ವಿಜಯಪುರ ಜಿಲ್ಲೆಯಲ್ಲಿ ಕಬ್ಬಿಗೆ ಎಫ್ ಆರ್ ಪಿ ಬೆಲೆ ನಿಗದಿ: ಯಾವ ಕಾರ್ಖಾನೆಗೆ ಎಷ್ಟು ನಿಗದಿ ಗೊತ್ತಾ?

ಕಬ್ಬಿನಿಂದ ಉತ್ಪಾದಿಸಲಾದ ಸಕ್ಕರೆ ಇಳುವರಿಯಂತೆ ಮೊದಲ ಕಂತಿನ ರೂಪದಲ್ಲಿ ಪಾವತಿಸಬೇಕಾದ ನ್ಯಾಯ ಮತ್ತು ಲಾಭದಾಯಕ ಬೆಲೆ(ಎಫ್ ಆರ್ ಪಿ)ಯನ್ನು ಪ್ರಕಟಿಸಲಾಗಿದೆ

ಕಬ್ಬು

ಕಬ್ಬು

  • Share this:
ವಿಜಯಪುರ(ನವೆಂಬರ್. 06): ಬಸವನಾಡಿನಲ್ಲಿ ಕಬ್ಬಿಗೆ ಎಫ್​​​​​ ಆರ್ ಪಿ ದರ ನಿಗದಿ ಪಡಿಸಿ ಸರಕಾರ ಆದೇಶ ಹೊರಡಿಸಿದೆ. 2019-20ನೇ ವರ್ಷದಲ್ಲಿ ಕಾರ್ಖಾನೆಗಳು ನುರಿಸಿದ ಕಬ್ಬಿನಿಂದ ಉತ್ಪಾದನೆಯಾದ ಸಕ್ಕರೆ ಇಳುವರಿಯನ್ನು ಆಧಾರವಾಗಿ ಇಟ್ಟುಕೊಂಡು ಈ ಬಾರಿ ಬೆಲೆ ನಿಗದಿ ಪಡಿಸಲಾಗಿದೆ. ಈ ವರ್ಷ ಮೊದಲ ಕಂತಿನ ಹಣದಲ್ಲಿ ಯಾವ ಕಾರ್ಖಾನೆಗಳು ಎಷ್ಟು ಹಣ ನೀಡಬೇಕು ಎಂಬುದನ್ನು ಸರಕಾರ ಈಗಾಗಲೇ ನಿರ್ಧರಿಸಿ ಆದೇಶ ಹೊರಡಿಸಿದೆ. 2019-20ರಲ್ಲಿ ರಾಜ್ಯದಲ್ಲಿ ಕಾರ್ಯ ನಿರ್ವಹಿಸಿರುವ 62 ಸಕ್ಕರೆ ಕಾರ್ಖಾನೆಗಳು ಸಲ್ಲಿಸಿದ ವರದಿಗಳ ಪ್ರಕಾರ ನುರಿಸಿದ ಕಬ್ಬಿನಿಂದ ಉತ್ಪಾದಿಸಲಾದ ಸಕ್ಕರೆ ಇಳುವರಿಯಂತೆ ಮೊದಲ ಕಂತಿನ ರೂಪದಲ್ಲಿ ಪಾವತಿಸಬೇಕಾದ ನ್ಯಾಯ ಮತ್ತು ಲಾಭದಾಯಕ ಬೆಲೆ(ಎಫ್ ಆರ್ ಪಿ)ಯನ್ನು ಪ್ರಕಟಿಸಲಾಗಿದೆ. ಈ ದರವು ಎಫ್ ಆರ್ ಪಿ ನಿಯಮದಂತೆ ಎಕ್ಸ್-ಗೇಟ್ ದರವಾಗಿರುತ್ತದೆ. 2020-21ನೇ ಆರ್ಥಿಕ ವರ್ಷದಲ್ಲಿ ಯಾವ ಕಾರ್ಖಾನೆ ಎಷ್ಟು ಹಣ ನೀಡಬೇಕು ಎಂಬುದು ಆಯಾ ಕಾರ್ಖಾನೆಗಳು ಕಳೆದ ವರ್ಷ ನೀಡಿದ ಲೆಕ್ಕಾಪತ್ರದ ಆಧಾರದಲ್ಲಿ ನಿಗದಿ ಪಡಿಸಲಾಗಿದೆ.

ಇದರಿಂದ ಕಬ್ಬು ಬೆಳೆಗಾರರಿಗೆ ಯಾವ ಕಾರ್ಖಾನೆಗೆ ಕಬ್ಬು ಕಳುಹಿಸಿದರೆ ಪ್ರತಿ ಟನ್ ಗೆ ಎಷ್ಟು ಹಣ ಸಿಗಲಿದೆ ಎಂಬುದು ಗೊತ್ತಾಗಲಿದೆ. ಸರಕಾರದ ಈ ನಿರ್ಧಾರದಂತೆ ಕಾರ್ಖಾನೆಗಳು 2019ರ ಜುಲೈ 1 ರಿಂದ 2020ರ ಮೇ 30ರ ವರೆಗೆ ನುರಿಸಿದ ಕಬ್ಬು, ಉತ್ಪಾದಿನಿದ ಸಕ್ಕರೆ, ಶೇಕಡವಾರು ಸಕ್ಕರೆ ಪ್ರಮಾಣ ಮತ್ತು 2020-21ನೇ ಆರ್ಥಿಕ ವರ್ಷದಲ್ಲಿ ನೀಡಬೇಕಿರುವ ಹಣದ ಲೆಕ್ಕವನ್ನು ಸರಕಾರ ಅಧಿಕೃತವಾಗಿ ಪ್ರಕಟಿಸಿದೆ. ಈ ಆದೇಶದಂತೆ ವಿಜಯಪುರದಲ್ಲಿರುವ ಒಟ್ಟು ಎಂಟು ಕಾರ್ಖಾನೆಗಳು ರೈತರಿಗೆ ನಿಗದಿತ ಹಣ ನೀಡಬೇಕಿವೆ.

ಕಬ್ಬಿಗೆ ನಿಗದಿಯಾದ ಎಫ್ ಆರ್ ಪಿ ದರ :

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಾವಿನಾಳ ಇಂಡಿಯನ್ ಶುಗರ್ ಉತ್ಪಾತದನಾ ಕಂಪನಿ ಲಿಮಿಟೆಡ್ ಕಳೆದ ವರ್ಷ 1,82,241 ಮೆಟ್ರಿಕ್ ಟನ್ ಕಬ್ಬು ನುರಿಸಿದ್ದು, 18,030 ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿದೆ. ಶೇ. 9.89 ಸಕ್ಕರೆ ಇಳುವರಿ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಈ ಕಾರ್ಖಾನೆ 2819 ರೂ ನ್ನು ಪ್ರತಿ ಟನ್ ಕಬ್ಬಿಗೆ ನೀಡಬೇಕಿದೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ನಿ. 7,05,983 ಮೆಟ್ರಿಕ್ ಟನ್ ಕಬ್ಬು ನುರಿಸಿದ್ದು, 83,314 ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿದೆ. ಇಲ್ಲಿ ಶೇ. 11.80 ಸಕ್ಕರೆ ಇಳುವರಿ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಕಾರ್ಖಾನೆ ಈ ಆರ್ಥಿಕ ವರ್ಷದಲ್ಲಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಅಂದರೆ, ಪ್ರತಿ ಟನ್ ಕಬ್ಬಿಗೆ 3363 ರೂ ಹಣ ನೀಡಬೇಕಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ್ ಕೆ.ಡಿ. ಯಲ್ಲಿರುವ ಜಮಖಂಡಿ ಶುಗರ್ಸ್ ಲಿ.(ಘಟಕ-2) ಕಳೆದ ವರ್ಷ 2,93,402 ಮೆಟ್ರಿಕ್ ಟನ್ ಕಬ್ಬು ನುರಿಸಿದ್ದು, 30,043 ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿದೆ. ಈ ಕಾರ್ಖಾನೆಯಲ್ಲಿ ಶೇ. 10.24 ಸಕ್ಕರೆ ಇಳುವರಿ ಬಂದಿದೆ. ಈ ಬಾರಿ ಈ ಕಾರ್ಖಾನೆಗೆ ಪ್ರತಿ ಟನ್ ಕಬ್ಬಿಗೆ 2,918 ದರ ನಿಗದಿ ಪಡಿಸಲಾಗಿದೆ.

ಇದನ್ನೂ ಓದಿ : ಬೆಳಗಾವಿ ಲೋಕಸಭಾ ಉಪಚುನಾವಣೆ ; ಘೋಷಣೆ ಮೊದಲೇ ಬಿಜೆಪಿಯಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿ..!

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಆಲಮೇಲನಲ್ಲಿರುವ ಕೆಪಿಆರ್ ಶುಗರ್ ಮಿಲ್ಸ್ ಕಾರ್ಖಾನೆ ಕಳೆದ ವರ್ಷ 7,05,430 ಮೆಟ್ರಿಕ್ ಟನ್ ಸಕ್ಕರೆಯನ್ನು ನುರಿಸಿದ್ದು, 65,390 ಮೆಟ್ರಿಕ್ ಟನ್ ಸಕ್ಕರೆಯನ್ನು ಉತ್ಪಾದಿಸಿದ್ದು, ಶೇ. 10.16 ಸಕ್ಕರೆ ಇಳುವರಿ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಪ್ರತಿ ಟನ್ ಕಬ್ಬಿಗೆ 2,895 ರೂ ನಿಗದಿ ಪಡಿಸಲಾಗಿದೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮಲಘಾಣದಲ್ಲಿರುವ ಮನಾಲಿ ಶುಗರ್ಸ್ ಲಿ. ಕಳೆದ ಬಾರಿ 1,36,702 ಮೆಟ್ರಿಕ್ ಟನ್ ಕಬ್ಬು ನುರಿಸಿ, 10,603 ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿದ್ದು, ಈ ಕಾರ್ಖಾನೆಯಲ್ಲಿ ಶೇ. 7.76 ಸಕ್ಕರೆ ಇಳುವರಿ ಬಂದಿದೆ. ಈ ಬಾರಿ ಈ ಕಾರ್ಖಾನೆ ಪ್ರತಿ ಟನ್ ಕಬ್ಬಿಗೆ 2708 ರೂ ನೀಡಬೇಕು ಎಂದು ಎಫ್ ಆರ್ ಪಿ ನಿಗದಿ ಪಡಿಸಲಾಗಿದೆ.

ವಿಜಯಪುರ ತಾಲೂಕಿನ ಕಾರಜೋಳ ಬಳಿ ಇರುವ ಶ್ರೀ ಬಸವೇಶ್ವರ ಶುಗರ್ಸ್​​ ಕಳೆದ ವರ್ಷ 4,98,172 ಮೆಟ್ರಿಕ್ ಟನ್ ಕಬ್ಬು ನುರಿಸಿ 52,994 ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿದೆ. ಈ ಕಾರ್ಖಾನೆಯಲ್ಲಿ ಶೇ. 10.64 ಸಕ್ಕರೆ ಇಳುವರಿ ಬಂದಿದೆ. ಈ ಬಾರಿ ಈ ಕಾರ್ಖಾನೆಗೆ ಪ್ರತಿ ಟನ್ ಕಬ್ಬಿಗೆ 3,032 ರೂ ಎಫ್ ಆರ್ ಪಿ ದರ ನಿಗದಿ ಪಡಿಸಲಾಗಿದೆ.

ಇದನ್ನೂ ಓದಿ : ಸಂಸದೆ ಸುಮಲತಾ ಮತಚಲಾಯಿಸಿದರೂ ಕೈ ತಪ್ಪಿದ ಅಧಿಕಾರ; ನಾಗಮಂಗಲ ಪುರಸಭೆಯಲ್ಲಿ ಜೆಡಿಎಸ್​ ಪ್ರಾಬಲ್ಯ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯರಗಲ್ ನಲ್ಲಿರುವ ಶ್ರೀ ಬಾಲಾಜಿ ಶುಗರ್ಸ್ ಆ್ಯಂಡ್ ಕೆಮಿಕಲ್ಸ್ ಪ್ರೈ. ಲಿ. ಕಾರ್ಖಾನೆ ಕಳೆದ ವರ್ಷ 6,10,492 ಮೆಟ್ರಿಕ್ ಟನ್ ಕಬ್ಬು ನುರಿಸಿ 66,541 ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿದ್ದು, ಶೇ. 10.90 ಸಕ್ಕರೆ ಇಳುವರಿ ಬಂದಿದೆ. ಈ ಬಾರಿ ಈ ಕಾರ್ಖಾನೆ ಎಫ್ ಆರ್ ಪಿ ಯಂತೆ ಪ್ರತಿ ಟನ್ ಕಬ್ಬಿಗೆ 3,107 ರೂ ಹಣ ನೀಡಬೇಕಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮರಗೂರು ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಕಳೆದ ವರ್ಷ 2,82,462 ಮೆಟ್ರಿಕ್ ಟನ್ ಕಬ್ಬು ನುರಿಸಿದ್ದು, 28,770 ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿದೆ.  ಶೇ. 10.19 ಸಕ್ಕರೆ ಇಳುವರಿ ಬಂದಿದ್ದು, ಈ ವರ್ಷ ಪ್ರತಿ ಟನ್ ಕಬ್ಬಿಗೆ ಎಫ್ ಆರ್ ಪಿ ಯಂತೆ 2,904 ರೂ ನಿಗದಿ ಪಡಿಸಲಾಗಿದೆ. ಇದರಿಂದಾಗಿ ಈ ಬಾರಿ ರೈತರಲ್ಲಿದ್ದ ಎಫ್ ಆರ್ ಪಿ ದರದ ಕುರಿತ ಗೊಂದಲ ಬಗೆಹರಿದಂತಾಗಿದೆ.
Published by:G Hareeshkumar
First published: