ಕೊರೋನಾ ಪಾಸಿಟಿವ್ ಪ್ರಕರಣ ಅತ್ಯಧಿಕವಾಗಿರುವ ಹಿನ್ನೆಲೆಯಲ್ಲಿ ಅದನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಇಂತಹ ಸ್ಥಳದಿಂದ ವಿದ್ಯಾರ್ಥಿಗಳು ಉಳಗಾಕ್ಕೆ ಬರಲು ಸ್ಥಳೀಯ ಗ್ರಾಮಸ್ಥರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಜಿಲ್ಲಾಧಿಕಾರಿಗೂ ದೂರು ನೀಡಿದ್ದ ಗ್ರಾಮದ ಮುಖಂಡರು, ಉಸ್ತುವಾರಿ ಸಚಿವರಿಗೂ ಸಮಸ್ಯೆಯ ಮನವರಿಕೆ ಮಾಡಿದ್ದರು. ಈ ವಿಚಾರ ಶಿಕ್ಷಣ ಸಚಿವರ ಗಮನಕ್ಕೂ ಬಂದಿರುವ ಹಿನ್ನೆಲೆಯಲ್ಲಿ ಗೋವಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಬದಲಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ