ವಿಜಯಪುರ ಜನರ ವಿಮಾನಯಾನ ಕನಸು ನನಸಾಗುವತ್ತ ಮೊದಲ ಹೆಜ್ಜೆ ; ಮೊದಲ ಹಂತದ ಕಾಮಗಾರಿಗೆ ಸಚಿವ ಸಂಪುಟ ಸಭೆ ಅನುಮತಿ

ಮೊದಲ ಹಂತದಲ್ಲಿ 95 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಸಿಎಂ ಬಿ. ಎಸ್. ಯಡಿಯೂರಪ್ಪ ಒಪ್ಪಿಗೆ ನೀಡಿದ್ದಾರೆ. ಲೋಕೋಪಯೋಗಿ ಇಲಾಖೆಯ ವತಿಯಿಂದ ಒಂದು ವರ್ಷದಲ್ಲಿ ಕಾಮಗಾರಿ ಮುಗಿಸಲು ನಿರ್ಧಾರ ಕೈಗೊಳ್ಳಲಾಗಿದೆ.

news18-kannada
Updated:July 9, 2020, 7:21 PM IST
ವಿಜಯಪುರ ಜನರ ವಿಮಾನಯಾನ ಕನಸು ನನಸಾಗುವತ್ತ ಮೊದಲ ಹೆಜ್ಜೆ ; ಮೊದಲ ಹಂತದ ಕಾಮಗಾರಿಗೆ ಸಚಿವ ಸಂಪುಟ ಸಭೆ ಅನುಮತಿ
ವಿಮಾನ ನಿಲ್ದಾಣದ ಜಾಗ
  • Share this:
ವಿಜಯಪುರ(ಜು. 09): ಕೊರೋನಾದಿಂದ ತತ್ತರಿಸಿರುವ ವಿಜಯಪುರ ಜಿಲ್ಲೆಯ ಜನರಿಗೆ ಬೇರೋಂದು ಸಂತಸದ ಸಂಗತಿಯನ್ನು ಸರಕಾರ ನೀಡಿದೆ. ಬಹುನಿರೀಕ್ಷಿತ ಮತ್ತು ಕಳೆದ 12 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ಭಾಗದ ಜನರ ವಿಮಾನಯಾನ ಕನಸು ಈಗ ನನಸಾಗುವತ್ತ ಮೊದಲ ಹೆಜ್ಜೆಯನ್ನು ಸರಕಾರ ಇಟ್ಟಿದೆ.

ವಿಜಯಪುರ ಜಿಲ್ಲೆಯ ಬುರಣಾಪುರ-ಮದಭಾವಿ ಬಳಿ ವಿಮಾನ ನಿಲ್ದಾಣ ನಿಲ್ದಾಣ ಕಾಮಗಾರಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ಕೊರೋನಾ ಎಮರ್ಜನ್ಸಿ ಸಂದರ್ಭದಲ್ಲಿಯೂ ವಿಜಯಪುರ ವಿಮಾನ ನಿಲ್ದಾಣ ಕಾಮಾಗಾರಿಗೆ ಸಿಎಂ ಒಪ್ಪಿಗೆ ನೀಡಿರುವುದು ಸಂತಸ ತಂದಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ 95 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಸಿಎಂ ಬಿ. ಎಸ್. ಯಡಿಯೂರಪ್ಪ ಒಪ್ಪಿಗೆ ನೀಡಿದ್ದಾರೆ. ಲೋಕೋಪಯೋಗಿ ಇಲಾಖೆಯ ವತಿಯಿಂದ ಒಂದು ವರ್ಷದಲ್ಲಿ ಕಾಮಗಾರಿ ಮುಗಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಪ್ರದೇಶದಲ್ಲಿ ಗ್ರೀನ್ ಫೀಲ್ಡ್ ದೇಶಿಯ ಪ್ರಯಾಣದ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಮೊದಲ ಹಂತದಲ್ಲಿ ರನ್ ವೆ ನಿರ್ಮಾಣ, ಅಪ್ರೋನ್ ಪಾರ್ಕಿಂಗ್ ಪ್ರದೇಶ, ಟರ್ಮಿನಲ್ ಕಾಮಗಾರಿಗಾಗಿ 95 ಕೋಟಿ ರೂಪಾಯಿ ಮಾಡಲು ಅನುಮತಿ ನೀಡಲಾಗಿದೆ. ಈ ಯೋಜನೆಗೆ ಒಟ್ಟು 220 ಕೋಟಿ ರೂಪಾಯಿ ಅಗತ್ಯವಿದ್ದು, ಈಗ ಮೊದಲ ಹಂತದ ಕಾಮಗಾರಿಗೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಮಾಹಿತಿ ನೀಡಿದ್ದಾರೆ.

ವಿಮಾನ ನಿಲ್ದಾಣ ಕಾಮಗಾರಿ ಹಿನ್ನೋಟ :

2008 ರಲ್ಲಿ ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಹು ನಿರೀಕ್ಷಿತ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ನಂತರ ಈ ವಿಮಾನ ನಿಲ್ದಾಣದ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದ ಚೆನ್ನೈ ಮೂಲದ ಮಾರ್ಗ್ ಸಂಸ್ಥೆ 2012ರ ವೇಳೆಗೆ ಈ ಕಾಮಗಾರಿ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿತ್ತು. ಇದಕ್ಕಾಗಿ ಸರಣಿ ಸಭೆಗಳನ್ನು ನಡೆಸಿ, ರೈತರು, ವಿಜಯಪುರ ಜಿಲ್ಲೆಯ ನಾನಾ ಕ್ಶೇತ್ರದ ಗಣ್ಯರೊಂದಿಗೆ ಚರ್ಚೆ, ಉಪನ್ಯಾಸ, ಕಾರ್ಯಾಗಾರವನ್ನು ಆಯೋಜಿಸಿತ್ತು. ಆದರೆ, 2012 ಕ್ಕೂ ಮುನ್ನವೇ ಮಾರ್ಗ ಸಂಸ್ಥೆ ಈ ಕಾಮಗಾರಿಯನ್ನು ನಷ್ಟದ ನೆಪವೊಡ್ಡಿ ಪಲಾಯನ ಮಾಡಿತು.

ಬಿ. ಎಸ್. ಯಡಿಯೂರಪ್ಪ ಮತ್ತೆ ಸಿಎಂ ಆದ ಹಿನ್ನೆಲೆಯಲ್ಲಿ ವಿಜಯಪುರದವರೇ ಆದ ಡಿಸಿಎಂ ಗೋವಿಂದ ಕಾರಜೋಳ ಈ ಹಿಂದೆ ವಿಮಾನ ನಿಲ್ದಾಣ ಕಾಮಗಾರಿ ಸ್ಥಳ ಪರೀಶೀಲನೆಗೆ ಆಗಮಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಹಿಂದಿರುಗಿದ್ದರು. 747 ಎಕರೆ ಜಮೀನನ್ನು ಈಗಾಗಲೇ ಈ ಕಾಮಗಾರಿಗೆ ಸರಕಾರ ಸ್ವಾಧೀನ ಪಡಿಸಿಕೊಂಡಿದ್ದು, ರನ್‌ವೇ ಸೇರಿದಂತೆ ನಾನಾ ಕಾಮಗಾರಿಗಳಿಗಾಗಿ 22 ಕೋಟಿ ರೂಪಾಯಿ ಅಗತ್ಯವಿದೆ ಎಂದು ಡಿಸಿಎಂ ಅಂದು ಅಂದು ತಿಳಿಸಿದ್ದರು.

ಶಿವಮೊಗ್ಗ, ಕಲಬುರಗಿ ಜೊತೆ ಆರಂಭವಾದ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಇನ್ನೂ ಟೇಕಾಫ್ ಆಗದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದರು. ಕಲಬುರಗಿ ವಿಮಾನ ನಿಲ್ದಾಣ ಕಾಮಗಾರಿ ಈಗಾಗಲೇ ಪೂರ್ಣಗೊಂಡು ವಿಮಾನಗಳ ಹಾರಾಟವೂ ನಡೆಯುತ್ತಿದ್ದರೆ, ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಸ್ವತಃ ಸಿಎಂ ಯಡಿಯೂರಪ್ಪ ಈಗಾಗಲೇ ಅಧಿಕಾರಗಳಿಗೆ ಸೂಚನೆ ನೀಡಿದ್ದು ಅವರ ಗಮನದಲ್ಲಿತ್ತು.ಇದನ್ನೂ ಓದಿ : ಮಲೆಮಹದೇಶ್ವರ ದೇಗುಲ ಮತ್ತೆ ಬಂದ್ ಮಾಡಲು ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

ಇದೀಗ ಈ ಭಾಗದ ಜನಪ್ರತಿನಿಧಿಗಳು ಮತ್ತು ಡಿಸಿಎಂ ಗೋವಿಂದ ಕಾರಜೋಳ ಅವರ ಪ್ರಯತ್ನ ಫಲ ನೀಡಿದೆ. ವಿಜಯಪುರ ವಿಮಾನ ನಿಲ್ದಾಣ ಆರಂಭವಾದರೆ ಈ ಭಾಗದಲ್ಲಿರುವ ಐತಿಹಾಸಿಕ ಮತ್ತು ಪ್ರಾಚೀನ ಸ್ಮಾರಕಗಳಾದ ಗೋಳಗುಮ್ಮಟ, ಉಪ್ಪಲಿ ಬುರುಜ, ಇಬ್ರಾಹಿಂ ರೋಜಾ, ಬಾರಾ ಕಮಾನ, ಜಾಮೀಯಾ ಮಸೀದಿ, ಮಲಿಕ್ ಏ ಮೈದಾನ್ ತೋಫ್ ಸೇರಿದಂತೆ ನಾನಾ ಸ್ಮಾರಕಗಳ ವೀಕ್ಷಣೆಗೆ ದೇಶ ಮತ್ತು ವಿದೇಶಗಳ ಪ್ರವಾಸಿಗರನ್ನು ಸೆಳೆಯಲು ಅನುಕೂಲವಾಗಲಿದೆ. ಅಲ್ಲದೇ, ಈ ಭಾಗದಲ್ಲಿ ಬೆಳೆಯಲಾಗುವ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ಚಿಕ್ಕು ಮತ್ತೀತರ ಕೃಷಿ ಉತ್ಪನ್ನಗಳ ರಫ್ತಿಗೆ ಅನುಕೂಲವಾಗಲಿದೆ.  ಪರಿಣಾಮ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೂ ಇದರಿಂದ ನೆರವಾಗಲಿದೆ.

ಡಿಸಿಎಂ ಗೋವಿಂದ ಕಾರಜೋಳ ಅವರ ಪ್ರಕಟಣೆಯಿಂದ 2021ರಲ್ಲಿ ಬಸವನಾಡಿನಿಂದ ಲೋಹದ ಹಕ್ಕಿಯಲ್ಲಿ ಕುಳಿತು ಗಗನದಲ್ಲಿ ಪ್ರಯಾಣ ಮಾಡುವ ಕನನಸು ನನಸಾಗಲಿದೆ.
Published by: G Hareeshkumar
First published: July 9, 2020, 7:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading