ಚಿಕ್ಕಮಗಳೂರು(ನವೆಂಬರ್. 22): ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ದತ್ತಾತ್ರೇಯ ಸ್ವಾಮಿಯ ಶಾಪವಿದೆ. ಅವರು ಹಿಂದೆ ಮಾಲೆ ಧರಿಸಿದ್ದಾಗ ಮುಖ್ಯ ಮಂತ್ರಿಯಾದರೆ ಇಲ್ಲಿಗೆ ಬರುತ್ತೇನೆ ಎಂದು ಹೇಳಿ ಹೋಗಿದರು. ಆದರೆ, ಬಂದಿಲ್ಲ. ಅದಕ್ಕೆ ಅವರು ಸಿಎಂ ಆದಾಗಲ್ಲೆಲ್ಲಾ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ಸಾಧ್ಯವಾಗಿಲ್ಲ ಎಂದು ಸಿಎಂ ಯಡಿಯೂರಪ್ಪ ಬಗ್ಗೆ ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಅಚ್ಚರಿ ಹೇಳಿಕೆ ನೀಡಿದ್ದಾರೆ. ಅಲ್ಲದೇ ಇದೇ ನವೆಂಬರ್ 26 ದತ್ತಪೀಠಕ್ಕೆ ಬರಬೇಕೆಂದು ಆಹ್ವಾನಿಸಿದ್ದಾರೆ. ಚಿಕ್ಕಮಗಳೂರು ನಗರದ ಶಂಕರ ಮಠದಲ್ಲಿ 15 ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಮಾಲಾಧಾರಣೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಸಿಎಂ ಯಡಿಯೂರಪ್ಪನವರು, ಈ ಬಾರಿ ಅವರು ಮಾಲೆ ಧರಿಸಿ ನಮ್ಮ ಜೊತೆ ದತ್ತಮಾಲಾ ಅಭಿಯಾದಲ್ಲಿ ಪಾಲ್ಗೊಂಡು ದತ್ತಪೀಠವನ್ನ ಹಿಂದೂಗಳಿಗೆ ಒಪ್ಪಿಸಿದರೆ ಅವರ ಶಾಪ ವಿಮೋಚನೆಯಾಗಲಿದೆ ಎಂದರು.
ಕಳೆದ 15-20 ವರ್ಷಗಳಿಂದ ದತ್ತಪೀಠವನ್ನ ಹಿಂದೂಗಳಿಗೆ ಒಪ್ಪಿಸಬೇಕೆಂದು ನಮ್ಮ ಆಗ್ರಹವಿದೆ. ಈಗಾಗಲೇ ನ್ಯಾಯಾಲಯದಲ್ಲಿ ಕೂಡ ದತ್ತಪೀಠ ಹಿಂದೂಗಳ ಪೀಠ ಎಂದು ಸಾಬೀತಾಗಿದೆ. ಸುಪ್ರೀಂ ಕೋರ್ಟ್ ಕೂಡ ರಾಜ್ಯ ಸರ್ಕಾರದ ಜವಾಬ್ದಾರಿಗೆ ಬಿಟ್ಟಿದ್ದು, ನಾಗಮೋಹನ್ ದಾಸ್ ವರದಿ ಕೂಡ ಇದು ದತ್ತಪೀಠ ಎಂದು ವರದಿ ಕೊಟ್ಟಿದೆ. ಈಗ ಬಿ.ಎಸ್.ವೈ ಮುಖ್ಯಮಂತ್ರಿ ಇದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಕೇಂದ್ರದಲ್ಲೂ ಬಿಜೆಪಿ ಸರ್ಕಾರವಿದೆ. ಬಿ.ಎಸ್.ವೈ ಹಿಂದೆ ಮಾಲೆ ಹಾಕಿದ್ದಾಗ, ಸಿಎಂ ಆದರೆ, ದತ್ತಪೀಠಕ್ಕೆ ಬರುತ್ತೇನೆ ಎಂದಿದ್ದರು. ಆದರೆ, ಅವರು ಮೂರು ಬಾರಿಯೂ ಸಿಎಂ ಆಗಿ ಪೂರ್ಣ ಅವಧಿ ಮಾಡಿಲ್ಲ. ದತ್ತಾತ್ರೇಯರ ಶಾಪ ಸಿಎಂ ಕುರ್ಚಿಗೆ ತಟ್ಟಿದೆ ಎಂದು ತಿಳಿಸಿದರು.
ಇದನ್ನೂ ಓದಿ : ವಾಟಾಳ್ ನಾಗರಾಜ್ ಅವರ ಆಸ್ತಿ ಮೂಲ ಪತ್ತೆ ಮಾಡಿ: ಡಿ.5ರ ಬಂದ್ ಬಡವರ, ಕಾರ್ಮಿಕರ ವಿರೋಧಿಯಾಗಿದೆ: ರಾಘವ ಅಣ್ಣಿಗೇರಿ
ಆ ಶಾಪ ವಿಮೋಚನೆ ಆಗಬೇಕಾದ್ರೆ ಯಡಿಯೂರಪ್ಪನವರು ಈ ಬಾರಿ ನಮ್ಮ ಜೊತೆ ದತ್ತಮಾಲಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಅವರ ಶಾಪ ವಿಮೋಚನೆಯಾಗಬೇಕಂದ್ರೆ ಮಾಲೆ ಹಾಕಿಕೊಂಡು ದತ್ತಪೀಠಕ್ಕೆ ಬಂದು ಪೀಠವನ್ನ ಹಿಂದೂಗಳಿಗೆ ಒಪ್ಪಿಸಿದರೆ ಮಾತ್ರ ಅವರ ಶಾಪ ವಿಮೋಚನೆಯಾಗಲಿದೆ. ಜೊತೆಗೆ, ಅವರು ಮುಂದಿನ ದಿನಗಳಲ್ಲಿ ಸರಿಯಾಗಿ ಅಧಿಕಾರ ನಡೆಸಲು ಗುರುಗಳ ಆಶೀರ್ವಾದ ಸಿಗಬಹುದು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ