• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ತ್ಯಾಜ್ಯ ನಿರ್ವಹಣೆಯಲ್ಲಿ ಚಿಕ್ಕಬಳ್ಳಾಪುರ ಮಾದರಿ; ತ್ಯಾಜ್ಯ ಒಂದು ಸಂಪನ್ಮೂಲ ಎಂದ ಜಿಲ್ಲಾಧಿಕಾರಿ ಲತಾ

ತ್ಯಾಜ್ಯ ನಿರ್ವಹಣೆಯಲ್ಲಿ ಚಿಕ್ಕಬಳ್ಳಾಪುರ ಮಾದರಿ; ತ್ಯಾಜ್ಯ ಒಂದು ಸಂಪನ್ಮೂಲ ಎಂದ ಜಿಲ್ಲಾಧಿಕಾರಿ ಲತಾ

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ

ಹಸಿ ಕಸದ ತ್ಯಾಜವನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ರೈತರಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ಹೇಳಿದ್ಧಾರೆ.

  • Share this:

ಚಿಕ್ಕಬಳ್ಳಾಪುರ: ತ್ಯಾಜ್ಯ ನಿರ್ವಹಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸಲು ಜಿಲ್ಲಾಡಳಿತ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಲತಾ  ಹೇಳಿದರು. ಪುಟ್ಟ ತಿಮ್ಮನಹಳ್ಳಿಯಲ್ಲಿರುವ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಆರ್.ಲತಾ, ತ್ಯಾಜ್ಯ ನಿರ್ವಹಣೆ, ಎರೆಹುಳು ಗೊಬ್ಬರ ಘಟಕ, ನಾಟಿ ಹಸು, ಸಾವಯವ ಗೊಬ್ಬರದಿಂದ ಬೆಳೆದ ಸೊಪ್ಪು, ಮಿಶ್ರ ಬೆಳೆ, ರಾಗಿಯನ್ನು ಪರಿವೀಕ್ಷಣೆ ಮಾಡಿದರು. 


ನಗರ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸ ಪರಿಣಾಮಕಾರಿಯಾಗಿ ವಿಲೇವಾರಿ ಮಾಡುವ ಹೊಣೆ ಸ್ಥಳೀಯ ನಗರಸಭೆಯದಾಗಿರುತ್ತದೆ. ಈ ನಿಟ್ಟಿನಲ್ಲಿ ನಗರಸಭೆ ಒಂದು ಹೆಜ್ಜೆ ಮುಂದಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಚಿಕ್ಕಬಳ್ಳಾಪುರದ ನಾಗರಿಕರು ಮನೆಯಲ್ಲೇ ತ್ಯಾಜ್ಯ ವಿಂಗಡಿಸಿ ಕಸದ ಗಾಡಿಗೆ ನೀಡುತ್ತಿದ್ದಾರೆ. ಇದರಿಂದ ತ್ಯಾಜ್ಯ ಮರುಬಳಕೆಗೆ ಸಹಕಾರಿಯಾಗಿದೆ. ಹಸಿ ಕಸದಿಂದ ನಮ್ಮ ಮನೆ, ಟೆರೇಸ್ ಗಾರ್ಡನ್, ಹೊಲಗಳಿಗೆ ಕಾಂಪೋಸ್ಟ್ ಗೊಬ್ಬರ ತಯಾರು ಮಾಡಿಕೊಳ್ಳಬಹುದು. ಅದರಿಂದ ನಿಮಗೂ ಅನುಕೂಲ, ಸಂಗ್ರಹಿಸುವುದಕ್ಕೂ ಅನುಕೂಲ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.


ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 15 ಎಕರೆ ಜಾಗವನ್ನು ಘನ ತ್ಯಾಜ್ಯ ನಿರ್ವಹಣೆ ಘಟಕಕ್ಕೆ ಮೀಸಲಿರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಉತ್ತಮ ರೀತಿಯಲ್ಲಿ ಕಸ ವಿಂಗಡಣೆ ಮಾಡಬಹುದಾಗಿದ್ದು, ಈಗಾಗಲೇ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ, ಹಸಿ ಕಸದಿಂದ ಗೊಬ್ಬರವನ್ನು ತಯಾರಿಸಲಾಗುತ್ತಿದ್ದು, ಸಾವಯವ ಗೊಬ್ಬರದ ಮೂಲಕ ಮಿಶ್ರ ಬೆಳೆಯನ್ನು ಬೆಳೆಯಲು ಕ್ರಮ ಕೈಗೊಳ್ಳಲಾಗಿದೆ. ನಗರದ ಪೌರಕಾರ್ಮಿಕರಿಗೆ ಇದನ್ನು ವಿತರಿಸಲಾಗುವುದು. ಅಲ್ಲದೇ, ತ್ಯಾಜ್ಯ ಎಂದಿಗೂ ತ್ಯಾಜ್ಯವಲ್ಲ ಅದೊಂದು ಸಂಪನ್ಮೂಲ ಎಂದು ತೋರಿಸುವ ಉದ್ದೇಶದಿಂದ ನಗರಸಭೆಯಿಂದ ಈ ಕಾರ್ಯ ಕೈಗೊಳ್ಳಲಾಗಿದೆ. ತ್ಯಾಜ್ಯ ವಿಂಗಡಣೆಯಲ್ಲಿ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವ ಉದ್ದೇಶ ಹೊಂದಾಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌. ಲತಾ ಹೇಳಿದ್ದಾರೆ.


ಇದನ್ನೂ ಓದಿ: ಒಬ್ಬನೇ ರೈತನ 20 ಶ್ರೀಗಂಧ ಮರಗಳಿಗೆ ಕಳ್ಳರ ಕನ್ನ; ನೆರವಿಗೆ ಬಾರದ ಆಡಳಿತ; ಚಿತ್ರದುರ್ಗದ ರೈತನ ಆಕ್ರೋಶ


ಸುಮಾರು 15 ವರ್ಷಗಳಿಂದ ಕಸ ಸಂಗ್ರಹಿಸಿ ಈ ಜಾಗದಲ್ಲಿ ಸುರಿಯಲಾಗಿದೆ. ಈ ಅವಧಿಯಲ್ಲಿ ಸಂಗ್ರಹವಾಗಿರುವಂತಹ ಕಸವನ್ನು ಹಸಿ ಕಸ ಮತ್ತು ಒಣ ಕಸ ಎಂದು ವಿಂಗಡಿಸಿಲ್ಲ. ಆದರೆ ಕಸ ಕತ್ತರಿಸುವ ಮತ್ತು ಜರಡಿ ಹಿಡಿಯುವ ಯಂತ್ರಗಳ ಮೂಲಕ ಪ್ಲಾಸ್ಟಿಕ್ ಮತ್ತು ಗೊಬ್ಬರ ಕಸವನ್ನು ವಿಂಗಡಣೆ ಮಾಡಲಾಗುತ್ತದೆ. ಈ ಮೂಲಕ ಯಾವುದೇ ಕಸವನ್ನು ವ್ಯರ್ಥವಾಗದಂತೆ ಮರು ಬಳಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.


ನಗರಸಭೆ ಅಧ್ಯಕ್ಷ ಆನಂದ್ ರೆಡ್ಡಿ ಬಾಬು ಮಾತನಾಡಿ, ನಗರದ ಹಸಿ ಕಸವನ್ನು ಎರೆಹುಳುವಿನಿಂದ ಗೊಬ್ಬರವನ್ನಾಗಿ ತಯಾರಿಸಿ ಮಿಶ್ರ ಬೆಳೆಯನ್ನು ಬೆಳೆಯಲು ಜಿಲ್ಲಾಡಳಿತ ಮತ್ತು ನಗರಸಭೆ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ, ರಾಗಿ, ತರಕಾರಿ ಬೆಳೆಯಲಾಗುತ್ತಿದ್ದು, ಇದನ್ನು ನಗರಸಭೆ ಸಿಬ್ಬಂದಿಯವರಿಗೆ ಮಾರಾಟ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಇಲ್ಲಿ ತಯಾರಿಸಲ್ಪಟ್ಟಂತಹ ಎರೆಹುಳು ಗೊಬ್ಬರವನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.


ಇದನ್ನೂ ಓದಿ: ಯೋಗೇಶ್ ಗೌಡ ಕೊಲೆ ಪ್ರಕರಣ: ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ


ಘಟಕದಲ್ಲಿ ಸಂಸ್ಕರಿಸಿದ ಹಸಿ ಮತ್ತು ಒಣ ಕಸವನ್ನು ತೊಟ್ಟಿಯಲ್ಲಿ ಹಾಕಿ ನೀರು ಮತ್ತು ಸಗಣಿ ಹಾಕಿ ಕೊಳೆಯಲು ಬಿಡಲಾಗುತ್ತಿದೆ. ನಂತರ ಈ ತ್ಯಾಜ್ಯ ಕಸ ಗೊಬ್ಬರಕ್ಕೆ ಎರೆಹುಳುಗಳನ್ನು ಬಿಟ್ಟು ಗೊಬ್ಬರ ತಯಾರಿಸಲಾಗುತ್ತಿದೆ. ಈಗಾಗಲೇ ಮೊದಲ ಹಂತದ ಗೊಬ್ಬರ ಉತ್ಪಾದನೆಯಾಗಿದ್ದು, ಇದರಿಂದ ಸುತ್ತಮುತ್ತಲೂ ಮಿಶ್ರ ಬೆಳೆಯನ್ನು ಬೆಳೆಯಲಾಗಿದೆ. ಅಷ್ಟೇ ಅಲ್ಲದೇ, ಇಲ್ಲಿ ನಾಟಿ ಹಸು, ಮೇಕೆಯನ್ನು ಸಾಕಾಣಿಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರಾದ ಲೋಹಿತ್ ಮಾಹಿತಿ ನೀಡಿದ್ದಾರೆ.


ವರದಿ: ನವೀನ್ ಕುಮಾರ್

Published by:Vijayasarthy SN
First published: