ಬೆಂಗಳೂರು(ಜ. 27): ಬೆಸ್ಕಾಂ ವಿದ್ಯುತ್ ಕಂಪನಿ ಅಳವಡಿಸಿರುವ ವಿದ್ಯುತ್ ತಂತಿಗಳು ಸಾರ್ವಜನಿಕರ ನೆತ್ತಿಯ ಮೇಲೆ ಕತ್ತಿಯಂತೆ ತೂಗುತ್ತಲೇ ಇದೆ ಎಂಬ ಆರೋಪ ಬಹಳ ಹಳೆಯದು. ವಿದ್ಯುತ್ ತಂತಿ ತಾಗಿ ಅನೇಕ ದುರಂತ ಘಟನೆಗಳು ನಡೆದುಹೋಗಿವೆ. ಆ ಸಾಲಿಗೆ ಮತ್ತೊಂದು ಘಟನೆ ಸೇರಿಕೊಂಡಿದೆ. ಬೆಸ್ಕಾಂ ನಿರ್ಲಕ್ಷ್ಯಕ್ಕೆ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡ ಘಟನೆ ವೈಟ್ಫೀಲ್ಡ್ನಲ್ಲಿ ನಡೆದಿದೆ. ಇಲ್ಲಿಯ ಗಾಂಧಿಪುರದಲ್ಲಿ ಡಾಲಿ ಏಂಜೆಲ್ (12) ಎಂಬ ಬಾಲಕಿಯ ಕೈ, ಹೊಟ್ಟೆ ಸೇರಿ ಹಲವೆಡೆ ಸುಟ್ಟ ಗಾಯಗಳಾಗಿವೆ. ಮನೆ ಮುಂದೆ ಹಾದುಹೋಗಿದ್ದ 11 ಕೆವಿ ಲೈವ್ ವಿದ್ಯುತ್ ತಂತಿ ತಾಗಿ ಈ ದುರಂತ ಸಂಭವಿಸಿದೆ.
ಮನೆ ಮುಂದೆ ಹಾದುಹೋಗಿದ್ದ ವಿದ್ಯುತ್ ತಂತಿ ಮೇಲೆ ಮೊಬೈಲ್ ಚಾರ್ಜರ್ ಬಿದ್ದಿತ್ತು. ಅದನ್ನು ಮಾರ್ಫಿಂಗ್ ಸ್ಟಿಕ್ ಮೂಲಕ ತೆಗೆಯಲು ಬಾಲಕಿ ಯತ್ನಿಸಿದ್ದಾಳೆ. ಈ ವೇಳೆ ತಂತಿ ತಾಕಿ ಆಕೆಯ ಹೊಟ್ಟೆ, ಕೈ ಹಾಗೂ ಇತರ ಭಾಗಗಳಿಗೆ ತಾಗಿ ಸುಟ್ಟಿರುವುದು ತಿಳಿದುಬಂದಿದೆ. 11 ಕಿಲೋವ್ಯಾಟ್ ವಿದ್ಯುತ್ ಪ್ರವಹಿಸುವ ಈ ತಂತಿಗೆ ಬೆಸ್ಕಾಂನವರು ಪ್ಲಾಸ್ಟಿಕ್ ಕವರ್ ಅಳವಡಿಕೆ ಮಾಡಿರಲಿಲ್ಲ. ಜನವಸತಿ ಪ್ರದೇಶದಲ್ಲಿ ಬೆಸ್ಕಾಂ ತೋರಿದ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ ಎಂದು ಬಾಲಕಿಯ ಪೋಷಕರು ಸ್ಥಳೀಯ ಬೆಸ್ಕಾಂ ಎಇಇ ಮತ್ತು ಎಇ ವಿರುದ್ಧ ದೂರು ದಾಖಲಿಸಿದ್ಧಾರೆ.
ಇದನ್ನೂ ಓದಿ: ಮೋದಿ ಸರ್ಕಾರ ಯಾವತ್ತೂ ರೈತಪರ; ರೈತ ಪ್ರತಿಭಟನೆ ಹಿಂದೆ ವಿಪಕ್ಷಗಳ ಕುಮ್ಮಕ್ಕು: ಸಚಿವ ಜಗದೀಶ್ ಶೆಟ್ಟರ್
ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಗೊಂಡಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವೇಳೆ, ಬಾಲಕಿ ಗಾಯಗೊಂಡರೂ ಬೆಸ್ಕಾಂ ಸಿಬ್ಬಂದಿ ಈವರೆಗೂ ವಿಚಾರಿಸುವ ಸೌಜನ್ಯ ಕೂಡ ತೋರಿಲ್ಲ ಎಂಬ ಟೀಕೆಯೂ ಕೇಳಿಬರುತ್ತಿದೆ.
ವರದಿ: ಮುನಿರಾಜು ಹೊಸಕೋಟೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ