HOME » NEWS » District » GOLD CHAIN OF DEAD COVID PATIENT STOLEN BY KODAGU COVID HOSPITAL STAFF RSK KVD

ಮೊನ್ನೆ ಮೊಬೈಲ್, ಈಗ ಮಾಂಗಲ್ಯ ಸರ.. ಆಸ್ಪತ್ರೆಯಲ್ಲಿ ಸೋಂಕಿನಿಂದ ಸತ್ತವರನ್ನು ದೋಚುತ್ತಿರುವ ನಿರ್ದಯಿಗಳು!

ನರ್ಸ್​​​ಗಳು ಕಮಲ ಅವರ ಕೊರಳಿನಲ್ಲಿದ್ದ ಚಿನ್ನದ ತಾಳಿ ಸರವನ್ನು ತೆಗೆದುಕೊಂಡಿದ್ದರು. ಆದರೆ ಕಮಲ ಅವರು ಮೃತಪಟ್ಟ ನಂತರ ಮನೆಯವರಿಗೆ ಚಿನ್ನದ ಸರವನ್ನು ಕೊಟ್ಟಿಲ್ಲ.

news18-kannada
Updated:May 24, 2021, 4:27 PM IST
ಮೊನ್ನೆ ಮೊಬೈಲ್, ಈಗ ಮಾಂಗಲ್ಯ ಸರ.. ಆಸ್ಪತ್ರೆಯಲ್ಲಿ ಸೋಂಕಿನಿಂದ ಸತ್ತವರನ್ನು ದೋಚುತ್ತಿರುವ ನಿರ್ದಯಿಗಳು!
ಕೊಡಗಿನ ಪ್ರಕರಣಗಳು
  • Share this:
ಕೊಡಗು : ಕೋವಿಡ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಫೋನ್ ಕಳವಾಗಿದ್ದ ಪ್ರಕರಣ ಮಾಸುವ ಮುನ್ನವೇ ಮಂಜಿನನಗರಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ವರದಿಯಾಗಿದೆ. ಮೃತಪಟ್ಟ ವೃದ್ಧೆಯ ಚಿನ್ನದ ತಾಳಿಯ ಸರವನ್ನೇ ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೋವಿಡ್ ನಿಂದ ಮೃತಪಟ್ಟ ಕಮಲ ಎಂಬ ವೃದ್ಧೆಯ ಅಂದಾಜು ಒಂದೂವರೆ ಲಕ್ಷ ಮೌಲ್ಯದ 25 ಗ್ರಾಂ ತೂಕದ ಚಿನ್ನದ ಸರವನ್ನೇ ದಾದಿಯರು ಕದ್ದಿರುವ ಆರೋಪ ಕೇಳಿ ಬಂದಿದೆ. ಸೋಮವಾರಪೇಟೆ ತಾಲೂಕಿನ ರಸೂಲ್ ಪುರ ಗ್ರಾಮದ ಕಮಲ ಎಂಬ ಮಹಿಳೆಯನ್ನು ಕೊರೋನಾ ಸೋಂಕಿಗೆ ತುತ್ತಾದ ಹಿನ್ನೆಲೆ ಮೇ 1 ರಂದು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸಾಮಾನ್ಯ ವಾರ್ಡಿನಲ್ಲೇ ದಾಖಲಾಗಿದ್ದ ಕಮಲ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದರಿಂದ ಮೇ 2 ರಂದು ಐಸಿಯು ವಾರ್ಡಿಗೆ ಶಿಫ್ಟ್ ಮಾಡಲಾಗಿತ್ತು. ಈ ವೇಳೆ ನರ್ಸ್​​​ಗಳು ಕಮಲ ಅವರ ಕೊರಳಿನಲ್ಲಿದ್ದ ಚಿನ್ನದ ತಾಳಿ ಸರವನ್ನು ತೆಗೆದುಕೊಂಡಿದ್ದರು. ಐಸಿಯು ವಾರ್ಡಿನಲ್ಲಿ ಸ್ವಲ್ಪ ಚೇತರಿಸಿಕೊಂಡಿದ್ದ ವೃದ್ಧೆ ಕಮಲ ತನ್ನ ಮಗ ಮೊಣ್ಣಪ್ಪ ಅವರಿಗೆ ಕರೆ ಮಾಡಿ ಈ ವಿಷಯವನ್ನು ತಿಳಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಅಂದರೆ ಮೇ 19 ರಂದು ಕೋವಿಡ್ ಆಸ್ಪತ್ರೆಯಲ್ಲೇ ವೃದ್ಧೆ ಕಮಲ ಮೃತಪಟ್ಟಿದ್ದರು. ಮರುದಿನ ಅಂತ್ಯಕ್ರಿಯೆ ನೆರವೇರಿಸಿದ ಮೊಣ್ಣಪ್ಪ ಮೇ 21 ರಂದು ಮಡಿಕೇರಿ ಆಸ್ಪತ್ರೆಗೆ ಬಂದು ತನ್ನ ತಾಯಿಯ ವಸ್ತುಗಳನ್ನು ಕೇಳಿದ್ದಾರೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಕೇವಲ ಬ್ಯಾಗನ್ನು ಮಾತ್ರ ನೀಡಿದ್ದಾರೆ.

ತನ್ನ ತಾಯಿಯ ಚಿನ್ನದ ಸರವನ್ನು ಕೊಟ್ಟಿಲ್ಲ ಎಂದು ಮೃತ ಕಮಲ ಅವರ ಮಗ ಮೊಣ್ಣಪ್ಪ ಕೋವಿಡ್ ಆಸ್ಪತ್ರೆ ಡೀನ್ ಮತ್ತು ಮಡಿಕೇರಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ನಮ್ಮ ಸಂಪ್ರದಾಯದ ಪ್ರಕಾರ ಗಂಡ ಇರುವಾಗಲೇ ಹೆಂಡತಿ ಕೊರಳಿನಿಂದ ತಾಳಿಯನ್ನು ತೆಗೆಯುವುದಿಲ್ಲ. ಹೀಗಾಗಿ ತಾಯಿಯನ್ನು ಆಸ್ಪತ್ರೆಗೆ ಕಳುಹಿಸುವಾಗ ಚೈನ್ ತೆಗೆಯದೆ ಆಸ್ಪತ್ರೆಗೆ ಕಳುಹಿಸಿದೆವು. ಆದರೆ ಈಗ ತಾಯಿಯ ಚಿನ್ನದ ತಾಳಿಯ ಸರವನ್ನೇ ಕೊಟ್ಟಿಲ್ಲ. ಆಸ್ಪತ್ರೆಗೆ ಕಳುಹಿಸುವಾಗ ತಾಯಿಯೊಂದಿಗೆ ಕಳುಹಿಸಿದ್ದ ಇತರೆ ವಸ್ತುಗಳನ್ನು ಮಾತ್ರವೇ ವಾಪಸ್ ನೀಡಿದ್ದಾರೆ. ಈಗ ತಾಯಿಗೆ ಧಾರ್ಮಿಕ ಕಾರ್ಯಗಳನ್ನು ಮಾಡಲು ತಾಳಿ ಬೇಕಾಗಿದೆ. ಅದನ್ನು ದಯಮಾಡಿ ಕೊಡಿಸಿ ಎಂದು ಕಮಲ ಅವರ ಮಗ ಮೊಣ್ಣಪ್ಪ ಅಂಗಲಾಚುತ್ತಿದ್ದಾರೆ.

ಇದನ್ನೂ ಓದಿ: ಅಮ್ಮನ ನೆನಪುಗಳಿರುವ ಫೋನ್ ಹಿಂತಿರುಗಿಸಿ; ತಾಯಿಯನ್ನು ಕಳೆದುಕೊಂಡ ಮಗಳ ಕರುಣಾಜನಕ ಪತ್ರ

ಈ ಕುರಿತು ಪ್ರತಿಕ್ರಿಯಿಸಿರುವ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆಸ್ಪತ್ರೆಯಲ್ಲಿ ಈ ರೀತಿ ಆಗಬಾರದಿತ್ತು. ಇದು ಅತ್ಯಂತ ಅಮಾನವೀಯ ಘಟನೆ. ಮೊಬೈಲ್ ಗಳು ನಾಪತ್ತೆಯಾಗಿರುವಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು. ಈ ಕುರಿತು ಈಗಾಗಲೇ ಆಸ್ಪತ್ರೆಯಲ್ಲಿ ತನಿಖೆ ನಡೆಯುತ್ತಿದೆ. ಅಂದು ವಿವಿಧ ಶಿಫ್ಟ್ ಗಳಲ್ಲಿ ಯಾರೆಲ್ಲಾ ಕೆಲಸ ಮಾಡುತ್ತಿದ್ದರು, ಅವರನ್ನು ತನಿಖೆ ಮಾಡಲಾಗುವುದು. ಆದಷ್ಟು ಶೀಘ್ರವೇ ಸಮಸ್ಯೆ ಬಗೆಹರಿಸಲಾಗುವುದು. ಎಲ್ಲಾ ವಾರ್ಡುಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಲಾಗುತ್ತಿದೆ ಎಂದಿದ್ದಾರೆ. ಒಟ್ಟಿನಲ್ಲಿ ಕೋವಿಡ್ ನಿಂದ ಮೃತಪಟ್ಟವರ ಬೆಲೆ ಬಾಳುವ ವಸ್ತುಗಳು ಆಸ್ಪತ್ರೆಯಲ್ಲಿ ನಾಪತ್ತೆಯಾಗುತ್ತಿರುವುದು ಎಲ್ಲರೂ ತಲೆತಗ್ಗಿಸುವಂತೆ ಆಗಿದೆ.
Published by: Kavya V
First published: May 24, 2021, 4:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories