ಆರು ಕಿಮೀ ಕಾರ್ ಚೇಸ್ ಮಾಡಿ ದರೋಡೆ; ಬಾಣಸವಾಡಿ ಬಳಿ ಸಿನಿಮೀಯ ಘಟನೆ; ಸಿಸಿಟಿವಿಯಲ್ಲಿ ಕಳ್ಳರ ಕುರುಹು

ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಆರು ಕಿಮೀ ದೂರ ಫಾಲೋ ಮಾಡಿ ಬಾಣಸವಾಡಿ ಬಳಿ ಕಾರಿನ ಗಾಜು ಒಡೆದು ಒಳಗಿದ್ದ 2.7 ಲಕ್ಷ ಹಣ ಹಾಗೂ 6 ಲಕ್ಷ ಮೌಲ್ಯದ ರೋಲೆಕ್ಸ್ ವಾಚನ್ನು ದರೋಡೆ ಮಾಡಿದ್ದಾರೆ.

ಬಾಣಸವಾಡಿ ಬಳಿ ದರೋಡೆ ಮಾಡಿದ ದುಷ್ಕರ್ಮಿಗಳ ದೃಶ್ಯ

ಬಾಣಸವಾಡಿ ಬಳಿ ದರೋಡೆ ಮಾಡಿದ ದುಷ್ಕರ್ಮಿಗಳ ದೃಶ್ಯ

  • Share this:
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ ನಡೆದಿದೆ. ಕಾರೊಂದನ್ನ 6 ಕಿಮೀ ಫಾಲೋ ಮಾಡ್ಕೊಂಡು ಬಂದು 6 ಜನ ದುಷ್ಕರ್ಮಿಗಳು ಹಾಡಹಗಲೇ ದರೋಡೆ ಮಾಡಿದ್ದಾರೆ. ನವೆಂಬರ್ 11ರಂದು ಬಾಣಸವಾಡಿಯಲ್ಲಿ ಈ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸಿಸಿಟಿವಿಯಲ್ಲಿ ಕಳ್ಳರ ದೃಶ್ಯ ಸೆರೆಯಾಗಿದೆ.

ಕೇರಳ ಮೂಲದ ಉದ್ಯಮಿ ಸಮೀಲ್ ಎಂಬಾತ ನ. 11 ನೇ ತಾರೀಖಿನಂದು 3 ಲಕ್ಷ ಹಣವನ್ನು ಕಲ್ಯಾಣ ನಗರದ ಐಸಿಐಸಿಐ ಬ್ಯಾಂಕ್​ಗೆ ಡೆಪಾಸಿಟ್ ಮಾಡಲು ಹೋಗುತ್ತಾರೆ. ಆದ್ರೆ ಬ್ಯಾಂಕ್ ಕೆಲಸದ ಅವಧಿ ಮುಗಿದಿದ್ದರಿಂದ ಹಣವನ್ನು ವಾಪಸ್ ತಗೊಂಡು ಬಂದು ತಮ್ಮ ಫಾರ್ಚುನರ್ ಕಾರಿನಲ್ಲಿ ಇಟ್ಟಿದ್ದಾರೆ. ನಂತರ ಕಮ್ಮನಹಳ್ಳಿ ಮುಖ್ಯರಸ್ತೆಯ ಮೂಲಕ ಬಾಣಸವಾಡಿ ಕಡೆಗೆ ಬಂದಿದ್ದಾರೆ. ಈ ವೇಳೆ ಮೂರು ಬೈಕ್​ಗಳಲ್ಲಿ ಬಂದ ಆರು ಜನ ದುಷ್ಕರ್ಮಿಗಳು ಸುಮಾರು 6 ಕಿಲೋ ಮೀಟರ್​ಗಳಷ್ಟು ದೂರ ಸಮೀಲ್ ಕಾರನನ್ನು ಫಾಲೋ ಮಾಡಿದ್ದಾರೆ.

ಬಾಣಸವಾಡಿ ಬಳಿಗೆ ಬಂದ ಬಳಿಕ ಸಮೀಲ್ ಅವರು ರೆಸ್ಟೋರೆಂಟ್ ವೊಂದರ ಬಳಿ ಕಾರನ್ನ ನಿಲ್ಲಿಸಿ ಒಳಗೆ ಹೋಗಿದ್ದಾರೆ. ಹೀಗೆ ಹೋಗೋಕು ಮುನ್ನ ತನ್ನ ಕೈಯಲ್ಲಿ ಇದ್ದ ಸುಮಾರು 6 ಲಕ್ಷ ಬೆಲೆ ಬಾಳುವ ರೋಲ್ಯಾಕ್ಸ್ ವಾಚನ್ನು ತೆಗೆದು ಕಾರಿನಲ್ಲಿಯೇ ಇರಿಸಿ ಹೋಗಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಯುವತಿಯನ್ನು ಕೊಂದು ದೇಹವನ್ನು ಕತ್ತರಿಸಿ ನಾಲೆಗೆ ಎಸೆದ ದುಷ್ಕರ್ಮಿಗಳು

ಕಾರನ್ನು‌ ಫಾಲೋ ಮಾಡಿಕೊಂಡು ಬಂದ ದುಷ್ಕರ್ಮಿಗಳು ಕಾರಿನ ಗ್ಲಾಸ್ ಹೊಡೆದು ಕಾರಿನಲ್ಲಿದ್ದ 2.7 ಲಕ್ಷ ಹಣ ಹಾಗೂ ರೊಲ್ಯಾಕ್ಸ್ ವಾಚ್ ಎಗರಿಸಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾರೆ.

ರೆಸ್ಟೋರೆಂಟ್​ನಿಂದ ಬಂದ ಬಳಿಕ ಸುಮೀಲ್ ಬಾಣಸವಾಡಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ದೂರು ಪಡೆದಿದ್ದೇ ಪೊಲೀಸರು ಬಂದ ಚೆಕ್ ಮಾಡಿದಾಗ ಆರೋಪಿಗಳು ಫಾಲೋ‌‌ ಮಾಡಿದ ಸಿಸಿ ಕ್ಯಾಮರಾ ದೃಶ್ಯಾವಳಿ ಪತ್ತೆಯಾಗಿದೆ. ಅದರ ಆಧಾರದ ಮೇಲೆ ಸದ್ಯ ಆರೋಪಿಗಳಿಗಾಗಿ ಹುಡುಕಾಟ ಮಾಡುತ್ತಿದ್ದಾರೆ. ಈ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಮಂಜುನಾಥ್ ಎನ್.
Published by:Vijayasarthy SN
First published: