ಕೊರೋನಾ ಸೋಂಕಿತರ ಶವಸಂಸ್ಕಾರಕ್ಕೆ ನಿಗದಿಯಾದ ಸ್ಥಳಗಳಲ್ಲಿ ಗ್ರಾಮಸ್ಥರ ವಿರೋಧ; ಸರ್ಕಾರಕ್ಕೆ ಹೊಸ ತಲೆನೋವು

ಕೊರೋನಾ ಸೋಂಕಿತರ ಶವ ಸಂಸ್ಕಾರ ಈಗ ಸರ್ಕಾರಕ್ಕೆ ತಲೆನೋವಾಗಿದೆ. ಸೋಂಕಿತರ ಶವಗಳನ್ನು ಹೂಳಲು ಅಥವಾ ಸುಡಲು ನಿಗದಿಪಡಿಸಿದ್ದ ಜಾಗದ ಬಗ್ಗೆ ಆಯಾ ವ್ಯಾಪ್ತಿಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

news18-kannada
Updated:July 4, 2020, 1:57 PM IST
ಕೊರೋನಾ ಸೋಂಕಿತರ ಶವಸಂಸ್ಕಾರಕ್ಕೆ ನಿಗದಿಯಾದ ಸ್ಥಳಗಳಲ್ಲಿ ಗ್ರಾಮಸ್ಥರ ವಿರೋಧ; ಸರ್ಕಾರಕ್ಕೆ ಹೊಸ ತಲೆನೋವು
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು: ಸರ್ಕಾರಕ್ಕೆ ಕೊರೋನಾ ಸೋಂಕಿತರ ಚಿಕಿತ್ಸೆ ಒಂದು ಕಡೆ ದೊಡ್ಡಮಟ್ಟದ ಸವಾಲಾಗಿ ಪರಿಣಮಿಸಿದರೆ, ಮತ್ತೊಂದೆಡೆ ಸೋಕಿನಿಂದ ಸಾವನ್ನಪ್ಪುತ್ತಿರುವವರ ಅಂತ್ಯಸಂಸ್ಕಾರವೂ ತಲೆನೋವಾಗಿದೆ. ಸೋಂಕಿತರ ಶವಗಳನ್ನು ಹೂಳುವ ವ್ಯವಸ್ಥೆಯೇ ಗೊಂದಲ ಮೂಡಿಸಿದೆ. ಸಮಸ್ಯೆ ಬಗೆಹರಿಸಲು ಮಾಡಿದ್ದ ಯೋಜನೆಗೆ ಆರಂಭದಲ್ಲೇ ವಿಫ್ನ ಎದುರಾಗಿದೆ. ಗಿಡ್ಡನಹಳ್ಳಿ ಘಟ‌ನೆಯೇ ಇದಕ್ಕೊಂದು ಸಾಕ್ಷಿ.

ಕೊರೋನಾದಿಂದ ಸಾವನ್ನಪ್ಪುತ್ತಿರುವವರ ಅಂತ್ಯಸಂಸ್ಕಾರವನ್ನೂ ವಿಧಿವತ್ತಾಗಿ ಮಾಡುತ್ತಿಲ್ಲ. ಸತ್ತವರಿಗೆ ತೋರಿಸಬೇಕಾದ ಕನಿಷ್ಠ ಗೌರವವನ್ನೂ ತೋರಿಸುತ್ತಿಲ್ಲ ಎನ್ನುವ ಆರೋಪಗಳು ಇತ್ತೀಚಿನ ದಿನಗಳಲ್ಲಿ ಕೆಲವು ಘಟನೆಗಳ ಹಿನ್ನೆಲೆಯಲ್ಲಿ ಕೇಳಿ ಬಂದಿದ್ದವು. ಈ ಕಾರಣಕ್ಕೆ ಸರ್ಕಾರ ಪ್ರತ್ಯೇಕ ಸ್ಥಳಗಳನ್ನು ಅಂತ್ಯಸಂಸ್ಕಾರಕ್ಕೆಂದೇ ನಿಗದಿಪಡಿಸಿತ್ತು. ಆದರೆ ಕೊರೋನಾ ಶವಗಳನ್ನು ತಮ್ಮ ಗ್ರಾಮಗಳಿಗೆ ಸುಡಲು ತರಲಾಗುತ್ತಿದೆ ಎನ್ನುವ ಸುದ್ದಿ ಕೇಳುತ್ತಿದ್ದಂತೆ ಸಾಕಷ್ಟು ಗ್ರಾಮಸ್ಥರು ಈಗಾಗಲೇ ವಿರೋಧ ವ್ಯಕ್ತಪಡಿಸಲು ಶುರು ಮಾಡಿದ್ದಾರೆ. ಇದಕ್ಕೆ ಪೂರಕವೆನ್ನುವಂತೆ ಮಾಗಡಿ ರಸ್ತೆಯ ಗಿಡ್ಡನಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮದ ಮುಂದೆ ದೊಡ್ಡ ಮಟ್ಟದ ಪ್ರತಿಭಟನೆಯನ್ನು ನಡೆಸಿ ಸರ್ಕಾರದ ಶವಸಂಸ್ಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಯಾವುದೇ ಕಾರಣಕ್ಕೂ ಕೊರೋನಾ ಸೋಂಕಿತರ ಶವಗಳನ್ನು ನಮ್ಮ ಗ್ರಾಮಗಳಿಗೆ ತರಲು ಬಿಡುವುದಿಲ್ಲ. ಅವುಗಳ ಅಂತ್ಯ ಸಂಸ್ಕಾರಕ್ಕೆ ಅವಕಾಶ ಕೊಡುವುದಿಲ್ಲ. ನಗರಗಳಲ್ಲಿರುವ ಕೊರೋನಾ ಸಮಸ್ಯೆ ಗ್ರಾಮಗಳವರೆಗೆ ಏಕೆ ತರುತ್ತೀರಿ ಎಂದು ಗ್ರಾಮಸ್ಥ ಬೂದ್ಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೊರೋನಾ ಭೀತಿ: ಬೆಂಗಳೂರಿಂದ ಸಾಮೂಹಿಕ ವಲಸೆ, ತುಂಬಿ ತುಳುಕಿದ ಹೆದ್ದಾರಿ

ಅಂದಹಾಗೆ, ದಾಸನಪುರ ಹೋಬಳಿಯ ಗಿಡ್ಡೇನಹಳ್ಳಿಯ ಸರ್ವೇ ನಂಬರ್ 80 ರಲ್ಲಿ ನಾಲ್ಕು ಎಕರೆ ಪ್ರದೇಶವೂ ಸೇರಿದಂತೆ ಉತ್ತರಹಳ್ಳಿಯ ಸೋಮನಹಳ್ಳಿ, ಉತ್ತರಹಳ್ಳಿಯ ಗುಳಕಮಲೆ, ತಾವರಕೆರೆಯ ತಿಪ್ಪಗೊಂಡನಹಳ್ಳಿ, ಜಿಗಣಿಯ ಗಿಡ್ಡೇನಹಳ್ಳಿ, ಜಾಲಾ ಹೋಬಳಿಯ ಎಂ ಹೊಸಹಳ್ಳಿ, ಹೆಸರುಘಟ್ಟದ ಉತ್ತನಹಳ್ಳಿ, ಜಾಲಾ ಹೋಬಳಿಯ ಮಾರೇನಹಳ್ಳಿ, ಹೆಸರುಘಟ್ಟ ಹೋಬಳಿಯ ಮಾವಳ್ಳಿಪುರದಲ್ಲಿ ಅಂತ್ಯಸಂಸ್ಕಾರಕ್ಕೆ ಸ್ಥಳ ನಿಗದಿಪಡಿಸಲಾಗಿದೆ.

ಗಿಡ್ಡೇನಹಳ್ಳಿಯ ಸರ್ವೇ ನಂಬರ್ ಎಂಬತ್ತರಲ್ಲಿರುವ 4 ಎಕರೆ ಪ್ರದೇಶವೂ ಸೇರಿದಂತೆ ಒಟ್ಟು 10 ಪ್ರದೇಶಗಳಲ್ಲಿ 35 ಎಕರೆ 18 ಗುಂಟೆ ಪ್ರದೇಶವನ್ನು ಸೋಂಕಿತ ಶವಗಳ ಅಂತ್ಯಸಂಸ್ಕಾರಕ್ಕೆಂದೇ ಸರ್ಕಾರ ನಿಗದಿಪಡಿಸಿ ಆದೇಶ ಹೊರಡಿಸಿದೆ. ಆದರೆ ಇಂತಹ ನಿರ್ಧಾರ ಮಾಡುವ ಮುನ್ನ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅಥವಾ ನಮ್ಮ ಅಭಿಪ್ರಾಯ ಕೇಳುವ ಯಾವುದೇ ಕೆಲಸ ಮಾಡಿಲ್ಲ. ಅದಕ್ಕಿಂತ ಹೆಚ್ಚಾಗಿ ಊರ ಹೊರಗಿನ ಈ ಗ್ರಾಮಗಳಲ್ಲಿ ಕೊರೋನಾ ಸೊಂಕಿತರ ಶವಗಳನ್ನು ಸುಡುವುದರಿಂದ ಆ ಭಾಗದ ಗ್ರಾಮಸ್ಥರ ಜೀವನದ ಮೇಲೆ ಯಾವ ರೀತಿ ಮಾರಕ ಪರಿಣಾಮ ಉಂಟಾಗಬಹುದು ಎನ್ನುವ ಸಾಧಕ ಬಾಧಕಗಳನ್ನು ಅವಲೋಕಿಸುವ ಕೆಲಸ ಕೂಡ ಮಾಡಿಲ್ಲ. ಏಕಾಏಕಿ ನಮ್ಮ ಗ್ರಾಮಗಳಲ್ಲಿ ತಗೆದುಕೊಂಡು ಬಂದು ಕೊರೊನ ಸೋಂಕಿತ ಶವಗಳನ್ನು ಅಂತ್ಯಸಂಸ್ಕಾರ ಮಾಡುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಗ್ರಾಮಸ್ಥರದು.

ಇದನ್ನೂ ಓದಿ: Bangalore Coronavirus: ಬೆಂಗಳೂರಿನ 73 ಖಾಸಗಿ ಆಸ್ಪತ್ರೆಗಳಲ್ಲಿನ್ನು ಕೊರೋನಾಗೆ ಚಿಕಿತ್ಸೆ; ರಾಜ್ಯ ಸರ್ಕಾರ ಆದೇಶಮೇಲ್ಕಂಡ ವಿಷಯದಲ್ಲಿ ಸರ್ಕಾರವು ಎಲ್ಲೋ ಅವಸರದ ನಡೆ ಅನುಸರಿಸಿತಾ ಅನ್ನುವ ಅನುಮಾನ ಕಾಡುತ್ತಿದೆ. ಇಂಥ ಗಂಭೀರ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅದರ ವ್ಯಾಪ್ತಿಯಲ್ಲಿ ಬರುವ ಗ್ರಾಮಸ್ಥರನ್ನು ಮಾತನಾಡಿಸುವ, ಅವರ ಸಂಕಷ್ಟಗಳನ್ನು ಕೇಳುವ ಹಾಗೂ ಅವರ ಅಭಿಪ್ರಾಯಗಳನ್ನು ಕ್ರೋಡೀಕರಿಸುವ ಕೆಲಸವನ್ನು ಸರ್ಕಾರ ಮಾಡಿಯೇ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಆದರೆ ಏಕಾಏಕಿ ಇಂಥ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗುತ್ತಿರುವುದರಲ್ಲೂ ಅರ್ಥವಿದೆ.ಅದೇಕೋ ಕೊರೋನಾ ವಿಷಯದಲ್ಲಿ ಆರಂಭದಿಂದಲೂ ಪರಿಸ್ಥಿತಿಯನ್ನ ನಿಯಂತ್ರಿಸುವುದರಲ್ಲಿ ಸರಕಾರ ಎಡವಿದೆ ಎನ್ನುವ ಸಾಕಷ್ಟು ಅನುಮಾನ-ಆರೋಪ ಕೇಳಿ ಬರುತ್ತಲೇ ಇದೆ. ಅದರ ಮತ್ತೊಂದು ಭಾಗವಾಗಿ ಇದೀಗ ಸೋಂಕಿತರ ಶವ ಸುಡುವ ವಿಷಯದಲ್ಲೂ‌ ವಿರೋಧ ವ್ಯಕ್ತವಾಗಿದೆ. ಬೆಂಗಳೂರಿನ ಒಳಭಾಗದಲ್ಲಿ ಕೊರೋನಾ ಶವಗಳನ್ನ ಸುಡುವುದಕ್ಕೆ ಸಾರ್ವಜನಿಕರಿಂದ ವ್ಯಕ್ತವಾದ ತೀವ್ರ ಆಕ್ಷೇಪವನ್ನು ದೂರ ಮಾಡಲು ನಗರದ ಹೊರ ಭಾಗವನ್ನು ಆಯ್ಕೆ ಮಾಡಿಕೊಂಡಿದೆ ಸರ್ಕಾರ. ಆದರೆ, ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗುತ್ತಿರುವುದು ಹೊಸ ತಲೆ ನೋವಾಗಿದೆ. ಇಂಥ ಹಂತದಲ್ಲಿ ಸರ್ಕಾರ ಯಾವ ರೀತಿ ಪರಿಸ್ಥಿತಿಯನ್ನು ತಿಳಿಗೊಳಿಸುತ್ತದೆ, ಅಂತಿಮವಾಗಿ ಕೊರೊನ ಸೋಂಕಿತರ ಶವಗಳ ಅಂತ್ಯ ಸಂಸ್ಕಾರಕ್ಕೆ ಯಾವ ರೀತಿಯ ವ್ಯವಸ್ಥೆ ಮಾಡಿಕೊಳ್ಳುತ್ತೆ ಎನ್ನೋದು ಕುತೂಹಲ ಮೂಡಿಸಿದೆ.
Published by: Vijayasarthy SN
First published: July 4, 2020, 1:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading