ಕುರಿದೊಡ್ಡಿಯಲ್ಲಿ 6 ಕೋಟಿ ಗಾಂಜಾ ಪತ್ತೆ - ಅಕ್ರಮದ ಹಿಂದೆ ರಾಜಕೀಯ ವ್ಯಕ್ತಿಗಳ ಕೈವಾಡ : ಪ್ರಿಯಾಂಕ್ ಖರ್ಗೆ

ಕಲಬುರ್ಗಿಯಲ್ಲಿ ಭಾರಿ ಪ್ರಮಾಣದಲ್ಲಿ ಮಾದಕ ವಸ್ತುವಿನ ಸಾಗಣೆ, ಶೇಖರಣೆ ನಡೆಯುತ್ತಿದೆ. ಇದರ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಯಾಕಿರಲಿಲ್ಲ. ರಾಜಕೀಯ ಒತ್ತಡ ಕಾಣದ ಕೈಗಳು ಪೊಲೀಸರನ್ನು ಕಟ್ಟಿಹಾಕಿವೆಯಾ ಎಂದು ಪ್ರಶ್ನಿಸಿದ್ದಾರೆ.

ಮಾಜಿ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಚಿವ ಪ್ರಿಯಾಂಕ್ ಖರ್ಗೆ

  • Share this:
ಕಲಬುರ್ಗಿ(ಸೆಪ್ಟೆಂಬರ್​. 10): ಕಾಳಗಿ ಬಳಿ ಕುರಿದೊಡ್ಡಿಯಲ್ಲಿ ಅಕ್ರಮ ಗಾಂಜಾ ಪತ್ತೆ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಳ್ಳಲಾರಂಭಿಸಿದೆ. ಘಟನೆ ಕುರಿತು ದಿಗ್ಭ್ರಮೆ ವ್ಯಕ್ತಪಡಿಸಿರುವ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಈ ಅಕ್ರಮದ ಹಿಂದೆ ರಾಜಕೀಯ ವ್ಯಕ್ತಿಗಳ ಕೈವಾಡವಿದೆ ಎಂದು ಪರೋಕ್ಷವಾಗಿ ಸಂಸದ ಉಮೇಶ್ ಜಾಧವ್ ಹಾಗೂ ಚಿಂಚೋಳಿ ಶಾಸಕ ಅವಿನಾಶ್ ಜಾಧವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸದ್ಯ ಗಾಂಜಾ ಸಂಗ್ರಹಿಸಿ ಇಡಲಾಗಿದ್ದ ಕಾಳಗಿ ಸಮೀಪದ ಲಕ್ಷಣನಾಯಕ್ ತಾಂಡಾ, ಚಿಂಚೋಳಿ ಕ್ಷೇತ್ರದ ವ್ಯಾಪ್ತಿಗೆ ಬರಲಿದೆ. ಕುರಿ ದೊಡ್ಡಿಯಲ್ಲಿ ಭೂಮಿಯ ಆಳದಲ್ಲಿ 1320 ಕೆ.ಜಿ. ಗಾಂಜಾ ಸಂಗ್ರಹಿಸಿ ಇಡಲಾಗಿತ್ತು. ಅದರ ಮೌಲ್ಯ ಸುಮಾರು 6 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದ್ದು, ರಾಜ್ಯದ ವಿವಿಧೆಡೆಗೆ ಇಲ್ಲಿಂದಲೆ ಪೂರೈಕೆ ಮಾಡಲಾಗುತ್ತಿತ್ತು ಎಂಬುದು ತನಿಖೆಯ ವೇಳೆ ಬಹಿರಂಗಗೊಂಡಿದೆ ಎಂದು ತಿಳಿಸಿದರು.

ಈ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ರಾಜ್ಯದ ಇತಿಹಾಸದಲ್ಲಿಯೇ ಇದೊಂದು ದೊಡ್ಡ ಕಾರ್ಯಾಚರಣೆ. ಕಲಬುರ್ಗಿಯಲ್ಲಿ ಭಾರಿ ಪ್ರಮಾಣದಲ್ಲಿ ಮಾದಕ ವಸ್ತುವಿನ ಸಾಗಣೆ, ಶೇಖರಣೆ ನಡೆಯುತ್ತಿದೆ. ಇದರ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಯಾಕಿರಲಿಲ್ಲ. ರಾಜಕೀಯ ಒತ್ತಡ ಕಾಣದ ಕೈಗಳು ಪೊಲೀಸರನ್ನು ಕಟ್ಟಿಹಾಕಿವೆಯಾ ಎಂದು ಪ್ರಶ್ನಿಸಿದ್ದಾರೆ.ಒರಿಸ್ಸಾ ರಾಜ್ಯದಿಂದ ಬರಬೇಕಂದ್ರೆ ಮೂರು ರಾಜ್ಯಗಳ ಗಡಿ ದಾಟಬೇಕು. ಮೂರು ರಾಜ್ಯಗಳ ಚೆಕ್ ಪೋಸ್ಟ್ ದಾಟಿಕೊಂಡು ಬಂದದ್ದಾದರೂ ಹೇಗೆ, ಅಕ್ರಮ ಸರಬರಾಜಿನಲ್ಲಿ ರಾಜಕೀಯ ವ್ಯಕ್ತಿಗಳ ಕೈವಾಡ ಸ್ಪಷ್ಟವಾಗುತ್ತದೆ ಎಂದು ಪರೋಕ್ಷವಾಗಿ ಸಂಸದ ಉಮೇಶ್ ಜಾಧವ್ ಹಾಗೂ ಶಾಸಕ ಅವಿನಾಶ್ ಜಾಧವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಸ್ಥಳೀಯ ಆಡಳಿತಕ್ಕೆ ಮಾಹಿತಿ ಇರಲಿಲ್ಲವೇ ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಮೋಸ, ವಂಚನೆ ತಡೆಗೆ ಸಮನ್ವಯ ಸಮಿತಿ ರಚನೆ ; ಗೃಹ ಸಚಿವ ಬಸವರಾಜ ಬೊಮ್ಮಾಯಿ

ಗ್ಯಾಂಬ್ಲಿಂಗ್, ಮಾದಕ ವಸ್ತು ದಂಧೆಗಳು ಒಂದನ್ನೊಂದು ಅವಲಂಬಿಸಿವೆ. ನಾನು ಜಿಲ್ಲಾ ಉಸ್ತುವಾರಿ ಸಚಿವನಿದ್ದಾಗ ಜಿಲ್ಲೆಯಾದ್ಯಂತ ಜೂಜು ಅಡ್ಡೆ ಮುಚ್ಚಿಸಿದ್ದೆ. ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ತಂದಿದ್ದೆ. 2019ರ ನಂತರ ಮತ್ತೆ ಜಿಲ್ಲೆಯಾದ್ಯಂತ ಜೂಜು ಅಡ್ಡೆ ತಲೆಯೆತ್ತಿವೆ. ಕಲಬುರ್ಗಿ ಜಿಲ್ಲೆ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗಿದೆ.

ಬೆಂಗಳೂರು ಪೊಲೀಸರು ದಾಳಿಯನ್ನು ಉಲ್ಲೇಖಿಸಿರುವ ಅವರು ದಾಳಿಯ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದಿರುವುದು ನೋಡಿದರೆ, ಸ್ಥಳೀಯ ಪೊಲೀಸರ ಮೇಲೆ ಆಡಳಿತ ಪಕ್ಷದ ರಾಜಕೀಯ ಒತ್ತಡ ಇತ್ತೇ ಎನ್ನುವ ಅನುಮಾನ ಮೂಡುತ್ತದೆ. ಅಥವಾ ಸ್ಥಳೀಯ ಪೊಲೀಸರ ಮೇಲೆ ನಂಬಿಕೆ ಇರಲಿಲ್ಲವೇ ಎನ್ನುವ ಪ್ರಶ್ನೆ ಮೂಡುತ್ತದೆ ಎಂದಿದ್ದಾರೆ. ಸೂಕ್ತ ತನಿಖೆ ನಡೆಸಿ ಅಕ್ರಮ ಮಟ್ಟ ಹಾಕಲು ಆಗ್ರಹಿದ್ದಾರೆ.  ---
Published by:G Hareeshkumar
First published: