• Home
  • »
  • News
  • »
  • district
  • »
  • ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರಳ, ಸಂಪ್ರದಾಯಬದ್ಧವಾಗಿ ಚಂಪಾಷಷ್ಠಿ ಉತ್ಸವ ಆಚರಿಸಲು ಸರ್ಕಾರದ ತೀರ್ಮಾನ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರಳ, ಸಂಪ್ರದಾಯಬದ್ಧವಾಗಿ ಚಂಪಾಷಷ್ಠಿ ಉತ್ಸವ ಆಚರಿಸಲು ಸರ್ಕಾರದ ತೀರ್ಮಾನ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ.

ದೇವರ ರಥೋತ್ಸವ ಸೇವೆ ನೆರವೇರಿಸುವ ಸಂದರ್ಭದಲ್ಲಿ ಹೆಚ್ಚಿನ ಭಕ್ತಾಧಿಗಳಿಗೆ ಅವಕಾಶ ನೀಡದೆ, ನಿರ್ದಿಷ್ಟ ಸಂಖ್ಯೆಯ ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ‌. ಜಾತ್ರೋತ್ಸವ ಸಂದರ್ಭದಲ್ಲಿ ಆರೋಗ್ಯ,ನಿರಂತರ ವಿದ್ಯುತ್ ಸಂಪರ್ಕಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಮುಂದೆ ಓದಿ ...
  • Share this:

ಉಡುಪಿ; ರಾಜ್ಯದ ಶ್ರೀಮಂತ ದೇಗುಲ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಚಂಪಾಷಷ್ಠಿ ಮಹೋತ್ಸವವನ್ನು ಕೋವಿಡ್ -19 ನಿಯಮಾವಳಿಯ ಅನುಸಾರವಾಗಿಯೇ ಸರಳವಾಗಿ ಹಾಗೂ ಸಂಪ್ರದಾಯಬದ್ಧವಾಗಿ ಆಚರಿಸಲು ಸರಕಾರ ತೀರ್ಮಾನಿಸಿದೆ. ಕೊರೋನಾ ಲಾಕ್ ಡೌನ್ ಹಾಗೂ ಅನ್ ಲಾಕ್ ಡೌನ್ ಬಳಿಕ ಇದೇ ಮೊದಲ ಬಾರಿಗೆ ಕ್ಷೇತ್ರದಲ್ಲಿ ಉತ್ಸವ ನಡೆಸಲು ಸರಕಾರ ತೀರ್ಮಾನಿಸಿದೆ.


ಕೊರೋನಾ ಲಾಕ್ ಡೌನ್ ಬಳಿಕ ಕ್ಷೇತ್ರದಲ್ಲಿ ನಡೆಯುವ ಬಹುತೇಕ ಎಲ್ಲಾ ಸೇವೆಗಳನ್ನು ರದ್ದುಪಡಿಸಲಾಗಿತ್ತು. ಅಲ್ಲದೆ ವರ್ಷಂಪ್ರತಿ ನಡೆಯುವ ಕೆಲವು ಆಚರಣೆಗಳನ್ನು ದೇವಸ್ಥಾನದ ಸಿಬ್ಬಂದಿ ಹಾಗೂ ಅರ್ಚಕರಿಗೆ ಸೀಮಿತಗೊಳಿಸಿ ಆಚರಿಸಲಾಗುತ್ತಿತ್ತು. ಇದೀಗ ಕೋವಿಡ್ -19 ಮಾರ್ಗಸೂಚಿಯಲ್ಲಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ನಡೆಯುವ ಚಂಪಾಷಷ್ಠಿ ಮಹೋತ್ಸವವನ್ನು ಭಕ್ತರ ಸಹಭಾಗಿತ್ವದಲ್ಲಿ ನಡೆಸಲು ತೀರ್ಮಾನಿಸಲಾಗಿದೆ‌. ಈ ಸಂಬಂಧ ರಾಜ್ಯ ಧಾರ್ಮಿಕದತ್ತಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅಧಿಕಾರಿಗಳ ಮತ್ತು ಅಭಿವೃದ್ಧಿ ಸಮಿತಿ ಸದಸ್ಯರ ಜೊತೆ ಚರ್ಚೆ ನಡೆಸಿದರು. ಡಿಸೆಂಬರ್ 12 ರಿಂದ 26 ರ ತನಕ ಚಂಪಾಷಷ್ಠಿ ‌ಮಹೋತ್ಸವ ನಡೆಯಲಿದ್ದು, ಜಾತ್ರೋತ್ಸವಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.


ಚಂಪಾಷಷ್ಠಿ ಮಹೋತ್ಸವದಲ್ಲಿ ವರ್ಷಂಪ್ರತಿ ನಡೆಯುವ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ಕೋವಿಡ್ -19 ಮಾರ್ಗಸೂಚಿಯ ನಡುವೆಯೇ ನಡೆಸಲು ತೀರ್ಮಾನಿಸಿರುವ ಸರಕಾರ ಈ ಸಂದರ್ಭದಲ್ಲಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಊಟ, ವಸತಿ, ಅನ್ನಸಂತರ್ಪಣೆ ಸೇವೆ, ತುಲಾಭಾರ ಸೇವೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಜಾತ್ರೋತ್ಸವ ಪ್ರಯುಕ್ತ ಮೂರು ದಿನಗಳ ಕಾಲ ನಡೆಯುವ ಕ್ಷೇತ್ರದ ವಿಶೇಷ ಸೇವೆಯಾದ ಎಡೆಮಡೆಸ್ನಾನ ಸೇವೆಯನ್ನು ನೆರವೇರಿಸುವ ಕುರಿತು ಆರೋಗ್ಯ ಇಲಾಖೆಯ ಸಲಹೆಯನ್ನೂ ಕೇಳಲು ತೀರ್ಮಾನಿಸಲಾಗಿದೆ. ಕುಮಾರಧಾರಾ ಸ್ನಾನಘಟ್ಟದಲ್ಲಿ ಭಕ್ತರಿಗೆ ತೀರ್ಥಸ್ನಾನ ನೆರವೇರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಸ್ನಾನಘಟ್ಟದ ಬಳಿ ನದಿಯ ಹೂಳು ತೆಗೆಯುವ ಕಾರ್ಯವನ್ನೂ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಸ್ನಾನಘಟ್ಟದಿಂದ ಕ್ಷೇತ್ರದವರೆಗಿನ 1.5 ಕಿ.ಮೀ ರಸ್ತೆಗೆ ಇಂಟರ್ ಲಾಕ್ ಅಳವಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.


ಇದನ್ನು ಓದಿ: ಟೊಯೋಟಾ ಕಂಪನಿಯ ಕಾರ್ಮಿಕರಿಗೆ ಅನ್ಯಾಯ; ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರ ಅಹೋರಾತ್ರಿ ಪ್ರತಿಭಟನೆ


ದೇವರ ರಥೋತ್ಸವ ಸೇವೆ ನೆರವೇರಿಸುವ ಸಂದರ್ಭದಲ್ಲಿ ಹೆಚ್ಚಿನ ಭಕ್ತಾಧಿಗಳಿಗೆ ಅವಕಾಶ ನೀಡದೆ, ನಿರ್ದಿಷ್ಟ ಸಂಖ್ಯೆಯ ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ‌. ಜಾತ್ರೋತ್ಸವ ಸಂದರ್ಭದಲ್ಲಿ ಆರೋಗ್ಯ,ನಿರಂತರ ವಿದ್ಯುತ್ ಸಂಪರ್ಕಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.


ಸಭೆಯಲ್ಲಿ ಕುಕ್ಕೆ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಎಸ್.ಅಂಗಾರ, ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Published by:HR Ramesh
First published: